logo
ಕನ್ನಡ ಸುದ್ದಿ  /  ಕರ್ನಾಟಕ  /  Shivamogga Blast Case: ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್‌ನಲ್ಲಿ ತೀರ್ಥಹಳ್ಳಿಯ 4 ಜನರಿಗೆ ಇಂದು ವಿಚಾರಣೆಗೆ ಹಾಜರಾಗಲು ಎನ್‌ಐಎ ಸಮನ್ಸ್

Shivamogga Blast Case: ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಕೇಸ್‌ನಲ್ಲಿ ತೀರ್ಥಹಳ್ಳಿಯ 4 ಜನರಿಗೆ ಇಂದು ವಿಚಾರಣೆಗೆ ಹಾಜರಾಗಲು ಎನ್‌ಐಎ ಸಮನ್ಸ್

Arun Dev HT Kannada

Oct 19, 2023 07:30 AM IST

google News

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತೀರ್ಥಹಳ್ಳಿಯ ನಾಲ್ವರಿಗೆ ನೋಟಿಸ್ ಜಾರಿ ಮಾಡಿದೆ. (ಸಾಂಕೇತಿಕ ಚಿತ್ರ)

  • ಶಿವಮೊಗ್ಗ ಟ್ರಯಲ್ ಬಾಂಬ್ ಬ್ಲಾಸ್ಟ್ ಕೇಸ್‌ಗೆ ಸಂಬಂಧಿಸಿ ಶಂಕಿತರಾದ ತೀರ್ಥಹಳ್ಳಿಯ ನಾಲ್ವರಿಗೆ ಎನ್‌ಐಎ ಸಮನ್ಸ್ ಜಾರಿಗೊಳಿಸಿದೆ. ಇಂದು (ಅ.19) ಬೆಂಗಳೂರು ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ವರದಿ ಹೇಳಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತೀರ್ಥಹಳ್ಳಿಯ ನಾಲ್ವರಿಗೆ ನೋಟಿಸ್ ಜಾರಿ ಮಾಡಿದೆ. (ಸಾಂಕೇತಿಕ ಚಿತ್ರ)
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತೀರ್ಥಹಳ್ಳಿಯ ನಾಲ್ವರಿಗೆ ನೋಟಿಸ್ ಜಾರಿ ಮಾಡಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಶಿವಮೊಗ್ಗದ ತುಂಗಭದ್ರಾ ನದಿ ಪಾತ್ರದಲ್ಲಿ ಸಂಭವಿಸಿದ ಶಿವಮೊಗ್ಗದ ಟ್ರಯಲ್ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತೀರ್ಥಹಳ್ಳಿಯ ನಾಲ್ವರಿಗೆ ನೋಟಿಸ್ ಜಾರಿ ಮಾಡಿದೆ ಎಂದು ಈ ವಿದ್ಯಮಾನದ ಅರಿವು ಇರುವಂತಹ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ತೀರ್ಥಹಳ್ಳಿ ನಿವಾಸಿಗಳಾದ ಶಂಶುದ್ದೀನ್, ರಿಜ್ವಾನ್, ನಜೀಬ್ ವುಲ್ಲಾ ಮತ್ತು ತಮೀಮ್ ಅವರಿಗೆ ಎನ್‌ಐಎ ಸಮನ್ಸ್ ನೀಡಿದೆ.

ಈ ನಾಲ್ವರು ಅಕ್ಟೋಬರ್ 19 ರಂದು (ಇಂದು) ಮಧ್ಯಾಹ್ನದ ಮೊದಲು ಬೆಂಗಳೂರಿನ ಎನ್‌ಐಎ ಕಚೇರಿಯಲ್ಲಿ ಹಾಜರು ಇರುವಂತೆ ಸಮನ್ಸ್‌ನಲ್ಲಿ ಸೂಚಿಸಲಾಗಿದೆ ಎಂದು HT ಕನ್ನಡದ ಮಾತೃತಾಣ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಏನಿದು ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್ ಪ್ರಕರಣ

ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಪರ್ಕ ಹೊಂದಿದ್ದ ಮಾಜ್ ಮುನೀರ್ ಅಹಮದ್ ಮತ್ತು ಸೈಯದ್ ಯಾಸಿನ್ ಎಂಬ ಇಬ್ಬರು ವ್ಯಕ್ತಿಗಳನ್ನು ಶಿವಮೊಗ್ಗ ಪೊಲೀಸರು 2022ರ ಸೆಪ್ಟೆಂಬರ್ 23 ರಂದು ಬಂಧಿಸಿ ಅವರಿಂದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡ ನಂತರ ತೀರ್ಥಹಳ್ಳಿ ಪ್ರಕರಣ ಬೆಳಕಿಗೆ ಬಂದಿದೆ.

ಶಿವಮೊಗ್ಗದಲ್ಲಿ 2023ರ ಆಗಸ್ಟ್ 15ರಂದು ವಿನಾಯಕ ದಾಮೋದರ್ ಸಾವರ್ಕರ್ ಅವರ ಪೋಸ್ಟರ್ ಕುರಿತಾದ ಕೋಮು ಘರ್ಷಣೆಯ ಚೂರಿ ಇರಿತ ಪ್ರಕರಣದಲ್ಲಿ ಇವರನ್ನು ಬಂಧಿಸಲಾಗಿತ್ತು.

ತುಂಗಭದ್ರಾ ನದಿಯ ದಡದಲ್ಲಿ ಪ್ರಾಯೋಗಿಕ ಬಾಂಬ್ ಸ್ಫೋಟಗಳನ್ನು ನಡೆಸಿದ್ದರು ಎಂಬ ಮಾಹಿತಿಯನ್ನು ಅಹ್ಮದ್ ಪೊಲೀಸರಿಗೆ ತನಿಖೆ ವೇಳೆ ತಿಳಿಸಿದ್ದ. ಸಹಚರರಾದ ಮೊಹಮ್ಮದ್ ಶಾರಿಕ್ ಮತ್ತು ಸೈಯದ್ ಯಾಸಿನ್ ಅವರೊಂದಿಗೆ ಶಿವಮೊಗ್ಗ ಜಿಲ್ಲೆಯ ನದಿ ದಡದಲ್ಲಿ ಸ್ಥಳೀಯವಾಗಿ ಕೆಮ್ಮಣ್ಣುಗುಂಡಿ ಎಂದು ಕರೆಯಲ್ಪಡುವ ಸ್ಥಳದಲ್ಲಿ ಅವರು ತಯಾರಿಸಿದ್ದ ಬಾಂಬ್ ಸ್ಫೋಟಿಸಿದ್ದರು ಮತ್ತು ಪ್ರಾಯೋಗಿಕ ಸ್ಫೋಟ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾಗಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಮಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣದ ಜತೆಗೆ ಲಿಂಕ್

ಬಂಧಿತ ಆರೋಪಿಗಳು ಶಾರಿಕ್‌ನಿಂದ ಪ್ರೇರಿತರಾಗಿ ತೀವ್ರಗಾಮಿಗಳಾಗಿದ್ದಾರೆ ಮತ್ತು ಶಾರಿಕ್ ಅವರಿಗೆ ಕಳುಹಿಸಿದ್ದ ವೀಡಿಯೊಗಳು ಮತ್ತು ಇತರ ವಸ್ತುಗಳ ಮೂಲಕ ಬಾಂಬ್ ತಯಾರಿಕೆಯ ತಂತ್ರಗಳ ಜ್ಞಾನವನ್ನು ಪಡೆದುಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪೊಲೀಸ್ ಕಾರ್ಯಾಚರಣೆ ವೇಳೆ ಶಾರಿಕ್ ಬಂಧನದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದ.

ಆದಾಗ್ಯೂ ಶಾರಿಕ್‌ನನ್ನು ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ಯತ್ನ ವಿಫಲವಾದ ಸಂದರ್ಭದಲ್ಲಿ ಬಂಧಿಸಲಾಗಿತ್ತು.

ಮಂಗಳೂರಿನಲ್ಲಿ 2022ರ ನವೆಂಬರ್ 19ರಂದು ಆಟೋ ರಿಕ್ಷಾದಲ್ಲಿ ಸ್ಫೋಟ ಸಂಭವಿಸಿತ್ತು. ಇದರ ಪರಿಣಾಮ ಚಾಲಕ ಮತ್ತು ಪ್ರಯಾಣಿಕ ಇಬ್ಬರೂ ಗಾಯಗೊಂಡಿದ್ದರು. ಮರುದಿನ, ಕರ್ನಾಟಕ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅವರು ಘಟನೆಯನ್ನು "ಗಂಭೀರ ಹಾನಿ ಉಂಟುಮಾಡುವ ಉದ್ದೇಶದಿಂದ ಭಯೋತ್ಪಾದಕ ಕೃತ್ಯ" ಎಂದು ಘೋಷಿಸಿದರು.

ಕಂಕನಾಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ವಸ್ತುಗಳ ಕಾಯ್ದೆಯ ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 (ಬಿ) ಮತ್ತು 307 ರ ಪ್ರಕಾರ ಪ್ರಕರಣ ದಾಖಲಾಗಿದೆ.

ಮಂಗಳೂರು ಸ್ಫೋಟ ಮತ್ತು ತೀರ್ಥಹಳ್ಳಿ ಸ್ಫೋಟ ಶಂಕಿತರಿಗೆ ಯಾಕೆ ಸಮನ್ಸ್

ಮಂಗಳೂರು ಸ್ಫೋಟ ಮತ್ತು ತೀರ್ಥಹಳ್ಳಿ ಸ್ಫೋಟದ ಹಿಂದಿನ ಭಯೋತ್ಪಾದಕ ಘಟಕವು ನಗರದ ಇತರ ಮಹತ್ವದ ಸ್ಥಳಗಳನ್ನು ಗುರಿಯಾಗಿಸಲು ಯೋಜಿಸಿರುವ ಶಂಕೆಗಳು ತನಿಖೆಯಿಂದ ಬಹಿರಂಗಗೊಂಡ ನಂತರ ಎನ್‌ಐಎ ಶಂಕಿತರ ವಿಚಾರಣೆಗೆ ಸಮನ್ಸ್ ಜಾರಿಗೊಳಿಸಿದೆ.

ಮಂಗಳೂರು ಸ್ಫೋಟದ ಸಂಚುಕೋರ ಅರಾಫತ್ ಅಲಿಯನ್ನು ಸೆಪ್ಟೆಂಬರ್‌ನಲ್ಲಿ ಎನ್‌ಐಎ ಬಂಧಿಸಿದ ನಂತರ ಈ ವಿಷಯಗಳು ಬೆಳಕಿಗೆ ಬಂದಿವೆ. ದೆಹಲಿಗೆ ಆಗಮಿಸಿದ ಅರಾಫತ್ ಅಲಿಯನ್ನು ಬಂಧಿಸಲಾಯಿತು ಎಂದು ಕರ್ನಾಟಕದ ಗುಪ್ತಚರ ಅಧಿಕಾರಿ ತಿಳಿಸಿದ್ದಾರೆ.

ನಗರದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಮತ್ತಷ್ಟು ದಾಳಿಗಳನ್ನು ನಡೆಸುವ ಉದ್ದೇಶವನ್ನು ಶಾರಿಕ್ ಹೊಂದಿದ್ದಾನೆ ಎಂದು ಅರಾಫತ್ ಅಲಿ ಎನ್ಐಎ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಗುಪ್ತಚರ ಅಧಿಕಾರಿ ವಿವರಿಸಿದರು.

“ತಮ್ಮ ಉದ್ದೇಶಿತ ಗುರಿಯಾದ ಕದ್ರಿ ಮಂಜುನಾಥ ದೇವಸ್ಥಾನವನ್ನು ಯಶಸ್ವಿಯಾಗಿ ಟಾರ್ಗೆಟ್ ಮಾಡಿದರೆ ಹೆಚ್ಚಿನ ದಾಳಿ ಯೋಜಿಸಲು ಸಜ್ಜಾಗಿದ್ದರು. ಶಾರಿಕ್ ದೇವಸ್ಥಾನದಲ್ಲಿ ಪ್ರೆಶರ್ ಕುಕ್ಕರ್ ಬಾಂಬ್ ಅನ್ನು ಇಟ್ಟು ಸ್ಫೋಟಿಸುವ ಪ್ರಕ್ರಿಯೆಯಲ್ಲಿದ್ದಾಗ, ಸುಧಾರಿತ ಸ್ಫೋಟಕ ಸಾಧನವು ಆಟೋ ರಿಕ್ಷಾದಲ್ಲಿ ಆಕಸ್ಮಿಕವಾಗಿ ಸ್ಫೋಟಗೊಂಡಿತು. ಇದರ ಪರಿಣಾಮವಾಗಿ ಆತನಿಗೆ ಗಾಯವಾಯಿತು”ಎಂದು ಅಧಿಕಾರಿ ಹೇಳಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ