ಜಿಲ್ಲಾ-ತಾಲ್ಲೂಕು ಪಂಚಾಯತ್ ಚುನಾವಣೆ ನಡೆಸಲು ಸರ್ಕಾರ ಹಿಂದೇಟು; 5 ಗ್ಯಾರಂಟಿಗಳ ಬೆಂಬಲ ಇದ್ದರೂ 'ಬರ'ದ ಭಯ
Nov 10, 2023 02:25 PM IST
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ
- ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸಲು ಎದುರಾಗಿದ್ದ ಅಡ್ಡಿ ಆತಂಕಗಳು ಒಂದೊಂದಾಗಿ ನಿವಾರಣೆಯಾಗುತ್ತಿದ್ದರೂ ಸರ್ಕಾರ ಚುನಾವಣೆ ನಡೆಸಲು ಮನಸ್ಸು ಮಾಡಿಲ್ಲ.
ಬೆಂಗಳೂರು: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯನ್ನು ಈ ವರ್ಷದಲ್ಲೇ ನಡೆಸಬೇಕು ಎಂದು ನಿರ್ಧರಿಸಿದ್ದ ಆಡಳಿತಾರೂಢ ಕಾಂಗ್ರೆಸ್ ಸರಕಾರ ಈಗ ಈ ಚುನಾವಣೆಗಳನ್ನು ಲೋಕಸಭಾ ಚುನಾವಣೆ ನಂತರ ನಡೆಸಲು ನಿರ್ಧರಿಸಿದೆ. ಇಡೀ ರಾಜ್ಯವನ್ನು ಬರಗಾಲ ಆವರಿಸಿದ್ದು, ಒಂದು ವೇಳೆ ಚುನಾವಣೆ ನಡೆಸಿದರೆ ಹಿನ್ನೆಡೆ ಆಗಬಹುದೆಂದು ಸರ್ಕಾರ ಇದು ಸೂಕ್ತ ಸಮಯವಲ್ಲ ಎಂದು ಭಾವಿಸಿರಬಹುದು.
ಈ ಚುನಾವಣೆಗಳನ್ನು ನಡೆಸಲು ಎದುರಾಗಿದ್ದ ಅಡ್ಡಿ ಆತಂಕಗಳು ಒಂದೊಂದಾಗಿ ನಿವಾರಣೆಯಾಗುತ್ತಿದ್ದರೂ ಸರ್ಕಾರ ಚುನಾವಣೆ ನಡೆಸಲು ಮನಸ್ಸು ಮಾಡಿಲ್ಲ. ಪಂಚಾಯತ್ ರಾಜ್ ಕ್ಷೇತ್ರ ಪುನರ್ ವಿಂಗಡನೆ ಆಯೋಗದ ಅಧ್ಯಕ್ಷ ಎ.ಆರ್.ಕಾಂಬ್ಳೆ ಅವರು ಕ್ಷೇತ್ರ ವಿಂಗಡಣೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. 1,118 ಜಿಲ್ಲಾ ಪಂಚಾಯತ್ ಮತ್ತು 31 ಜಿಲ್ಲೆ ಮತ್ತು 236 ತಾಲ್ಲೂಕುಗಳಲ್ಲಿ 3,671 ತಾಲ್ಲೂಕು ಪಂಚಾಯತ್ ಕ್ಷೇತ್ರಗಳನ್ನು ಅಂತಿಮಗೊಳಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಈ ಸಂಬಂಧ ಕಾಂಬ್ಳೆ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ನಂತರವಷ್ಟೇ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಕುರಿತು ಅಂತಿಮ ಅಧಿಸೂಚನೆಯನ್ನು ಹೊರಡಿಸಲಿದೆ. ರಾಜ್ಯದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ನಾಲ್ಕು ವಾರಗಳಲ್ಲಿ ಕ್ಷೇತ್ರಗಳ ಮರುವಿಂಗಡಣೆ ಮತ್ತು ಮೀಸಲಾತಿಯನ್ನು ಅಂತಿಮಗೊಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಈ ಎಲ್ಲ ಪ್ರಕ್ರಿಯೆಗಳು ವರ್ಷಾಂತ್ಯಕ್ಕೆ ಇನ್ನೂ ಎರಡು ತಿಂಗಳೂ ಬಾಕಿ ಉಳಿದಿರುವಂತೆ ಮುಗಿದ್ದರೂ ಈ ವರ್ಷದಲ್ಲೇ ಚುನಾವಣೆ ನಡೆಸುವ ಸಾಧ್ಯತೆಗಳು ಕಡಿಮೆ.
ಫಲಿತಾಂಶದ ಮೇಲೆ ಬರದ ಬರೆ; ಸರ್ಕಾರಕ್ಕೆ ಹೆದರಿಕೆ
ಸರ್ಕಾರ 216 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಬರ ಪರಿಹಾರ ಕಾಮಗಾರಿಗಳೂ ನಿರೀಕ್ಷಿತ ಮಟ್ಟಿದಲ್ಲಿ ನಡೆಯುತ್ತಿಲ್ಲ. ಏನೆಲ್ಲಾ ಕಾರ್ಯಕ್ರಮ ಮತ್ತು ಯೋಜನೆಗಳನ್ನು ರೂಪಿಸಿದರೂ ಗ್ರಾಮೀಣ ಪ್ರದೇಶದ ಜನರು ಮತ್ತು ರೈತರರಿಗೆ ನೂರರಷ್ಟು ನ್ಯಾಯ ಒದಗಿಸಲು ಸಾಧ್ಯವಿಲ್ಲ. ಬರದ ವಿಷಯನ್ನೇ ಹಿಡಿದುಕೊಂಡು ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಪ್ರವಾಸ ನಡೆಸುತ್ತಿದೆ. ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರೂ ಪ್ರವಾಸಕ್ಕೆ ನಿರ್ಧರಿಸಿದ್ದು ಪ್ರತಿದಿನ ಉಭಯ ಪಕ್ಷಗಳ ನಾಯಕರು ಸರ್ಕಾರದ ವಿರುದ್ಧ ಹರಿಹಾಯುತ್ತಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಲೋಕಸಭಾ ಚುನಾವಣೆ ಮುಗಿದ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಿದರೆ ಹೇಗೆ ಎಂದು ಸರಕಾರ ಆಲೋಚಿಸುತ್ತಿದೆ.
ಈ ಹಿಂದೆ ಆದಷ್ಟೂ ಬೇಗನೆ ಜಿಪಂ, ತಾಪಂ ಮತ್ತು ಬಿಬಿಎಂಪಿಗೆ ಚುನಾವಣೆ ನಡೆಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೀರ್ಮಾನಿಸಿತ್ತು. ಈ ಚುನಾವಣೆಗಳಲ್ಲಿ ಐದು ಗ್ಯಾರಂಟಿಗಳ ಜಾರಿಯ ಬೆಂಬಲದೊಂದಿಗೆ ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ನಡೆಸುವ ವಿಶ್ವಾಸವೂ ಇತ್ತು. ಆದರೆ ಆಡಳಿತಾರೂಢ ನಾಯಕರಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಬಿಬಿಎಂಪಿ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಸಂಬಂಧ ಇನ್ನೂ ಕೆಲವು ಹೈಕೋರ್ಟ್ ನಲ್ಲಿ ಪ್ರಕರಣಗಳು ಇತ್ಯರ್ಥವಾಗದೇ ಉಳಿದಿವೆ. ಹಾಗಾಗಿ ಚುನಾವಣೆ ತಡವಾಗುತ್ತಿದೆ ಎಂದು ಸರ್ಕಾರ ಜಾರಿಕೊಳ್ಳುತ್ತಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗ(ಒಬಿಸಿ)ಗಳಿಗೆ ಮೀಸಲಾತಿ ನೀಡಬೇಕು ಎಂದು ಸುಪ್ರೀಂ ಕೋಟ್ ತೀರ್ಪು ನೀಡಿದ ನಂತರ ರಾಜ್ಯ ಸರಕಾರ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಅವರ ನೇತೃತ್ವದಲ್ಲಿ ಒಬಿಸಿಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲುರಚಿಸಿದ್ದ ದ್ವಿಸದಸ್ಯ ಸಮಿತಿ ಈಗಾಗಲೇ ತನ್ನ ವರದಿಯನ್ನು ನೀಡಿದೆ. ಈ ವರದಿಯನ್ನು ಸರ್ಕಾರ ಭಾಗಶಃ ಒಪ್ಪಿಕೊಂಡಿದ್ದು, ನ್ಯಾಯಾಲಯ ಇನ್ನೂ ತನ್ನ ತೀರ್ಮಾನವನ್ನು ಪ್ರಕಟಿಸಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಗಳ ಅವಧಿ ಮುಗಿದು ಎರಡು ವರ್ಷಗಳಾಗಿದ್ದರೂ ಇದುವರೆಗೂ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. 2021ರ ಏಪ್ರಿಲ್ ನಲ್ಲೇ ಚುನಾವಣೆ ನಡೆಯಬೇಕಿತ್ತು. ವಿವಿಧ ಕಾರಣಗಳಿಗಾಗಿ ಮುಂದೂಡುತ್ತಲೇ ಬರಲಾಗಿದೆ.
ಈ ಮಧ್ಯೆ ಗುರುವಾರ ರಾಜ್ಯದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ನಾಲ್ಕು ವಾರಗಳಲ್ಲಿ ಕ್ಷೇತ್ರಗಳ ಮರುವಿಂಗಡಣೆ ಮತ್ತು ಮೀಸಲಾತಿಯನ್ನು ಅಂತಿಮಗೊಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ತಾಪಂ ಮತ್ತು ಜಿಪಂ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಈ ಕೆಲಸಕ್ಕೆ ಹೆಚ್ಚಿನ ಸಮಯ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಈಗಾಗಲೇ ಹತ್ತು ವಾರಗಳ ಕಾಲಾವಕಾಶ ನೀಡಲಾಗಿದ್ದು, ಮರು ವಿಂಗಡಣೆ ಮತ್ತು ಮೀಸಲಾತಿಯ ಕಾರ್ಯಗಳನ್ನು ನಾಲ್ಕು ವಾರಗಳಲ್ಲಿ ಪೂರ್ಣಗೊಳಿಸಬೇಕು ಎಂದು ಪೀಠ ತಿಳಿಸಿದೆ.
ವರದಿ: ಎಚ್ ಮಾರುತಿ