logo
ಕನ್ನಡ ಸುದ್ದಿ  /  ಕರ್ನಾಟಕ  /  ಜಲಾಶಯ ಯೋಜನೆಗಳಿಗೆ ಬಿಡದ ಗ್ರಹಣ; ಕಡತದಲ್ಲೇ ಉಳಿದುಕೊಂಡಿರುವ ಬಜೆಟ್‍ನಲ್ಲಿ ಘೋಷಿಸಿದ್ದ ನೀರಾವರಿ ಯೋಜನೆಗಳು

ಜಲಾಶಯ ಯೋಜನೆಗಳಿಗೆ ಬಿಡದ ಗ್ರಹಣ; ಕಡತದಲ್ಲೇ ಉಳಿದುಕೊಂಡಿರುವ ಬಜೆಟ್‍ನಲ್ಲಿ ಘೋಷಿಸಿದ್ದ ನೀರಾವರಿ ಯೋಜನೆಗಳು

HT Kannada Desk HT Kannada

Oct 07, 2023 02:01 PM IST

google News

ಜಲಾಶಯ ಯೋಜನೆಗಳಿಗೆ ಬಿಡದ ಗ್ರಹಣ; ಕಡತದಲ್ಲೇ ಉಳಿದುಕೊಂಡಿರುವ ಬಜೆಟ್‍ನಲ್ಲಿ ಘೋಷಿಸಿದ್ದ ನೀರಾವರಿ ಯೋಜನೆಗಳು (ಸಾಂದರ್ಭಿಕ ಚಿತ್ರ)

    • Irrigation Projects: ಆಗೊಮ್ಮೆ ಈಗೊಮ್ಮೆ ಸದ್ದು ಮಾಡುವ ಮೇಕೆದಾಟು ಯೋಜನೆ. ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಯೋಜನೆ, ಕಳಸಾಬಂಡೂರ ನಾಲಾ ತಿರುವು, ತುಂಗಭದ್ರಾ ಜಲಾಶಯಕ್ಕೆ ಸಮತೋಲನಾ ಜಲಾಶಯ ಯೋಜನೆಗಳಿಗೆ ಬಿಡದ ಗ್ರಹಣ?
ಜಲಾಶಯ ಯೋಜನೆಗಳಿಗೆ ಬಿಡದ ಗ್ರಹಣ; ಕಡತದಲ್ಲೇ ಉಳಿದುಕೊಂಡಿರುವ ಬಜೆಟ್‍ನಲ್ಲಿ ಘೋಷಿಸಿದ್ದ ನೀರಾವರಿ ಯೋಜನೆಗಳು (ಸಾಂದರ್ಭಿಕ ಚಿತ್ರ)
ಜಲಾಶಯ ಯೋಜನೆಗಳಿಗೆ ಬಿಡದ ಗ್ರಹಣ; ಕಡತದಲ್ಲೇ ಉಳಿದುಕೊಂಡಿರುವ ಬಜೆಟ್‍ನಲ್ಲಿ ಘೋಷಿಸಿದ್ದ ನೀರಾವರಿ ಯೋಜನೆಗಳು (ಸಾಂದರ್ಭಿಕ ಚಿತ್ರ)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರದುರ್ಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟೀಯ ಯೋಜನೆ ಮಾಡುತ್ತೇವೆ ಎಂದು ಕೇಂದ್ರ ಸರಕಾರ ಭರವಸೆ ನೀಡಿತ್ತು. ಆದರೆ ಭರವಸೆ ನೀಡಿದ್ದಂತೆ ಅನುದಾನ ನೀಡುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಯೋಜನೆಗೆ 5,300 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಬಜೆಟ್‍ನಲ್ಲಿ ಘೋಷಿಸಿದ್ದರು. ಅದರಂತೆ ರಾಜ್ಯ ಸರಕಾರ ಕೇಂದ್ರಕ್ಕೆ ಪತ್ರ ಬರೆದಿದ್ದು ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಇದೇ ಗಂಡು ಮೆಟ್ಟಿದ ನಾಡಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಅವಕಾಶ ಸಿಕ್ಕರೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದ್ದರು. ಮತ್ತೊಮ್ಮೆ ಮತದಾರ ಅವರ ಕೈ ಹಿಡಿದಿದ್ದಾನೆ. ಆದರೆ ಸರ್ಕಾರ ರಚನೆಯಾಗಿ 5 ತಿಂಗಳೂ ಕಳೆದರೂ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಲಕ್ಷಣಗಳು ಕಾಣ ಸುತ್ತಿಲ್ಲ.

ಜುಲೈ ತಿಂಗಳಲ್ಲಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಆರು ಪ್ರಮುಖ ನೀರಾವರಿ ಯೋಜನೆಗಳನ್ನು ಘೋಷಿಸಿದ್ದರು. ಆಗೊಮ್ಮೆ ಈಗೊಮ್ಮೆ ಮೇಕೆದಾಟು ಯೋಜನೆ ಸದ್ದು ಮಾಡುವುದನ್ನು ಬಿಟ್ಟರೆ ಯಾವುದೇ ಪ್ರಗತಿಯಾಗಿಲ್ಲ. ಯಾವುದೇ ಕಾಮಗಾರಿ ಅಥವಾ ಯೋಜನೆಗಳನ್ನು ನಿಧಾನಗೊಳಿಸಿದರೆ ಯೋಜನಾ ವೆಚ್ಚ ದುಪ್ಪಟ್ಟಾಗುತ್ತಾ ಹೋಗುತ್ತದೆ. ಅನುದಾನಕ್ಕೆ ತಕ್ಕಂತೆ ಯೋಜನೆಗಳನ್ನು ಕೈಗೆತ್ತಿಕೊಂಡರೆ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ. ಚುನಾವಣಾ ಪೂರ್ವದಲ್ಲಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇವಲ 33,612 ಕೋಟಿ ರೂ. ಅನುದಾನ ಲಭ್ಯವಿದ್ದರೂ ರೂ. 49,116 ಕೋಟಿ ಮೊತ್ತದ ಯೋಜನೆಗಳನ್ನು ಪ್ರಕಟಿಸಿ ರಾಜ್ಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಸಂದರ್ಭದಲ್ಲಿಯೇ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಬಜೆಟ್‍ನಲ್ಲಿ ಘೋಷಿಸಿದ ನೀರಾವರಿ ಯೋಜನೆಗಳು

ಸಕಾಲದಲ್ಲಿ ಪೂರ್ಣಗೊಳ್ಳದ ಕಾರಣಕ್ಕೆ ಎತ್ತಿನಹೊಳೆ ಯೋಜನೆಯ ದರ ಹೆಚ್ಚಳವಾಗಿದ್ದು, 23,252 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಯೋಜನೆಯನ್ನು ಪೂರ್ಣಗೊಳಿಸಿದರೆ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದು ಎಂದು ಸಿದ್ದರಾಮಯ್ಯ ಬಜೆಟ್‍ನಲ್ಲಿ ಹೇಳಿದ್ದರು. ಮೇಕೆದಾಟು ಯೋಜನೆಯನ್ನು ಪ್ರಸ್ತಾಪಿಸಿದ್ದ ಅವರು ಈ ಯೋಜನೆಗೆ ಯಾವುದೇ ಅನುದಾನ ಪ್ರಕಟಿಸಿರಲಿಲ್ಲ. ಮಧ್ಯ ಕರ್ನಾಟಕದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದ ಅನುದಾನ ತಂದು ಯೋಜನೆಯ ಅನುಷ್ಠಾನಕ್ಕೆ ಆದ್ಯತೆಯ ಮೇರೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದರು. ಕಳಸಾಬಂಡೂರ ನಾಲಾ ತಿರುವು ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡುವುದಾಗಿ ಭರವಸೆ ನೀಡಿದ್ದರು. ತುಂಗಭದ್ರಾ ಜಲಾಶಯದಲ್ಲಿ ಹೂಳೆತ್ತಲು ಅಸಾಧ್ಯವಾಗಿದ್ದು, ಕೊಪ್ಪಳ ಜಿಲ್ಲೆಯ ನವಲೆ ಸಮೀಪ ಸಮತೋಲನಾ ಜಲಾಶಯವನ್ನು ನಿರ್ಮಿಸುವುದಗಿಯೂ ಘೋಷಿಸಲಾಗಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ಕ್ಕೆ ಹಂಚಿಕೆಯಾಗಿರುವ 130 ಟಿಎಂಸಿ ನೀರನ್ನು ಬಳಸಿಕೊಳ್ಳಲು ಭೂಸ್ವಾದೀನಕ್ಕೆ ಒತ್ತು ನೀಡುವುದಾಗಿಯೂ ಹೇಳಿದ್ದರು. ಆದರೆ ಈ ಯಾವುದೇ ಯೋಜನೆಗಳು ಸದ್ಯಕ್ಕೆ ಜಾರಿಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ. ಸಚಿವರು ಮತ್ತು ಶಾಸಕರೂ ಪ್ರಶ್ನಿಸುತ್ತಿಲ್ಲ. ಪ್ರತಿಪಕ್ಷಗಳಿಗೆ ಇಂತಹ ಅಭಿವೃದ್ಧಿ ಯೋಜನೆಗಳು ಕೈ ಹಿಡಿಯುವುದಿಲ್ಲ ಎನ್ನುವುದು ಅರ್ಥವಾಗಿರಬಹುದು.

ಮೇಕೆದಾಟು ಸದ್ದು ಮಾಡುತಿರುವುದೇಕೆ?

ಉಪಮುಖ್ಯಮಂತ್ರಿಯೂ ಆಗಿರುವ ಡಿಕೆ ಶಿವಕುಮಾರ್ ಜಲಸಂಪನ್ಮೂಲ ಇಲಾಖೆಯ ಹೊಣೆಯನ್ನೂ ಹೊತ್ತಿದ್ದಾರೆ. ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಒಳಪಡುವ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಉತ್ಸುಕರಾಗಿದ್ದಾರೆ. ಆದರೆ ಅಡಚಣೆಗಳೇ ಹೆಚ್ಚು. ಈ ಯೋಜನೆ ಅವರ ಮಹತ್ವಾಕಾಂಕ್ಷಿ ಯೋಜನೆಯೂ ಹೌದು! ಚುನಾವಣೆಗೂ ಮುನ್ನವೇ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ್ದನ್ನು ಯಾರೂ ಮರೆತಿಲ್ಲ.

ಕಾವೇರಿ ನದಿ ಮೇಕೆದಾಟುವಿನಲ್ಲಿ ಸಮತೋಲನ ಅಣೆಕಟ್ಟು ನಿರ್ಮಿಸಿದರೆ 67 ಟಿಎಂಸಿ ನೀರು ಸಂಗ್ರಹ ಮಾಡಬಹುದಾಗಿದೆ. ಬೆಂಗಳೂರು ಮತ್ತು ಇತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ. ಜಲವಿದ್ಯುತ್ ಉತ್ಪಾದನೆಗೂ ಅವಕಾಶವಿದೆ. 2018ರಲ್ಲಿ ಅಂದಿನ ಸರಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಶಿವಕುಮಾರ್ ಅವರು ವಿಸ್ತೃತ ವರದಿಯನ್ನು ಸಿದ್ದಪಡಿಸಲು ಕೇಂದ್ರ ಸರಕಾರದಿಂದ ಅನುಮತಿ ಪಡೆದಿರುವುದನ್ನು ಹೊರತುಪಡಿಸಿದರೆ ಮತ್ತಾವುದೇ ಪ್ರಗತಿಯಾಗಿಲ್ಲ.

ಈ ಯೋಜನೆಗೆ ಡಿಪಿಆರ್ ಸಿದ್ದಪಡಿಸಿದ ಮಾತ್ರಕ್ಕೆ ಯೋಜನೆ ಕಾರ್ಯಗತಗೊಳಿಸಲು ಅಸಾಧ್ಯ. ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಸೇರಿದಂತೆ ಹಲವಾರು ಇಲಾಖೆಗಳಿಂದ ಅನುಮತಿ ಪಡೆಯಬೇಕಾಗಿದೆ. ಕಾವೇರಿ ನೀರು ನಿರ್ವಹಣಾ ಮಂಡಲಿಯ ಅನುಮತಿಯೂ ಅವಶ್ಯಕವಾಗಿದೆ. ಈ ವಿಷಯವನ್ನು ಪ್ರಸ್ತಾಪಿಸಲು ಮಂಡಲಿಯ ಸತತ 12 ಸಭೆಗಳಲ್ಲಿ ಪ್ರಯತ್ನಿಸಿದರೂ ಪ್ರತಿ ಬಾರಿಯೂ ಮುಂದೂಡುತ್ತಲೇ ಬರಲಾಗಿದೆ.

ಕಾಲ ಮಿಂಚಿಹೋಗಿದೆ ಎಂದು ಹೇಳಲಾಗದು. ಇನ್ನೂ ನಾಲ್ಕೂವರೆ ವರ್ಷದ ಅವಧಿ ಇದೆ ಎಂದು ಕಾರಣ ಹೇಳದೆ ಆದಷ್ಟೂ ತ್ವರಿತವಾಗಿ ಈ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬೆವರು ಹರಿಸಬೇಕು. ಆಗ ಮಾತ್ರ ನಾಲೆಗಳಲ್ಲಿ ನೀರು ಹರಿಯಲು ಸಾಧ್ಯ. ಮುಂದಿನ ಬಜೆಟ್ ವೇಳೆಗೆ ಯಾವ ಯಾವ ಯೋಜನೆಗಳು ಜಾರಿಯಾಗಬಹುದು ಎಂಬ ಕುತೂಹಲವಿದೆ.

(ವರದಿ: ಎಚ್.ಮಾರುತಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ