Tiger Attack ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಹುಲಿ ಗದ್ದಲ; ದಾಳಿಯಿಂದ ಮಹಿಳೆಗೆ ಗಾಯ, ಹೆಜ್ಜೆ ಕಂಡು ಹೆದರಿದ ಜನ
Jun 07, 2023 11:33 AM IST
ಚಿಕ್ಕಮಗಳೂರು ಜಿಲ್ಲೆ ಪಂಡರವಳ್ಳಿಯಲ್ಲಿ ಹುಲಿ ದಾಳಿಯಿಂದ ಗಾಯಗೊಂಡ ಮಹಿಳೆಗೆ ಚಿಕಿತ್ಸೆ ನೀಡಲಾಯಿತು
- ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಕರ್ನಾಟಕದ ಅರಣ್ಯದಂಚಿನಲ್ಲಿ ಹುಲಿ ದಾಳಿ ಪ್ರಕರಣಗಳು ವರದಿಯಾಗುತ್ತಲೇ ಇವೆ.
ಮೈಸೂರು/ ಚಿಕ್ಕಮಗಳೂರು: ಕರ್ನಾಟಕದಲ್ಲಿ ಹುಲಿ ಗದ್ದಲ ಜೋರಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಹೊಂದಿಕೊಂಡ ಹಳ್ಳಿಗಳಲ್ಲಿ ಹುಲಿ ಹೆಜ್ಜೆ ಕಾಣಿಸಿಕೊಂಡಿದೆ. ಚಿಕ್ಕಮಗಳೂರು ಜಿಲ್ಲೆ ಭದ್ರಾ ಅರಣ್ಯದಂಚಿನ ಗ್ರಾಮದಲ್ಲಿ ಮಹಿಳೆ ಮೇಲೆ ಹುಲಿ ದಾಳಿ ಮಾಡಿ ಗಾಯಗೊಳಿಸಿದೆ. ಎರಡೂ ಕಡೆ ಆತಂಕದ ವಾತಾವರಣವಿದೆ.
ಕಾರ್ಮಿಕ ಮಹಿಳೆಗೆ ಗಾಯ
ಚಿಕ್ಕಮಗಳೂರು ತಾಲ್ಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ಪಂಡರವಳ್ಳಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೇಲೆ ಹುಲಿ ದಾಳಿ ಮಾಡಿ ಗಾಯವಾಗಿದೆ. ಏಕಾಏಕಿ ಹುಲಿ ದಾಳಿ ಮಾಡಿದ್ದು ಕಿರುಚಿಕೊಂಡಾಗ ಓಡಿ ಹೋಗಿದೆ. ಈ ವೇಳೆ ಇತರರು ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಗಾಯಗೊಂಡ ಮಹಿಳೆಗೆ ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಎಂಟು ವರ್ಷದ ಹಿಂದೆ ಪಂಡರವಳ್ಳಿಯಲ್ಲಿಯೇ ಹುಲಿ ದಾಳಿ ಮಾಡಿದಾಗ ಮಹಿಳೆಯೊನಬ್ಬರು ಮೃತಪಟ್ಟಿದ್ದರು. ನಂತರ ಹುಲಿಯನ್ನು ಸೆರೆ ಹಿಡಿದು ಬೆಳಗಾವಿಗೆ ಬಿಡಲಾಗಿತ್ತು. ಅದೇ ಹುಲಿ ಅಲ್ಲಿಯೂ ಗರ್ಭಿಣಿ ಮೇಲೆ ದಾಳಿ ಮಾಡಿತ್ತು.
ಹನಗೋಡಿನಲ್ಲಿ ಮತ್ತೆ ಕಾಣಿಸಿಕೊಂಡ ಹುಲಿ ಹೆಜ್ಜೆ
ನಾಗರಹೊಳೆ ಉದ್ಯಾನವನದಂಚಿನ ಗ್ರಾಮಗಳ ಜಮೀನುಗಳಲ್ಲಿ ಕಳೆದ ಮುರ್ನಾಲ್ಕು ತಿಂಗಳಿನಿಂದ ಆಗಾಗ್ಗೆ ಹುಲಿಹೆಜ್ಜೆ ಕಾಣಿಸಿಕೊಳ್ಳುತ್ತಿದ್ದರೆ, ಇದೀಗ ತಾಲೂಕಿನ ಹನಗೋಡಿನ ಜಮೀನಿನಲ್ಲಿ ಮತ್ತೆ ಮಂಗಳವಾರ ಹುಲಿ ಹೆಜ್ಜೆ ಕಾಣಿಸಿಕೊಂಡಿದ್ದು, ರೈತರು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಹುಣಸೂರು ತಾಲೂಕಿನ ಹನಗೋಡು ಗ್ರಾಮದ ತಾ.ಪಂ.ಮಾಜಿ ಸದಸ್ಯ ಎಚ್.ಆರ್.ರಮೇಶ್‌ರವರ ತೋಟದಲ್ಲಿ ಹುಲಿ ಹೆಜ್ಜೆ ಕಾಣಿಸಿಕೊಂಡಿದೆ. ಈ ಹಿಂದೆ ಸಹ ಹನಗೋಡು, ಶಿಂಡೇನಹಳ್ಳಿ, ಅಬ್ಬೂರು, ಬಿ.ಆರ್.ಕಾವಲ್, ಶೆಟ್ಟಹಳ್ಳಿ, ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರ, ಬೀರತಮ್ಮನಹಳ್ಳಿ ಗ್ರಾಮಗಳ ಸುತ್ತಮುತ್ತಲಿನ ಜಮೀನುಗಳಲ್ಲಿ ಹುಲಿ ಹೆಜ್ಜೆ ಕಾಣಿಸಿಕೊಂಡಿತ್ತು ಹಾಗೂ ಜಾನುವಾರುಗಳನ್ನು ಸಹ ಕೊಂದು ಹಾಕಿತ್ತು. ಇದೀಗ ಮತ್ತೆ ಈ ಗ್ರಾಮಗಳಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿತ್ತು. ಆಗಾಗ್ಗೆ ಹುಲಿ ಕಾಣಿಸಿದ್ದು. ಅನಾಹುತವಾಗುವ ಮೊದಲೇ ಹುಲಿಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಎಚ್ಚರವಹಿಸಿ, ಡಿಸಿಎಫ್ ಮನವಿ
ಹುಲಿ ಹೆಜ್ಜೆ ಕಾಣಿಸಿಕೊಂಡಿರುವ ಕಡೆಗಳಲ್ಲಿ ಹುಲಿ ಪತ್ತೆಗಾಗಿ ಕ್ಯಾಮರಾ ಅಳವಡಿಸಲಾಗುವುದು, ಗ್ರಾಮಸ್ಥರು, ರೈತರು ಈ ಬಗ್ಗೆಎಚ್ಚರಿಕೆಯಿಂದಿರುವಂತೆ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಸೀಮಾ ಮನವಿ ಮಾಡಿದ್ದಾರೆ.
=================
ವಿಭಾಗ