Tumkur News: ತುಮಕೂರು ಎಸ್‌ಪಿ ಕಚೇರಿ ಆವರಣ ಸದಾ ಹಚ್ಚ ಹಸಿರು; ಅಡಿಕೆ, ತೆಂಗು ಬೆಳೆದು ಮಾದರಿಯಾದ ಪೊಲೀಸರು
Jun 03, 2023 07:45 AM IST
ಹಸಿರ ಮರಗಳ ನಡುವೆ ತುಮಕೂರು ಎಸ್‌ಪಿ ಕಚೇರಿ
- Tumakuru SP office: ಪರಿಸರ ಸ್ನೇಹಿಯಾಗಿ ಕಂಗೊಳಿಸುತ್ತಿರುವ ತುಮಕೂರು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಈಗ ಎಲ್ಲರ ಗಮನ ಸೆಳೆಯುವ ತಾಣವಾಗಿದೆ. ಇಲ್ಲಿನ ಪೊಲೀಸರು ರೈತರನ್ನು ಬೆರಗುಗೊಳಿಸುವಂತೆ ಅಡಿಕೆ ಹಾಗೂ ತೆಂಗಿನ ಮರಗಳನ್ನು ಬೆಳೆದಿದ್ದಾರೆ.
ತುಮಕೂರು: ಹಚ್ಚ ಹಸಿರಿನಿಂದ ಕಂಗೊಳಿಸುವ ಆವರಣ, ಅಚ್ಚುಕಟ್ಟಾಗಿ ಹರಡಿಕೊಂಡಿರುವ ವಿಶಾಲ ಮೈದಾನ, ಮುಗಿಲು ಚುಂಬಿಸುವ ರೀತಿ ಬೆಳೆದು ನಿಂತಿರುವ ಅಡಿಕೆ ವನ, ದಣಿದು ಬಂದವರಿಗೆ ತಂಗಾಳಿ ನೀಡುವ ಹಲವು ಮರ ಗಿಡಗಳ ತಾಣ, ನೋಡುಗರ ಕಣ್ಮನ ಸೆಳೆಯುವ ಸುಂದರ ಹೂ ಗಳ ಉದ್ಯಾನ...
ಇಂತಹ ಸೊಬಗಿನ ಸಿರಿ ಹಾಗೂ ಹಚ್ಚ ಹಸಿರನ್ನೇ ಮೈದುಂಬಿಕೊಂಡಿರುವ ಸ್ವಚ್ಛಂದ ಪರಿಸರ ಅನಾವರಣಗೊಂಡಿರುವುದು ತುಮಕೂರು ನಗರದ ಎಸ್ಪಿ ಕಚೇರಿ ಆವರಣದಲ್ಲಿ.
ಪರಿಸರ ಸ್ನೇಹಿಯಾಗಿ ಕಂಗೊಳಿಸುತ್ತಿರುವ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಈಗ ಎಲ್ಲರ ಗಮನ ಸೆಳೆಯುವ ತಾಣವಾಗಿದೆ. ಮಾದರಿ ರೈತರನ್ನು ಬೆರಗುಗೊಳಿಸುವಂತೆ ಪೊಲೀಸರು ಇಲ್ಲಿ ಅಡಿಕೆ, ತೆಂಗಿನ ಮರಗಳನ್ನು ಬೆಳೆದಿದ್ದಾರೆ. ನಗು ನಗುತ್ತಾ ಅರಳಿ ನಿಂತಿರುವ ಹೂಗಳ ವನ ನೋಡುವುದೇ ಒಂದು ಸೊಬಗು. ಠಾಣೆಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಆಕಾಶದೆತ್ತರಕ್ಕೆ ಬೆಳೆದು ನಿಂತಿರುವ ಹಲವು ವಿಧದ ಮರಗಳು, ಸುಂದರ ಗಿಡಗಳು ಬೀಸುವ ತಂಗಾಳಿಗೆ ತೂಗುತ್ತಾ ನಿಂತಿವೆ. ಇನ್ನು ಪೊಲೀಸ್ ಪರೇಡ್ ಮೈದಾನದಲ್ಲಿ ಕುಳಿತರೆ ಸಿಗುವ ಆನಂದವೇ ಬೇರೆ. ಮೈದಾನದ ಬದುಗಳೆಲ್ಲಾ ಹುಲ್ಲಿನ ಹಾಸು ಹೊದ್ದು ಕಂಗೊಳಿಸುತ್ತಾ ಗ್ರೌಂಡ್‌ಗೆ ಮೆರುಗು ತುಂಬಿವೆ. ಆ ಸ್ವಚ್ಛಂದ ಮೈದಾನದಲ್ಲಿ ಪೊಲೀಸರು ಪಥಸಂಚಲನ ಮಾಡುವುದನ್ನು ನೋಡುತ್ತಿದ್ದರೆ ಶಿಸ್ತಿನ ಸಿಪಾಯಿಗಳಾಗಿ ಕಾಣುವ ಪೊಲೀಸರ ಬಗ್ಗೆ ಎಂತಹವರಿಗಾದೂ ಹೆಮ್ಮೆ ಎನಿಸದೇ ಇರದು.
ಹೀಗೆ ಹಲವು ವಿಶೇಷತೆಗಳನ್ನು ಹೊಂದಿರುವ ಎಸ್ಪಿ ಕಚೇರಿ ಆವರಣದ 10 ಎಕರೆಯಷ್ಟು ವಿಶಾಲವಾದ ಪ್ರದೇಶವು ಹಚ್ಚ ಹಸಿರಿನಿಂದ ನವ ವಧುವಿನಂತೆ ಸಿಂಗರಿಸಿಕೊಂಡು ಕಂಗೊಳಿಸುತ್ತಿದೆ. ಇದು ತುಮಕೂರು ಜಿಲ್ಲೆ ಹಾಗೂ ನಗರದ ಜನತೆಗೆ ಹೆಮ್ಮೆಯ ವಿಚಾರ. ಪೊಲೀಸ್ ಇಲಾಖೆಯ ಪರಿಸರ ಕಾಳಜಿ ಹಾಗೂ ಪರಿಶ್ರಮ ಜನರ ಮೆಚ್ಚುಗೆಗೆ ಕಾರಣವಾಗಿದೆ.
ಈ ಚೆಂದದ ತೋಟ, ಅಂದದ ಹೂಗಳು, ಗಿಡ ಮರಗಳನ್ನು ಬೆಳೆದು, ಮುದ್ದಾದ ಮೈದಾನ ಸಿದ್ಧಗೊಳಿಸುವಲ್ಲಿ ಸಾವಿರಾರು ಪೊಲೀಸರ ಪರಿಶ್ರಮ, ಎಸ್ಪಿ, ಡಿಎಸ್‌ಪಿಗಳ ಕಾಳಜಿ, ಕಾರ್ಯಕ್ಷಮತೆ, ಪರಿಸರ ಪ್ರೇಮವೂ ಅಡಗಿದೆ. ಇವರೆಲ್ಲರ ಕಾಯಕ ನಿಷ್ಠೆಯಿಂದ ನಗರದ ಎಸ್ಪಿ ಕಚೇರಿ ಮಾದರಿಯಾಗಿ ನಿಂತಿದೆ.
20 ವರ್ಷಗಳ ಹಿಂದೆ ಎಸ್ಪಿ ಕಚೇರಿ ಜಾಗ ಹಾಳು ಕೊಂಪೆಯಾಗಿತ್ತು, ಕಸ ಕಡ್ಡಿ, ಗುಂಡಿ, ಕಳೆ ಗಿಡಗಳಿಂದ ತುಂಬಿ ಹೋಗಿದ್ದ ಈ ಜಾಗದಲ್ಲಿ ಜನರು ನಡೆದಾಡುವುದೇ ಕಷ್ಟವಾಗಿತ್ತು. ಪೊಲೀಸರು ಕೂಡ ಇಲ್ಲಿ ಇರುವುದು ತುಂಬಾ ದುಸ್ಥರ ಎಂಬಂತಹ ವಾತಾವರಣ ನಿರ್ಮಾಣವಾಗಿತ್ತು. ಅಂತಹ ಪರಿಸರಲ್ಲಿ ಪೊಲೀಸರು ಕೆಲಸ ಮಾಡುವ ಅನಿವಾರ್ಯತೆ ಇತ್ತು. ಆಗ ಎಸ್ಪಿ ಆಗಿದ್ದ ಹಿತೇಂದ್ರ ಅವರು ಪರಿಸ್ಥಿತಿ ಅವಲೋಕಿಸಿ ಈ ಜಾಗಕ್ಕೆ ಕಾಯಕಲ್ಪ ಮಾಡುವ ಯೋಚನೆ ಮಾಡಿದರು.
2002ರ ಡಿಸೆಂಬರ್ 16ರಲ್ಲಿ ಇಲ್ಲಿಗೆ ಹೊಸದಾಗಿ ಲೇಡೀಸ್ ಕಾನ್ಸ್ಟೇಬಲ್ ತಂಡ ತರಬೇತಿಗೆ ಆಗಮಿಸಿದಾಗ ಅವರ ಮೂಲಕ ಈ ಜಾಗಕ್ಕೆ ಒಂದು ಹೊಸ ರೂಪ ಕೊಡುವ ಕಾರ್ಯವನ್ನು ಎಸ್ಪಿ ಹಿತೇಂದ್ರ ಅವರು ಆರಂಭಿಸಿದರು. ನಂತರ ಬಂದ ಎಸ್ಪಿ ಮುನಿಸ್ವಾಮಿ ಅವರು ಗುಲಾಬಿ ತೋಟ ಮಾಡುವ ಮೂಲಕ ಗಿಡ ಮರ ನೆಡುವ ಕಾರ್ಯಕ್ಕೆ ಮುಂದಾದದು. ಎಸ್ಪಿ ಕಚೇರಿ ಆವರಣದಲ್ಲಿ ಹಸಿರು ಕಾಣಲಾರಂಭಿಸಿತು. ತರಬೇತಿ ಪಡೆಯಲು ಬಂದಿದ್ದ ಪೊಲೀಸರು ಬೆವರು ಸುರಿಸಿ ಗಿಡಗಳನ್ನು ನೆಟ್ಟು ಪೋಷಿಸಲು ಮುಂದಾದರು.
ಆ ನಂತರ ಎಸ್ಪಿಯಾಗಿ ಬಂದ ಹರಿಶೇಖರನ್ ಅವರು ಇಲ್ಲಿನ ಚಿತ್ರಣವನ್ನೇ ಬದಲಿಸಿದರು. ಇವರ ಜೊತೆಗಿದ್ದ ಡಿವೈಎಸ್ಪಿ ವಿಶ್ವನಾಥ್‌ಶೆಟ್ಟಿ ಅವರು ಶ್ರಮ ವಹಿಸಿ ಟ್ರೈನಿ ಪೊಲೀಸರ ಮೂಲಕ ಹಲವು ಕೆಲಸ ಮಾಡಿಸಿದರು. 1998ರಲ್ಲಿ ಪರೇಡ್ ಮೈದಾನ ಸಿದ್ಧಗೊಳ್ಳತೊಡಗಿತು. 100 ಜನ ಇದಕ್ಕಾಗಿ ಬೆಳಗ್ಗೆ ಹಾಗೂ ನಿರಂತರವಾಗಿ ಶ್ರಮಪಟ್ಟರು. ಜೊತೆಗೆ ಅಡಿಕೆ, ತೆಂಗು ಚಿಗುರ ತೊಡಗಿತು. ಹಲವು ಗಿಡ ಮರಗಳ ಉದ್ಯಾನ ಹರಡಿಕೊಳ್ಳತೊಡಗಿತು.
ನಂತರ ಬಂದ ಎಸ್ಪಿ ಹರ್ಷ ಅವರು ಬಹಳ ಮುತುವರ್ಜಿ ವಹಿಸಿ ಇಲ್ಲಿ ಕೆಲಸ ಮುಂದುವರೆಸಿದರು. ಸುಂದರ ಪರಿಸರ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸೌಲಭ್ಯ ಒದಗಿಸುತ್ತಾ ಪರಿಸರ ಕಾಳಜಿ ಮೆರೆದರು. ಹಸಿರ ಸಿರಿ ಅನಾವರಣಗೊಳ್ಳಲು ಇವರ ಪಾತ್ರ ಬಹಳ ಮುಖ್ಯವಾಯಿತು.
ಆ ನಂತರ ಬಂದ ಎಸ್ಪಿ ಸುರೇಶ್ ಅವರು ಕೂಡ ಯಾವುದೇ ವಿಚಾರದಲ್ಲೂ ಹಿಂದೆ ಬೀಳಲಿಲ್ಲ. ಇಲ್ಲಿರುವ ಅಡಿಕೆ, ತೆಂಗು, ಮರ ಗಿಡ, ಹೂದೋಟ ಪೋಷಿಸುವ ಕಾರ್ಯ ಮುಂದುವರೆಸಿದರು.
ಹಲವು ಟ್ರೈನಿ ಬ್ಯಾಚ್‌ನ ಸಾವಿರಾರು ಪೊಲೀಸರ ಬೆವರು ಹಾಗೂ ಹತ್ತಾರು ಅಧಿಕಾರಿಗಳ ಶ್ರಮದಿಂದ ಎಸ್ಪಿ ಕಚೇರಿ ಆವರಣ ಕಂಗೊಳಿಸಲಾರಂಭಿಸಿದೆ. 2 ಎಕರೆ ಪ್ರದೇಶದಲ್ಲಿ ಸೊಂಪಾಗಿ ಬೆಳೆದಿರುವ ಅಡಿಕೆ, ತೆಂಗು ಈಗ ಫಸಲು ನೀಡುತ್ತಿದೆ. ಸಂಪೂರ್ಣವಾಗಿ ಹನಿ ನೀರಾವರಿ ವ್ಯವಸ್ಥೆ ಹೊಂದಿರುವ ಈ ತೋಟಕ್ಕೆ ಯಾವತ್ತು ನೀರಿನ ತೊಂದರೆ ಕಾಡಿಲ್ಲ. ಇಲ್ಲಿ ಮೂರು ಬೋರ್‌ವೆಲ್‌ಗಳಿದ್ದು ಮರ ಗಿಡಗಳಿಗೆ ಉತ್ತಮ ನೀರಿನ ವ್ಯವಸ್ಥೆ ಇದೆ. ತಮ್ಮ ಕರ್ತವ್ಯದ ಜೊತೆಗೆ ಕಾಲ ಕಾಲಕ್ಕೆ ತೋಟಕ್ಕೆ ಗೊಬ್ಬರ ಹಾಕಿ ನೀರು ಹಾಯಿಸಿ ನೋಡಿಕೊಳ್ಳಲು ಪೊಲೀಸರು ಶ್ರಮವಹಿಸಿದ್ದಾರೆ.
ಎರಡು ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಪೊಲೀಸ್ ಪರೇಡ್ ಮೈದಾನ ಬಹಳ ಸುಂದರವಾಗಿದೆ. ಅಚ್ಚುಕಟ್ಟಾಗಿ, ಸಮತಟ್ಟಾಗಿ ಇರುವ ಈ ಮೈದಾನ ಪೊಲೀಸರ ಕನಸಿನ ಕೂಸು ಕೂಡಾ ಹೌದು. ದೇಹ ದಂಡಿಸಲು ಜಿಮ್, ಶೆಟಲ್ ಆಡಲು ಇಂಡೋರ್ ಸ್ಟೇಡಿಯಂ ಸಹ ಇದೆ. ಹೀಗೆ ಹಲವು ವಿಶೇಷತೆ ಹಾಗೂ ಸೌಲಭ್ಯಗಳಿಂದ ಕೂಡಿರುವ ಪರಿಸರ ಸ್ನೇಹಿ ಎಸ್ಪಿ ಕಚೇರಿ, ಪೊಲೀಸ್ ಇಲಾಖೆಗೆ ಮಾದರಿಯಾಗಿದೆ.
ಬರೀ ಕಳ್ಳರನ್ನು ಹಿಡಿಯುವುದೊಂದೆ ನಮ್ಮ ಕೆಲಸವಲ್ಲ, ಪರಿಸರದ ಬಗ್ಗೆ ನಮಗೂ ಕಾಳಜಿ ಇದೆ. ನಾವು ರೈತರ ರೀತಿ ಕೆಲಸ ಮಾಡಿ ತೋಟ ಕಟ್ಟಿದ್ದೇವೆ. ಉತ್ತಮ ಫಸಲು ಬೆಳೆಯುತ್ತೇವೆ. ನಾವು ಯಾವ ರೈತರು ಮತ್ತು ಪರಿಸರ ಪ್ರೇಮಿಗಳಿಗಿಂತ ಕಡಿಮೆ ಇಲ್ಲ ಎಂಬುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಿಬ್ಬಂದಿ ತೋರಿಸಿಕೊಟ್ಟಿದ್ದಾರೆ. ನಗರದ ಮಧ್ಯೆ ಅಂದದ ತೋಟ, ಚಂದದ ವನ ಬೆಳೆಸಿ ಪೊಲೀಸ್ ಇಲಾಖೆ ಸೈ ಎನಿಸಿಕೊಂಡಿದೆ.
ಇಂತಹ ಉತ್ತಮ ಕಾರ್ಯ ಕೈಗೊಂಡು ಸುಂದರ ತೋಟ ಕಟ್ಟಿ, ಪರಿಸರ ಕಾಳಜಿಯಿಂದ ಶ್ರಮಿಸಿದ ಎಲ್ಲಾ ಪೊಲೀಸರಿಗೂ ಸಾರ್ವಜನಿಕರು ಹ್ಯಾಟ್ಸಾಫ್ ಹೇಳುತ್ತಿದ್ದಾರೆ. ಇದೇ ರೀತಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮರಗಿಡ ಬೆಳೆಸಿ ಪರಿಸರ ರಕ್ಷಣೆಗೆ ಮುಂದಾದರೆ ಜನರು ಜಾಗೃತರಾಗುವುದರಲ್ಲಿ ಅನುಮಾನವಿಲ್ಲ.
ಅಡಿಕೆ ತೋಟ ನಮ್ಮ ಪೊಲೀಸರ ಹೆಮ್ಮೆ
ಹಿಂದೆ ಕಾರ್ಯ ನಿರ್ವಹಿಸಿದ ಎಸ್‌ಪಿಗಳು ಮತ್ತು ಹಲವು ಪೊಲೀಸ್ ಅಧಿಕಾರಿಗಳ ಶ್ರಮದಿಂದ ನಮ್ಮ ಎಸ್‌ಪಿ ಕಚೇರಿ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ. ನಮ್ಮ ಪೊಲೀಸರ ಬದ್ಧತೆ, ಕಾಳಜಿ ಮತ್ತು ಪರಿಸರ ಪ್ರೀತಿಯ ಸಂಕೇತ ಈ ತೋಟ. ಈಗಾಗಲೇ ಅಡಿಕೆ ಬೆಳೆ ಫಸಲು ನೀಡುತ್ತಿದ್ದು, ಅಡಿಕೆ ಚೇಣಿ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಪೊಲೀಸರ ನಿಧಿಗೆ ಬಳಸಲಾಗುತ್ತಿದೆ. ಅಲ್ಲಿ ವರ್ಷಕ್ಕೆ ಸಾವಿರಾರು ರೂಪಾಯಿ ಆದಾಯ ತರುತ್ತಿದ್ದು, ಈ ಹಣವನ್ನು ಬೇರೆ ಅನ್ಯ ಕೆಲಸಗಳಿಗೆ ಬಳಸದೆ ಪೊಲೀಸರ ಕಷ್ಟ ಸಮಸ್ಯೆಗೆ ಬಳಕೆಯಾಗುತ್ತಿದೆ. ಸಾರ್ವಜನಿಕರು ಕೂಡ ಈ ರೀತಿ ಗಿಡ ಮರ ಬೆಳೆಸಲು ಮುಂದಾದಲ್ಲಿ ಉತ್ತಮ ಪರಿಸರ ನಿರ್ಮಾಣದೊಂದಿಗೆ ಉತ್ತಮ ಆರೋಗ್ಯ ಪಡೆಯಹುದು ಎನ್ನುತ್ತಾರೆ ಈಗಿನ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್‌ವಾಡ್.