logo
ಕನ್ನಡ ಸುದ್ದಿ  /  ಕರ್ನಾಟಕ  /  ತುಮಕೂರಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಸೌಹಾರ್ದಯುತ, ಡಿಜೆ ಸದ್ದಿಗೆ ಯುವ ಪಡೆ ಡ್ಯಾನ್ಸ್‌; ಭಾಗಿಯಾದ ಪರಮೇಶ್ವರ್‌, ಸೋಮಣ್ಣ

ತುಮಕೂರಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆ ಸೌಹಾರ್ದಯುತ, ಡಿಜೆ ಸದ್ದಿಗೆ ಯುವ ಪಡೆ ಡ್ಯಾನ್ಸ್‌; ಭಾಗಿಯಾದ ಪರಮೇಶ್ವರ್‌, ಸೋಮಣ್ಣ

Umesha Bhatta P H HT Kannada

Sep 22, 2024 07:47 AM IST

google News

ತುಮಕೂರಿನಲ್ಲಿ ನಾನಾ ಮಠಾಧೀಶರ ಸಮ್ಮುಖದಲ್ಲಿ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಮೆರವಣಿಗೆ ನೆರವೇರಿತು.

    • ತುಮಕೂರಿನಲ್ಲಿ ಪ್ರಸಿದ್ದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆ ಭರ್ಜರಿಯಾಗಿಯೇ ನಡೆಯಿತು. ಶಾಂತಿಯುತವಾಗಿಯೇ ವಿಸರ್ಜನೆ ಮಾಡಲಾಯಿತು.
    • ವರದಿ: ಈಶ್ವರ್‌ ತುಮಕೂರು
ತುಮಕೂರಿನಲ್ಲಿ ನಾನಾ ಮಠಾಧೀಶರ ಸಮ್ಮುಖದಲ್ಲಿ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಮೆರವಣಿಗೆ ನೆರವೇರಿತು.
ತುಮಕೂರಿನಲ್ಲಿ ನಾನಾ ಮಠಾಧೀಶರ ಸಮ್ಮುಖದಲ್ಲಿ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ ಮೆರವಣಿಗೆ ನೆರವೇರಿತು.

ತುಮಕೂರು: ನಗರದ ಬಿ.ಜಿ.ಎಸ್. ವೃತ್ತದಲ್ಲಿರುವ ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಡಿಜೆ ಸದ್ದಿಗೆ ಯುವ ಪಡೆ ಮಸ್ತ್‌ ಡ್ಯಾನ್ಸ್‌ ಮಾಡಿದರೆ ಇಡೀ ಮೆರವಣಿಗೆಯಲ್ಲಿಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು. ನಾಗರಕಟ್ಟೆ ದೇವಾಲಯದ ಮುಂಭಾದಲ್ಲಿ ಹಿಂದೂ ಮಹಾಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮುಖೇನ ವಿವಿಧ ಮಠಾಧೀಶರು ಗಣೇಶೋತ್ಸವಕ್ಕೆ ಚಾಲನೆ ನೀಡಿದರು. ಗಣೇಶೋತ್ಸವದ ಅಂಗವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ನಾಗರಕಟ್ಟೆ ದೇವಾಲಯಕ್ಕೆ ಭೇಟಿ ನೀಡಿ ಹಿಂದೂ ಮಹಾ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಬಿ.ಜಿ.ಎಸ್. ವೃತ್ತದಲ್ಲಿ ಹಿಂದೂ ಮಹಾ ಗಣೇಶ ಮೂರ್ತಿಗೆ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಪೂಜೆ ಸಲ್ಲಿಸಿ ಮಾತನಾಡಿ, ಗಣೇಶೋತ್ಸವ ಈ ದೇಶದ ಸತ್ ಸಂಪ್ರದಾಯ, ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರನಾಥ ತಿಲಕ್ ಅವರು ಗಣೇಶಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ ಸ್ವಾತಂತ್ರೊ್ಯೀತ್ಸವ ಚಳವಳಿಗೆ ನಾಂದಿ ಹಾಡಿದರು, ಸೂರ್ಯ- ಚಂದ್ರ ಎಲ್ಲಿಯವರೆಗೂ ಇರುತ್ತಾರೋ ಅಲ್ಲಿಯವರೆಗೂ ಹಿಂದೂ ರಾಷ್ಟ್ರದಲ್ಲಿ ಗಣೇಶೋತ್ಸವಗಳು ನಡೆಯುತ್ತವೆ ಎಂದರು.

ತುಮಕೂರು ನಗರದಲ್ಲಿ ಅಭೂತಪೂರ್ವ ಗಣೇಶೋತ್ಸವ ಮೆರವಣಿಗೆ ನಡೆದಿದೆ, ಎಲ್ಲರೂ ಒಟ್ಟಾಗಿ ಸೇರಿ ಗಣೇಶೋತ್ಸವ ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ವಿವಿಧ ಮಠಾಧೀಶರಾದ ಡಾ.ವೀರೇಶಾನಂದ ಸರಸ್ವತಿ ಸ್ವಾಮೀಜಿ, ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅಟವೀ ಶಿವಲಿಂಗ ಸ್ವಾಮೀಜಿ, ಕಾರದೇಶ್ವರ ಸ್ವಾಮೀಜಿ, ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಕೋರಿ ಮಂಜಣ್ಣ, ಜಿ.ಕೆ.ಶ್ರೀನಿವಾಸ್, ಟಿ.ಬಿ.ಶೇಖರ್, ಡಾ. ಪರಮೇಶ್, ರವಿಶಂಕರ್ ಹೆಬ್ಬಾಕ, ಮಂಜು ಭಾರ್ಗವ ಸೇರಿದಂತೆ ಅನೇಕ ಭಕ್ತರು ಗಣೇಶಮೂರ್ತಿಗೆ ಪೂಜೆ ಸಲ್ಲಿಸುವ ಮುಖೇನ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.

ಭಾವೈಕ್ಯತೆ ಮೆರೆದ ಮುಸ್ಲಿಂ ಬಾಂಧವರು

ಟೌನ್‌ಹಾಲ್ ವೃತ್ತದಲ್ಲಿ ಗಣೇಶೋತ್ಸವದ ಮೆರವಣಿಗೆ ಆರಂಭವಾಗುತ್ತಿದ್ದಂತೆ ಮುಸ್ಲಿಂ ಬಾಂಧವರು ಸಹ ದರ್ಗಾ ಬಳಿ ಗಣೇಶಮೂರ್ತಿಗೆ ಪೂಜೆ ಸಲ್ಲಿಸಿ ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿ ಭಕ್ತರಿಗೆ ಕುಡಿಯುವ ನೀರು ಕೊಡುವ ಮೂಲಕ ಭಾವೈಕ್ಯತೆ ಮೆರೆದರು.

ಟೌನ್‌ಹಾಲ್ ವೃತ್ತದಿಂದ ಲಕ್ಕಪ್ಪ ವೃತ್ತ, ಜೆ.ಸಿ. ರಸ್ತೆ, ಮಂಡಿಪೇಟೆ ವೃತ್ತ, ಸ್ವಾತಂತ್ರ್ಯ ಚೌಕ, ಅಶೋಕ ರಸ್ತೆ ಮುಖೇನ ಸಾಗಿದ ಗಣೇಶೋತ್ಸವದ ಮೆರವಣಿಗೆಯು ಮತ್ತೆ ಬಿ.ಜಿ.ಎಸ್. ವೃತ್ತದ ಮೂಲಕ ಎಂ.ಜಿ. ರಸ್ತೆ, ಜೈನ್ ಟೆಂಪಲ್ ರಸ್ತೆ, ರಾಮಪ್ಪ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮುಖೇನ ವೈಭವಯುತವಾಗಿ ಸಾಗಿ ಆಂಜನೇಯ ಸ್ವಾಮಿ ವೃತ್ತ, ಗಾರ್ಡನ್ ರಸ್ತೆ ಮುಖೇನ ಕೆಎನ್‌ಎಸ್ ಕಲ್ಯಾಣಿಗೆ ತಲುಪಿತು, ನಂತರ ಗಣೇಶಮೂರ್ತಿಯನ್ನು ಕಲ್ಯಾಣಿಯಲ್ಲಿ ಭಕ್ತರ ಅಬ್ಬರದ ಜೈಕಾರಗಳೊಂದಿಗೆ ವಿಸರ್ಜಿಸಲಾಯಿತು.

ಗಣೇಶೋತ್ಸವದ ಮೆರವಣಿಗೆ ಸಾಗಿದ ಉದ್ದಕ್ಕೂ ಭಜರಂಗದಳದ ಕಾರ್ಯಕರ್ತರ ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿತ್ತು, ಮೆರವಣಿಗೆಯಲ್ಲಿ ಹಾಕಲಾಗಿದ್ದ ಡಿಜೆ ಸೌಂಡ್ಸ್‌ಗೆ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು.

ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಹಿಂದೂ ಮಹಾಗಣಪತಿ ಮೂರ್ತಿಯ ಮೆರವಣಿಗೆ ಕಣ್ತುಂಬಿಕೊಳ್ಳಲು ಭಕ್ತರು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು ಕಂಡು ಬಂತು.

ಗಣೇಶೋತ್ಸವದ ಶೋಭಯಾತ್ರೆಯ ಉದ್ದಕ್ಕೂ ರಾಧೆ ಕೃಷ್ಣ ಕೋಲಾಟ, ಜಟಾಯು ಕುಣಿತ, ನಾಸಿಕ್ ಡೋಲ್, ವೀರ ಸಾವರ್ಕರ್ ಪ್ರತಿಮೆ, ಛತ್ರಪತಿ ಶಿವಾಜಿ ಮಹಾರಾಜ್, ವಾಯುಪುತ್ರ ಆಂಜನೇಯ ಟ್ಯಾಬ್ಲೋ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆದವು.

ಗಣೇಶೋತ್ಸವದ ಅಂಗವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ. ನೇತೃತ್ವದಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ