ಆನ್‌ಲೈನ್ ಟ್ರೇಡಿಂಗ್ ದೋಖಾ: ನಾಲ್ವರ ಸೆರೆ 13 ಲಕ್ಷ ರೂ ನಗದು ವಶ, ಸೈಬರ್ ಪೊಲೀಸ್ ಹೆಸರಲ್ಲಿ ಲಕ್ಷಾಂತರ ರೂ ದೋಚಿದ ಖದೀಮರು
Aug 23, 2024 11:27 AM IST
ಆನ್‌ಲೈನ್ ವಂಚನೆ
- Online Trading Scam: ಕರ್ನಾಟಕದಲ್ಲಿ ಸೈಬರ್ ಅಪರಾಧಗಳು ದಿನೇದಿನೇ ಹೆಚ್ಚಾಗುತ್ತಿದೆ. ಇದೀಗ ಉಡುಪಿಯಲ್ಲಿ ಆನ್ ಲೈನ್ ಟ್ರೇಡಿಂಗ್, ಸೈಬರ್ ಪೊಲೀಸ್ ಹೆಸರಲ್ಲಿ ವಂಚನೆ ವಂಚಿಸಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)
ಬೆಂಗಳೂರು: ಆನ್ ಲೈನ್ ಟ್ರೇಡಿಂಗ್, ಸೈಬರ್ ಪೊಲೀಸ್ ಹೆಸರಲ್ಲಿ ವಂಚನೆ ಕುರಿತು ಪದೇ ಪದೇ ಎಚ್ಚರಿಕೆಯನ್ನು ಪೊಲೀಸ್ ಇಲಾಖೆ ನೀಡುತ್ತಿದ್ದರೂ ವಂಚನೆ ಪ್ರಕರಣಗಳು ನಡೆಯುತ್ತಲೇ ಇವೆ. ಉಡುಪಿ ಜಿಲ್ಲರಯ ತಾಜಾ ಪ್ರಕರಣಗಳಿವು.
ಪ್ರಕರಣ 1
ಉಡುಪಿಯಲ್ಲಿ ಆನ್‌ಲೈನ್ ಟ್ರೇಡಿಂಗ್ ವಂಚನೆ
ಆನ್‌ಲೈನ್ ಟ್ರೇಡಿಂಗ್ ನಲ್ಲಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳ ನ್ನು ಉಡುಪಿ ಪೊಲೀಸರು ಬಂಧಿಸಿ 13 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ.
ತನಗೆ ಅಪರಿಚಿತರು ಕರೆ ಮಾಡಿ ಹಾಗೂ ವಾಟ್ಸಾಪ್ ನಲ್ಲಿ ಟ್ರೇಡಿಂಗ್ ಮಾಡಿ ಈ ವಂಚನೆ ಎಸಗಿದ್ದಾಗಿ ಉಪೇಂದ್ರ ಭಟ್ ದೂರು ನೀಡಿದ್ದರು.
ಆನ್‌ಲೈನ್ ವಂಚನೆ ಹೇಗೆ?
ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ವಾಟ್ಸ್‌ಆಪ್‌ನಲ್ಲಿ ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್ ಗೆ ಸೇರಿಸಿದ್ದಾರೆ. ಬಳಿಕ, ಮೋತಿಲಾಲ್ ಒಸ್ವಾಲ್ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್ ನ ಅಕೌಂಟ್ ನಂಬರ್ ನೀಡಿದ್ದಾರೆ.
ವಾಟ್ಸ್ಯಾಪ್ ನಲ್ಲಿ ಟ್ರೇಡಿಂಗ್ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ನಂಬಿಸಿ ಇದು ಗ್ಯಾರಂಟಿ ಲಾಭಾಂಶ ತರುತ್ತದೆ ಎಂದಿದ್ದಾರೆ,
ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಒಟ್ಟು 33,10,000 ಹಣ ಡೆಪಾಸಿಟ್ ಮಾಡಿದ್ದಾರೆ. ಈ ಬಗ್ಗೆ ಉಪೇಂದ್ರ ಭಟ್ ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ಎಲ್ಲಿಯವರು?
ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ನಡೆಸಲಾಯಿತು. ಈ ವೇಳೆ ಆರೋಪಿಗಳಾದ ಪುತ್ತೂರಿನ ಮಹಮ್ಮದ್ ಮುಸ್ತಫಾ ಪಿ. (36), ಕುಂಬ್ಳೆಯ ಖಾಲೆಡ್ಜ್. ಬಿ, (39 ), ಕಾಸರಗೋಡಿನ ಮೊಹಮ್ಮದ್ ಸಫಾನ್ ಕೆ.ಎ., (22) , ಮಂಗಳೂರಿನ ಸತೀಶ್ ಶೇಟ್(22 )ರನ್ನು ವಶಕ್ಕೆ ಪಡೆದು ಅವರಿಂದ 5 ಮೊಬೈಲ್ ಹಾಗೂ 13 ಲಕ್ಷ ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕ್ರರಣದ ಪ್ರಮುಖ ಸೂತ್ರಧಾರಿಗಳು ತಲೆಮರೆಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಯ್ಯ ಟಿ.ಎಸ್., ಪರಮೇಶ್ವರ ಹೆಗಡೆ , ಸೆನ್ ಠಾಣೆಯ ನಿರೀಕ್ಷಕ ರಾಮಚಂದ್ರ ನಾಯಕ್, ಎಎಸ್ಐ ರಾಜೇಶ್ , ಸಿಬ್ಬಂದಿಗಳಾದ ಪ್ರವೀಣ ಕುಮಾರ್, ಅರುಣ ಕುಮಾರ್, ವೆಂಕಟೇಶ್, ಯತೀನ್ ಕುಮಾರ್, ರಾಘವೇಂದ್ರ, ಪ್ರಶಾಂತ್ ಪ್ರಸನ್ನ ಸಿ ಸಲ್ಮಾನ್, ಚಾಲಕ ಸುದೀಪ್ ಸಹಕರಿಸಿದ್ದಾರೆ
ಪ್ರಕರಣ 2
ಸಾಫ್ಟ್‌ವೇರ್ ಯುವತಿಗೆ ಬೆದರಿಸಿ ವಂಚನೆ
ಸಾಫ್ಟ್ ವೇರ್ ಎಂಜಿನಿಯರ್ ಯುವತಿಗೆ ಮುಂಬಯಿ ಸೈಬರ್ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಆಕೆಯ ಖಾತೆಯಿಂದ ಮೂರು ಗಂಟೆಯ ಅವಧಿಯೊಳಗೆ 4.80 ಲಕ್ಷ ರೂ. ನಗದು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಘಟನೆ ನಡೆದಿದೆ.
ಕಾಪು ಕೊಪ್ಪಲಂಗಡಿ ನಿವಾಸಿಯಾಗಿರುವ ಯುವತಿ ಮಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆ ಕರ್ತವ್ಯದಲ್ಲಿರುವಾಗ ಆ. 21ರಂದು 9259996764 ನಂಬರ್‌ನಿಂದ ಮುಂಬಯಿ ಸೈಬರ್ ಪೊಲೀಸರ ಹೆಸರಿನಲ್ಲಿ ಮಹಿಳೆಯೊಬ್ಬರು ಕರೆ ಮಾಡಿ ನಿಮ್ಮ ಹೆಸರಿನಲ್ಲಿ ಬಂದಿರುವ ಕೊರಿಯರ್‌ನಲ್ಲಿ ನಿಷೇಧಿತ ಡ್ರಗ್ಸ್ ಇರುವುದಾಗಿ ತಿಳಿಸಿ, ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು. ಅನಂತರ ಮತ್ತೋರ್ವರಿಗೆ ಕರೆ ಕನೆಕ್ಟ್ ಮಾಡಿದ್ದರು.
ಆಸಂದರ್ಭ ಮತ್ತೊಬ್ಬ ಮಹಿಳೆ ಮಾತನಾಡಿ, ನಾನು ನಾರ್ಕೋಟಿಕ್ ಡ್ರಗ್ ಡಿಪಾರ್ಟ್‌ಮೆಂಟ್‌ನ ಪೊಲೀಸ್ ಅಧಿಕಾರಿಯಾಗಿದ್ದು, ವಿವರಕ್ಕಾಗಿ ಟೆಲಿಗ್ರಾಂ ಆ್ಯಪ್ ಅನ್ನು ಓಪನ್ ಮಾಡುವಂತೆ ತಿಳಿಸಿದ್ದಳು. ಆಗ ಆ್ಯಪ್ ಇಲ್ಲವೆಂದು ಹೇಳಿದ್ದಕ್ಕೆ ಆ್ಯಪ್ ಡೌನ್‌ಲೋಡ್ ಮಾಡಿಸಿದ್ದರು. ಬಳಿಕ ಮಹಿಳಾ ಪೊಲೀಸ್ ಅಧಿಕಾರಿಯ ಪ್ರೊಪೈಲ್ ಇರುವ ಐಡಿಯೊಂದನ್ನು ಕಳುಹಿಸಿ ನೀವು ಕೊರಿಯರ್ ಕಳುಹಿಸಿರುವ ಬಗ್ಗೆ ನಮಗೆ ತನಿಖೆ ಮಾಡುವುದಕ್ಕಿದೆ. ಕರೆ ಕಟ್ ಮಾಡಬಾರದೆಂದು ಆದೇಶಿಸಿದ್ದರು. ಅವರ ಬೆದರಿಕೆಗೆ ಹೆದರಿದ ಯುವತಿ ಟೆಲಿಗ್ರಾಂ ಆ್ಯಪ್ ಮೂಲಕ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಹಂಚಿಕೊಂಡಿದ್ದರು. ಅವರು ಪೊಲೀಸ್ ಇಲಾಖೆಯ ತನಿಖೆಯ ಬಗೆಗಿನ ವಿವರಗಳನ್ನು ಪಿಡಿಎಫ್ ಫೈಲ್ ಮೂಲಕ ಕಳುಹಿಸಿಕೊಟ್ಟಿದ್ದರು.
ಅನಂತರ ಮತ್ತೂಬ್ಬ ವ್ಯಕ್ತಿಯ ಫೋಟೋ ತೋರಿಸಿ, ಈತ ನಿಮ್ಮ ಐಡಿ ಬಳಸಿ, ಬೇರೆ ಬೇರೆ ಹೆಸರಿನಲ್ಲಿ ಖಾತೆ ತೆರೆದು ವಂಚಿಸುತ್ತಿದ್ದಾನೆ. ನಿಮಗೆ ಅವರ ಪರಿಚಯವಿದೆಯೇ ಎಂದು ಪ್ರಶ್ನಿಸಿದ್ದರು. ಪರಿಚಯವಿಲ್ಲವೆಂದು ತಿಳಿಸಿದಾಗ ಆಕೆ ಮತ್ತೋರ್ವ ಅಧಿಕಾರಿಗೆ ಫೋನ್ ಕೊಟ್ಟಿದ್ದು, ಆತ ಪಾರ್ಸೆಲ್ ಕಳುಹಿಸಿದ ಬಗ್ಗೆ ತನಿಖೆಗಾಗಿ ಬ್ಯಾಂಕ್ ಖಾತೆ ಪರಿಶೀಲಿಸಬೇಕು. ಅದಕ್ಕೆ ಆರ್‌ಬಿಐಗೆ ಖಾತೆ ವಿವರ ಕಳುಹಿಸಿಕೊಡಬೇಕಿದೆ. ನಿಮ್ಮ ಖಾತೆಯಿಂದ ಹಣ ರವಾನೆಯಾಗುತ್ತದೆಯೇ ಎಂದು ಪರಿಶೀಲಿಸಬೇಕಿದೆ ಎಂದು ಹೇಳಿ ಒಂದು ಖಾತೆಯನ್ನು ನೀಡಿದ್ದು ಅದಕ್ಕೆ 2 ಲಕ್ಷ ರೂ. ವರ್ಗಾಯಿಸಿಕೊಂಡಿದ್ದರು. ಆ ಬಳಿಕ ಮತ್ತೊದು ಖಾತೆ ನೀಡಿ ಅದಕ್ಕೆ ಎರಡು ಲಕ್ಷ ರೂಪಾಯಿ ವರ್ಗಾಯಿಸಿಕೊಂಡಿದ್ದರು. ಮತ್ತೆ ಖಾತೆಯಲ್ಲಿ 80 ಸಾವಿರ ಉಳಿದಿದ್ದು, ಅದನ್ನು ಯುಪಿಐ ಐಡಿ ನೀಡಿ ವರ್ಗಾಯಿಸಿಕೊಂಡಿದ್ದರು.
ವರದಿ: ಹರೀಶ್ ಮಾಂಬಾಡಿ, ಮಂಗಳೂರು