logo
ಕನ್ನಡ ಸುದ್ದಿ  /  ಕರ್ನಾಟಕ  /  ಹೆಬ್ರಿ ಶೂಟೌಟ್‌ನಲ್ಲಿ ಸಾವನ್ನಪ್ಪಿದ ನಕ್ಸಲ್‌ ನಾಯಕ ವಿಕ್ರಂ ಗೌಡ ಅಂತ್ಯಕ್ರಿಯೆ; ಕುಟುಂಬಸ್ಥರು, ಗ್ರಾಮಸ್ಥರು ಭಾಗಿ

ಹೆಬ್ರಿ ಶೂಟೌಟ್‌ನಲ್ಲಿ ಸಾವನ್ನಪ್ಪಿದ ನಕ್ಸಲ್‌ ನಾಯಕ ವಿಕ್ರಂ ಗೌಡ ಅಂತ್ಯಕ್ರಿಯೆ; ಕುಟುಂಬಸ್ಥರು, ಗ್ರಾಮಸ್ಥರು ಭಾಗಿ

Rakshitha Sowmya HT Kannada

Nov 20, 2024 05:46 PM IST

google News

ನಾಡ್ಪಾಲು ಗ್ರಾಮದ ಕೂಡ್ಲು ಪ್ರದೇಶದಲ್ಲಿ ನಡೆದ ವಿಕ್ರಂ ಗೌಡ ಅಂತ್ಯಕ್ರಿಯೆ

  • ನವೆಂಬರ್‌ 17 ರಂದು ಹೆಬ್ರಿ ಕಾಡಂಚಿನ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದ ನಕ್ಸಲ್‌ ಗೌಡ ವಿಕ್ರಂ ಗೌಡ ಅಂತ್ಯಕ್ರಿಯೆ ಸೋಮವಾರ ನಡೆಯಿತು. ನಾಡ್ಪಾಲು ಗ್ರಾಮದ ಕೂಡ್ಲು ಪ್ರದೇಶದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಗ್ರಾಮಸ್ಥರು, ಕುಟುಂಬಸ್ಥರು ಭಾಗವಹಿಸಿದ್ದರು. (ವರದಿ: ಹರೀಶ ಮಾಂಬಾಡಿ, ಮಂಗಳೂರು)

ನಾಡ್ಪಾಲು ಗ್ರಾಮದ ಕೂಡ್ಲು ಪ್ರದೇಶದಲ್ಲಿ ನಡೆದ ವಿಕ್ರಂ ಗೌಡ ಅಂತ್ಯಕ್ರಿಯೆ
ನಾಡ್ಪಾಲು ಗ್ರಾಮದ ಕೂಡ್ಲು ಪ್ರದೇಶದಲ್ಲಿ ನಡೆದ ವಿಕ್ರಂ ಗೌಡ ಅಂತ್ಯಕ್ರಿಯೆ

ಉಡುಪಿ: ಸೋಮವಾರ (ನ.17) ಶೂಟೌಟ್‌ನಲ್ಲಿ ಸಾವನ್ನಪ್ಪಿದ್ದ ನಕ್ಸಲ್‌ ನಾಯಕ ವಿಕ್ರಂ ಗೌಡ ಅಂತ್ಯಕ್ರಿಯೆ ಬುಧವಾರ (ನ.20) ನಡೆದಿದೆ. ವಿಕ್ರಂ ಗೌಡ ಸುಮಾರು 20 ವರ್ಷಗಳಿಂದ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸೇರಿದಂತೆ ಮೂರು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕನಾಗಿದ್ದ.

ನಾಡ್ಪಾಲು ಗ್ರಾಮದ ಕೂಡ್ಲು ಪ್ರದೇಶದಲ್ಲಿ ನಡೆದ ಅಂತ್ಯಕ್ರಿಯೆ

ನವೆಂಬರ್‌ 17 ರಂದು ಶೂಟೌಟ್‌ ನಡೆದ ಸ್ಥಳಕ್ಕೆ ಡಿಐಜಿ ರೂಪಾ ಭೇಟಿ ನೀಡಿ ಮಹಜರು ಕಾರ್ಯ ನಡೆಸಿದರು. ನ. 18ರ ಮಧ್ಯರಾತ್ರಿಯಿಂದ ಮುಂಜಾನೆಯವರೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಮೃತದೇಹದ ಪೋಸ್ಟ್ ಮಾರ್ಟಮ್ ನಡೆಯಿತು. ಬಳಿಕ ಮೃತದೇಹವನ್ನು ವಿಕ್ರಂ ಗೌಡ ತಮ್ಮ ಸುರೇಶ್ ಗೌಡ, ತಂಗಿ ಸುಗುಣ ಅವರಿಗೆ ಹಸ್ತಾಂತರಿಸಲಾಯಿತು. ಮೃತದೇಹವನ್ನು ಆಂಬ್ಯುಲೆನ್ಸ್‌ನಲ್ಲಿ ಹೆಬ್ರಿ ಮಾರ್ಗವಾಗಿ ಕೂಡ್ಲುವಿಗೆ ಸಾಗಿಸುವಾಗ ದಾರಿ ಮಧ್ಯೆ ಹಸುವೊಂದು ಅಡ್ಡ ಬಂದ ಪರಿಣಾಮ ಆಂಬ್ಯುಲೆನ್ಸ್ ರಸ್ತೆ ಪಕ್ಕಕ್ಕೆ ವಾಲಿದ ಘಟನೆಯು ನಡೆಯಿತು. ನಂತರ ಆಂಬ್ಯುಲೆನ್ಸನ್ನು ದಾರಿಗೆ ತಂದು ಅಂತ್ಯಕ್ರಿಯೆ ನಡೆಸಲಾಯ್ತು. ನಾಡ್ಪಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಡ್ಲು ಪ್ರದೇಶದಲ್ಲಿರುವ ವಿಕ್ರಂ ಗೌಡ ಮೂಲ ಮನೆಯಲ್ಲಿ ಪೊಲೀಸ್ ಬಂದೋಬಸ್ತ್ ನಡುವೆ ಕುಟುಂಬಸ್ಥರಿಂದ ಅಂತ್ಯಕ್ರಿಯೆ ನಡೆಯಿತು. ಈ ಸಂದರ್ಭ ಕುಟುಂಬಸ್ಥರು, ಗ್ರಾಮಸ್ಥರು ಸೇರಿದ್ದರು.

ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ವಿಕ್ರಂ ಗೌಡ

ಸೋಮವಾರ ರಾತ್ರಿ ಸುಮಾರು 12:15ಕ್ಕೆ ವಿಕ್ರಂ ಗೌಡ, ತಮ್ಮ ಸಹಚರರೊಂದಿಗೆ ರೇಷನ್‌ ತರಲು ಗ್ರಾಮದೊಳಗೆ ಬಂದಿದ್ದಾರೆ. ಪೀತಪೈಲಿನ ಬಳಿ ಜಯಂತ್‌ ಗೌಡ ಎಂಬುವರ ಮನೆಗೆ ಬಂದ ವಿಕ್ರಂ ಗೌಡ ಹಾಗೂ ಜೊತೆಗಾರರರು ರೇಷನ್‌ ತೆಗೆದಿಡುವಂತೆ ಸೂಚಿಸಿದ್ದು, ಮತ್ತೆ ರೇಷನ್‌ ಪಡೆಯಲು ಬರುತ್ತೇವೆ ಎಂದು ಹೇಳಿಬಂದಿದ್ದರು. ವಿಕ್ರಂ ಗೌಡ ಬರುವಿಕೆ ಬಗ್ಗೆ ಮೊದಲೇ ಮಾಹಿತಿ ಇದ್ದ ಎಎನ್​ಎಫ್ ತಂಡ ಆತನಿಗಾಗಿ ಕಾದು ಕುಳಿತಿತ್ತು. ಜಯಂತ್‌ ಗೌಡ ಅವರ ಮನೆಯನ್ನು ತೆರವುಗೊಳಿಸಿ ಆತನಿಗಾಗಿ ಕಾದು ಕುಳಿತಿದ್ದರು. ಆದರೆ ಜಯಂತ್‌ ಗೌಡ ಇದ್ದಾರೆಂದು ರೇಷನ್‌ಗಾಗಿ ಬಂದ ವಿಕ್ರಂ ಗೌಡನಿಗೆ ಪೊಲೀಸರು ಇರುವುದು ಗೊತ್ತಾಗಿದೆ. ಕೂಡಲೇ ತನ್ನ ಬಂದೂಕನ್ನು ತೆಗೆದು ಪೊಲೀಸರ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾನೆ. ಶರಣಾಗುವಂತೆ ಎಷ್ಟು ಸಲ ಹೇಳಿದರೂ ವಿಕ್ರಂ ಗೌಡ, ಒಪ್ಪದೆ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಈ ಸಮಯದಲ್ಲಿ ಎಎನ್​ಎಫ್ ಸಿಬ್ಬಂದಿ ಆತ್ಮ ರಕ್ಷಣೆಗಾಗಿ ವಿಕ್ರಂ ಗೌಡನತ್ತ ಗುಂಡು ಹಾರಿಸಿದಾಗ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕೂಂಬಿಂಗ್‌ ಕಾರ್ಯಚರಣೆ ಚುರುಕು

ವಿಕ್ರಂ ಗೌಡ ಶೂಟೌಟ್‌ ನಂತರ ಎಎನ್​ಎಫ್ ಸಿಬ್ಬಂದಿ ಕೂಂಬಿಂಗ್‌ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಬೀಡ ಬಿಟ್ಟಿರುವ ಪೊಲೀಸರು ತಪ್ಪಿಸಿಕೊಂಡಿರುವ ಉಳಿದ ನಕ್ಸಲರಿಗಾಗಿ ಶೋಧ ಮುಂದುವರೆಸಿದ್ದಾರೆ. ನಕ್ಸಲ್‌ ನಾಯಕಿಯರಾದ ಸುಂದರಿ, ವನಜಾಕ್ಷಿಯನ್ನು ಹಿಡಿಯಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ.

-ವರದಿ: ಹರೀಶ ಮಾಂಬಾಡಿ, ಮಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ