logo
ಕನ್ನಡ ಸುದ್ದಿ  /  ಕರ್ನಾಟಕ  /  Budget 2024: ಕೇಂದ್ರ ಬಜೆಟ್‌ಗೆ ಕರ್ನಾಟಕದ ಸಚಿವರು, ರಾಜಕೀಯ ನಾಯಕರ ಪ್ರತಿಕ್ರಿಯೆ ಏನು

Budget 2024: ಕೇಂದ್ರ ಬಜೆಟ್‌ಗೆ ಕರ್ನಾಟಕದ ಸಚಿವರು, ರಾಜಕೀಯ ನಾಯಕರ ಪ್ರತಿಕ್ರಿಯೆ ಏನು

Umesha Bhatta P H HT Kannada

Jul 23, 2024 05:44 PM IST

google News

ಕೇಂದ್ರ ಬಜೆಟ್‌ ಕುರಿತು ಕರ್ನಾಟಕದ ಹಿರಿಯ ನಾಯಕರ ಹೇಳಿಕೆ.

  • Budget Reactions ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ಗೆ ಕರ್ನಾಟಕದ ನಾಯಕರಿಗೆ ಭಿನ್ನ ಹೇಳಿಕೆಗಳು ದಾಖಲಾಗಿವೆ.

ಕೇಂದ್ರ ಬಜೆಟ್‌ ಕುರಿತು ಕರ್ನಾಟಕದ ಹಿರಿಯ ನಾಯಕರ ಹೇಳಿಕೆ.
ಕೇಂದ್ರ ಬಜೆಟ್‌ ಕುರಿತು ಕರ್ನಾಟಕದ ಹಿರಿಯ ನಾಯಕರ ಹೇಳಿಕೆ.

ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಪೂರ್ಣ ಪ್ರಮಾಣದ ಬಜೆಟ್‌ಗೆ ಕರ್ನಾಟಕದ ನಾಯಕರಿಗೆ ಮಿಶ್ರ ಪ್ರತಿಕ್ರಿಯೆ ಲಭಿಸಿವೆ. ಕೇಂದ್ರದಲ್ಲಿ ಸಚಿವರೂ ಆಗಿರುವ ಮಾಜಿ ಸಿಎಂ ಎಚ್‌ಡಿಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕರಾದ ಆರ್.ಅಶೋಕ, ಸಚಿವರಾದ ಎಂ.ಬಿ.ಪಾಟೀಲ, ಈಶ್ವರ ಖಂಡ್ರೆ, ಲಕ್ಷ್ಮಿ ಹೆಬ್ಬಾಳಕರ್‌ ಅವರು ಅಭಿಪ್ರಾಯಗಳನ್ನು ದಾಖಲಿಸಿದ್ಧಾರೆ.

ಅಮೃತಕಾಲದ ಸರ್ವಸ್ಪರ್ಶಿ ಬಜೆಟ್: ಕೇಂದ್ರ ಸಚಿವ ಹೆಚ್ಡಿಕೆ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಇದು ಅಮೃತಕಾಲದ ಸರ್ವಸ್ಪರ್ಶಿ ಬಜೆಟ್ ಎಂದು ಗುಣಗಾನ ಮಾಡಿದ್ದಾರೆ.

ಬಜೆಟ್ ಕುರಿತು ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಸತತ 7ನೇ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನರೇಂದ್ರ ಮೋದಿ ಅವರ ಕನಸಿನ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಶಕ್ತಿ ತುಂಬುವ, ಮಹಿಳೆಯರಿಗೆ ಅತಿಹೆಚ್ಚು ಅನುಕೂಲ ಮಾಡಿಕೊಡುವ ನಾರಿಶಕ್ತಿ ಬಜೆಟ್ ಇದಾಗಿದೆ. 9 ಆದ್ಯತಾ ವಲಯಗಳನ್ನು ಗುರುತಿಸಲಾಗಿದೆ. ಆ ಪೈಕಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಕ್ಕೆ 1.48 ಲಕ್ಷ ಕೋಟಿ ಅನುದಾನ ನೀಡಿ 4 ಕೋಟಿ ಉದ್ಯೋಗ ಸೃಷ್ಟಿಸುವ ಗುರಿ ಮಾನವ ಸಂಪನ್ಮೂಲ ಸದ್ಬಳಕೆಗೆ ಆದ್ಯತೆ ಕೊಡಲಾಗಿದೆ. ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಣ್ಣ, ಮಧ್ಯಮ ಗಾತ್ರದ ಕೈಗಾರಿಗಳಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಉಪಕ್ರಮ ಈ ಬಜೆಟ್ ನಲ್ಲಿದೆ ಎಂದು ತಿಳಿಸಿದ್ದಾರೆ.

ಕೃಷಿ, ಕೈಗಾರಿಕೆ, ಮೂಲಸೌಕರ್ಯ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಉತ್ಪಾದನೆಗೂ ಗಮನ ಕೊಡಲಾಗಿದೆ. ಬೆಂಗಳೂರು – ಚೆನ್ನೈ, ಹೈದರಾಬಾದ್ -ಬೆಂಗಳೂರು, ಬೆಂಗಳೂರು ಸೇರಿ ಒಟ್ಟು 12 ಕೈಗಾರಿಕಾ ಕಾರಿಡಾರ್ ಗಳನ್ನು ಘೋಷಣೆ ಮಾಡುವುದು ಉದ್ಯೋಗ, ಆರ್ಥಿಕ ವೃದ್ಧಿಗೆ ಬೃಹತ್ ಕೊಡುಗೆ ನೀಡಲಿದೆ ಎಂದು ಹೆಚ್.ಡಿಕೆ ತಿಳಿಸಿದ್ದಾರೆ

ಹೆಚ್ಚುತ್ತಿರುವ ಆಹಾರ ಬೇಡಿಕೆಯ ಪೂರೈಕೆ ಹಾಗೂ ಕೃಷಿಗೆ ಮತ್ತಷ್ಟು ಚೈತನ್ಯ ತುಂಬಲು ಕೃಷಿ ಸಂಶೋಧನೆ & ಅಭಿವೃದ್ಧಿಗೆ ಬಿಜೆಟ್ ಆದ್ಯತೆ ಕೊಟ್ಟಿದೆ. ಕೃಷಿ ಬೆಳೆಯ ಡಿಜಿಟಲ್ ಸಮೀಕ್ಷೆ ಮಾಡುವ ಯೋಜನೆಯನ್ನು ದೇಶದ 400 ಜಿಲ್ಲೆಗಳಿಗೆ ವಿಸ್ತರಿಸುವುದು ಸ್ವಾಗತಾರ್ಹ. ಮೇಲಾಗಿ ಸಹಜ ಕೃಷಿಗೆ ವಿತ್ತ ಸಚಿವರು ಪ್ರಾಮುಖ್ಯತೆ ನೀಡಿದ್ದಾರೆ.

ಕೇವಲ ಆಂಧ್ರ, ಬಿಹಾರ ಬಜೆಟ್: ಡಿಕೆ ಶಿವಕುಮಾರ್ ಟೀಕೆ

ಕೇಂದ್ರ ಸರ್ಕಾರದಿಂದ ಇಂದು ಮಂಡನೆಯಾದ ಬಜೆಟ್ ಅನ್ನು ಕಟು ಮಾತುಗಳಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.

ನಿರ್ಮಲಾ ಕೇವಲ ಬಿಹಾರ ಆಂಧ್ರದ ಕಡೆ ಗಮನ ಸೆಳೆದಿದ್ದಾರೆ. ಸೀತರಾಮನ್ ನಮ್ಮ ಗಮನ ಸೆಳೆಯಲಿಲ್ಲ ಕಾಂಗ್ರೆಸ್ ಇಂಡಿಯಾ ಕೂಟ ಿರುವ ರಾಜ್ಯಗಳ ಕಡೆ ಗಮನ ಹರಿಸಿಲ್ಲ ಎಂದರು.

ಸಚಿವ ನಿರ್ಮಲಾ ಬಗ್ಗೆ ಬಹಳ ನಿರೀಕ್ಷೆ ಇತ್ತು. ನಮ್ಮ ನಿರೀಕ್ಷೆ ಹುಸಿಗೊಳಿಸಿದ್ದಾರೆ ಇದು ಕೇವಲ ಆಂಧ್ರ ಬಿಹಾರ ಬಜೆಟ್ ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳನ್ನು ಗಮನಿಸಿಲ್ಲ. ತಮ್ಮ ಸರ್ಕಾರ ಉಳಿಸಿಕೊಳ್ಳಲು ಕೇವಲ ಬಿಹಾರಕ್ಕೆ ಆಂಧ್ರಕ್ಕೆ ಗಮನ ಹರಿಸಿದ್ದಾರೆ ಅಷ್ಟೇ ಎಂದರು.

ಭವಿಷ್ಯದ ಭಾರತದ ಯುವಕರ ಬಜೆಟ್‌: ಬೊಮ್ಮಾಯಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರದ ಬಜೆಟ್ ಭವಿಷ್ಯದ ಭಾರತದ ಯುವಕರ ಬಜೆಟ್‌ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಕೇಂದ್ರದ ಬಜೆಟ್ ನಂತರ ನವ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹತ್ತು ವರ್ಷದ ಆರ್ಥಿಕತೆಯ ಸುಧಾರಣೆಯಿಂದ ವಿಶ್ವದಲ್ಲಿಯೇ ಭಾರತ ಬೆಳೆಯುತ್ತಿರುವ ರಾಷ್ಟ್ರ ಎನ್ನುವುದನ್ನು ಈ ಬಜೆಟ್ ತೋರಿಸುತ್ತದೆ. ಹಣದುಬ್ಬರ ಸೀಮಿತಗೊಳಿಸಿರುವುದು, ಹೆಚ್ಚು ಜನರಿಗೆ ಕೆಲಸ ಕೊಡಿಸಿರುವುದು ಹತ್ತು ವರ್ಷದಲ್ಲಿ ಮಾಡಿರುವುದರ ಫಲವಾಗಿ ವಿಕಸಿತ ಭಾರತ ಮಾಡುವ ಹತ್ತು ವರ್ಷದ ಫಲವನ್ನು ಬರುವ ದಿನಗಳಲ್ಲಿ ಹೆಚ್ಚಿಗೆ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಪರವಾದ ಬಜೆಟ್ ಇದಾಗಿದೆ ಎಂದು ಹೇಳಿದರು.

ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1.5 ಲಕ್ಷ ಕೋಟಿ, ಉದ್ಯೋಗ, ಕೌಶಲ್ಯಾಬಿವೃದ್ಧಿಗೆ 1.5 ಲಕ್ಷ ಕೋಟಿ, ಮುದ್ರಾ ಯೋಜನೆಯಲ್ಲಿ ಸಾಲ ನೀಡುವ ಪ್ರಮಾಣವನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಳ ಮಾಡಿರುವುದು, ಗ್ರಾಮೀಣಾಭಿವೃದ್ಧಿ ಅಭಿವೃದ್ಧಿಗೆ 1 ಲಕ್ಷ ಕೋಟಿ, ಬಡವರಿಗೆ 3 ಕೋಟಿ ಮನೆ ಕೊಡುವುದು, ಕೃಷಿ ವಲಯಕ್ಕೆ ಬಹಳ ಒತ್ತು ಕೊಟ್ಟಿದ್ದು, ಕೃಷಿ ಉತ್ಪಾದನೆ ಹೆಚ್ಚಳ ಮತ್ತು ಸಂಸ್ಕರಣೆಗೆ ಆದ್ಯತೆ ನೀಡಿದ್ದಾರೆ ಎಂದು ಹೇಳಿದರು.

ಉತ್ಪಾದನಾ ವಲಯದಲ್ಲಿ ವಿಶೇಷವಾಗಿ ಸಣ್ಣ ಕೈಗಾರಿಕೆಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ಸೇವಾ ವಲಯವೂ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮೂರು ವಲಯದಲ್ಲಿ ಹೆಚ್ಚಿಗೆ ಹಣ ಹೂಡಿಕೆ ಮಾಡಲು ದೇಶದ ಆರ್ಥಿಕತೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ವಲಯಗಳಾದ ಶಿಕ್ಷಣ, ಆರೋಗ್ಯ ಉದ್ಯೋಗಕ್ಕೆ ಹೆಚ್ಚಿನ ಹಣ ನೀಡಿರುವುದು ಸ್ವಾಗತಾರ್ಹ ವಿಷಯ. ಮೂಲ ಸೌಕರ್ಯ ಅಭಿವೃದ್ಧಿಗೆ ಕಳೆದ ಬಾರಿಗಿಂತ ಹೆಚ್ಚು ಹಣ ನೀಡಿದ್ದಾರೆ. ಮಹಿಳೆಯ ಸಬಲೀಕರಣಕ್ಕೆ ವಿಶೇಷ ಕಾನೂನು ಮಾಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ತಿಳಿಸಿದ್ದಾರೆ.

ರಾಜ್ಯಕ್ಕೆ ಶೂನ್ಯ ಸಂಪಾದನೆ: ಎಂ.ಬಿ ಪಾಟೀಲ ಅತೃಪ್ತಿ

ದೇಶದಲ್ಲಿ ಕೈಗಾರಿಕಾ ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಲ್ಲಿಗೆ ಯಾವ ಕೊಡುಗೆಯನ್ನೂ ಪ್ರಕಟಿಸದಿರುವುದು ದುರದೃಷ್ಟಕರ. ಇದೊಂದು ಶೂನ್ಯ ಸಂಪಾದನೆಯ ಬಜೆಟ್ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಲೇವಡಿ ಮಾಡಿದ್ದಾರೆ.

ಸಂಸತ್ತಿನಲ್ಲಿ ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್ ಬಗ್ಗೆ ಮಾತನಾಡಿ, 'ಕೇವಲ ಕೇಂದ್ರ ಸರ್ಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ಮಂಡಿಸಿದ ಬಜೆಟ್ ರೀತಿ ಇದೆ. ಇದನ್ನು ಕೇಂದ್ರ ಬಜೆಟ್ ಅನ್ನುವ ಬದಲು ಬಿಹಾರ- ಆಂಧ್ರಪ್ರದೇಶ ಬಜೆಟ್ ಅಂತ ಕರೆದಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕವು ಎಲೆಕ್ಟ್ರಿಕ್ ವೆಹಿಕಲ್, ಗ್ರೀನ್ ಎನರ್ಜಿ ಮತ್ತಿತರ ವಲಯಗಳಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, ಹೆಚ್ಚಿನ ವಿದೇಶಿ ಹೂಡಿಕೆ ಆಕರ್ಷಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿ ಬಜೆಟ್ ನಲ್ಲಿ ಪ್ರಸ್ತಾಪಗಳು ಇರಬೇಕಿತ್ತು ಎಂದಿದ್ದಾರೆ.

ತೆರಿಗೆ ಹೊರೆ ರಹಿತ, ಸರ್ವ ಜನಕೇಂದ್ರಿತ ಬಜೆಟ್‌: ಅಶೋಕ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರೈತ ಸ್ನೇಹಿ, ತೆರಿಗೆ ಹೊರೆ ರಹಿತ, ಸರ್ವ ಜನಕೇಂದ್ರಿತ ಹಾಗೂ ದೇಶದ ಭವಿಷ್ಯ ಬರೆಯುವ ಸುಭದ್ರ ಬಜೆಟ್‌ ನೀಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಶ್ಲಾಘಿಸಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್‌ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಈ ಆಯವ್ಯಯವು ಭಾರತ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲು ಸಹಕಾರಿಯಾಗಲಿದೆ. ರೈತರು, ಮಹಿಳೆಯರು, ಯುವಜನರು, ತೆರಿಗೆ ಪಾವತಿಸುವವರ ಬದುಕನ್ನು ವಿಶ್ಲೇಷಿಸಿ ಅವರ ಅನುಕೂಲಕ್ಕೆ ತಕ್ಕಂತಹ ಬಜೆಟ್‌ ನೀಡಲಾಗಿದೆ. ಇದಕ್ಕಾಗಿ ಆರ್ಥಿಕ ಸಚಿವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಯಾವಾಗಲೂ ಅನುದಾನ ತಾರತಮ್ಯದ ಬಗ್ಗೆ ಹೇಳುತ್ತದೆ. 50 ವರ್ಷಗಳ ಅವಧಿಗೆ ಬಡ್ಡಿ ರಹಿತ ಸಾಲ ನೀಡುವ ಪಿಎಂ ಗತಿಶಕ್ತಿ ಮಾಸ್ಟರ್‌ ಪ್ಲಾನ್‌ ಅನ್ನು ಕೇಂದ್ರ ಸರ್ಕಾರ ಇನ್ನೂ 1 ವರ್ಷ ಮುಂದುವರಿಸಲಿದೆ. ಇದಕ್ಕಾಗಿ 1.5 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದು, ಖಾಲಿ ಖಜಾನೆಯ ರಾಜ್ಯ ಸರ್ಕಾರ ಇಂತಹ ಯೋಜನೆಗಳನ್ನು ಬಳಸಿಕೊಂಡಾದರೂ ಜನಕಲ್ಯಾಣಕ್ಕೆ ಶ್ರಮಿಸಲಿ ಎಂದು ಅವರು ಹೇಳಿದ್ದಾರೆ.

ಹೈದರಾಬಾದ್‌-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನಿಂದ ಹೊಸ ಉದ್ಯೋಗಗಳು ಸೃಷ್ಟಿಯಾಗಿ ಜನರಿಗೆ ಸುಭದ್ರ ಬದುಕು ಸಿಗಲಿದೆ. ಈ ದೂರದೃಷ್ಟಿಯ ಯೋಜನೆಯಿಂದ ರಾಜಧಾನಿ ಬೆಂಗಳೂರು ತನ್ನ ಹಿರಿಮೆಯನ್ನು ಉಳಿಸಿಕೊಳ್ಳಲಿದೆ. ಈ ಮೂಲಕ ಕೇಂದ್ರ ಸರ್ಕಾರ ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿದೆ. ಇದಕ್ಕೂ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಆರ್‌.ಅಶೋಕ ತಿಳಿಸಿದ್ದಾರೆ.

ಬಜೆಟ್ ಗೆ ಕಾಂಗ್ರೆಸ್ ಪ್ರಣಾಳಿಕೆಯೇ ಸ್ಫೂರ್ತಿ:ಈಶ್ವರ ಖಂಡ್ರೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಮಂಡಿಸಿರುವ ಕೇಂದ್ರ ಬಜೆಟ್ ಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸ್ಪೂರ್ತಿಯಾಗಿದೆ ಎಂದು ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ತೀವ್ರ ಹಿನ್ನೆಡೆ ಅನುಭವಿಸಿದ ಬಳಿಕ ಬಿಜೆಪಿ ಮತ್ತು ಎನ್.ಡಿ.ಎ.ಗೆ ಬುದ್ಧಿ ಬಂದಿದೆ. ಕಾಂಗ್ರೆಸ್ ಪಕ್ಷ ತನ್ನ ಲೋಕಸಭಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ ಯುವಕರಿಗೆ ಅಪ್ರೆಂಟಿಷಿಪ್ ನೀಡುವ ಯೋಜನೆ ಸೇರಿದಂತೆ ಹಲವು ಅಂಶಗಳನ್ನು ಅಳವಡಿಸಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿಯ ಕೆಟ್ಟ ನೀತಿಗಳಿಂದಾಗಿ ದೇಶದಲ್ಲಿ 45 ವರ್ಷದಲ್ಲೇ ಕಂಡು ಕೇಳರಿಯದ ನಿರುದ್ಯೋಗ ಸಮಸ್ಯೆ ಉಂಟಾಗಿತ್ತು. ಕಳೆದ 10 ವರ್ಷಗಳ ಕಾಲ ನಿರುದ್ಯೋಗ ಸಮಸ್ಯೆ ಬಗ್ಗೆ ಗಮನವನ್ನೇ ಹರಿಸದಿದ್ದ ಕೇಂದ್ರ ಸರ್ಕಾರ ಈ ಬಜೆಟ್ ನಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಪಾಲಿಗೆ ನಿರಾಸೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಕರ್ನಾಟಕದ ರಾಜ್ಯಸಭಾ ಸದಸ್ಯೆಯೂ ಆದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ರಾಜ್ಯದ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ಇದೊಂದು ತಾರತಮ್ಯ ಬಜೆಟ್ ಆಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಕೇಂದ್ರ ಬಜೆಟ್ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಒಂದು ಕಣ್ಣಿಗೆ ಬೆಣ್ಣಿ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ಬಜೆಟ್ ನಲ್ಲಿ ಕೆಲ ಅಂಶಗಳು ಬಿಂಬಿತವಾಗಿವೆ. ಎನ್ ಡಿಎ ಸರ್ಕಾರದ ಭಾಗವಾಗಿರುವ ಆಂಧ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಭರಪೂರ ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ, ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳ ನಿರೀಕ್ಷೆ ಹುಸಿಯಾಗಿದೆ. ಕರ್ನಾಟಕದ ಬಾಕಿ ಇರುವ ಯೋಜನೆಗಳಿಗೂ ಅನುದಾನ ನೀಡಿಲ್ಲ ಎಂದು ತಿಳಿಸಿದ್ದಾರೆ.

ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿದೆ. ಆದರೂ, ಮತ್ತೆ ಮತ್ತೆ, ನಿರುದ್ಯೋಗ ಸಮಸ್ಯೆ ನಿವಾರಿಸುವ ಘೋಷಣೆಗಳು ಮರುಕಳಿಸುತ್ತಲೇ ಇವೆ. ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ 10 ಲಕ್ಷದವರೆಗೆ ಸಾಲ ಸೌಲಭ್ಯ ಘೋಷಿಸಲಾಗಿದೆ. ಆದರೆ, ಇದು ಬರೀ ಸಾಲದ ಮೊತ್ತ ಹೆಚ್ಚಳ ಮಾಡಲಾಗಿದೆ ಅಷ್ಟೇ. ರೈತರಿಗೆ ಘೋಷಿಸಲಾಗಿರುವ ಕಿಸಾನ್‌ ಕ್ರೆಡಿರ್ಟ್‌ ಕಾರ್ಡ್‌ ನಿಂದ ಯಾವುದೇ ಉಪಯೋಗವಿಲ್ಲ ಎಂದು ಸಚಿವರು ಹೇಳಿದ್ದಾರೆ.

ಪ್ರಮುಖವಾಗಿ ಕೇಂದ್ರ ಬಜೆಟ್ ನಲ್ಲಿ ಲೋಕಸಭಾ ಚುನಾವಣೆ ವೇಳೆ ನಮ್ಮ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಚುನಾವಣಾ ಪ್ರಣಾಳಿಕೆಯ ಅಂಶಗಳೇ ಹೆಚ್ಚಿವೆ. ನಮ್ಮ ಪ್ರಣಾಳಿಕೆಯನ್ನು ಅಂಶಗಳನ್ನು ಕೇಂದ್ರದ ಎನ್ ಡಿಎ ಸರ್ಕಾರ ಕಳವು ಮಾಡಿದೆ. ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರದಂತಹ ತುರ್ತು ಸಮಸ್ಯೆಗಳಿಗೆ ಸ್ಪಂದನೆ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ