ಕರ್ನಾಟಕದಲ್ಲಿ ಬಿಗಡಾಯಿಸಿದೆ ವಿದ್ಯುತ್ ಬಿಕ್ಕಟ್ಟು: ವಿದೇಶಗಳಿಂದ ಕಲ್ಲಿದ್ದಲು ಖರೀದಿಸಲು ಸರ್ಕಾರದ ನಿರ್ಧಾರ
Oct 25, 2023 10:14 PM IST
ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ ಇಂಧನ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
- ವಿದೇಶದಿಂದ ಕಲ್ಲಿದ್ದಲು ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಟೆಂಡರ್ ಹಂತದಲ್ಲಿದೆ ಎಂದು ಸಚಿವ ಎಂಬಿ ಪಾಟೀಲ ತಿಳಿಸಿದ್ದಾರೆ.
ವಿಜಯಪುರ: ಮಳೆಕೊರತೆಯಿಂದಾಗಿ ಬರದ ಭೀತಿ ಆವರಿಸಿರುವ ಕರ್ನಾಟಕದಲ್ಲಿ ಇದೀಗ ವಿದ್ಯುತ್ ಕ್ಷಾಮವೂ ತಲೆದೋರಿದೆ. ಗುಣಮಟ್ಟದ ಕಲ್ಲಿದ್ದಲು ಕೊರತೆಯಿಂದಾಗಿ ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆ ಸಹ ಕುಂಠಿತಗೊಂಡಿದೆ. ಇದನ್ನು ಸರಿದೂಗಿಸಲು ವಿದೇಶದಿಂದ ಎರಡು ಲಕ್ಷ ಟನ್ ಕಲ್ಲಿದ್ದಿಲು ಖರೀದಿಗೆ ಸರ್ಕಾರ ಮುಂದಾಗಿದೆ. ವಿದ್ಯುತ್ ಸಮಸ್ಯೆ ನಿವಾರಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಸಿಇಓ ಅವರನ್ನೊಳಗೊಂಡ ಐದು ಜನರ ವಿಶೇಷ ಸಮಿತಿಯನ್ನು ರಾಜ್ಯ ಸರ್ಕಾರ ರಚಿಸಿದೆ.
ಹಬ್ಬದ ನಡುವೆಯೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಬಿ. ಪಾಟೀಲ ಸಮಿತಿಯ ಪ್ರಥಮ ಸಭೆಯನ್ನು ನಡೆಸಿದರು. ಈಗಾಗಲೇ ವಿದೇಶದಿಂದ ಕಲ್ಲಿದ್ದಲು ಖರೀದಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಟೆಂಡರ್ ಹಂತದಲ್ಲಿದೆ ಎಂದರು. ವಿದ್ಯುತ್ ಖರೀದಿಗೆ ಈಗಗಲೇ ಹೆಸ್ಕಾಂಗೆ 3 ಕೋಟಿ ರೂ. ಹಣ ಒದಗಿಸಲಾಗಿದೆ ಎಂದರು.
ಆರು ತಾಸು ನಿರಂತರ ವಿದ್ಯುತ್
ಕಠಿಣ ಪರಿಸ್ಥಿತಿಯ ನಡುವೆಯೂ ರಾಜ್ಯ ಸರ್ಕಾರ ಮೊದಲು ಐದು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಮಾಡುತ್ತಿತ್ತು. ಈಗ ಪುನಃ ಒಂದು ತಾಸು ಅಧಿಕ ಅವಧಿ ವಿಸ್ತರಿಸಿ ಆರು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲು ನಿರ್ಧರಿಸಿದೆ, ಕಠಿಣ ಸವಾಲನ್ನು ಸಹ ಸಮರ್ಥವಾಗಿ ಎದುರಿಸಲಾಗುತ್ತಿದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಒಂದೆಡೆ ಬೇಡಿಕೆ ಹೆಚ್ಚು: ಇನ್ನೊಂದೆಡೆ ಉತ್ಪಾದನೆ ಕುಸಿತ
ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಈ ವರ್ಷ ಹೆಚ್ಚಾಗಿದೆ, ಪ್ರತಿ ವರ್ಷ 10 ಸಾವಿರ ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇರುತ್ತಿತ್ತು, ಆದರೆ ಅದು 16 ಸಾವಿರ ಮೆಗಾವ್ಯಾಟ್‌ಗೆ ಅಂದರೆ ಆರು ಸಾವಿರ ಮೆಗಾವ್ಯಾಟ್‌ಗೆ ಹೆಚ್ಚಿದೆ. ಇನ್ನೊಂದೆಡೆ ಕಲ್ಲಿದ್ದಲು ಅಭಾವದಿಂದಾಗಿ ವಿದ್ಯುತ್ ಉತ್ಪಾದನೆಯ ಪ್ರಮಾಣವೂ ಕುಸಿದಿದೆ. ಮಳೆ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ, ಆರು ಸಾವಿರ ಮೆಗಾವಾಟ್ ವಿದ್ಯುತ್ ಪವನ ವಿದ್ಯುತ್ ಆಧರಿಸಿ ಉತ್ಪಾದನೆಯಾಗುತ್ತಿತ್ತು, ಆದರೆ ಈ ವರ್ಷ ಉತ್ಪಾದನೆಯಾಗಿದ್ದು ಕೇವಲ 200 ಮೆಗಾವ್ಯಾಟ್ ವಿದ್ಯುತ್ ಎಂದು ಸಚಿವ ಪಾಟೀಲ ವಿಶ್ಲೇಷಿಸಿದರು.
ಬರಗಾಲ ಇರುವುದರಿಂದ ಐಪಿಸೆಟ್‌ಗಳಿಗೆ ಹೆಚ್ಚಿನ ವಿದ್ಯುತ್ ಬೇಡಿಕೆ ಬಂದಿದೆ, ಮತ್ತೆ ಪರಿಸ್ಥಿತಿ ಶೀಘ್ರವೇ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಟಿ. ಭೂಬಾಲನ್, ಸಿಇಓ ರಾಹುಲ್ ಶಿಂಧೆ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಗೋಟ್ಯಾಳ ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕಲಬುರಗಿ: ಜೆಸ್ಕಾಂ ವ್ಯಾಪ್ತಿಯ 7 ಜಿಲ್ಲೆಗಳ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ
ಕಲಬುರಗಿ: ಮುಂಗಾರು ವೈಫಲ್ಯದ ಹಿನ್ನೆಲೆಯಲ್ಲಿ ಬೆಳೆಗಳಿಗೆ ಅನುಕೂವಾಗಲಿ ಎಂಬ ಉದ್ದೇಶದಿಂದ ಸರಕಾರದ ನಿರ್ದೇಶನದಂತೆ ಜೆಸ್ಕಾಂ ತನ್ನ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ನೀರಾವರಿ ಪಂಪ್‌ಸೆಟ್‌ಗಳಿಗೆ 5 ರಿಂದ 6 ಗಂಟೆಗಳ ಕಾಲ ವಿದ್ಯುತ್ ಪೂರೈಸಲು ನಿರ್ಧರಿಸಿದೆ. ಜೆಸ್ಕಾಂ ವ್ಯಾಪ್ತಿಯ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿನ ಕಬ್ಬು, ಭತ್ತ, ತೊಗರಿ ಮತ್ತು ಇತರೆ ಬೆಳೆಗಳಿಗೆ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ಈಗಾಗಲೇ ಅ 19 ರಿಂದ ಹಗಲು ವೇಳೆಯಲ್ಲಿಯೇ ಪ್ರತಿದಿನ 5 ರಿಂದ 6 ಗಂಟೆಗಳ ಕಾಲ 3-ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣವರ್ ತಿಳಿಸಿದ್ದಾರೆ.
ರೈತರು ತಮ್ಮ ಕಬ್ಬು ಹಾಗೂ ಇತರೆ ಬೆಳೆಗಳಿಗೆ ಹೆಚ್ಚಿನ ಸಮಯದ ವಿದ್ಯುತ್ ಪೂರೈಸಬೇಕೆಂದು ಕೋರಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಸಕ್ತ ಮುಂಗಾರು ವೈಫಲ್ಯದ ನಡುವೆಯೂ ರಾಜ್ಯ ಸರ್ಕಾರವು ವಿದ್ಯುತ್ ಕೊರತೆಯನ್ನು ಸರಿದೂಗಿಸಲು ಬೇರೆ ಮೂಲಗಳಿಂದ ವಿದ್ಯುತ್ ಖರೀದಿಸಿ ರೈತರಿಗೆ ವಿದ್ಯುತ್ ಪೂರೈಕೆಗೆ ಸರ್ಕಾರ ಆದೇಶಿಸಿರುತ್ತದೆ. ಅದರಂತೆ ನಿಗಮದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಪ್ರತಿದಿನ 5 ರಿಂದ 6 ಗಂಟೆಗಳ ಕಾಲ 3-ಫೇಸ್ ವಿದ್ಯುತ್ ಪೂರೈಸುವಂತೆ ಜೆಸ್ಕಾಂ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.