Bommai on Bengaluru Flood: ಬಡಾವಣೆಗಳು ಜಲಾವೃತ.. ಕಾಂಗ್ರೆಸ್ ಸರ್ಕಾರದ ದುರಾಡಳಿತದ ಫಲ ಎಂದ ಬೊಮ್ಮಾಯಿ
Sep 06, 2022 12:07 PM IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
- ಬಡಾವಣೆಗಳು ಜಲಾವೃತಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ಯೋಜನಾ ರಹಿತ ಹಾಗೂ ದುರಾಡಳಿತದ ಫಲವಾಗಿ ಈ ಬಡಾವಣೆಗಳು ಜಲಾವೃತಗೊಳ್ಳುವ ಸ್ಥಿತಿ ಎದುರಿಸಬೇಕಾಗಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಮಳೆ ಅಬ್ಬರಕ್ಕೆ ರಾಜಧಾನಿ ಬೆಂಗಳೂರು ತತ್ತರಿಸಿದೆ. ನಗರದ ರಸ್ತೆಗಳು, ಬಡಾವಣೆಗಳು ಜಲಾವೃತವಾಗಿವೆ. ಮಳೆ ಅವಾಂತರಕ್ಕೆ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ ದೂಷಿಸುತ್ತಿದ್ದರೆ, ಬಿಜೆಪಿ ಸರ್ಕಾರ ಹಿಂದಿನ ಕಾಂಗ್ರೆಸ್ ಸರ್ಕಾರನ್ನು ದೂಷಿಸುತ್ತಿದೆ.
ಬಡಾವಣೆಗಳು ಜಲಾವೃತಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರದ ಯೋಜನಾ ರಹಿತ ಹಾಗೂ ದುರಾಡಳಿತದ ಫಲವಾಗಿ ಈ ಬಡಾವಣೆಗಳು ಜಲಾವೃತಗೊಳ್ಳುವ ಸ್ಥಿತಿ ಎದುರಿಸಬೇಕಾಗಿದೆ ಎಂದು ಆರೋಪಿಸಿದ್ದಾರೆ.
ಎಗ್ಗಿಲ್ಲದೆ ಕೆರೆಗಳಲ್ಲಿ, ಕೆರೆ ಬಂಡ್ ಹಾಗೂ ಬಫರ್ ವಲಯಗಳಲ್ಲಿ ಅನುಮತಿಗಳನ್ನು ನೀಡಿದ್ದಾರೆ. ಈ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣ. ಕೆರೆಗಳ ನಿರ್ವಹಣೆಯ ಬಗ್ಗೆ ಅವರು ಯೋಚಿಸಿಯೂ ಇಲ್ಲ. ನಾನು ಇದನ್ನು ಸವಾಲಾಗಿ ಸ್ವೀಕರಿಸಿದ್ದು 1500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ನಿನ್ನೆ ಪುನಃ 300 ಕೋಟಿ ರೂ.ಗಳನ್ನು ಒತ್ತುವರಿ ತೆರೆವುಗೊಳಿಸಲು ನೀಡಲಾಗಿದೆ. ರಾಜಕಾಲುವೆಗಳಿಗೆ ಪಕ್ಕಾ ಕಟ್ಟಡ ಕಟ್ಟುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಹರಿವೆಗೆ ಯಾವುದೇ ತೊಂದರೆ ಇಲ್ಲದಂತೆ ವ್ಯವಸ್ಥೆ ಮಾಡಲಾಗುವುದು. ಒತ್ತುವರಿಗೂ ಅವಕಾಶವಿಲ್ಲದಂತೆ ಎಚ್ಚರ ವಹಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಜಲಾವೃತಗೊಂಡಿರುವ ರಸ್ತೆಗಳು, ಮೂಲಸೌಕರ್ಯ ಸಮಸ್ಯೆಗಳ ಕುರಿತು ರಾಷ್ಟ್ರಾದ್ಯಾಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಬೆಂಗಳೂರು ಮಳೆಯ ತೊಂದರೆಗಳನ್ನು ಸರಿಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತು ಪರಿಹಾರ ಘೋಷಿಸಿದ್ದಾರೆ. " ಬೆಂಗಳೂರಿನಲ್ಲಿನ ಮಳೆ ಪರಿಸ್ಥಿತಿ ಹಾಗೂ ಮೂಲಸೌಲಭ್ಯ ನಿರ್ವಹಣೆಗೆ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ" ಎಂದು ಸಿಎಂ ಬೊಮ್ಮಾಯಿ ನಿನ್ನೆ ತಿಳಿಸಿದ್ದಾರೆ.
ಬೆಂಗಳೂರು ಜಲಮಂಡಳಿ, ರಾಜ್ಯ ಮಳೆ ಹಾಗೂ ಪ್ರವಾಹದ ಹಾನಿ ಕುರಿತು ಸಚಿವರು , ಅಧಿಕಾರಿಗಳು, ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ನಂತರ ಮಾಧ್ಯಮದವರಿಗೆ ಈ ಮಾಹಿತಿ ನೀಡಿದ್ದಾರೆ. ಬೆಂಗಳೂರು ಮತ್ತು ರಾಜ್ಯದ ಪ್ರವಾಹ ನಿರ್ವಹಣೆಗೆ, ವಿಶೇಷವಾಗಿ ರಸ್ತೆ, ಸೇತುವೆ, ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್, ಶಾಲಾ ಕೊಠಡಿ ದುರಸ್ತಿ ಸೇರಿದಂತೆ ಮೂಲಸೌಲಭ್ಯದ ನಿರ್ವಹಣೆಗೆ ರಾಜ್ಯ ಸರ್ಕಾರ 600 ಕೋಟಿ ರೂ.ಗಳ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಬೆಂಗಳೂರಿಗೆ 300 ರೂ.ಗಳನ್ನು ನೀಡಲಾಗಿದ್ದು, 664 ಕೋಟಿ ಡಿ.ಸಿಗಳ ಬಳಿ ಇದ್ದು, ಮೂಲಭೂತ ಸೌಕರ್ಯಕ್ಕೆ 500 ಕೋಟಿ ರೂ.ಗಳನ್ನು ಈಗಾಗಲೇ ನೀಡಲಾಗಿದೆ. ಬೆಂಗಳೂರಿನ ಪರಿಸ್ಥಿತಿಗೆ ಸಂಬಂಧಿಸಿದಂತೆ, 1500 ಕೋಟಿ ರೂ.ಗಳನ್ನು ರಾಜಕಾಲುವೆಗಳ ನಿರ್ಮಾಣಕ್ಕೆ ಈಗಾಗಲೇ ನೀಡಲಾಗಿದ್ದು, ಮಳೆ ನಿಂತ ತಕ್ಷಣ ಕೆಲಸ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕಾಗಿ ಕೇಂದ್ರ ತಂಡ ನಾಳೆ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು, ಪ್ರಸ್ತುತ ಆಗಿರುವ ಹಾನಿಯ ಬಗ್ಗೆ ಮೆಮೊರೆಂಡಂ ನೀಡಲಾಗುವುದು. ಕೆಲವು ಜಿಲ್ಲೆಗಳಲ್ಲಿ ತಂಡ ಅಧ್ಯಯನದ ನಂತರ ರಾಜ್ಯ ಸರ್ಕಾರ, ತಂಡದೊಂದಿಗೆ ಸಭೆ ನಡೆಸಲಿದೆ ಎಂದರು.
ಟಿ.ಕೆ.ಹಳ್ಳಿಗೆ ಪರಿಶೀಲನೆಗೆ ತೆರಳಲಾಗಿದ್ದು, ಬೆಂಗಳೂರು ನಗರ ಕಾವೇರಿ ನೀರನ್ನು ಪಂಪ್ ಮಾಡುವ ಕುಡಿಯುವ ನೀರಿನ ಘಟಕ ಇದಾಗಿದೆ. ಅದರ ಬಳಿ ಇರುವ ಭೀಮೇಶ್ವರ ನದಿ ಉಕ್ಕಿ ಹರಿದು, ಸುತ್ತಮುತ್ತಲಿನ ಕೆರೆಗಳು ತುಂಬಿ ಟಿ.ಕೆ.ಹಳ್ಳಿ ಪಂಪ್ ಹೌಸ್ ಗೆ ನುಗ್ಗಿದೆ. 2 ಪಂಪ್ ಹೌಸ್ ಗಳಿಗೆ ನೀರು ತುಂಬಿ ಹಾನಿಯಾಗಿದೆ. ಈಗಾಗಲೇ ನೀರನ್ನು ತೆರವುಗೊಳಿಸಲು ಕಾರ್ಯಾಚರಣೆ ಮಾಡಲಾಗುತ್ತಿದೆ. ಕಾವೇರಿ 4ನೇ ಸ್ಟೇಜ್ 2ನೇ ಫೇಸ್ ಪಂಪ್ ಹೌಸ್, 550 ಎಂಎಲ್ಡಿ ನೀರು ಸಾಮರ್ಥ್ಯವಿರುವ ಪಂಪ್ ಹೌಸ್ ನಲ್ಲಿ ನಾಳೆ ಬೆಳಿಗ್ಗೆಯೊಳಗೆ ನೀರನ್ನು ತೆಗೆದು, ಯಂತ್ರಗಳನ್ನು ದುರಸ್ತಿಗೊಳಿಸಲಾಗುವುದು. ಕಾವೇರಿ ಸ್ಟೇಜ್ 3 ರ ನೀರು ಪಂಪ್ ಹೌಸ್ ನಲ್ಲಿ ನೀರನ್ನು ತೆಗೆದು 2 ದಿನಗಳಲ್ಲಿ ಕೆಲಸ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.