logo
ಕನ್ನಡ ಸುದ್ದಿ  /  ಕರ್ನಾಟಕ  /  Explainer: ಸ್ಕೈಡೆಕ್ ಎಂದರೇನು? ಹೇಗಿರುತ್ತೆ? ಬೆಂಗಳೂರಿಗೆ ಸಿದ್ದರಾಮಯ್ಯ ಕೊಟ್ಟ ಮಹತ್ವದ ಕೊಡುಗೆ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು

Explainer: ಸ್ಕೈಡೆಕ್ ಎಂದರೇನು? ಹೇಗಿರುತ್ತೆ? ಬೆಂಗಳೂರಿಗೆ ಸಿದ್ದರಾಮಯ್ಯ ಕೊಟ್ಟ ಮಹತ್ವದ ಕೊಡುಗೆ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು

Jayaraj HT Kannada

Feb 16, 2024 03:26 PM IST

google News

ಸ್ಕೈಡೆಕ್ ಎಂದರೇನು? ಹೇಗಿರುತ್ತೆ? ಬೆಂಗಳೂರಿಗೆ ಸಿದ್ದರಾಮಯ್ಯ ಕೊಟ್ಟ ಮಹತ್ವದ ಕೊಡುಗೆ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು

    • Bengaluru Skydeck: ಬೆಂಗಳೂರು ನಗರದಲ್ಲಿ 250 ಮೀಟರ್‌ ಎತ್ತರದ ಸ್ಕೈಡೆಕ್‌ ನಿರ್ಮಾಣಕ್ಕಾಗಿ ನೂತನ ಪರಿಕಲ್ಪನೆ ಒದಗಿಸುವಂತೆ ಅಂತಾರಾಷ್ಟ್ರೀಯ ಮಟ್ಟದ ವಾಸ್ತುವಿನ್ಯಾಸಗಾರರನ್ನು ಆಹ್ವಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ. ಹಾಗಿದ್ದರೆ ಈ ಸ್ಕೈ ಡೆಕ್‌ ಎಂದರೆ ಏನು? ಅದು ಹೇಗಿರಲಿದೆ ಎಂಬ ವಿವರ ಈ ಸುದ್ದಿಯಲ್ಲಿದೆ.
ಸ್ಕೈಡೆಕ್ ಎಂದರೇನು? ಹೇಗಿರುತ್ತೆ? ಬೆಂಗಳೂರಿಗೆ ಸಿದ್ದರಾಮಯ್ಯ ಕೊಟ್ಟ ಮಹತ್ವದ ಕೊಡುಗೆ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು
ಸ್ಕೈಡೆಕ್ ಎಂದರೇನು? ಹೇಗಿರುತ್ತೆ? ಬೆಂಗಳೂರಿಗೆ ಸಿದ್ದರಾಮಯ್ಯ ಕೊಟ್ಟ ಮಹತ್ವದ ಕೊಡುಗೆ ಬಗ್ಗೆ ನೀವು ತಿಳಿಯಬೇಕಾದ ಅಂಶಗಳಿವು

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಕರ್ನಾಟಕ ಬಜೆಟ್‌ 2024ರಲ್ಲಿ, ನಗರಾಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರು ನಗರವನ್ನು ವಿಶ್ವದರ್ಜೆಯ ನಗರವಾಗಿ ಅಭಿವೃದ್ಧಿಪಡಿಸಲು ಬ್ರಾಂಡ್‌ ಬೆಂಗಳೂರು ಪರಿಕಲ್ಪನೆಯನ್ನು ರೂಪಿಸಲಾಗಿದೆ. ನಗರದ ಸಂಚಾರ ದಟ್ಟಣೆ ನಿವಾರಣೆ, ಗುಣಮಟ್ಟದ ರಸ್ತೆಗಳ ನಿರ್ಮಾಣ, ಶುದ್ಧ ಕುಡಿಯುವ ನೀರು ಪೂರೈಕೆ, ಸುರಂಗ ಮಾರ್ಗ‌, ರಿಂಗ್ ರೋಡ್‌ ಸೇರಿದಂತೆ ಹಲವು ಯೋಜನೆಗಳು ಉದ್ಯಾನ ನಗರಿಯ ಚಿತ್ರಣವನ್ನು ಬದಲಾಯಿಸಲಿದೆ.‌ ಈ ನಡುವೆ ಸ್ಕೈಡೆಕ್‌ ಎಂಬ ವಿಶೇಷ ಯೋಜನೆಯು, ರಾಜ್ಯದ ಜನರ ಕುತೂಲಹಕ್ಕೆ ಕಾರಣವಾಗಿದೆ.

ಸಿಲಿಕಾನ್‌ ಸಿಟಿಯಲ್ಲಿ 250 ಮೀಟರ್‌ ಎತ್ತರದ ಸ್ಕೈಡೆಕ್‌ (Sky-Deck) ನಿರ್ಮಾಣಕ್ಕಾಗಿ ನೂತನ ಪರಿಕಲ್ಪನೆ ಒದಗಿಸುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ವಾಸ್ತುವಿನ್ಯಾಸಗಾರರನ್ನು ಆಹ್ವಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ. ಈ ಯೋಜನೆಯಿಂದ ಗಾರ್ಡನ್‌ ಸಿಟಿಯ ಒಳಗೆ ಆಕರ್ಷಕವಾದ ಪ್ರವಾಸಿ ತಾಣ ಸೃಷ್ಟಿಸಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ. ಹಾಗಿದ್ದರೆ ಈ ಸ್ಕೈ ಡೆಕ್‌ ಎಂದರೆ ಏನು? ಅದು ಹೇಗಿರಲಿದೆ ಎಂಬುದನ್ನು ಇಲ್ಲಿ ನೋಡೋಣ.

ಏನಿದು ಸ್ಕೈ ಡೆಕ್‌?

ಸ್ಕೈ ಡೆಕ್‌ ಅನ್ನು ಆಬ್ಸರ್ವೇಶನ್‌ ಡೆಕ್‌ (observation deck) ಎಂದು ಕೂಡಾ ಕರೆಯಲಾಗುತ್ತದೆ. ಕನ್ನಡದಲ್ಲಿ ಇದನ್ನು ವೀಕ್ಷಣಾ ಗೋಪುರ ಎಂದು ಹೇಳಲಾಗುತ್ತದೆ. ಹೆಸರೇ ಹೇಳವಂತೆ, ಎತ್ತರದ ಕಟ್ಟಡದಲ್ಲಿ ನಿಂತು ಸುತ್ತಮುತ್ತಲ ಸುಂದರ ದೃಶ್ಯವೀಕ್ಷಣೆಗೆಂದು ಕಟ್ಟಲಾಗುವ ಗೋಪುರವಿದು. ಸಾಮಾನ್ಯವಾಗಿ ಗಗನಚುಂಬಿ ಕಟ್ಟಡದ ಮೇಲೆ ವೀಕ್ಷಣಾ ಗೋಪುರದಂಥ ರಚನೆ ಮಾಡಲಾಗುತ್ತದೆ. ಇದರಲ್ಲಿ ನಿಂತು ನಗರ ಅಥವಾ ಆ ಪ್ರದೇಶದ ಸುತ್ತಮುತ್ತಲಿನ ದೃಶ್ಯಕಾವ್ಯವನ್ನು ಸವಿಯಬಹುದು. ಅಲ್ಲದೆ ದೂರದ ಪ್ರದೇಶಗಳನ್ನು ಕೂಡಾ ವೀಕ್ಷಿಸಲು ದೂರದರ್ಶಕಗಳನ್ನು ಕೂಡಾ ಒಳಗೊಳ್ಳುವ ಸಾಧ್ಯತೆ ಇದೆ.‌

ಇದನ್ನೂ ಓದಿ | ಕರ್ನಾಟಕ ಬಜೆಟ್‌ 2024: ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಹೊಸದೇನಿದೆ, ಇಲ್ಲಿದೆ 10 ಯೋಜನೆ, ಕಾರ್ಯಕ್ರಮ

ಡಿಕೆ ಶಿವಕುಮಾರ್ ಪ್ರಸ್ತಾಪ

ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕಳೆದ ವರ್ಷದ ಅಕ್ಟೋಬರ್‌ ತಿಂಗಳಲ್ಲಿಯೇ ಸ್ಕೈಡೆಕ್ ಯೋಜನೆ ಕುರಿತು ಪ್ರಸ್ತಾಪಿಸಿದ್ದರು. ಈ ಸ್ಕೈಡೆಕ್ ಅಥವಾ ವೀಕ್ಷಣಾ ಗೋಪುರ ಯೋಜನೆಯು ಪೂರ್ಣಗೊಂಡರೆ, ದೇಶದ ಅತಿ ಎತ್ತರದ ವೀಕ್ಷಣಾ ಗೋಪುರವಾಗಲಿದೆ.

ಇದನ್ನೂ ಓದಿ | ಕರ್ನಾಟಕ ಬಜೆಟ್‌ 2024: ಸರ್ಜಾಪುರ ಟು ಹೆಬ್ಬಾಳ ನಮ್ಮ ಮೆಟ್ರೋ ಹಂತ 3 ಕರಡು ಸಿದ್ಧ, ಉಪನಗರ ರೈಲು ಯೋಜನೆಗೆ ಚುರುಕು, ಬಿಎಂಟಿಸಿಗೂ ಕೊಡುಗೆ

“ಆಸ್ಟ್ರೀಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್‌ ಡಿಸೈನ್ ಆರ್ಗನೈಸೇಶನ್ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈ ಡೆಸ್ಕ್ ಯೋಜನೆಯನ್ನು ಪರಿಶೀಲಿಸಿದೆ. ಇದು ನಿರ್ಮಾಣವಾದ ನಂತರ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ. ಯೋಜನೆಯ ಅನುಷ್ಠಾನಕ್ಕೆ ಸೂಕ್ತವಾದ 8-10 ಎಕರೆ ಭೂಮಿಯನ್ನು ಗುರುತಿಸುವುದರ ಜೊತೆಗೆ ಆರ್ಥಿಕ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ,” ಎಂದು ಡಿಕೆಶಿ ಹೇಳಿದ್ದರು.

ಆಲದ ಮರದಂಥಾ ರಚನೆ

ಬರೋಬ್ಬರಿ 250 ಮೀಟರ್ ಎತ್ತರದ ಗೋಪುರ ಇದಾಗಲಿದ್ದು. ಮೂಲಸೌಕರ್ಯ ಲೋಕದ ಅದ್ಭುತವಾಗಿ ನಿರ್ಮಾಣವಾಗಲಿದೆ. ಈ ಸ್ಕೈಡೆಕ್ ವಿನ್ಯಾಸವು ಆಲದ ಮರವನ್ನು ಹೋಲುತ್ತದೆ. ರೆಂಬೆ ಕೊಂಬೆಗಳು, ನೇತಾಡುವ ಬೇರುಗಳು ಮತ್ತು ಹೂವುಗಳನ್ನು ಹೊಂದಿರುವ ಆಲದ ಮರದ ರಚನೆಯಿಂದ ಸ್ಫೂರ್ತಿ ಪಡೆದಿದೆ ಎಂದು ಶಿವಕುಮಾರ್ ತಿಳಿಸಿದ್ದರು.

ವೀಕ್ಷಣಾ ಗೋಪುರ ನಿರ್ಮಾಣದ ಉದ್ದೇಶವೇನು?

ಇದು ನಿರ್ಮಾಣವಾದರೆ, ಅತ್ಯದ್ಭುತ ಪ್ರವಾಸಿ ತಾಣವಾಗಲಿದೆ. ಪ್ರವಾಸಿಗರು ಕಟ್ಟಡದ ಮೇಲಿನಿಂದ ಬೆಂಗಳೂರು ನಗರದ ಅದ್ಭುತ ನೋಟವನ್ನು ಸವಿಯಬಹುದು. ವೀಕ್ಷಣಾ ಡೆಕ್‌ನ ಹೊರತಾಗಿ, ಪ್ರಸ್ತಾವಿತ ಗೋಪುರದಲ್ಲಿ ಹಲವಾರು ಬಗೆಯ ಮನರಂಜನಾ ಚಟುವಟಿಕೆಗಳು ಇರಲಿವೆ. ಫನ್ ಸೌಲಭ್ಯಗಳು, ಶಾಪಿಂಗ್ ಪ್ರದೇಶ, ರೆಸ್ಟೋರೆಂಟ್‌ಗಳು, ಥಿಯೇಟರ್ ಮತ್ತು ಸ್ಕೈ ಗಾರ್ಡನ್ ಕೂಡಾ ಇರಲಿದೆ.

ಇದನ್ನೂ ಓದಿ | Explainer: ಏನಿದು ವಾಟರ್‌ ಮೆಟ್ರೋ? ಕೊಚ್ಚಿನ್ ನಗರದ ಜನಪ್ರಿಯ ಸೇವೆ ಮಂಗಳೂರಿನಲ್ಲೂ ಜಾರಿ ಸಾಧ್ಯತೆ; ಜಲ ಮೆಟ್ರೋ ಕುರಿತ ಸಮಗ್ರ ಮಾಹಿತಿ

ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರವು ಈಗಾಗಲೇ ಜಾಗತಿಕ ಪ್ರಸಿದ್ಧಿ ಪಡೆದಿದೆ. ಐಟಿ ಹಬ್‌ ಆಗಿ ವಿಶ್ವದ ಎಲ್ಲೆಡೆಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ