logo
ಕನ್ನಡ ಸುದ್ದಿ  /  ಕರ್ನಾಟಕ  /  Why Bjp Lost: ಬಿಜೆಪಿಗರ ಅಂತರಂಗದ ಒಳಸುಳಿ ಬಹಿರಂಗ; ಹೆಸರಿಗಷ್ಟೇ ಇತ್ತು ಬಿಜೆಪಿ ಸರ್ಕಾರ -17 ಜನರ ಕೈಲಿತ್ತು ಅಧಿಕಾರ- ಇದು Ht ಕನ್ನಡ ವಿಶೇಷ

Why BJP lost: ಬಿಜೆಪಿಗರ ಅಂತರಂಗದ ಒಳಸುಳಿ ಬಹಿರಂಗ; ಹೆಸರಿಗಷ್ಟೇ ಇತ್ತು ಬಿಜೆಪಿ ಸರ್ಕಾರ -17 ಜನರ ಕೈಲಿತ್ತು ಅಧಿಕಾರ- ಇದು HT ಕನ್ನಡ ವಿಶೇಷ

Umesh Kumar S HT Kannada

May 14, 2023 07:30 AM IST

google News

ಕಾಂಗ್ರೆಸ್‌., ಜೆಡಿಎಸ್‌ ಸರ್ಕಾರ ಪತನಗೊಳಿಸಿದ ಬಂಡಾಯ ಶಾಸಕರು ಬಿಜೆಪಿಗೆ ಸೇರಿದ ಸಂದರ್ಭ (ಕಡತ ಚಿತ್ರ)

  • Why BJP lost: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೇನು ಕಾರಣ? ಪೂರ್ಣ ಫಲಿತಾಂಶ ಬಂದ ಬಳಿಕ ಆತ್ಮಾವಲೋಕನ, ಪರಾಮರ್ಶೆ ನಡೆಸುವುದಾಗಿ ನಿಕಟಪೂರ್ವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಿಜೆಪಿಯ ಅಂತರಂಗದ ಒಳಸುಳಿ HTಕನ್ನಡಕ್ಕೆ ಲಭ್ಯವಾಗಿದೆ. ಅದರೊಳಗೆ ಬಹಳಷ್ಟು ವಿಚಾರಗಳಿವೆ.

ಕಾಂಗ್ರೆಸ್‌., ಜೆಡಿಎಸ್‌ ಸರ್ಕಾರ ಪತನಗೊಳಿಸಿದ ಬಂಡಾಯ ಶಾಸಕರು ಬಿಜೆಪಿಗೆ ಸೇರಿದ ಸಂದರ್ಭ (ಕಡತ ಚಿತ್ರ)
ಕಾಂಗ್ರೆಸ್‌., ಜೆಡಿಎಸ್‌ ಸರ್ಕಾರ ಪತನಗೊಳಿಸಿದ ಬಂಡಾಯ ಶಾಸಕರು ಬಿಜೆಪಿಗೆ ಸೇರಿದ ಸಂದರ್ಭ (ಕಡತ ಚಿತ್ರ) (HT)

ಕರ್ನಾಟಕ ವಿಧಾನಸಭಾ ಚುನಾವಣೆಯ ಜನಾದೇಶ ಬಿಜೆಪಿಗೆ ಭಾರಿ ಹೊಡತವನ್ನು ಕೊಟ್ಟಿದೆ. ಈ ಹೀನಾಯ ಸೋಲಿಗೇನು ಕಾರಣ ಎಂಬುದರ ಪರಾಮರ್ಶೆ, ಆತ್ಮಾವಲೋಕನ ನಡೆಸುತ್ತೇವೆ ಎಂಬ ಮಾತನ್ನು ನಿಕಟಪೂರ್ವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಪರಾಮರ್ಶೆ ಆತ್ಮಾವಲೋಕನಗಳು ಕೇವಲ ಕಾಟಾಚಾರದ್ದು ಆಗದಿರಲಿ ಎಂಬ ಮಾತು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರದ್ದು.

ಚುನಾವಣೆಗೆ ಮೊದಲೇ ಕಾರ್ಯಕರ್ತರ ಮಟ್ಟದಲ್ಲಿ ರಾಜ್ಯ ನಾಯಕತ್ವದ ವೈಫಲ್ಯಗಳ ವಿಚಾರ ಚರ್ಚೆಗೆ ಒಳಗಾಗಿತ್ತು. ಈಗ ಚುನಾವಣೆಯಲ್ಲಿನ ಹೀನಾಯ ಸೋಲು ಅದಕ್ಕೆ ಕನ್ನಡಿ ಹಿಡಿದಂತೆ ಕಂಡುಬಂದಿದೆ. ಇದು ಬಿಜೆಪಿಗರ ಅಂತರಂಗದಲ್ಲಿನ ಒಳಸುಳಿಯನ್ನು ಎಳೆಎಳೆಯಾಗಿ ಬಿಡಿಸತೊಡಗಿದೆ. ಈ ಸುಳಿಗಳ ವಿವರ ಹಿಂದುಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಲಭ್ಯವಾಗಿದೆ. ಪಕ್ಷದ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಒಂದಿಬ್ಬರು ಪದಾಧಿಕಾರಿಗಳು ಹಲವು ವಿಚಾರಗಳನ್ನು ಗುರುತು ಬಹಿರಂಗಪಡಿಸದಂತೆ ಮನವಿ ಮಾಡಿಕೊಂಡು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಇದು.

ಹೆಸರಿಗಷ್ಟೇ ಇತ್ತು ಬಿಜೆಪಿ ಸರ್ಕಾರ; 17 ಜನರ ಕೈಯಲ್ಲಿತ್ತು ಆಡಳಿತ ಮತ್ತು ಅಧಿಕಾರ

ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯಲು ಅಡ್ಡದಾರಿ ಹಿಡಿದ ಬಿಜೆಪಿಗೆ ಜನಾದೇಶ ಬಹುದೊಡ್ಡ ಹೊಡೆತ ನೀಡಿದೆ. ಇನ್ನೆಂದಿಗೂ ಆ ರೀತಿ ರಾಜಕೀಯ ನೈತಿಕತೆ ಬಿಟ್ಟು ಹೋಗಬಾರದೆಂಬ ನೀತಿ ಪಾಠ ಈ ಜನಾದೇಶದಲ್ಲಿ ಅಡಗಿದೆ.

ಬೊಮ್ಮಾಯಿ ಸರ್ಕಾರ ಮತ್ತು ಪಕ್ಷದ ನಡುವೆ ಸಂಪರ್ಕವೇ ಇಲ್ಲದಂತಾಗಿತ್ತು. ಸರ್ಕಾರ ರಚಿಸುವ ಉದ್ದೇಶದಿಂದ 17 ಶಾಸಕರನ್ನು ಅವರ ಪಕ್ಷಗಳಿಗೆ ರಾಜೀನಾಮೆ ಕೊಡಿಸಿ ಯಾವಾಗ ಕರೆಯಿಸಿಕೊಂಡ ನಂತರದಲ್ಲಿ ಸರ್ಕಾರದ ಹಿಡಿತ ಅವರ ಕೈಗೆ ಹೋಗಿತ್ತು. 104 ಶಾಸಕರನ್ನು ಬಿಜೆಪಿ ಹೊಂದಿದ್ದರೂ, ಆಡಳಿತ, ಅಧಿಕಾರ 17 ಜನರ ಕೈಯಲ್ಲಿತ್ತು.

ಕಾಂಗ್ರೆಸ್‌ ಅಥವಾ ಜೆಡಿಎಸ್‌ ನಾಯಕರಿಗೆ ಸರ್ಕಾರದ ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳುವ ತಾಕತ್ತು ಇತ್ತು. ಆದರೆ, ಬಿಜೆಪಿಯವರಿಗೆ ಅದು ಇರಲಿಲ್ಲ. ಅಧಿಕಾರಿಗಳು, ಆಯಕಟ್ಟಿನ ಜಾಗದಲ್ಲಿ ಇರುವವರನ್ನು ಬದಲಾಯಿಸುವುದು ಕೂಡ ಸಾಧ್ಯವಾಗಲಿಲ್ಲ.

ನಿಗಮ ಮಂಡಳಿಗಳು, ಯೂನಿವರ್ಸಿಟಿಗಳ ಸಿಂಡಿಕೇಟ್‌ ಸೇರಿ, ಅಕಾಡೆಮಿಗಳಿಗೆ ನಾಮನಿರ್ದೇಶನದ ನೇಮಕಗಳು ಕೂಡ ಸರಿಯಾಗಿ ನಡೆಯಲಿಲ್ಲ. ನಾಮನಿರ್ದೇಶನವಾಗಿದ್ದ ಕೆಲವೆಡೆ ಅವರಿಗೆ ಏನೂ ಮಾಡುವುದು ಸಾಧ್ಯವಾಗಲಿಲ್ಲ. ಹೊರಗಿನಿಂದ ಬಂದ 17 ಜನ ಮತ್ತು ಅವರ ಕಡೆಯವರು ಏನು ಹೇಳಿದರೂ ಸರ್ಕಾರದ ಮಟ್ಟದಲ್ಲಿ ಕೆಲಸ ಆಗುತ್ತಿತ್ತು ಎಂದು ಬಿಜೆಪಿಯ ಸಂಘಟನಾತ್ಮಕ ಹೊಣೆಗಾರಿಕೆ ಹೊತ್ತವರೊಬ್ಬರು ಹೇಳಿದರು.

ಈ ವಿದ್ಯಮಾನಗಳನ್ನು ಬಲ್ಲಂತಹ ಒಬ್ಬರು ನೀಡಿದ ಮಾಹಿತಿ ಪ್ರಕಾರ, ಬಿಎಸ್‌ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಿದ್ದರೆ ಈ ತೊಂದರೆ ಎದುರಾಗುತ್ತಿರಲಿಲ್ಲ. ಹಿಂದಿನ ಅವಧಿಯಲ್ಲಿ ಸರ್ಕಾರ ರಚನೆ ಆದಾಗಲೂ ಬಿಎಸ್‌ ಯಡಿಯೂರಪ್ಪ ಅವರಿಗೆ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿರಲು ಬಿಡಲಿಲ್ಲ. ಡಿವಿ ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌ ಅವರನ್ನು ಮುಖ್ಯಮಂತ್ರಿ ಮಾಡಿದರು. 2019ರ ಮೈತ್ರಿ ಸರ್ಕಾರವನ್ನು 17 ಶಾಸಕರು ಉರುಳಿಸಿ ಹೊರಬಂದ ಬಳಿಕ ಬಿಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಸಹಕಾರ ನೀಡಿದರು. ಆದರೆ, ಒಂದು ವರ್ಷ ಕಳೆದ ಕೂಡಲೇ ಅವರನ್ನು ಕಣ್ಣೀರು ಹಾಕುವಂತೆ ಮಾಡಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಿದರು.

ಅವರನ್ನೇ ಮುಂದುವರಿಸಿದ್ದರೆ ಇಂದು ಪಕ್ಷಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ಸರ್ಕಾರ ರಚನೆಗೆ ನೆರವಾಗಲು ಬಂದವರು ಅಷ್ಟೂ ಜನ ಬಿಎಸ್‌ ಯಡಿಯೂರಪ್ಪ ಹಿಡಿತದಲ್ಲೇ ಇರುತ್ತಿದ್ದರು. ಪಕ್ಷ ಮತ್ತು ಸರ್ಕಾರದ ನಡುವೆ ಒಂದು ಸಮನ್ವಯ ಸಾಧಿಸುವುದು ಸಾಧ್ಯವಾಗುತ್ತಿತ್ತು. ಪಕ್ಷ ಮತ್ತು ಸರ್ಕಾರ ನಡುವಿನ ಸಮನ್ವಯ ಸಾಧನೆಯ ಒಂದು ಪರಿಕಲ್ಪನೆಯನ್ನು ಸರ್ಕಾರ ರಚನೆಯಾದಾಗ ಜಾರಿಗೊಳಿಸಲಿಲ್ಲ. ಬದಲಾಗಿ ಚುನಾವಣೆಗೆ ಒಂದೂವರೆ ವರ್ಷ ಇದ್ದಾಗ ಚಾಲ್ತಿಗೆ ತರಲು ಯತ್ನಿಸಿದ್ದರು. ಆದರೆ ತಡವಾಗಿತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದು, ಸ್ವಾರ್ಥ ನೋಡಿದರೆ ಹೊರತು ಬೇರೇನೂ ಆಗಲಿಲ್ಲ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ 17 ಜನರ ಕಾರುಬಾರನ್ನು ಗಮನಿಸಿಯೂ ಗಮನಿಸದಂತೆ ಇದ್ದರು. ಸರ್ಕಾರ ಪತನವಾಗುವ ಭೀತಿ ಇತ್ತು ಅವರಲ್ಲಿ. ಇನ್ನು ಚುನಾವಣೆ ಎದುರಿಸುವ ಮಾತೆಲ್ಲಿಂದ ಬಂತು. ಕಾಂಗ್ರೆಸ್‌ ಪಕ್ಷ ಬೊಮ್ಮಾಯಿ ವಿರುದ್ಧ ಪೇ ಸಿಎಂ ಅಭಿಯಾನ ಶುರುಮಾಡಿದಾಗ, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದು ಕೂಡ ಅವರಿಗೆ ಕಷ್ಟವಾಗಿ ಹೋಯಿತು.

ಇದೇ ರೀತಿ, ಚುನಾವಣೆ ಸಮೀಪದಲ್ಲಿರುವಾಗ ಹಿರಿಯರನ್ನು, ಕಾರ್ಯಕರ್ತರನ್ನು ಪಕ್ಷದ ನಾಯಕರು ನಡೆಸಿಕೊಂಡ ರೀತಿ ಸರಿ ಇರಲಿಲ್ಲ. ಇದು ಚುನಾವಣಾ ಪೂರ್ವದಲ್ಲಿ ಬಂಡಾಯಕ್ಕೆ, ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಯಿತು. ಲಿಂಗಾಯತರು, ಒಕ್ಕಲಿಗರು ಪಕ್ಷದಿಂದ ದೂರಾಗುವಂತೆ ಮಾಡಿತು ಎಂದು ಅವರು ವಿವರಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ