Yadagiri News: ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ ಪ್ರಥಮ ಸ್ಥಾನ ಪಡೆದ ಡಾ.ರಾಘವೇಂದ್ರ ಗುಳಗಿ
Sep 30, 2023 07:09 PM IST
ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ ಪ್ರಥಮ ಸ್ಥಾನ ಪಡೆದ ಡಾ.ರಾಘವೇಂದ್ರ ಗುಳಗಿ
- ಶ್ರೀ ನಗರದಲ್ಲಿ ಮೂರು ದಿನ ನಡೆದ ಸಮ್ಮೇಳನದಲ್ಲಿ 'ಕೋಳಿಯ ಬೆಳವಣಿಗೆ, ರೋಗದಿಂದ ಅವುಗಳ ರಕ್ಷಣೆ' ಕುರಿತು ಪೋಸ್ಟರ್ ಮಾದರಿಯಲ್ಲಿ ಪ್ರಸ್ತುತ ಪಡಿಸಿದ್ದರು.
ಯಾದಗಿರಿ: ಕೇಂದ್ರಾಡಳಿತ ಪ್ರದೇಶ ಕಾಶ್ಮೀರದ ಶ್ರೀನಗರ ಜಿಲ್ಲೆಯಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಟೆಯ ಡಾ. ರಾಘವೇಂದ್ರ ಮಲ್ಲಿಕಾರ್ಜುನ ಗುಳಗಿ ಪ್ರಥಮ ಸ್ಥಾನಗಳಿಸಿದ್ದಾರೆ. 2023-24ನೇ ಸಾಲಿನಲ್ಲಿ ಶ್ರೀನಗರದ ಪಶು ವೈದ್ಯಕೀಯ ವಿಜ್ಞಾನ ಮತ್ತು ಪಶುಸಂಗೋಪನೆ ಕಾಲೇಜಿನ ಸಂಭಾಗಣದಲ್ಲಿ ಸೆಪ್ಟೆಂಬರ್ 13 ರಿಂದ 15ರವರೆಗೆ ಮೂರು ದಿನಗಳ ಕಾಲ 38ನೇ ಭಾರತೀಯ ಕೋಳಿ ವಿಜ್ಞಾನ ಸಂಘದ ಸಮ್ಮೇಳನ ಮತ್ತು ರಾಷ್ಟ್ರೀಯ ವಿಚಾರ ಸಂಕೀರಣ' ಆಯೋಜಸಲಾಗಿತ್ತು. ಅದರಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಹರಿಯಾಣ, ರಾಜಸ್ಥಾನ್ ಸೇರಿದಂತೆ ವಿವಿಧ ರಾಜ್ಯಗಳಿಂದ ಸುಮಾರು 150ಕ್ಕೂ ಹೆಚ್ಚು ಪ್ರೋಪೆಸರ್ ಗಳು, ವೈದ್ಯಾಧಿಕಾರಿಗಳು ಮತ್ತು ಸಂಶೋಧನ ಕೇಂದ್ರದ ವಿಜ್ಞಾನಿಗಳು ಕೂಡ ಭಾಗವಹಿಸಿದ್ದರು.
ಒಟ್ಟು 6 ವಿವಿಧ ರೀತಿಯ ಕೋಳಿ ಸಂಶೋಧನಾ ಅಧಿವೇಶನವು ಸೆಪ್ಟೆಂಬರ್ 13 ರಿಂದ 15 ರವರೆಗೆ ನಡೆದಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಟೆಯ ಡಾ. ರಾಘವೇಂದ್ರರವರು ಕೈಗೊಂಡ ಸಂಶೋಧನೆಯಾದ 'ಕೋಳಿಯ ಬೆಳವಣಿಗೆ ಮತ್ತು ರೋಗದಿಂದ ಅವುಗಳ ರಕ್ಷಣೆ' ಕುರಿತು ಪೋಸ್ಟರ್ ಮಾದರಿಯಲ್ಲಿ ಪ್ರಸ್ತುತ ಪಡಿಸಿದರು. ಕೋಳಿ ಆರೋಗ್ಯ, ಕಲ್ಯಾಣ ಮತ್ತು ಜೈವಿಕ ಭದ್ರತೆ ಅಧಿವೇಶನದಲ್ಲಿ ಪ್ರಥಮ ಸ್ಥಾನ ಪಡೆದ ಡಾ. ರಾಘವೇಂದ್ರ ಗುಳಗಿ ಹಾಗೂ ದ್ವಿತೀಯ ಸ್ಥಾನ ಪಡೆದ ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ಡಾ.ಮಾಲತಿ ಅವರನ್ನು ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೋ. ನಜೀರ್ ಅಹಮ್ಮದ್ ಗನ್ ಅವರು ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಶ್ರೀನಗರ ಪಶುವೈದ್ಯಕೀಯ ಕಾಲೇಜಿನ ಡೀನ್ ಪ್ರೊ. ಎಮ್. ಟಿ. ಬಾಂಡೈ, ಭಾರತಿಯ ಕೋಳಿ ವಿಜ್ಞಾನ ಸಂಘದ ಅಧ್ಯಕ್ಷ ಡಾ. ಎ. ಎಸ್. ರಾನಡೆ ಮತ್ತು ಕಾರ್ಯದರ್ಶಿ ಡಾ. ಜೆ. ಎಸ್. ತ್ಯಾಗಿರವರು ಉಪಸ್ಥಿತರಿದ್ದರು.
ಕರ್ನಾಟಕದಿಂದ ಭಾಗವಹಿಸಿದವರು
ಯಾದಗಿರಿ ಜಿಲ್ಲೆಯ ಶಹಾಪುರ ಪಶು ಸಂಗೋಪನಾ ಪಾಲಿಟೆಕ್ನಿಕ್ ಕಾಲೇಜಿನ ಡಾ.ರಾಘವೇಂದ್ರ ಗುಳಗಿ, ಶಿವಮೊಗ್ಗ ಕಾಲೇಜಿನ ಡಾ.ಶ್ವೇತಾ,ಡಾ.ಉಮೇಶ ಬೆಂಗಳೂರ ಕಾಲೇಜಿನ ಡಾ.ಮಾಲತಿ ಡಾ.ಸುನೀಲ್ ಭಾಗವಹಿಸಿದ್ದರು.
ಡಾ.ರಾಘವೇಂದ್ರ ಕುರಿತು ಪರಿಚಯ
ಯಾದಗಿರಿ ಜಿಲ್ಲೆಯ ಸುರಪುರ ನಗರ ವ್ಯಾಪ್ತಿಯ ರಂಗಂಪೇಟಿಯ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಮ್ಮ ಗುಳಗಿ ಅವರ ಸುಪುತ್ರ ಡಾ.ರಾಘವೇಂದ್ರ ಗುಳಗಿ ರಂಗಂಪೇಟೆಯ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ , ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ, ಕಲಬುರಗಿಯ ಶ್ರೀ ಗುರು ಕಾಲೇಜಿನಲ್ಲಿ ಪಿಯುಸಿ, ಬೀದರ್ ಪಶುವೈದ್ಯಕೀಯ ಕಾಲೇಜಿನಲ್ಲಿ ಬಿವಿಎಸ್ಸಿ, ಕೇರಳದಲ್ಲಿ ಎಂವಿಎಸ್ಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಶಹಾಪುರ ತಾಲೂಕಿನ ದೋರನಹಳ್ಳಿಯ ಸರಕಾರಿ ಪಶುಸಂಗೋಪನಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)