logo
ಕನ್ನಡ ಸುದ್ದಿ  /  ಕರ್ನಾಟಕ  /  Sharanabasappa: ಕನ್ನಡ ಓದಲು ಬರುತ್ತಾ ಅವನಿಗೆ, ಕಾಂಗ್ರೆಸ್ ಘೋಷಣೆಗಳನ್ನು ಮೊದಲು ಓದಿ ಮಾತಾಡಲಿ; ಕಟೀಲ್​ಗೆ ಏಕವಚನದಲ್ಲೇ ಸಚಿವ ವಾಗ್ದಾಳಿ

Sharanabasappa: ಕನ್ನಡ ಓದಲು ಬರುತ್ತಾ ಅವನಿಗೆ, ಕಾಂಗ್ರೆಸ್ ಘೋಷಣೆಗಳನ್ನು ಮೊದಲು ಓದಿ ಮಾತಾಡಲಿ; ಕಟೀಲ್​ಗೆ ಏಕವಚನದಲ್ಲೇ ಸಚಿವ ವಾಗ್ದಾಳಿ

HT Kannada Desk HT Kannada

Jun 04, 2023 01:02 PM IST

google News

ಸಣ್ಣ ಕೈಗಾರಿಕೆ ಮತ್ತು ಉದ್ದಿಮೆಗಳ ಸಚಿವ ಶರಣಬಸಪ್ಪಗೌಡ ದರ್ಶನಾಪುರ

    • ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ ದರ್ಶನಾಪುರ ಅವರು,‌ ಕಟೀಲ್ ಅಧ್ಯಕ್ಷ ಹೇಗೆ ಆಗಿದ್ದಾನೋ ಸೀದಾ ಮಾತನಾಡುವುದೇ ಗೊತ್ತಾಗಲ್ಲ. ಗ್ಯಾರಂಟಿ ಘೋಷಣೆ ಮಾಡಿದ್ದು ಮೊದಲು ಸರಿಯಾಗಿ ಓದಿಕೊಳ್ಳಲಿ ಎಂದು ಸಚಿವ ಶರಣಬಸಪ್ಪಗೌಡ ದರ್ಶನಾಪುರ ವಾಗ್ದಾಳಿ ನಡೆಸಿದ್ದಾರೆ.
ಸಣ್ಣ ಕೈಗಾರಿಕೆ ಮತ್ತು ಉದ್ದಿಮೆಗಳ ಸಚಿವ ಶರಣಬಸಪ್ಪಗೌಡ ದರ್ಶನಾಪುರ
ಸಣ್ಣ ಕೈಗಾರಿಕೆ ಮತ್ತು ಉದ್ದಿಮೆಗಳ ಸಚಿವ ಶರಣಬಸಪ್ಪಗೌಡ ದರ್ಶನಾಪುರ

ಯಾದಗಿರಿ: ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಅಧಿಕಾರದ ಬಗ್ಗೆ ಯಾವುದೇ ಒಪ್ಪಂದ ಆಗಿಲ್ಲ ಎಂದು ಸಣ್ಣ ಕೈಗಾರಿಕೆ ಮತ್ತು ಉದ್ದಿಮೆಗಳ ಸಚಿವ ಶರಣಬಸಪ್ಪಗೌಡ ದರ್ಶನಾಪುರ (Minister Sharanabasappa Darshanapur) ಹೇಳಿದರು.

ಸಚಿವರಾದ ಬಳಿಕ ಮೊದಲ ಬಾರಿಗೆ ಶನಿವಾರ ಸ್ವಕ್ಷೇತ್ರ ಶಹಾಪುರಕ್ಕೆ ಆಗಮಿಸಿದ ಅವರು, 5 ವರ್ಷ ಸಿದ್ದರಾಮಯ್ಯ ಸಿಎಂ ಆಗಿ ಇರುತ್ತಾರೆಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಎಲ್ಲಿಯಾದ್ರು ಬರೆದುಕೊಟ್ಟಿದ್ದನ್ನು ನೋಡಿದ್ದೀರಾ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (Deputy Cheif Minister DK Shivakumar) ಅವರು ಏನಾದರೂ ಹೇಳಿದ್ದರಾ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.

ಈಗಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅವರು ಎಷ್ಟು ವರ್ಷ ಇರುತ್ತಾರೋ ಬಿಡುತ್ತಾರೋ ಅಲ್ಲ, ಕಾಂಗ್ರೆಸ್ ಪಕ್ಷದಲ್ಲಿ 30-30 ಮತ್ತು 20-30 ತಿಂಗಳು, 2 ವರ್ಷ, 3 ವರ್ಷ ಮುಖ್ಯಮಂತ್ರಿ ಅಂತ ಯಾವುದೇ ಅಗ್ರಿಮೆಂಟ್ ಆಗಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಇರುತ್ತಾರೆಂದು ಸ್ಪಷ್ಪಪಡಿಸಿದರು.

ಕನ್ನಡ ಓದಿ ಮಾತಾಡಲಿ

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ (Nalin Kumar Kateel) ಕಟೀಲ್​ಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದ ದರ್ಶನಾಪುರ ಅವರು,‌ ಕಟೀಲ್ ಅಧ್ಯಕ್ಷ ಹೇಗೆ ಆಗಿದ್ದಾನೋ ಸೀದಾ ಮಾತನಾಡುವುದೇ ಗೊತ್ತಾಗಲ್ಲ. ಗ್ಯಾರಂಟಿ ಘೋಷಣೆ ಮಾಡಿದ್ದು ಮೊದಲು ಸರಿಯಾಗಿ ಓದಿಕೊಳ್ಳಲಿ. ಕನ್ನಡ ಸರಿಯಾಗಿ ಓದಲು ಬರುತ್ತದೆಯೇ ಅವನಿಗೆ. ಕಾಂಗ್ರೆಸ್ ಘೋಷಣೆ ಮಾಡಿದ್ದು ಮೊದಲು ಓದಲಿ. ಕಟೀಲ್ ಅಧ್ಯಕ್ಷನಾದ ನಂತರ ರಾಜ್ಯದಲ್ಲಿ ಬಿಜೆಪಿ ಸತ್ಯನಾಶ ಆಗಿದೆ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಸಂಕಲ್ಪ

ನಮ್ಮ ಮೇಲೆ ವಿಶ್ವಾಸವಿಟ್ಟು ಹಗಲಿರಳು ಪರಿಶ್ರಮ ಹಾಕಿ, ಚುನಾವಣೆಯಲ್ಲಿ ಅಭೂತಪೂರ್ವ ಬಹುಮತದಿಂದ ಗೆಲ್ಲಿಸಿದ್ದೀರಿ. ಇದರ ಜೊತೆಗೆ ನಿಮ್ಮೆಲ್ಲರ ಆಶೀರ್ವಾದದ ಭಾಗ್ಯದಿಂದ ಮಂತ್ರಿ ಸ್ಥಾನದೊರಕಿದ್ದು, ಜೀವನ ಪರ್ಯಂತ ಮರೆಯುವುದಿಲ್ಲ. ಸದಾಕಾಲ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಮತಕ್ಷೇತ್ರದ ಜನತೆಯ ಸೇವೆ ನನ್ನ ಸಂಕಲ್ಪವಾಗಿದೆ ಎಂದರು.

ಸುಕ್ಷೇತ್ರ ಶಹಾಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮತಕ್ಷೇತ್ರದ ಜನತೆಗಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸರ್ವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮತಕ್ಷೇತ್ರದ ಜನತೆ 5 ಬಾರಿ ಗೆಲ್ಲಿಸಿ ಅದರಲ್ಲಿ, ಮೂರು ಬಾರಿ ಮಂತ್ರಿ ಆಗುವ ಅವಕಾಶ ಕೊಟ್ಟಿದ್ದೀರಿ. ನಿಮ್ಮ ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಯಾವ ತಾರತಮ್ಯವಿಲ್ಲದಂತೆ ನಿಮ್ಮೆಲ್ಲರ ಆಶಯಗಳನ್ನು ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ. ಸರ್ವರ ಬೆಂಬಲದಿಂದ ಕಾಂಗ್ರೆಸ್ ಪಕ್ಷಕ್ಕೆ ಪೂರ್ಣಬಹುಮತ ದೊರಕಿದ್ದು ಅಭಿವೃದ್ಧಿ ಕಾರ್ಯಕ್ಕೆ ವೇಗ ಸಿಗಲಿದೆ ಎಂದರು.

ಮಾಧ್ಯಮಗಳು ಗೊಂದಲ ಹೇಳಿಕೆ ನಿಲ್ಲಿಸಲಿ

ಪೂರ್ಣ ಪ್ರಮಾಣದ ಬಹುಮತದ ಸರ್ಕಾರ ಬಂದು ಒಂದು ವಾರವು ಕಳೆದಿಲ್ಲ. ಗ್ಯಾರಂಟಿ ಘೋಷಣೆಗಳ ಬಗ್ಗೆ ಅಪಸ್ವರ, ಮಂತ್ರಿ ಮಂಡಲದ ಬಗ್ಗೆ ಗೊಂದಲದ ಹೇಳಿಕೆ, ಕಾಂಗ್ರೆಸ್‌ನಲ್ಲಿ ಬಣಗಳು ಎಂಬ ಹೇಳಿಕೆ ಹೀಗೆ ಮಾಧ್ಯಮಗಳೇ ಸಮಸ್ಯೆ ಸೃಷ್ಟಿಸುವಂತಹ ವಾತಾವರಣ ನಿರ್ಮಾಣ ಮಾಡಿದ್ದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ನುಡಿದಂತೆ ನಡೆದಿದ್ದು, ಗ್ಯಾರಂಟಿ ಯೋಜನೆಗಳ ಬಗ್ಗೆ ಬದ್ಧತೆ ಪ್ರದರ್ಶಿಸಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿ ಏನೆಲ್ಲಾ ಪ್ರಯತ್ನ ಮಾಡಿದ್ದರು. ಜನ ಸಾರಸಗಟಾಗಿ ತಿರಸ್ಕರಿಸಿದ್ದಾರೆ. ಇನ್ನಾದರೂ ಅರ್ಥಮಾಡಿಕೊಳ್ಳಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ ಮಾತನಾಡಿ, ನಗರದ ಮೂಲಭೂತ ಸೌಕರ್ಯಗಳು, ಬಾಕಿ ಇರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ನೀಡಿ ಸುಂದರ ಸ್ವಚ್ಛ ನಗರಕ್ಕೆ ಆದ್ಯತೆ ನೀಡುವಲ್ಲಿ ಸಚಿವರು ಕಾಳಜಿವಹಿಸಬೇಕು. ದರ್ಶನಾಪುರ ಸಚಿವರಾಗಿರುವುದರಿಂದ ಯಾದಗಿರಿ ಜಿಲ್ಲೆಗೆ ಅಭಿವೃದ್ಧಿಯ ಬಲ ಬಂದಿದೆ ಎಂದರು.

ಮುಖಂಡ ಶಂಕರಣ್ಣ ವಣಿಕ್ಯಾಳ, ನೀಲಕಂಠ ಬಡಿಗೇರ, ಶರಣಪ್ಪ ಸಲಾದಪುರ, ತಿಪ್ಪಣ್ಣ ಕಮಕನೂರ, ಲಾಲಅಹ್ಮದ ಬಾಂಬೆಸೇಠ, ಸೈದುದ್ದಿನ ಖಾದ್ರಿ, ಮಹಿಳಾ ಪ್ರತಿನಿಧಿ ಚರಿತಾ, ರೇಣುಕಾ ಚಟ್ರಿಕಿ ಮಾತನಾಡಿ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮಕ್ಕೂ ಮುಂಚೆ ನಗರದಲ್ಲಿನ ಪ್ರಮುಖ ಮಹಾತ್ಮರ ಪುತ್ಥಳಿಗೆ ಕಾರ್ಯಕರ್ತರೊಂದಿಗೆ ತೆರಳಿ ಗೌರವ ಸಮರ್ಪಿಸಿದರು. ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟ ಕುರಿತು ಮೌನಚರಣೆ ಮಾಡಿ ಶಾಂತಿ ಕೋರಿದರು. ಸಮಾರಂಭದಲ್ಲಿ ಯಾವುದೇ ರೀತಿಯ ಹಾರ, ಶಾಲು ಸ್ವೀಕರಿಸದೆ ಸರಳತೆ ಮೆರೆದರು. ಕಾರ್ಯಕರ್ತರೊಂದಿಗೆ ಭೋಜನ ಸವಿದರು.

(ವರದಿ: ಎಸ್.ಬಿ.ರೆಡ್ಡಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ