Anna Bhagya Rice scam: ಗುರುಮಠಕಲ್ ನಲ್ಲೂ ಭಾರೀ ಅಕ್ಕಿ ವಶ: ಆರೋಪಿ ರಾಜು ರಾಠೋಡಗೆ ಪೊಲೀಸರ ಹುಡುಕಾಟ
Dec 31, 2023 10:14 AM IST
ಯಾದಗಿರಿಯಲ್ಲಿ ಅಕ್ಕಿ ಸಂಗ್ರಹ ಘಟಕದ ಮೇಲೆ ಪೊಲೀಸ್ ದಾಳಿ ನಡೆದಿದೆ. ಆರೋಪಿ ರಾಜು ರಾಠೋಡ್ ತಲೆ ತಪ್ಪಿಸಿಕೊಂಡಿದ್ದಾರೆ.
- Yadgir rice case ಯಾದಗಿರಿ ಜಿಲ್ಲೆಯ ಗುರುಮಠ್‌ಕಲ್ ನಲ್ಲಿ ಬಿಜೆಪಿ ಮುಖಂಡನಿಗೆ ಸೇರಿದ ರೈಸ್ ಮಿಲ್ ಮೇಲೆ ದಾಳಿ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಾದಗಿರಿ: ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಇತ್ತೀಚೆಗೆ ಅನ್ನಭಾಗ್ಯ ಪಡಿತರ ಅಕ್ಕಿ ಕಳ್ಳತನ ಪ್ರಕರಣ ಬೆನ್ನಲೆ ಇದೀಗ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಅಕ್ರಮ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪ್ರಮುಖ ಆರೋಪಿ ರಾಜು ರಾಠೋಡ್ ಸಹೋದರನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರ ಸಹೋದರ ರಾಜು ರಾಠೋಡ ಅವರಿಗೆ ಸೇರಿದ ರೈಸ್ ಮಿಲ್ ಮೇಲೆ ಪೊಲೀಸರು ದಾಳಿ ನಡೆಸಿ 700 ಕ್ವಿಂಟಲ್ ಅಕ್ಕಿ ಜಪ್ತಿ ಮಾಡಿಕೊಂಡಿದ್ದಾರೆ.
ಸುರಪುರ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ನೇತೃತ್ವದಲ್ಲಿ ರಾಜು ರಾಠೋಡ ಅವರಿಗೆ ಸೇರಿದ ಲಕ್ಷ್ಮೀ ವೆಂಕಟೇಶ್ವರ ರೈಸ್ ಮಿಲ್ ದಾಳಿ ನಡೆದಿದ್ದು, ದಾಳಿ ವೇಳೆ ಪಾಲಿಶ್ ಮಾಡಿದ್ದ 630 ಕ್ವಿಂಟಲ್, ಜೊತೆಗೆ ಪಾಲಿಶ್ ಮಾಡಲು ರೆಡಿ ಮಾಡಿಟ್ಟುಕೊಂಡಿದ್ದ 70 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಸದ್ಯ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳು ರಾಜು ರಾಠೋಡ್‌ಗೆ ಅಕ್ಕಿ ಮಾರಾಟ ಮಾಡಿರೋದಾಗಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಕಳೆದ 15 ದಿನಗಳಿಂದ ರಾಜು ರಾಠೋಡ್ ತಲೆಮರಿಸಿಕೊಂಡಿದ್ದಾರೆ. ರಾಜು ರಾಠೋಡ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಅಕ್ಕಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಲೇ ಇದ್ದು. ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಈಗ ಬಿಜೆಪಿ ಮುಖಂಡ ಮಣಿಕಂಠ ರಾಠೊಡ್ ಸಹೋದರ ರಾಜು ರಾಠೋಡ್‌ಗೆ ಸೇರಿದ ರೈಸ್ ಮಿಲ್ ಮೇಲೆ ದಾಳಿ ಮಾಡಿ ಅಕ್ಕಿ ಜಪ್ತಿ ಮಾಡಲಾಗಿದೆ. ರಾಜು ರಾಠೋಡ ಬಂಧನಕ್ಕೆ ಬಲೆ ಬೀಸಲಾಗಿದೆ. ಅನ್ನಭಾಗ್ಯ ಅಕ್ಕಿ ಪ್ರಕರಣದಲ್ಲಿ ಒಂದಕ್ಕೊಂದು ಸಂಬಂಧ ಇದೆಯಾ ಎನ್ನುವುದನ್ನು ಕೂಡ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅಕ್ರಮ ಅಕ್ಕಿ ಪ್ರಕರಣ ತನಿಖೆಗೆ ವಿಳಂಬ
ಯಾದಗಿರಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ಕಿ ಅಕ್ರಮ ದಂಧೆಕೋರರು ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದ್ದರಿಂದ ಅಂತಹವರನ್ನು ರಕ್ಷಿಸುವ ಕೆಲಸಕ್ಕೆ ರಾಜಕೀಯ ಪ್ರಭಾವಿಗಳೆ ಮುಂದಾಗುತ್ತಿದ್ದಾರೆಂದು ಪ್ರಾಂತ ರೈತ ಸಂಘ ಆರೋಪಿಸಿದೆ.
ರೈತ ಸಂಘದ ಚೆನ್ನಪ್ಪ ಆನೆಗುಂದಿ ಶಹಾಪುರದಲ್ಲಿ ನಡೆದ ಅಕ್ಕಿ ಅಕ್ರಮ ಕುರಿತು ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ತೆರಳಿ ಶನಿವಾರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಮಹಾ ನಿರ್ದೇಶಕ (ಹೆಚ್ಚುವರಿ) ಹಿತೇಂದ್ರ ಅವರನ್ನು ಭೇಟಿಯಾಗಿ ದೂರಿದ್ದಾರೆ.
ಜಿಲ್ಲೆಯ ಶಹಾಪುರದಲ್ಲಿ ನಡೆದ 6 ಸಾವಿರ ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣವು ರಾಜಕೀಯ ಪ್ರಭಾವದಿಂದಾಗಿ ದಿಕ್ಕು ತಪ್ಪಿಸಲಾಗುತ್ತಿದೆ. ನೂರಾರು ಕೋಟಿ ರು.ಗಳ ವಹಿವಾಟು ನಡೆಸುವ ಈ ವ್ಯಕ್ತಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷವೊಂದರ ಅಭ್ಯರ್ಥಿಗೆ ಭಾರಿ ಪ್ರಮಾಣದಲ್ಲಿ ಹಣ ನೀಡಿದ್ದನೆಂದು ಹೇಳಲಾಗುತ್ತಿದೆ. ಇದರಿಂದಾಗಿ, ರಾಜಕೀಯ ಪ್ರಭಾವದಿಂದ ಆತನ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲಾಗುತ್ತಿದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ರಾಜಕೀಯ ಪಕ್ಷ ಈತನಿಂದ ದೇಣಿಗೆ ನಿರೀಕ್ಷಿಸುತ್ತಿರುವುದರಿಂದ ಅಕ್ರಮದ ಕಿಂಗ್ ಪಿನ್‌ನನ್ನು ಪಾರು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ದೂರಿದ್ದಾರೆ.
ಅಕ್ಕಿ ಅಕ್ರಮದಲ್ಲಿ ಕೇಳಿ ಬರುತ್ತಿರುವ ವ್ಯಕ್ತಿಯನ್ನೇ ಡಿವೈಎಸ್ಪಿ ಸನ್ಮಾನಿಸುವ ಮೂಲಕ ಇಲ್ಲಿ ಪೊಲೀಸ್ ಅಧಿಕಾರಿಗಳ ಶಾಮೀಲೂ ಶಂಕಿಸಲಾಗಿದೆ. ಸುರಪುರ ಡಿವೈಎಸ್ಪಿ ಜಾವೇದ್ ಇನಾಂದಾರ್ ಸೇರಿ ಅಲ್ಲಿನ ಕೆಲವರ ವರ್ಗಾಯಿಸಿ ಬೇರೊಬ್ಬ ದಕ್ಷ ಅಧಿಕಾರಿಗೆ ಇದರ ತನಿಖೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)
ವಿಭಾಗ