ಯಕ್ಷಗಾನದ ಹಾಸ್ಯರಾಜ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ; ಬೆಂಗಳೂರಿನಲ್ಲಿ ನಿಧನರಾದ ಹಿರಿಯ ಕಲಾವಿದ
Oct 21, 2024 08:41 AM IST
ಹಿರಿಯ ಯಕ್ಷಗಾನ ಕಲಾವಿದ ಜಯರಾಮ ಆಚಾರ್ಯ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
- ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರು ಸೋಮವಾರ ಬೆಂಗಳೂರಿನಲ್ಲಿ ನಿಧನರಾದರು.
- ವರದಿ: ಹರೀಶ ಮಾಂಬಾಡಿ. ಮಂಗಳೂರು
ಮಂಗಳೂರು: ಯಕ್ಷಗಾನದ ಹಾಸ್ಯರಾಜ ಎಂದೇ ಹೇಳಲಾಗುವ ಶುದ್ಧ ಹಾಸ್ಯ ನೀಡುವ ಮೂಲಕ ಪ್ರೇಕ್ಷಕರ ಮನರಂಜಿಸುತ್ತಿದ್ದ ಬಂಟ್ವಾಳ ಜಯರಾಮ ಆಚಾರ್ಯ ಬೆಂಗಳೂರಿನಲ್ಲಿ ಅ.21ರಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಆಗಮಿಸಿದ್ದ ಅವರು ಇಂದು ಮುಂಜಾನೆ ನಾಲ್ಕು ಗಂಟೆಗೆ ಹೃದಯಸ್ತಂಭನವಾಗಿ ಜೊತೆ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಫಲವಾಗದೆ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಬಂಟ್ವಾಳದಲ್ಲಿ 1957, ಅಕ್ಟೋಬರ್ 12ರಂದು ಬಂಟ್ವಾಳ ಗಣಪತಿ ಆಚಾರ್ಯ, ಭವಾನಿ ಅಮ್ಮ ಅವರ ಪುತ್ರರಾಗಿ ಜನಿಸಿದ ಜಯರಾಮ ಆಚಾರ್ಯರು, ಬಂಟ್ವಾಳ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಬೋರ್ಡ್ ಶಾಲೆ)ಯಲ್ಲಿ ವಿದ್ಯಾಭ್ಯಾಸ ನಡೆಸಿ, ತಂದೆಯವರ ಪ್ರೇರಣೆಯಿಂದ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿ ವೇಷವನ್ನೂ ಮಾಡಿದ್ದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ `ಲಲಿತ ಕಲಾ ಕೇಂದ್ರ’ಕ್ಕೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ಅದಾದ ಬಳಿಕ ಕಟೀಲು ಮೇಳದಲ್ಲಿ 4 ವರ್ಷ, ಪುತ್ತೂರು ಮೇಳ, ಕದ್ರಿ ಮೇಳ, ಕುಂಬಳೆ ಮೇಳದಲ್ಲಿ ತಿರುಗಾಟ ನಡೆಸಿದರು.ಮತ್ತೆ ಕಟೀಲು ಮೇಳ, ಎಡನೀರು ಮೇಳ, ಹೊಸನಗರ ಮೇಳ, ಬಳಿಕ ಹನುಮಗಿರಿ ಮೇಳ ಹೀಗೆ ಸುಮಾರು 50 ವರ್ಷಗಳ ಯಕ್ಷಗಾನ ತಿರುಗಾಟದಲ್ಲಿ ಹಾಸ್ಯಗಾರ ಪಾತ್ರವಲ್ಲದೆ, ಅಗತ್ಯ ಬಿದ್ದರೆ ಇತರ ಪಾತ್ರಗಳನ್ನೂ ಅವರು ನಿರ್ವಹಿಸಿದ್ದಾರೆ. ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಅವರು ಪಡೆದಿದ್ದರು.