logo
ಕನ್ನಡ ಸುದ್ದಿ  /  latest news  /  Mangaluru Airport: ಟೇಕಾಫ್‌ ಆಗುತ್ತಿದ್ದ ಇಂಡಿಗೊ ವಿಮಾನಕ್ಕೆ ಹಕ್ಕಿ ಡಿಕ್ಕಿ; ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಅನಾಹುತ

Mangaluru Airport: ಟೇಕಾಫ್‌ ಆಗುತ್ತಿದ್ದ ಇಂಡಿಗೊ ವಿಮಾನಕ್ಕೆ ಹಕ್ಕಿ ಡಿಕ್ಕಿ; ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಅನಾಹುತ

HT Kannada Desk HT Kannada

May 25, 2023 11:59 AM IST

google News

ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿ ಅನಾಹುತ ತಪ್ಪಿದೆ.

    • ಮಂಗಳೂರಿನಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನ ಸ್ವಲ್ಪದರಲ್ಲೇ ದೊಡ್ಡ ಅಪಾಯದಿಂದ ತಪ್ಪಿಸಿಕೊಂಡಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ ಹೊರಟಿದ್ದ ವಿಮಾನ ಟೇಕಾಫ್ ಗೆ ಸಿದ್ಧತೆ ನಡೆಸುತ್ತಿದ್ದಾಗಲೇ ರನ್ ವೇಯಲ್ಲಿ ವಿಮಾನದ ರೆಕ್ಕೆಗೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿ ಅನಾಹುತ ತಪ್ಪಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಗ್ಗೆ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿ ಅನಾಹುತ ತಪ್ಪಿದೆ.

ಮಂಗಳೂರು: ಮಂಗಳೂರಿನಿಂದ ದುಬೈಗೆ ಹೊರಟಿದ್ದ ಇಂಡಿಗೋ ವಿಮಾನ ಸ್ವಲ್ಪದರಲ್ಲೇ ದೊಡ್ಡ ಅಪಾಯದಿಂದ ತಪ್ಪಿಸಿಕೊಂಡಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುರುವಾರ ಬೆಳಗ್ಗೆ ಹೊರಟಿದ್ದ ವಿಮಾನ ಟೇಕಾಫ್ ಗೆ ಸಿದ್ಧತೆ ನಡೆಸುತ್ತಿದ್ದಾಗಲೇ ರನ್ ವೇಯಲ್ಲಿ ವಿಮಾನದ ರೆಕ್ಕೆಗೆ ಹಕ್ಕಿಯೊಂದು ಡಿಕ್ಕಿ ಹೊಡೆದಿದೆ.

ಟ್ಯಾಕ್ಸಿ ವೇ ದಾಟಿ ರನ್ ವೇನಲ್ಲಿ ಸಾಗುತ್ತಿದ್ದ ಸಂದರ್ಭ, ಏಕಾಏಕಿಯಾಗಿ ವಿಮಾನದ ರೆಕ್ಕೆಯ ಭಾಗಕ್ಕೆ ಹಕ್ಕಿ ಡಿಕ್ಕಿ ಹೊಡೆದಿದ್ದು, ತಕ್ಷಣ ಅಪಾಯದ ಸೂಚನೆ ಅರಿತು ಎಟಿಸಿಗೆ ಮಾಹಿತಿಯನ್ನು ವಿಮಾನದ ಪೈಲಟ್ ನೀಡಿದ್ದಾರೆ. ಕೂಡಲೇ ಟೇಕಾಫ್ ಕ್ಯಾನ್ಸಲ್ ಮಾಡಿ ರನ್ ವೇನಿಂದ ವಿಮಾನ ವಾಪಾಸ್ ಬಂತು. ಬಳಿಕ ಪ್ರಯಾಣಿಕರನ್ನು ಇಳಿಸಿ ವಿಮಾನದ ತಪಾಸಣೆ ನಡೆಸಲಾಯಿತು. ಆಮೇಲೆ ಬೆಂಗಳೂರಿನಿಂದ ಆಗಮಿಸಿದ ಮತ್ತೊಂದು ವಿಮಾನದ ಮೂಲಕ ಪ್ರಯಾಣಿಕರಿಗೆ ಸಾಗಲು ವ್ಯವಸ್ಥೆ ಮಾಡಲಾಯಿತು. ಈ ಘಟನೆ ಕೆಲಕಾಲ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಿಸಿತ್ತು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಕ್ಕಿ ಡಿಕ್ಕಿಯಿಂದ ಹಾರಾಟ ನಿಲ್ಲಿಸಿದ ಇಂಡಿಗೋ ವಿಮಾನದ ರೆಕ್ಕೆಗಳನ್ನು ಸಿಬ್ಬಂದಿ ಸರಿಪಡಿಸಿದರು.

ವಿಮಾನ ಟೇಕಾಫ್ ಗೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದ ಕಾರಣ ದೊಡ್ಡ ಸಮಸ್ಯೆ ಬಗೆಹರಿಯಿತು. ಇಲ್ಲದಿದ್ದರೆ, ತುರ್ತು ಭೂಸ್ಪರ್ಶ ಮಾಡಬೇಕಾದ ಅನಿವಾರ್ಯತೆಯೂ ಇತ್ತು. ವಿಮಾನದ ಇಂಜಿನ್ ಭಾಗದಲ್ಲಾಗಲೀ, ಅಥವಾ ಬೇರಾವುದೇ ಸೂಕ್ಷ್ಮ ಭಾಗದಲ್ಲಿ ಹಕ್ಕಿ ಬಡಿದಿದ್ದರೆ, ಸಮಸ್ಯೆಗಳು ಉದ್ಭವವಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ಟೇಕಾಫ್ ಸಿದ್ಧತೆ ನಡೆಸುತ್ತಿರುವ ವೇಳೆ ಹಕ್ಕಿ ಬಡಿದ ಕಾರಣ ಕೂಡಲೇ ವಿಮಾನ ಯಾನವನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ ನಡೆಯಿತು.

ಇತ್ತೀಚೆಗಷ್ಟೇ ದುರಂತದ 13ನೇ ವರ್ಷಾಚರಣೆ ನಡೆದಿತ್ತು:

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ ಮೇ 22ರಂದು ಘೋರ ದುರಂತವೊಂದರ ವರ್ಷಾಚರಣೆ ನಡೆದಿತ್ತು. ಅಂದು 2010ರ ಮೇ 22ರಂದು ಮಂಗಳೂರು ಬಜಪೆ ಸಮೀಪ ಕೆಂಜಾರು ಎಂಬಲ್ಲಿ ದುರ್ಘಟನೆ ನಡೆದಿತ್ತು. 158 ಮಂದಿ ಸುಟ್ಟು ಕರಕಲಾಗಿ ಬಾರದ ಲೋಕಕ್ಕೆ ಹೋಗಲು ಕಾರಣವಾದದ್ದು ಪೈಲಟ್ ಅಜಾಗರೂಕತೆ ಎಂಬುದು ಬಳಿಕ ತನಿಖೆಯಿಂದ ಸಾಬೀತಾಯಿತು. ದುರಂತದಲ್ಲಿ ಸುಟ್ಟು ಕರಕಲಾದ ದೇಹಗಳು, ಹೆಣಗಳ ರಾಶಿಯ ನಡುವೆ ನಮ್ಮವರು ಯಾರು ಎಂದು ಅಳುತ್ತಲೇ ಧಾವಿಸುತ್ತಿದ್ದ ಸಂಬಂಧಿಕರು, ಅವುಗಳನ್ನು ಎತ್ತಿ ಶವಾಗಾರಕ್ಕೆ ಕೊಂಡೊಯ್ಯಲು ಸಹಕರಿಸುತ್ತಿದ್ದ ಸಾರ್ವಜನಿಕರು, ಇಂಥ ಘಟನೆ ಮರುಕಳಿಸಲೇಬಾರದು ಎಂದು ಅಲ್ಲಿ ನಿಂತು ನೋಡಿದವರಿಗೆ ಅನಿಸುತ್ತಿತ್ತು. 135 ಮಂದಿ ವಯಸ್ಕರು, 19 ಮಕ್ಕಳು, 4 ಶಿಶುಗಳು, 6 ಮಂದಿ ವಿಮಾನ ಸಿಬ್ಬಂದಿ ಸೇರಿ 166 ಮಂದಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್, ಮಂಗಳೂರಿನಲ್ಲಿ ಮೇ 22, 2010ರಂದು ಸುರಕ್ಷಿತವಾಗಿ ಇಳಿಯಲು ತಯಾರಾಗಿತ್ತು. ಅಂದು ಬೆಳಗ್ಗೆ 6.15ಕ್ಕೆ ವಿಮಾನ ಅಪಘಾತಕ್ಕೀಡಾಯಿತು. ದುರಂತದಲ್ಲಿ ಪೈಲಟ್, ಸಿಬಂದಿ ಸೇರಿ 158 ಮಂದಿ ಸಾವನ್ನಪ್ಪಿದ್ದರು. ಮೃತಪಟ್ಟವರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯವರಲ್ಲದೆ, ಕೇರಳದವರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ದುಬೈನಿಂದ ರಾತ್ರಿ 1.20ಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಹೊರಟಿತ್ತು. ಬೆಳಗ್ಗೆ ಸುರಕ್ಷಿತವಾಗಿ ಮಂಗಳೂರು ತಲುಪಬೇಕಿತ್ತು. ಆದರೆ ಆದದ್ದೇ ಬೇರೆ. ಇದೀಗ ದುಬೈಗೆ ಹೋಗುವ ಖಾಸಗಿ ವಿಮಾನವೊಂದು ಅಪಘಾತದಿಂದ ಸ್ವಲ್ಪದರಲ್ಲೇ ಬಚಾವಾಗಿದೆ.

ಯಾವುದೇ ಭಯ ಬೇಡ: ವಿಮಾನ ನಿಲ್ದಾಣ ಸ್ಪಷ್ಟನೆ

ಘಟನೆಯಲ್ಲಿ ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲಾಗಿದ್ದು, ಈ ಕುರಿತು ಯಾವುದೇ ಭಯ ಬೇಡ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೇಳಿಕೆ ನೀಡಿದೆ. ದುಬೈಗೆ ತೆರಳುವ ಇಂಡಿಗೋ ವಿಮಾನವನ್ನು ಒಳಗೊಂಡಿರುವ ಹಕ್ಕಿ ಹಿಟ್ ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಅಧಿಕಾರಿಗಳು, ಘಟನೆಗೆ ಸಂಬಂಧಿಸಿದಂತೆ, 6E 1467 IXE-DXB (8.25am ನಿರ್ಗಮನ) ಟ್ಯಾಕ್ಸಿವೇಯಿಂದ ರನ್ವೇಗೆ ಪ್ರವೇಶಿಸಿದಾಗ ಹಕ್ಕಿ ಡಿಕ್ಕಿ ಹೊಡೆದಿದೆ. ಪೈಲಟ್ ಎಟಿಸಿಗೆ ಮಾಹಿತಿ ನೀಡಿ ಬೆಳಗ್ಗೆ 8.30ಕ್ಕೆ ಏಪ್ರನ್ಗೆ ಮರಳಿದರು. ಸಂಪೂರ್ಣ ಇಂಜಿನಿಯರಿಂಗ್ ತಪಾಸಣೆಗಾಗಿ ವಿಮಾನದಲ್ಲಿದ್ದ 160 ಪ್ರಯಾಣಿಕರನ್ನು ಕೆಳಗಿಳಿಸಲಾಯಿತು ಪ್ರಯಾಣಿಕರಿಗೆ ಬೆಂಗಳೂರಿನಿಂದ ಆಗಮಿಸಿದ ಮತ್ತೊಂದು ಇಂಡಿಗೋ ವಿಮಾನದಲ್ಲಿ ವಸತಿ ಕಲ್ಪಿಸಲಾಯಿತು. ಮರು ನಿಗದಿಯಾಗಿದ್ದ ದುಬೈ ವಿಮಾನ ಬೆಳಗ್ಗೆ 11.05ಕ್ಕೆ ಹೊರಟಿತು. ಇಂಡಿಗೋ ವಿಮಾನ 6E 5347 (ಬೆಳಿಗ್ಗೆ 9.10 ಗಂಟೆಗೆ ನಿಗದಿತ ನಿರ್ಗಮನ) ಬೆಂಗಳೂರಿಗೆ ಹಾರಲು ನಿಗದಿಯಾಗಿದ್ದ 165 ಪ್ರಯಾಣಿಕರಿಗೆ ಪರ್ಯಾಯ ಪ್ರಯಾಣದ ವ್ಯವಸ್ಥೆ ಮಾಡಿದೆ. ಕೆಲ ಮಾಧ್ಯಮಗಳಲ್ಲಿ ವರದಿ ಮಾಡಿದಂತೆ ಯಾವುದೇ ಭಯವಿಲ್ಲ ಎಂದು ವಿಮಾನ ನಿಲ್ದಾಣದಿಂದ ಸ್ಪಷ್ಟನೆ ನೀಡಿದೆ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ