logo
ಕನ್ನಡ ಸುದ್ದಿ  /  ಜೀವನಶೈಲಿ  /  Friday Motivation: ಬೆಟ್ಟವನ್ನು ಕೊರೆದು ಗ್ರಾಮಸ್ಥರಿಗೆ ದಾರಿ ಮಾಡಿಕೊಟ್ಟ ಛಲಗಾರ, ಬಿಹಾರದ ದಶರಥ್‌ ಮಾಂಜಿಯ ಕಥೆಯನ್ನೊಮ್ಮೆ ಓದಿ

Friday Motivation: ಬೆಟ್ಟವನ್ನು ಕೊರೆದು ಗ್ರಾಮಸ್ಥರಿಗೆ ದಾರಿ ಮಾಡಿಕೊಟ್ಟ ಛಲಗಾರ, ಬಿಹಾರದ ದಶರಥ್‌ ಮಾಂಜಿಯ ಕಥೆಯನ್ನೊಮ್ಮೆ ಓದಿ

Rakshitha Sowmya HT Kannada

Mar 01, 2024 09:58 AM IST

ಬೆಟ್ಟ ಕೊರೆಯುತ್ತಿರುವ ಬಿಹಾರದ ದಶರಥ ಮಾಂಜಿ

  • Friday Motivation: ಬಿಹಾರದ ಪುಟ್ಟ ಹಳ್ಳಿಯೊಂದರ ಸಾಮಾನ್ಯ ವ್ಯಕ್ತಿ ದಶರಥ ಮಾಂಜಿ, ತನ್ನ ಹಳ್ಳಿ ಜನರಿಗಾಗಿ ಬೆಟ್ಟವನ್ನು ಕೊರೆದು ದಾರಿ ಮಾಡಿಕೊಟ್ಟು ಎಲ್ಲರಿಗೂ ಮಾದರಿಯಾಗಿದ್ದಾರೆ. ಪ್ರಯತ್ನ ಪಡದೆ ಯಶಸ್ಸು ಯಾರಿಗೂ ದೊರೆಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡರೆ ಜೀವನದಲ್ಲಿ ಎಲ್ಲರಿಗೂ ಸುಲಭವಾಗಿ ಯಶಸ್ಸು ದೊರೆಯುತ್ತಿದೆ ಎನ್ನುವುದಕ್ಕೆ ಈ ವ್ಯಕ್ತಿಯೇ ಸಾಕ್ಷಿ. 

ಬೆಟ್ಟ ಕೊರೆಯುತ್ತಿರುವ ಬಿಹಾರದ ದಶರಥ ಮಾಂಜಿ
ಬೆಟ್ಟ ಕೊರೆಯುತ್ತಿರುವ ಬಿಹಾರದ ದಶರಥ ಮಾಂಜಿ (PC: @infotale_in)

ಜೀವನಕ್ಕೊಂದು ಸ್ಫೂರ್ತಿ ಮಾತು: ಜೀವನದಲ್ಲಿ ಎಲ್ಲರಿಗೂ ಸಮಸ್ಯೆ ಬರುತ್ತದೆ. ಸಮಸ್ಯೆ ಬಂತೆಂದು ಭಯದಿಂದ ಹಿಮ್ಮೆಟ್ಟದೆ, ಅದನ್ನು ಪರಿಹರಿಸುವ ಮಾರ್ಗ ಹುಡುಕಬೇಕು. ಸಮಸ್ಯೆ ದೊಡ್ಡದಾಗಿದ್ದರೆ, ಹೆಚ್ಚಿನ ಜನರು ಭಯ ಪಡುತ್ತಾರೆ. ಹಾಗೆಂದು, ಪ್ರಯತ್ನ ನಿಲ್ಲಿಸಿದರೆ ಯಶಸ್ಸು ಸಿಗುವುದಿಲ್ಲ. ನೀವು ಪ್ರಯತ್ನ ಪ್ರಾರಂಭಿಸಿದರೆ ಮಾತ್ರ ಯಶಸ್ಸಿಗೆ ಹತ್ತಿರವಾಗುತ್ತೀರಿ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ದಶರಥ್‌ ಮಾಂಜಿ, ಬಿಹಾರ ರಾಜ್ಯದ ಗೆಹ್ಲಾರ್ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದ ಸಾಮಾನ್ಯ ಮನುಷ್ಯ. ಅವರು ಚಿಕ್ಕ ವಯಸ್ಸಿನಲ್ಲೇ ಕಲ್ಲಿದ್ದಲು ಗಣಿಗೆ ಕೆಲಸಕ್ಕೆ ಸೇರಿದರು. ತಮ್ಮದೇ ಗ್ರಾಮದ ಫಲ್ಗುಣಿ ದೇವಿಯನ್ನು ವಿವಾಹವಾದರು. ಗೆಹ್ಲಾರ್ ಗ್ರಾಮವು ಬಿಹಾರದ ರಾಜಧಾನಿ ಪಾಟ್ನಾದಿಂದ 100 ಕಿಲೋಮೀಟರ್ ದೂರದಲ್ಲಿದೆ. ಈಗ ಪಾಟ್ನಾದ ಸುತ್ತಮುತ್ತಲಿನ ಪ್ರದೇಶಗಳು ಅಭಿವೃದ್ಧಿಗೊಂಡಿವೆಯಾದರೂ 50 ವರ್ಷಗಳ ಹಿಂದೆ ಅದೆಲ್ಲವೂ ಕಾಡಿನಂತಿತ್ತು. ಹಳ್ಳಿಯಿಂದ ಹೊರ ಜಗತ್ತಿಗೆ ತೆರಳಲು ದೊಡ್ಡ ಬೆಟ್ಟವೊಂದು ಅಡ್ಡಿಯಾಗಿತ್ತು.

ಬೆಟ್ಟ ಹತ್ತಿ ಊಟ ತರುತ್ತಿದ್ದ ಮಾಂಜಿ ಪತ್ನಿ ಫಲ್ಗುಣಿ

ಗ್ರಾಮಸ್ಥರಿಗೆ ಏನೇ ಬೇಕಾದರೂ ಬೆಟ್ಟದ ಸುತ್ತ 32 ಕಿಲೋಮೀಟರ್ ನಡೆದುಕೊಂಡು ಹೋಗಿ ಖರೀದಿಸುತ್ತಿದ್ದರು. ಮಾಂಜಿ 1960ರಲ್ಲಿ ಬೆಟ್ಟದ ಒಂದು ಬದಿಯಲ್ಲಿ ಕೆಲಸ ಮಾಡುತ್ತಿದ್ದರು. ಬೆಟ್ಟದ ಇನ್ನೊಂದು ಬದಿಯಲ್ಲಿ ಮಾಂಜಿಯ ಮನೆ ಇತ್ತು. ಅವರ ಹೆಂಡತಿ ಫಲ್ಗುಣಿ ದೇವಿಯು ತನ್ನ ಪತಿಗೆ ಪ್ರತಿದಿನ ಊಟ ತರುತ್ತಿದ್ದರು. ಆ ಬೆಟ್ಟ ಹತ್ತಿ ಇಳಿದು ಗಂಡನಿಗೆ ಊಟ ಬಡಿಸುತ್ತಿದ್ದರು. ಬೆಟ್ಟ ಹತ್ತಲು 3 ಕಿಲೋಮೀಟರ್ ಪ್ರಯಾಣ ಮಾಡಬೇಕಿತ್ತು. ಅದೇ ಬೆಟ್ಟದ ಸುತ್ತ ಬರಲು 32 ಕಿ.ಮೀ ಬೇಕಿತ್ತು. ಅಷ್ಟು ದೂರ ನಡೆಯಲು ಸಾಧ್ಯವಾಗದೆ ಬೆಟ್ಟ ಹತ್ತಿ ಫಲ್ಗುಣಿ, ಪ್ರತಿದಿನ ಊಟ ತರುತ್ತಿದ್ದರು.

ಒಂದು ದಿನ ಹೀಗೆ ಊಟ ತರುವಾಗ ಮಾಂಜಿ ಪತ್ನಿ ಫಲ್ಗುಣಿ ಬೆಟ್ಟದಿಂದ ಕೆಳಗೆ ಬಿದ್ದು ಗಾಯಗೊಂಡರು. ಆಗ ಮಾಂಜಿಗೆ ಆ ಗುಡ್ಡ ತೆಗೆದು ರಸ್ತೆ ನಿರ್ಮಾಣ ಮಾಡಬೇಕೆನಿಸಿತು. ಫಲ್ಗುಣಿ ದೇವಿ ಅನಾರೋಗ್ಯಕ್ಕೆ ಒಳಗಾದರು. ಈ ಬೆಟ್ಟದ ಕಾರಣ ಸಕಾಲದಲ್ಲಿ ವೈದ್ಯರ ಬಳಿ ಕರೆದುಕೊಂಡು ಹೋಗಲು ಸಾಧ್ಯವಾಗದೆ ಆಕೆ ಸಾವನ್ನಪ್ಪಿದರು.

ಹೆಂಡತಿ ನಿಧನದ ನಂತರ ಮಾಂಜಿಗೆ ತನ್ನ, ಗ್ರಾಮದವರ ಪರಿಸ್ಥಿತಿ ನೋಡಿ ಬಹಳ ಬೇಸರ ಎನಿಸಿತು. ಹೇಗಾದರೂ ಮಾಡಿ ಗುಡ್ಡವನ್ನು ಕಡಿದು ಊರಿಗೆ ದಾರಿ ಮಾಡಿಕೊಡಬೇಕೆಂದುಕೊಂಡ ಮಾಂಜಿ ಅಂದಿನಿಂದ ಬೆಟ್ಟವನ್ನು ಸುತ್ತಿಗೆ, ಉಳಿಯಿಂದ ಕೆತ್ತಲು ಆರಂಭಿಸಿದರು. ಒಂದು ದಿನ ಅಥವಾ ಎರಡು ದಿನವಲ್ಲ ಸುಮಾರು 22 ವರ್ಷಗಳ ಕಾಲ ಅವರು ಅದೇ ಕೆಲಸವನ್ನು ಮಾಡಿದರು. ಕೊನೆಗೂ ತಮ್ಮ ಊರಿನಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಬೆಟ್ಟದ ಮೂಲಕ ಒಂದು ಮಾರ್ಗ ಮಾಡಿದರು. ಮಾಂಜಿ ಮಾಡಿದ ಈ ಕಾರ್ಯದಿಂದಾಗಿ ಇಂದು ಹಳ್ಳಿಯವರು 32 ಕಿಮೀ ಬದಲಿಗೆ ಬೆಟ್ಟದ ದಾರಿ ಮೂಲಕ 3 ಕಿಮೀ ಕ್ರಮಿಸಿ ಹೊರ ಜಗತ್ತಿಗೆ ಬರುವಂತಾಗಿದೆ.

ದಿ ಮೌಂಟೆನ್‌ ಮ್ಯಾನ್‌ ಎಂದೇ ಹೆಸರಾದ ಧಶರಥ ಮಾಂಜಿ

ದಶರಥ್‌ ಮಾಂಜಿಯ ಈ ಕಾರಣಕ್ಕೆ ಆತನನ್ನು The Mountain Man ಎಂದು ಕರೆಯುತ್ತಾರೆ. ಅಂದು ಮಾಂಜಿ, ಒಂಟಿಯಾಗಿ ಬೆಟ್ಟಕ್ಕೆ ದಾರಿ ಮಾಡಲು ಒದ್ದಾಡುತ್ತಿದ್ದರೂ ಒಬ್ಬರೂ ಅವನ ಸಹಾಯಕ್ಕೆ ಬರಲಿಲ್ಲ. ಆದರೂ ಮಾಂಜಿ ಮಾತ್ರ ಛಲ ಬಿಡದೆ ತಮ್ಮ ಕೆಲಸ ಮುಂದುವರೆಸಿದರು. ತಮ್ಮ ಹಟ, ಒಳ್ಳೆ ಮನಸ್ಸಿನಿಂದಲೇ ಮಾಂಜಿ ಅನೇಕ ಜನರಿಗೆ ಸಕಾಲಿಕ ಶಿಕ್ಷಣ ಮತ್ತು ವೈದ್ಯಕೀಯ ಆರೈಕೆ ನೀಡಿದರು. ಎಷ್ಟೋ ಜನ ಓದಿ ಉನ್ನತ ಹುದ್ದೆ ಪಡೆದವರು ಇಂದಿಗೂ ಆ ಹಳ್ಳಿಯಲ್ಲಿ ಸಿಗುತ್ತಾರೆ. ಬೆಟ್ಟದಲ್ಲಿ ದಾರಿ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಆರಂಭದಲ್ಲಿ ಆತನನ್ನು ಎಲ್ಲರೂ ಹುಚ್ಚ ಎಂದು ಲೇವಡಿ ಮಾಡಿದ್ದರು. ಆದರೆ ಯಾರು ಏನೇ ಅಂದರೂ ಮಾಂಜಿ ತಲೆ ಕೆಡಿಸಿಕೊಳ್ಳದೆ ತನ್ನ ಕೆಲಸ ತಾನು ಮಾಡಿದ್ದು ಇಂದಿಗೂ ಎಲ್ಲರಿಗೂ ಉಪಯೋಗವಾಗುತ್ತಿದೆ.

ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ವ್ಯಕ್ತಿಯಾಗಿ ಮಾಂಜಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ. ಕಷ್ಟ ಎಂದು ಯಾವುದೇ ಕೆಲಸ ಮಾಡದೆ ಸುಮ್ಮನೆ ಕುಳಿತರೆ ಜೀವನದಲ್ಲಿ ಯಶಸ್ಸು ಸಿಗುವುದಿಲ್ಲ. ಮೊದಲು ನಿಮ್ಮ ಪ್ರಯತ್ನವನ್ನು ನೀವು ಮಾಡಲು ಆರಂಭಿಸಿ.

    ಹಂಚಿಕೊಳ್ಳಲು ಲೇಖನಗಳು