Kundalini Meditation: ಕುಂಡಲಿನಿ ಧ್ಯಾನ ಎಂದರೇನು; ದೇಹ, ಮನಸ್ಸು, ಆತ್ಮದ ಬೆಸುಗೆ ಸಾಧಿಸುವುದು ಹೇಗೆ?
May 09, 2024 06:35 AM IST
ಕುಂಡಲಿನಿ ಧ್ಯಾನ ಎಂದರೇನು; ದೇಹ, ಮನಸ್ಸು, ಆತ್ಮದ ಬೆಸುಗೆ ಸಾಧಿಸುವುದು ಹೇಗೆ?
- Meditation: ಮನುಷ್ಯನನ್ನು ಆಂತರಿಕವಾಗಿ ಜಾಗೃತಗೊಳಿಸಲು, ಶಕ್ತಿ ಮತ್ತು ಸಾಮರ್ಥ್ಯದ ಅರಿವನ್ನು ಮೂಡಿಸಲು ಧ್ಯಾನ ಹಾಗೂ ಯೋಗಗಳಂತಹ ಆಧ್ಯಾತ್ಮಿಕ ಅಭ್ಯಾಸಗಳು ಸಹಾಯ ಮಾಡುತ್ತವೆ. ಬಹಳ ಪುರಾತನವಾದ ಕುಂಡಲಿನಿ ಧ್ಯಾನವು ನಮ್ಮ ದೇಹ, ಮನಸ್ಸು ಮತ್ತು ಆತ್ಮಗಳನ್ನು ಬೆಸೆಯಲು ಮತ್ತು ಸುಪ್ತ ಶಕ್ತಿಯನ್ನು ಜಾಗೃತಗೊಳಿಸಲು ಹೇಗೆ ನೆರವಾಗುತ್ತದೆ ಎಂಬುದನ್ನು ತಿಳಿಯೋಣ.
Kundalini Meditation: ಆಧ್ಯಾತ್ಮದ ಪ್ರಕಾರ ದೇಹ, ಮನಸ್ಸು ಮತ್ತು ಆತ್ಮ ಇವೆಲ್ಲವುಗಳಿಗೆ ಒಂದಕ್ಕೊಂದು ಸಂಬಂಧವಿದೆ. ಅವುಗಳ ಶುದ್ಧಿ ಮತ್ತು ಧನಾತ್ಮಕ ಶಕ್ತಿ ಗಳಿಸಲು ಯೋಗ, ಧ್ಯಾನಗಳು ಸಹಾಯ ಮಾಡುತ್ತವೆ. ಕುಂಡಲಿನಿ ಧ್ಯಾನ ಎನ್ನುವುದು ಬಹಳ ಪುರಾತನ ಅಭ್ಯಾಸಗಳಲ್ಲಿ ಒಂದಾಗಿದೆ. ಇದು ಮನಸ್ಸನ್ನು ಶಾಂತಗೊಳಿಸುವ ಅಥವಾ ಕೇಂದ್ರೀಕರಿಸುವ ವಿಧಾನವಾಗಿದೆ. ಈ ಕ್ರಿಯಾತ್ಮಕ ಪ್ರಕ್ರಿಯೆಯು ಬೆನ್ನುಮೂಳೆಯ ಕೆಳಭಾಗದಲ್ಲಿರುವ ಸುಪ್ತ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಈ ಶಕ್ತಿಯು ಸಾಮಾನ್ಯವಾಗಿ ಮಲಗಿರುವ ಸರ್ಪದಂತೆ ಕಾಣಿಸುತ್ತದೆ. ಆ ಸುಪ್ತ ಶಕ್ತಿಯನ್ನು ಏಳು ಚಕ್ರಗಳ ಮೂಲಕ ಜಾಗೃತಗೊಳಿಸಿ ಆಧ್ಯಾತ್ಮದ ಸಾಕ್ಷಾತ್ಕಾರಗೊಳಿಸುವುದೇ ಈ ಧ್ಯಾನ. ಪ್ರತಿಯೊಬ್ಬ ವ್ಯಕ್ತಿಯೊಳಗೆ ಸುಪ್ತ ಶಕ್ತಿ ಅಡಗಿದೆ ಎಂದು ಕುಂಡಲಿನಿ ಚಕ್ರ ಧ್ಯಾನವು ಹೇಳುತ್ತದೆ. ಇದನ್ನು ಉಸಿರಾಟ, ಮುದ್ರೆ, ಮಂತ್ರ ಮತ್ತು ದೈಹಿಕ ವ್ಯಾಯಾಮಗಳ ಮೂಲಕ ಆ ಶಕ್ತಿಯ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದು ದೇಹ, ಮನಸ್ಸು ಮತ್ತು ಆತ್ಮಗಳನ್ನು ಬೆಸೆಯುತ್ತದೆ.
ಕುಂಡಲಿನಿ ಧ್ಯಾನವು ಎಲ್ಲಾ ಧ್ಯಾನಗಳನ್ನು ಮೀರಿಸುವ ಧ್ಯಾನ ಎಂದು ಹೇಳಲಾಗುತ್ತದೆ. ಕಾರಣ ಇದು ಜಾಗೃತ ಧ್ಯಾನದ ಅಭ್ಯಾಸ ಕ್ರಮವಾಗಿದೆ. ಆಳವಾದ ಉಸಿರಾಟದ ಜೊತೆಗೆ ಮನಸ್ಸನ್ನು ಕೇಂದ್ರೀಕರಿಸುವುದರಿಂದ ಇದು ದೈಹಿಕ, ಮಾನಸಿಕ ಆರೋಗ್ಯ ಕಾಪಾಡುತ್ತದೆ.
ಕುಂಡಲಿನಿ ಧ್ಯಾನದ ಇತಿಹಾಸ
ಇದು ನಮ್ಮೊಳಗಿನ ಶಕ್ತಿಯನ್ನು ಜಾಗೃತಗೊಳಿಸುವ ಧ್ಯಾನ ಚಕ್ರ. ಇದನ್ನು ಬೆನ್ನುಮೂಳೆಯ ಕೆಳಭಾಗದಲ್ಲಿ ಮಲಗಿರುವ ಸರ್ಪ ಎಂದು ಊಹಿಸಲಾಗುತ್ತದೆ. ಇದು ಬೆನ್ನುಮೂಳೆಯನ್ನು ಬಲಪಡಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ. ಕುಂಡಲಿನಿ ಧ್ಯಾನದ ಮೂಲ ಗುರಿಯೇ ಇದಾಗಿದೆ. ಬೆನ್ನುಮೂಳೆಯ ನೋವು ನಿವಾರಿಸಲು, ಅದರ ಸುತ್ತಲಿನ ಸ್ನಾಯುಗಳನ್ನು ಬಲಪಡಿಸಲು, ಬೆನ್ನುಮೂಳೆ ಸುಲಭವಾಗಿ ಕಾರ್ಯನಿರ್ವಹಿಸಲು, ಸಾಮಾನ್ಯ ಭಂಗಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಯಾವಾಗಲೂ ಕುಳಿತು ಕೆಲಸ ಮಾಡುವ ಜಡ ಜೀವನಶೈಲಿಯ ಜನರಿಗೆ ಅದರಿಂದ ಹೊರಬರಲು ಸಹಾಯಮಾಡುತ್ತದೆ. ಇದು ದೇಹಕ್ಕೆ ಶಕ್ತಿ ತುಂಬಲು ಮತ್ತು ಆಧ್ಯಾತ್ಮದ ಬೆಳವಣಿಗೆಗೆ ಉತ್ತಮವಾಗಿದೆ.
ಆರೋಗ್ಯ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಕುಂಡಲಿನಿ ಧ್ಯಾನವು ಸುಮಾರು ಕ್ರಿಪೂ 1000 ದಿಂದ 500 ವರ್ಷಗಳ ಅವಧಿಯಲ್ಲಿ ಪ್ರಾರಂಭವಾಯಿತು. ಕ್ರಿಪೂ 800ರಿಂದ 500 ವರ್ಷಗಳ ನಡುವೆ ಬರೆಯಲಾದ ಉಪನಿಷತ್ತುಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಆರಂಭದಲ್ಲಿ ಕುಂಡಲಿನ ಧ್ಯಾನವನ್ನು ರಹಸ್ಯವಾಗಿ ರಕ್ಷಿಸಲಾಗಿತ್ತು. ಇದನ್ನು ಕೆಲವೇ ಕೆಲವು ನಿಷ್ಟಾವಂತ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿತು. ಇದನ್ನು ನಿಗೂಢವಾಗಿ ಅಭ್ಯಾಸ ಮಾಡಲಾಗುತ್ತಿತ್ತು. ಕಾಲಕ್ರಮೇಣ ಇದು ದೈಹಿಕ ಚಟುವಟಿಕೆಯಾಗಿ ವಿಕಾಸಗೊಂಡಿತು. ಈಗ ಅದನ್ನು ಕುಂಡಲಿನ ಧ್ಯಾನ ಯೋಗ ಎಂದು ಕರೆಯಲಾಗುತ್ತದೆ.
1960ರ ದಶಕದಲ್ಲಿ ಯೋಗಿ ಭಜನ್‌ರವರು ಪಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಶೇಷವಾಗಿ ಯುನೈಟೆಡ್ ಸ್ಟೇಟ್‌ನಲ್ಲಿ ಪರಿಚಯಿಸಿದರು. ನಂತರ ಅದು ಹೆಚ್ಚು ಜನಪ್ರಿಯವಾಯಿತು. ಒತ್ತಡ ನಿವಾರಿಸಲು ಮತ್ತು ಮಾನಸಿಕ ನೆಮ್ಮದಿ ಹೆಚ್ಚಿಸಿಕೊಳ್ಳಲು ಇಂದಿನ ದಿನಗಳಲ್ಲಿ ಹೆಚ್ಚು ಉಪಯುಕ್ತವಾಗಿದೆ.
ಕುಂಡಲಿನಿ ಧ್ಯಾನ ಮಾಡುವುದು ಹೇಗೆ?
- ಧ್ಯಾನ ಮಾಡುವ ಮೊದಲು ಗಾಢ ಬಣ್ಣವಲ್ಲದ ಮತ್ತು ಸಡಿಲವಾದ ಬಟ್ಟೆ ಧರಿಸಿ.
- ಶಕ್ತಿಯ ಸಂಚಲನಕ್ಕಾಗಿ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಿ.
- ಬೆನ್ನನ್ನು ನೇರವಾಗಿಸಿ ನೆಲದ ಮೇಲೆ ಕುಳಿತುಕೊಳ್ಳಿ ಇಲ್ಲವೆ ಕುರ್ಚಿಯ ಮೇಲೆ ಕುಳಿತುಕೊಳ್ಳಿ. ಎದೆಯ ಮಟ್ಟದಲ್ಲಿ ಅಂಗೈ ಜೋಡಿಸಿ, ಪ್ರಾರ್ಥನಾ ಭಂಗಿಯಲ್ಲಿ ಕುಳಿತುಕೊಳ್ಳಿ. ಕಣ್ಣುಗಳನ್ನು ಹಗುರವಾಗಿ ಮುಚ್ಚಿ.
- ಎರಡು ಕಣ್ಣುಗಳ ಮಧ್ಯದ ಭಾಗವಾದ ಹುಬ್ಬುಗಳ ನಡುವಿನ ಜಾಗವನ್ನು ಕೇಂದ್ರೀಕರಿಸಿ.
- ಗುರುಮುಖಿ ಮಂತ್ರ ಅಥವಾ ನೀವು ಯಾವಾಗಲೂ ಹೇಳುವ ಮಂತ್ರವನ್ನು ಉಚ್ಛರಿಸಿ. ಇದು ನಿಮ್ಮ ಗಮನ ಕೇಂದ್ರೀಕರಿಸಲು ಮುಖ್ಯವಾಗಿದೆ.
- ಮೂಗಿನ ಮುಖಾಂತರ ನಿಧಾನವಾಗಿ ಉಸಿರಾಡಿ. 8 ಸೆಕೆಂಡುಗಳವರೆಗಿನ ಒಂದು ಉಸಿರಾಟ ಚಕ್ರವನ್ನು ಮಾಡಿ. ಅದು ನಿಮ್ಮ ದೇಹವನ್ನು ಶಕ್ತಿಯುತಗೊಳಿಸುತ್ತದೆ ಎಂಬುದರ ಮೇಲೆ ಗಮನವಹಿಸಿ.
- ಜ್ಞಾನ ಮುದ್ರೆ ಅಥವಾ ಶುನಿ ಮುದ್ರೆ ಸ್ಥಿತಿಯಲ್ಲಿ ಈ ಧ್ಯಾನ ಮಾಡಿ.
- ಪ್ರತಿ ಉಚ್ವಾಸ ಮತ್ತು ನಿಶ್ವಾಸಗಳನ್ನು ನಾಲ್ಕು ಸಮ ಭಾಗಗಳಲ್ಲಿ ವಿಂಗಡಿಸಿ. ಬೆನ್ನಿನ ಕಡೆಗೆ ಕುತ್ತಿಗೆ ಬಾಗುವಂತೆ (ಹಿಂಬದಿಗೆ) ಮಾಡಿ.
- ನಿಮ್ಮ ಉಸಿರಾಟದ ಮೇಲೆ ನಿಮ್ಮ ಗಮನವನ್ನು ಕೇಂದ್ರಿಕರಿಸಿ.
- ಮೊದಲು ಮೂರರಿಂದ ಐದು ನಿಮಿಷ ಅಭ್ಯಾಸ ಮಾಡಿ, ಕ್ರಮೇಣ ಧ್ಯಾನಾಭ್ಯಾಸವನ್ನು ಹೆಚ್ಚಿಸಿಕೊಳ್ಳಿ.
ಕುಂಡಲಿನಿ ಧ್ಯಾನದಿಂದ ಸಿಗುವ ಲಾಭಗಳು
ಕುಂಡಲಿನಿ ಧ್ಯಾನ ಯೋಗವು ಸಾಂಪ್ರದಾಯಿಕ ಧ್ಯಾನವಾದ್ದರಿಂದ ಅನೇಕ ಪ್ರಯೋಜನಗಳಿವೆ. ದೈಹಿಕ, ಮಾನಸಿಕ ಮತ್ತುಆಧ್ಯಾತ್ಮಿಕ ಬೆಳವಣಿಗೆಗೆ ಇದು ಉಪಯುಕ್ತವಾಗಿದೆ. ಕುಂಡಲಿನಿ ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಈ ಕೆಳಗಿನ ಲಾಭಗಳನ್ನು ಪಡೆದುಕೊಳ್ಳಬಹುದು
- ದೇಹವನ್ನು ಬಲಗೊಳಿಸುತ್ತದೆ.
- ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
- ಮಾನಸಿಕ ದೃಢತೆ ಹೆಚ್ಚುತ್ತದೆ.
- ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಿಸುತ್ತದೆ.
- ಖಿನ್ನತೆ ಹೋಗಲಾಡಿಸುತ್ತದೆ.
- ಆಧ್ಯಾತ್ಮದ ಕಡೆಗೆ ಹೆಚ್ಚು ಒಲವು ಮೂಡುತ್ತದೆ.