logo
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ಈ ವೇಗದಲ್ಲಿ ನೀವು ವಾಕಿಂಗ್​ ಮಾಡಿದರೆ ಮಧುಮೇಹ ನಿಮ್ಮ ಹತ್ತಿರವೂ ಸುಳಿಯದು

Health Tips: ಈ ವೇಗದಲ್ಲಿ ನೀವು ವಾಕಿಂಗ್​ ಮಾಡಿದರೆ ಮಧುಮೇಹ ನಿಮ್ಮ ಹತ್ತಿರವೂ ಸುಳಿಯದು

HT Kannada Desk HT Kannada

Dec 02, 2023 11:53 AM IST

google News

ಮಧುಮೇಹದಿಂದ ದೂರವಿರಲು ಮಾಡಿ ವಾಕಿಂಗ್‌ (PC: Unsplash)

    • Diabetes: ಮಧುಮೇಹ ಈಗಿನ ಆಧುನಿಕ ಜೀವನದಲ್ಲಿ ಸಾಮಾನ್ಯ ಕಾಯಿಲೆಯಾಗಿಬಿಟ್ಟಿದೆ. ಮಧುಮೇಹವು ಬೇರೆ ಅನೇಕ ರೋಗಗಳಿಗೆ ಆಹ್ವಾನ ನೀಡುವ ಕಾಯಿಲೆಯಾಗಿರೋದ್ರಿಂದ ಸಾಕಷ್ಟು ಜಾಗ್ರತೆ ಮುಖ್ಯ. ಇದೀಗ ಹೊರ ಬಂದಿರುವ ಹೊಸ ಅಧ್ಯಯನದ ಪ್ರಕಾರ ಟೈಪ್​ 2 ಮಧುಮೇಹವನ್ನು ವಾಕಿಂಗ್​ ಮೂಲಕವೇ ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿದುಬಂದಿದೆ.
ಮಧುಮೇಹದಿಂದ ದೂರವಿರಲು ಮಾಡಿ ವಾಕಿಂಗ್‌ (PC: Unsplash)
ಮಧುಮೇಹದಿಂದ ದೂರವಿರಲು ಮಾಡಿ ವಾಕಿಂಗ್‌ (PC: Unsplash)

ವಾಕಿಂಗ್​ ಮಾಡುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎನ್ನುವುದು ಈಗಾಗಲೇ ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ಅದರಲ್ಲೂ ಚುರುಕಾಗಿ ನಡೆಯುವುದು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ ವೇಗವಾಗಿ ವಾಕಿಂಗ್​ ಮಾಡುವುದರಿಂದ ಟೈಪ್​ 2 ಮಧುಮೇಹದ ಅಪಾಯದ ಪಾರಾಗಬಹುದು ಎಂಬ ಮಾಹಿತಿ ಹೊರಬಿದ್ದಿದೆ. ವೇಗವಾದ ನಡಿಗೆಯು ನಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಈ ಅಧ್ಯಯನವು ಹೇಳಿದೆ.

ಟೈಪ್​ 2 ಮಧುಮೇಹವು ವಿಶ್ವದ ಅತೀದೊಡ್ಡ ಮಾರಕ ಕಾಯಿಲೆಗಳಲ್ಲಿ ಒಂದಾಗಿದೆ. ಅದರಲ್ಲೂ ಭಾರತದಲ್ಲಿ ಅತೀ ಹೆಚ್ಚು ಟೈಪ್​ 2 ಮಧುಮೇಹದಿಂದ ಬಳಲುತ್ತಿರುವವರು ಇದ್ದಾರೆ. ಇಂಡಿಯಾನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ ಪ್ರಕಾರ ಭಾರತದಲ್ಲಿ 100 ಮಿಲಿಯನ್​ಗೂ ಅಧಿಕ ಜನರು ತಮ್ಮ ತಪ್ಪಾದ ಜೀವನಶೈಲಿಯಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಹಾಗೂ ಇತರೆ 136 ಮಿಲಿಯನ್​ ಜನರು ಪ್ರಿಡಯಾಬಿಟಿಕ್​ ಆಗಿದ್ದಾರೆ ಎಂದು ತಿಳಿದು ಬಂದಿದೆ.

ಟೈಪ್​ 2 ಡಯಾಬಿಟೀಸ್​ನಿಂದ ಬಳಲುತ್ತಿರುವ ವ್ಯಕ್ತಿಯ ದೇಹದಲ್ಲಿ ಹೆಚ್ಚಿನ ಇನ್ಸುಲಿನ್​ ಉತ್ಪಾದನೆ ಆಗುವುದಿಲ್ಲ. ಅಥವಾ ಉತ್ಪತ್ತಿಯಾದ ಇನ್ಸುಲಿನ್​ಗಳನ್ನು ದೇಹವು ಶಕ್ತಿಗಾಗಿ ಬಳಕೆ ಮಾಡಿಕೊಳ್ಳುವುದಿಲ್ಲ. ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹೆಚ್ಚು ಬಾಯಾರಿಕೆಯಾಗುತ್ತಿರುತ್ತದೆ, ಪದೇ ಪದೇ ಮೂತ್ರ ವಿಸರ್ಜನೆ, ಹಸಿವು, ಆಯಾಸ ಹಾಗೂ ದೃಷ್ಟಿ ಮಂದವಾಗುತ್ತದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಈ ಯಾವುದೇ ರೋಗಲಕ್ಷಣಗಳು ಇಲ್ಲದೇ ಇದ್ದರೂ ಸಹ ಅವರು ಟೈಪ್​ 2 ಮಧುಮೇಹವನ್ನು ಹೊಂದಿರುತ್ತಾರೆ.

ಇದನ್ನೂ ಓದಿ: Winter Health Tips: ಚಳಿಗಾಲದಲ್ಲಿ ಬಡವರ ಬಾದಾಮಿ ಕಡಲೇಕಾಯಿ ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ

ಅಧ್ಯಯನ ಹೇಳುವುದಾದರೂ ಏನು?

ವಾಕಿಂಗ್​, ಟೈಪ್​ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಇದೀಗ ಹೊರ ಬಂದಿರುವ ಹೊಸ ಅಧ್ಯಯನದ ಫಲಿತಾಂಶದ ಪ್ರಕಾರ ವೇಗವಾಗಿ ವಾಕಿಂಗ್​ ಮಾಡಿದವರು ಮಾತ್ರ ಟೈಪ್​ 2 ಮಧುಮೇಹ ಸಮಸ್ಯೆಯಿಂದ ಆರೋಗ್ಯ ಸುಧಾರಣೆಗಳನ್ನು ಕಾಣುತ್ತಾರೆ ಎಂದು ತಿಳಿದು ಬಂದಿದೆ. ಬ್ರಿಟೀಷ್​ ಜರ್ನಲ್​ ಆಫ್​ ಸ್ಪೋರ್ಟ್ಸ್​​ ಮೆಡಿಸಿನ್​​ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ವೇಗವಾಗಿ ನಡೆಯುವುದರಿಂದ ಮಧುಮೇಹದ ಅಪಾಯವನ್ನು 40 ಪ್ರತಿಶತದಷ್ಟು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಸಂಶೋಧಕರು 1999 ಹಾಗೂ 2022ರ ಅವಧಿಯಲ್ಲಿ 10 ಬಾರಿ ಅಧ್ಯಯನ ನಡೆಸಿದ್ದಾರೆ. ಅಮೆರಿಕ, ಬ್ರಿಟನ್​ ಹಾಗೂ ಜಪಾನ್​​ನಲ್ಲಿ ವೇಗವಾಗಿ ವಾಕಿಂಗ್​ ಮಾಡುವವರಲ್ಲಿ ಟೈಪ್​ 2 ಮಧುಮೇಹದಲ್ಲಿ ಕಂಡು ಬಂದ ಸುಧಾರಣೆಗಳನ್ನು ಸಂಶೋಧಕರು ಗಮನಿಸಿದ್ದಾರೆ ಎನ್ನಲಾಗಿದೆ. ಒಂದು ಗಂಟೆ ಅವಧಿಯಲ್ಲಿ ನೀವು 3.2 ಕಿಲೋಮೀಟರ್​ಗಿಂತಲೂ ಕಡಿಮೆ ದೂರ ಕ್ರಮಿಸಿದರೆ ಅದು ನಿಧಾನದ ನಡಿಗೆ ಎಂದು ಹೇಳಬಹುದಾಗಿದೆ. ಗಂಟೆಗೆ ನೀವು 4.8 ಕಿಲೋಮೀಟರ್​ನಿಂದ 6.4 ಕಿಲೋಮೀಟರ್​ಗಳವರೆಗೆ ಕ್ರಮಿಸಿದರೆ ಅದನ್ನು ಚುರುಕಾದ ನಡಿಗೆ ಎಂದು ವರ್ಗೀಕರಿಸಬಹುದಾಗಿದೆ. 6.4 ಕಿಲೋ ಮೀಟರ್​ಗೂ ಅಧಿಕ ವೇಗದಲ್ಲಿ ನಡೆಯುವುದು ಮಿತಿ ಮೀರಿದ ವೇಗದ ನಡಿಗೆಯಾಗಿದ್ದು ಇಂಥವರಲ್ಲಿ ಮಧುಮೇಹದ ಅಪಾಯ ಉಳಿದವರಿಗೆ ಹೋಲಿಸಿದರೆ 9 ಪ್ರತಿಶತ ಕಡಿಮೆ ಇರುತ್ತದೆ ಎಂದು ಈ ಅಧ್ಯಯನವು ತಿಳಿಸಿದೆ. ಗಂಟೆಗೆ ಆರು ಕಿಲೋಮೀಟರ್​​ ಅಥವಾ ಅದಕ್ಕೂ ಹೆಚ್ಚಿನ ವೇಗದಲ್ಲಿ ನಡೆಯುವವರು 40 ಪ್ರತಿಶತ ಮಧುಮೇಹದ ಅಪಾಯದಿಂದ ಪಾರಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ