ಬೇಸಿಗೆ ರಜೆ ಅಂತ ಮಕ್ಕಳನ್ನು ಹೊರಗಡೆ ಆಟವಾಡಲು ಕಳುಹಿಸುವ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಮರೆಯದೇ ಪಾಲಿಸಿ, ಪೋಷಕರಿಗೆ ಸಲಹೆ
May 04, 2024 01:24 PM IST
ಬೇಸಿಗೆ ರಜೆ ಅಂತ ಮಕ್ಕಳನ್ನು ಹೊರಗಡೆ ಆಟವಾಡಲು ಕಳುಹಿಸುವ ಮುನ್ನ ಈ ಮುನ್ನೆಚ್ಚರಿಕೆಗಳನ್ನು ಮರೆಯದೇ ಪಾಲಿಸಿ
- ಬೇಸಿಗೆರಜೆ ಬಂತೆಂದರೆ ಮಕ್ಕಳು ಕೊಂಚ ಉಸಿರಾಡುತ್ತಾರೆ. ಎರಡು ತಿಂಗಳ ದೀರ್ಘರಜೆ ಇದಾಗಿರುವ ಕಾರಣ ಮಕ್ಕಳು ಸಾಕಷ್ಟು ಎಂಜಾಯ್ ಮಾಡಲು ಬಯಸುತ್ತಾರೆ. ಈ ಸಮಯದಲ್ಲಿ ಸ್ನೇಹಿತರೊಂದಿಗೆ ಹೊರಗಡೆ ಆಟವಾಡಲು ಹೋಗುವುದು ಸಹಜ. ಆದರೆ ಬಿಸಿಗಾಳಿ, ಏರುತ್ತಿರುವ ತಾಪಾಮಾನದ ನಡುವೆ ಮಕ್ಕಳನ್ನು ಹೊರಗಡೆ ಕಳುಹಿಸುವ ಮುನ್ನ ಪೋಷಕರು ಈ ಮುನ್ನೆಚ್ಚರಿಕೆಗಳನ್ನು ಪಾಲಿಸಲೇಬೇಕು.
ಬೇಸಿಗೆ ರಜೆ ಆರಂಭವಾಗಿ ಒಂದಿಷ್ಟು ದಿನಗಳು ಕಳೆದಿವೆ. ಬೇಸಿಗೆ ರಜೆ ಎಂದರೆ ಮಕ್ಕಳಿಗೆ ಅದೇನೋ ವಿಶೇಷ ಒಲವು. ವರ್ಷಪೂರ್ತಿ ಓದು, ಹೋವರ್ಕ್, ಪಠ್ಯೇತರ ಚಟುವಟಿಕೆ ಎಂದು ಬ್ಯುಸಿ ಆಗಿರುವ ಮಕ್ಕಳು ಬೇಸಿಗೆ ರಜೆಯಲ್ಲಿ ಕೊಂಚ ಬಿಡುವು ಪಡೆದುಕೊಳ್ಳುತ್ತಾರೆ. ಪೋಷಕರು ಕೂಡ ಬೇಸಿಗೆ ರಜೆಯಲ್ಲಿ ಮಕ್ಕಳ ಮೇಲೆ ಅಷ್ಟೊಂದು ಒತ್ತಡ ಹೇರುವುದಿಲ್ಲ. ಹೀಗಾಗಿ ಮಕ್ಕಳ ಗೆಳೆಯರ ಬಳಗ ಕಟ್ಟಿಕೊಂಡು ಆಟವಾಡಲು ಹೋಗುವುದು ಸಹಜ.
ಆದರೆ ಈ ವರ್ಷ ಬಿಸಿಲಿನ ತಾಪ ಹಿಂದೆಂಗಿಂತಲೂ ಜೋರಾಗಿದೆ. ಇದರಿಂದ ಭೂಮಿಯು ಕಾವಲಿಯಂತೆ ಸುಡುತ್ತಿದೆ. ಇದರೊಂದಿಗೆ ಬಿಸಿಗಾಳಿಯೂ ಸೇರಿಕೊಂಡಿದೆ. ಹಾಗಾಗಿ ಸಾಕಷ್ಟು ಎಚ್ಚರ ವಹಿಸಬೇಕಾಗಿದೆ. ಇದರ ನಡುವೆ ಅಲ್ಲಲ್ಲಿ ಗುಡುಗು, ಸಿಡಿಲು ಕೂಡ ಜೊತೆಯಾಗಿ ಭಯ ಹುಟ್ಟಿಸುತ್ತಿದೆ. ಬೇಸಿಗೆಯ ರಜೆಯಲ್ಲಿ ಮಕ್ಕಳು ಹೊರಗಡೆ ಆಟವಾಡಲು ಹೋಗುವುದು ಸಾಮಾನ್ಯ. ಆದರೆ ಈ ವರ್ಷ ಮಕ್ಕಳನ್ನು ಆಟವಾಡಲು ಕಳುಹಿಸುವ ಮುನ್ನ ಪೋಷಕರು ಈ ವಿಚಾರಗಳನ್ನು ಗಮನಿಸಲೇಬೇಕು.
ಸಂಜೆ ಹೊತ್ತು ಮಾತ್ರ ಹೊರಗಡೆ ಕಳುಹಿಸಿ
ಅಲ್ಲಲ್ಲಿ ಮಳೆಯಾದರೂ ಕೂಡ ತಾಪಮಾನ ಏರಿಕೆ ಕಡಿಮೆಯಾಗಿಲ್ಲ. ಬೆಳಿಗ್ಗೆ 8 ಗಂಟೆಯಿಂದಲೇ ಬಿಸಿ ಝಳ ಜೋರಾಗುತ್ತದೆ. ಮಕ್ಕಳು ತುಂಬಾ ಸೂಕ್ಷ್ಮವಾಗಿರುವ ಕಾರಣ ಅವರಿಗೆ ಬಿಸಿಲು ತಡೆಯಲು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕೆ ತಪ್ಪಿಯೂ ಮಕ್ಕಳನ್ನು ಬೆಳಗಿನ ಹೊತ್ತು ಆಟವಾಡಲು ಹೊರಗಡೆ ಕಳುಹಿಸಬೇಡಿ. ಬಿಸಿಲಿನಲ್ಲಿ ಆಟವಾಡುವುದರಿಂದ ಇಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಚ್ಚರ.
ಮಕ್ಕಳಿಗೆ ಹತ್ತಿ ಬಟ್ಟೆ ಹಾಕಿಸಿ
ಮಕ್ಕಳು ಆಟವಾಡಲು ಹೋಗುವಾಗ ತೆಳ್ಳನೆಯ ಹತ್ತಿ ಬಟ್ಟೆ ಹಾಕಿಸಿ. ಬಿಗಿಯಾಗಿರುವ ಬಟ್ಟೆಯನ್ನು ಯಾವುದೇ ಕಾರಣಕ್ಕೂ ಹಾಕಬೇಡಿ. ಇದರಿಂದ ಆಟವಾಡುವಾಗ ಉಸಿರುಗಟ್ಟಿದಂತಾಗಬಹುದು. ಜೊತೆಗೆ ಚರ್ಮದ ಸಮಸ್ಯೆಗಳು ಎದುರಾಗಬಹುದು.
ನೀರು ಕೊಟ್ಟು ಕಳುಹಿಸಿ
ಮಕ್ಕಳು ಮನೆಯ ಸುತ್ತಮುತ್ತ ಅಥವಾ ಮನೆಯಿಂದ ದೂರದಲ್ಲಿ ಆಟವಾಡಲು ಹೋಗುವುದಿದ್ದರೆ ಅವರಿಗೆ ಬಾಟಲಿಯಲ್ಲಿ ನೀರು ತುಂಬಿಸಿ ಕಳುಹಿಸಿ. ಮಾತ್ರವಲ್ಲ ಆಗಾಗ ನೀರು ಕುಡಿಯಬೇಕು ಎಂಬುದನ್ನು ಒತ್ತಿ ಹೇಳಿ.
ಸನ್‌ಸ್ಕ್ರೀನ್ ಕ್ರೀಮ್ ಹಚ್ಚುವುದು ಮರೆಯಬೇಡಿ
ಸನ್‌ಸ್ಕ್ರೀನ್ ಕ್ರೀಮ್ ಕೇವಲ ಮಹಿಳೆಯರು, ದೊಡ್ಡವರಿಗೆ ಮಾತ್ರವಲ್ಲ, ಮಕ್ಕಳಿಗೂ ಅವಶ್ಯ. ಬೇಸಿಗೆಯಲ್ಲಿ ಹೊರಗಡೆ ಆಟವಾಡುವ ಮಕ್ಕಳಿಗೆ ತಪ್ಪದೇ ಸನ್‌ಸ್ಕ್ರೀನ್ ಕ್ರೀಮ್ ಹಚ್ಚಿ ಕಳುಹಿಸಿ. ಮಕ್ಕಳಿಗೆ ಬಳಸುವ ಸನ್‌ಸ್ಕ್ರೀನ್ ಕ್ರೀಮ್ ಬಗ್ಗೆ ತಜ್ಞರಿಂದ ಸಲಹೆ ಪಡೆದುಕೊಳ್ಳುವುದು ಉತ್ತಮ.
ಹಣ್ಣು, ತರಕಾರಿಗಳನ್ನು ಡಬ್ಬಿಯಲ್ಲಿ ತುಂಬಿಸಿಕೊಡಿ
ಮಕ್ಕಳು ಹೊರಗಡೆ ಆಟವಾಡಲು ಹೋಗುವಾಗ ಬೇಡದ ತಿನಿಸುಗಳನ್ನು ನೀಡುವ ಬದಲು ನೀರಿನಾಂಶ ಹೆಚ್ಚಿರುವ ಹಣ್ಣು, ತರಕಾರಿಗಳನ್ನು ಡಬ್ಬಿಯಲ್ಲಿ ತುಂಬಿಸಿ ಕೊಡಿ. ಇದು ಚರ್ಮ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೂ ಅವಶ್ಯ.
ಚಪ್ಪಲಿ ಇಲ್ಲದೇ ಹೊರಗಡೆ ಹೋಗಲು ಬಿಡಬೇಡಿ
ಭೂಮಿಯು ಕಾದ ಹೆಂಚಿನಂತಾಗಿರುವುದರಿಂದ ಸಂಜೆ ವೇಳೆ ಕೂಡ ಚಪ್ಪಲಿ ಇಲ್ಲದೇ ಹೊರಗಡೆ ಹೋಗುವುದು ಕಷ್ಟವಾಗುತ್ತದೆ. ಅದರಲ್ಲೂ ಮಕ್ಕಳ ಪಾದಗಳು ಸೂಕ್ಷ್ಮವಾಗಿರುವ ಕಾರಣ ಅವರಿಗೆ ಚಪ್ಪಲಿ ಅವಶ್ಯ.
ಮರ, ಎಲೆಕ್ಟ್ರಿಕ್ ಕಂಬಗಳ ಕೆಳಗೆ ನಿಲ್ಲದಂತೆ ಹೇಳಿ
ಇತ್ತೀಚಿನ ದಿನಗಳಲ್ಲಿ ಬಿಸಿಗಾಳಿ, ತಾಪಮಾನ ಹೆಚ್ಚಳದ ನಡುವೆ ಸಿಡಿಲು ಕೂಡ ಜೋರಾಗಿದೆ. ಮಳೆ ಬಾರದೇ ಇದ್ದರು ಗುಡುಗು ಸಿಡಿಲು ಕಾಣಿಸುತ್ತಿದೆ. ಹಾಗಾಗಿ ಮಕ್ಕಳು ಹೊರಗಡೆ ಆಟವಾಡಲು ಹೋದಾಗ ಮರ ಅಥವಾ ಎಲೆಕ್ಟ್ರಿಕ್ ಕಂಬಗಳ ಕೆಳಗೆ ನಿಲ್ಲಬಾರದು ಎಂದು ಸೂಚನೆ ನೀಡಿ. ಇದರಿಂದ ಆಗುವ ಅಪಾಯಗಳ ಅರಿವು ಸೂಚಿಸಿ.
ಹೊರಗಡೆ ತಿನ್ನದಂತೆ ಎಚ್ಚರಿಸಿ
ಹೊರಗಡೆ ಆಟವಾಡಲು ಹೋಗುವ ಮಕ್ಕಳು ಸಿಕ್ಕಿದ್ದನ್ನು ತಿನ್ನಬಹುದು, ಅದರಲ್ಲೂ ಮಕ್ಕಳಿಗೆ ಬೀದಿಬದಿ ಆಹಾರಗಳು ಹೆಚ್ಚು ಇಷ್ಟವಾಗುತ್ತವೆ. ಸ್ನೇಹಿತರ ಜೊತೆ ಸೇರಿದಾಗ ಇಂತಹ ಆಹಾರಗಳನ್ನು ತಿನ್ನುವುದು ಸಹಜ. ಆದರೆ ಬೇಸಿಗೆಯಲ್ಲಿ ಈ ಆಹಾರಗಳು ವಾಂತಿ, ವಾಕರಿಕೆಯಂತಹ ಸಮಸ್ಯೆಯನ್ನು ಉಂಟು ಮಾಡಬಹುದು. ಇದರಿಂದ ಇಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಎಚ್ಚರ ಅವಶ್ಯ.
ಬೇಸಿಗೆ ರಜಾ ಮಕ್ಕಳು ಈಗಾಲಾದ್ರೂ ಅವರು ಇಷ್ಟ ಬಂದಂತೆ ಇರಲಿ ಎಂದು ಪೋಷಕರು ಭಾವಿಸುವುದು ಸಹಜ. ಆದರೆ ಹಾಗಂತ ಮಕ್ಕಳ ಬಗ್ಗೆ ಅಸಡ್ಡೆ, ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಇದರಿಂದ ಇನ್ನಷ್ಟು ಸಮಸ್ಯೆಗಳು ಹೆಚ್ಚಬಹುದು. ಹಾಗಾಗಿ ಸಾಕಷ್ಟು ಎಚ್ಚರ ವಹಿಸಬೇಕು.