ಕನ್ನಡ ಸುದ್ದಿ  /  ಜೀವನಶೈಲಿ  /  ಬೇಸಿಗೆ ರಜೆಯಲ್ಲಿ ಮನೆಯಲ್ಲಿದ್ದು ಏನಾದರೂ ಕೊಡು ಎಂದು ಪೀಡಿಸುವ ಮಕ್ಕಳ ಮನಗೆಲ್ಲಲು ಹಾಲುಬಾಯಿ ಮಾಡಿಕೊಡಿ, ನೀವೂ ಆಸ್ವಾದಿಸಿ

ಬೇಸಿಗೆ ರಜೆಯಲ್ಲಿ ಮನೆಯಲ್ಲಿದ್ದು ಏನಾದರೂ ಕೊಡು ಎಂದು ಪೀಡಿಸುವ ಮಕ್ಕಳ ಮನಗೆಲ್ಲಲು ಹಾಲುಬಾಯಿ ಮಾಡಿಕೊಡಿ, ನೀವೂ ಆಸ್ವಾದಿಸಿ

Halubai Recepi: ಬೇಸಿಗೆಯಲ್ಲಿ ದೇಹಕ್ಕೂ ಉತ್ತಮವಾಗಿರುವಂತಹ, ರುಚಿಕರ ಸಿಹಿತಿನಿಸುಗಳನ್ನು ಮಾಡಬೇಕು ಅನ್ನಿಸಿದರೆ ಹಾಲುಬಾಯಿಗಿಂತ ಉತ್ತಮ ಆಯ್ಕೆ ಬೇರೊಂದಿಲ್ಲ. ಅಕ್ಕಿ, ರಾಗಿ, ಗೋಧಿ ಮಾತ್ರವಲ್ಲದೇ ಕೂವೆಯಿಂದಲೂ ಆರೋಗ್ಯಕರವಾದ ಹಾಲುಬಾಯಿ ತಯಾರಿಸಬಹುದು. ಹಾಲುಬಾಯಿ ತಯಾರಿಕೆ ಪಾಕವಿಧಾನ ಹೀಗಿದೆ.

ಗೋಧಿ, ರಾಗಿ, ಅಕ್ಕಿ ಸೇರಿ 5 ಥರದ ಹಾಲುಬಾಯಿ ರೆಸಿಪಿಗಳು
ಗೋಧಿ, ರಾಗಿ, ಅಕ್ಕಿ ಸೇರಿ 5 ಥರದ ಹಾಲುಬಾಯಿ ರೆಸಿಪಿಗಳು

ಬೇಸಿಗೆ ಕಾಲದಲ್ಲಿ ನಾಲಿಗೆಗೆ ರುಚಿಯೆನ್ನಿಸಿದ್ದು, ದೇಹಕ್ಕೆ ಹಿತವಾಗೋದಿಲ್ಲ, ದೇಹಕ್ಕೆ ಹಿತವಾದುದು ತಿನ್ನಲು ಮನಸ್ಸಾಗೋದಿಲ್ಲ ಎಂಬಂತಹ ಪರಿಸ್ಥಿತಿ ಇರುತ್ತದೆ. ಆದರೆ ದೇಹಕ್ಕೂ ಹಿತವಾದ, ನಾಲಿಗೆಗೆ ರುಚಿಕರವೆನ್ನಿಸುವ ಹಾಲುಬಾಯಿಯನ್ನು ನೀವೆಂದಾದರೂ ತಯಾರಿಸಿ ತಿಂದಿದ್ದೀರಾ? ಹೌದು, ಕರ್ನಾಟಕ ವಿಭಿನ್ನವಾಗಿರುವ ಸಿಹಿ ತಿನಿಸುಗಳಿಗೆ ಹೆಸರುವಾಸಿ. ಅದರಲ್ಲೂ ದಕ್ಷಿಣ ಕನ್ನಡ ಭಾಗದ ಸರಳ ಹಾಗೂ ವಿಶೇಷವಾಗಿರುವ ಹಾಲುಬಾಯಿಗಳನ್ನಂತೂ ಮಕ್ಕಳಿಂದ ತೊಡಗಿ ವಯಸ್ಸಾದವರೂ ಸಹ ಇಷ್ಟಪಟ್ಟು ತಿನ್ನುತ್ತಾರೆ. ದೇಹದ ಉಷ್ಣತೆಯನ್ನು ಸರಿದೂಗಿಸುವಲ್ಲಿ ಹಾಲುಬಾಯಿ ಸಹಕರಿಸುತ್ತದೆ. ವಿಭಿನ್ನ ಹಾಲುಬಾಯಿಗಳನ್ನು ತಯಾರಿಸುವ ಪಾಕವಿಧಾನ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

1) ಅಕ್ಕಿ ಹಾಲುಬಾಯಿ ತಯಾರಿಸುವುದು ಹೇಗೆ?

ಬೇಕಾಗುವ ಸಾಮಗ್ರಿಗಳು: ತೆಂಗಿನಕಾಯಿ 1, ಅರ್ಧ ಕೆಜಿ ಅಕ್ಕಿ, ಅರ್ಧ ಕೆಜಿ ಬೆಲ್ಲ, ಚಿಟಿಕೆ ಉಪ್ಪು, ತುಪ್ಪ.

ಅಕ್ಕಿ ಹಾಲುಬಾಯಿ ಮಾಡುವ ವಿಧಾನ: ತೆಂಗಿನತುರಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅದಕ್ಕೆ ಎರಡು ಗಂಟೆಗಳ ಕಾಲ ನೆನೆ ಹಾಕಿಟ್ಟ ಅಕ್ಕಿ ಹಾಗೂ ಅರ್ಧ ಕೆಜಿ ಬೆಲ್ಲ ಸೇರಿಸಿ ಮತ್ತೆ ನುಣ್ಣಗೆ ರುಬ್ಬಿ. ಈ ಹಿಟ್ಟನ್ನು ಬಾಣಲೆಗೆ ಹಾಕಿಕೊಂಡು ದೋಸೆಯ ಹಿಟ್ಟಿನ ಹದಕ್ಕೆ ಬರುವಂತೆ ನೀರು ಸೇರಿಸಿಕೊಳ್ಳಿ. ಒಂದು ಚಿಟಿಕೆ ಉಪ್ಪನ್ನು ಸೇರಿಸಿ, ಕೈಬಿಡದೆ ಬೇಯಿಸಿಕೊಳ್ಳಿ. ಇದಕ್ಕೆ 1 ಚಮಚ ತುಪ್ಪ ಹಾಕಿಕೊಂಡು ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಹಾಲುಬಾಯಿ ಗಟ್ಟಿಯಾಗುತ್ತಾ ಬಂದಂತೆ ಏಲಕ್ಕಿ ಪುಡಿಯನ್ನು ಸೇರಿಸಿ. ಹಿಟ್ಟನ್ನು ಮುಟ್ಟಿದ ವೇಳೆ ಕೈಗೆ ಅಂಟಿಕೊಳ್ಳದಂತಿದ್ದರೆ ಹಾಲುಬಾಯಿ ಚೆನ್ನಾಗಿ ಬೆಂದಿದೆ ಎಂದರ್ಥ. ಇದಕ್ಕೆ ಏನಿಲ್ಲವೆಂದರೂ 40 ನಿಮಿಷಗಳಾದರೂ ಬೇಕು. ಬೆಂದ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಯ ಮೇಲೆ ಹರಡಿಕೊಂಡು ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ. ಬುತ್ತಿಯಲ್ಲಿ ಹಾಕಿಕೊಂಡರೆ 2 ದಿನಗಳವರೆಗೂ ಸವಿಯಬಹುದು.

2) ಗೋಧಿ ಹಾಲುಬಾಯಿ ಮಾಡುವುದು ಹೇಗೆ?

ಗೋಧಿ ಹಾಲುಬಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು: ಇಡಿ ಗೋಧಿ 2 ಕಪ್‌, ತೆಂಗಿನಕಾಯಿ 1, 250 ಗ್ರಾಂ ಬೆಲ್ಲ, ನೀರು, 1 ಚಿಟಿಕೆ ಉಪ್ಪು.

ತಯಾರಿಸುವ ವಿಧಾನ: ಇಡಿ ಗೋಧಿಯನ್ನು 7-8 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿಕೊಳ್ಳಿ. ನಂತರ ಅದನ್ನು ಚೆನ್ನಾಗಿ ತೊಳೆದು, ನೀರು ಹಾಕಿಕೊಂಡು ರುಬ್ಬಿಕೊಳ್ಳಿ. ತರಿತರಿಯಾಗಿ ರುಬ್ಬಿಕೊಂಡ ನಂತರ ಬಟ್ಟೆಯಲ್ಲಿ ಈ ಹಿಟ್ಟನ್ನು ಹಾಕಿ 2 ಲೋಟ ನೀರು ಸೇರಿಸಿಕೊಂಡು ಹಿಂಡಿ, ಗಟ್ಟಿ ಹಾಲು ತೆಗೆದುಕೊಳ್ಳಿ. ನಂತರ ಅದೇ ಗೋಧಿ ತರಿಯನ್ನು ಮತ್ತೊಮ್ಮೆ ನೀರು ಸೇರಿಸಿ ಮಿಶ್ರಣ ಮಾಡಿ. ಪುನಃ ಅದೇ ವಿಧಾನದಲ್ಲಿ ಎರಡನೇ ಹಾಲನ್ನು ಸೋಸಿಕೊಳ್ಳಿ. ಸೋಸಿಕೊಂಡ ಹಾಲನ್ನು 1 ಗಂಟೆಗಳ ಕಾಲ ಹನಿದುಕೊಳ್ಳಲು ಬಿಡಿ. ನಂತರ ಮೇಲಿನ ನೀರಿನ ಭಾಗವನ್ನು ಪ್ರತ್ಯೇಕಿಸಿ, ಹಿಟ್ಟಿನ ಭಾಗವನ್ನಷ್ಟೇ ಬೇರೊಂದು ಪಾತ್ರೆಗೆ ಹಾಕಿಕೊಳ್ಳಿ.

ಮತ್ತೊಂದೆಡೆ 1 ತೆಂಗಿನಕಾಯಿಯನ್ನು ತುರಿದುಕೊಂಡು, ರುಬ್ಬಿಕೊಳ್ಳಿ. ನಂತರ ತೆಂಗಿನ ಹಾಲನ್ನು ಸೋಸಿಕೊಂಡಿರಿ. ಈ ಹಾಲನ್ನು ಗೋಧಿ ಹಾಲಿನ ಜೊತೆಗೆ ಮಿಶ್ರ ಮಾಡಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ 250 ಗ್ರಾಂ ಬೆಲ್ಲವನ್ನು ಹಾಕಿ 1 ಲೋಟ ನೀರು ಹಾಕಿ ಕರಗಿಸಿಕೊಂಡು, ಸೋಸಿಟ್ಟುಕೊಳ್ಳಿ. ಈಗ ಬೆಲ್ಲದ ನೀರನ್ನೂ ಈ ಮಿಶ್ರಣದೊಂದಿಗೆ ಹಾಕಿಕೊಳ್ಳಿ. ಇದರ ಜೊತೆಗೆ ಮತ್ತೂ ಒಂದು ಲೋಟ ನೀರನ್ನು ಸೇರಿಸಿಕೊಂಡು ಒಂದು ಚಿಟಿಕೆ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಹಿಟ್ಟು ಬೇಯಲು ಬಿಡಿ. ಹಿಟ್ಟು ಗಟ್ಟಿಯಾಗುವವರೆಗೂ ಕೈಬಿಡದೆ ತಳಕೂರದಂತೆ ನೋಡಿಕೊಳ್ಳಬೇಕು. ಪಾಕ ಸರಿಯಾದ ಬಂದ ನಂತರ ತುಪ್ಪ ಲೇಪಿಸಿರುವ ಪ್ಲೇಟ್‌ಗೆ ಹಿಟ್ಟನ್ನು ಹರಡಿಕೊಳ್ಳಿ. ತಣ್ಣಗಾದ ನಂತರ ಬೇಕಾದ ಆಕಾರದಲ್ಲಿ ಮೃದುವಾದ ಗೋಧಿ ಹಾಲುಬಾಯಿಯನ್ನು ತುಂಡರಿಸಿಕೊಂಡು ಸವಿಯಬಹುದು.

3) ರಾಗಿ ಹಾಲುಬಾಯಿ ಸುಲಭವಾಗಿ ಮಾಡಿ

ಬೇಕಾಗುವ ಸಾಮಗ್ರಿಗಳು: ರಾಗಿ 350 ಗ್ರಾಂ, ತೆಂಗಿನಕಾಯಿ ಹಾಲು 1 ಲೀಟರ್‌, ಬೆಲ್ಲ 500-600 ಗ್ರಾಂ, ತುಪ್ಪ 6-7 ಚಮಚ, ಏಲಕ್ಕಿ ಪುಡಿ 1 ಚಮಚ, 1 ಚಿಟಿಕೆ ಉಪ್ಪು, ಅರ್ಧ ಲೀಟರ್‌ ನೀರು.

ರಾಗಿ ಹಾಲುಬಾಯಿ ಮಾಡುವ ವಿಧಾನ: ರಾಗಿಯನ್ನು 1 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ. ಅಗತ್ಯವಿರುವಷ್ಟು ನೀರನ್ನು ಹಾಕಿ ರಾಗಿಯನ್ನು ರುಬ್ಬಿಕೊಂಡು ರಾಗಿ ಹಾಲನ್ನು ಹಿಂಡಿಕೊಳ್ಳಿ. ಅದೇ ರೀತಿಯಲ್ಲಿ 1 ತೆಂಗಿನ ಕಾಯಿಯನ್ನು ತುರಿದು, ರುಬ್ಬಿಕೊಂಡು, ತೆಂಗಿನ ಹಾಲನ್ನು ಸೋಸಿಕೊಳ್ಳಿ. ಎರಡೂ ಹಾಲನ್ನು ಜೊತೆಗೆ ಹಾಕಿಕೊಂಡು 2 ಲೋಟ ನೀರನ್ನು ಸೇರಿಸಿಕೊಳ್ಳಿ.

ಇದಕ್ಕೆ ಅರ್ಧ ಕೆಜಿ ಬೆಲ್ಲವನ್ನು ಹಾಕಿಕೊಂಡು ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ. 2 ಚಮಚ ತುಪ್ಪ, 1 ಚಿಟಿಕೆ ಏಲಕ್ಕಿ ಪುಡಿಯನ್ನೂ ಸೇರಿಸಿ ಕೈ ಬಿಡದೆ ಹಿಟ್ಟನ್ನು ಮಿಶ್ರ ಮಾಡುತ್ತಿರಿ. ಅಂದಾಜು 1 ಗಂಟೆಗಳ ಕಾಲ ಸರಿಯಾಗಿ ಬೆಂದು ಹದ ಬರುವ ತನಕ ಹಿಟ್ಟನ್ನು ಕಾಯಿಸುತ್ತಿರಬೇಕು. ನಂತರ ತುಪ್ಪ ಸವರಿಟ್ಟುಕೊಂಡ ಬಟ್ಟಲಿಗೆ ಈ ಹಿಟ್ಟನ್ನು ಹಾಕಿ ತಣ್ಣಗಾಗಲು ಬಿಡಿ. ತಣಿದ ಮೇಲೆ ಚೌಕಾಕಾರದಲ್ಲಿ ತುಂಡರಿಸಿಕೊಂಡರೆ ಆರೋಗ್ಯಕರವಾದ ರಾಗಿ ಹಾಲುಬಾಯಿಯನ್ನು ಸವಿಯಬಹುದು.

4) ಕೂವೆ ಹಾಲುಬಾಯಿ ಮಕ್ಕಳಿಗೆ ಇಷ್ಟವಾಗುತ್ತೆ

ಕೂವೆ ಹಾಲುಬಾಯಿ ತಯಾರಿಸಲು ಬೇಕಾಗುವ ಸಾಮಗ್ರಿಗಳು: ಕೂವೆ ಹುಡಿ 2 ಕಪ್‌ (ಅರಾರೂಟ್), ತೆಂಗಿನಹಾಲು 10 ಕಪ್‌, ಬೆಲ್ಲ ಮೂರೂವರೆ ಕಪ್‌, ಏಲಕ್ಕಿ ಪುಡಿ 1 ಚಮಚ, ಚಿಟಿಕೆ ಉಪ್ಪು, ತುಪ್ಪ 6-7 ಚಮಚ.

ಮಾಡುವ ವಿಧಾನ: ಹಸಿ ತೆಂಗಿನಕಾಯಿಯನ್ನು ತೆಗೆದುಕೊಂಡು ತರಿತರಿಯಾಗಿ ರುಬ್ಬಿಕೊಳ್ಳಿ. ಇದರಿಂದ ತೆಂಗಿನಹಾಲನ್ನು ತೆಗೆದುಕೊಳ್ಳಿ. ಮೊದಲು ಗಟ್ಟಿ ಹಾಲನ್ನು ತೆಗೆದುಕೊಂಡು ನಂತರ ಮತ್ತೊಮ್ಮೆ ನೀರು ಸೇರಿಸಿ ರುಬ್ಬಿಕೊಂಡು ಎರಡನೇ ಹಾಲನ್ನು ಸೋಸಿಟ್ಟುಕೊಳ್ಳಿ. ಈಗ ಬಾಣಲೆಗೆ 2 ಲೋಟ ಕೂವೆ ಹುಡಿಯನ್ನು ಹಾಕಿಕೊಂಡು ತೆಗೆದಿಟ್ಟುಕೊಂಡ ತೆಂಗಿನ ಹಾಲನ್ನು ಹಾಕಿಕೊಳ್ಳಿ. 10 ನಿಮಿಷಗಳ ಕಾಲ ಕೂವೆ ಹುಡಿ ತೆಂಗಿನ ಹಾಲಿನೊಂದಿಗೆ ಬೆರೆಯಲು ಬಿಡಿ.

ಮತ್ತೊಂದೆಡೆ ಪಾತ್ರೆ ತೆಗೆದುಕೊಂಡು ಮೂರೂವರೆ ಲೋಟ ಬೆಲ್ಲದ ಹುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ 1 ಲೋಟ ನೀರು ಹಾಕಿಕೊಂಡು ಚೆನ್ನಾಗಿ ಕರಗಿಸಿಕೊಂಡ ನಂತರ ಸೋಸಿಕೊಂಡು ತೆಗೆದಿಟ್ಟುಕೊಂಡ ಕೂವೆ ಹುಡಿ ಮಿಶ್ರಿತ ತೆಂಗಿನಹಾಲಿನೊಂದಿಗೆ ಸೇರಿಸಿ. 1 ಚಿಟಿಕೆ ಉಪ್ಪು ಹಾಕಿಕೊಂಡು, ಮಧ್ಯಮ ಉರಿಯಲ್ಲಿ ಕೈಬಿಡದೆ ಚೆನ್ನಾಗಿ ಕಾಯಿಸಿಕೊಳ್ಳಿ. ಹದವಾಗಿ ಬೆಂದಾಗ 5 ಚಮಚ ತುಪ್ಪ ಸೇರಿಸಿ, ಹುಡಿ ಮಾಡಿಟ್ಟುಕೊಂಡ ಏಲಕ್ಕಿಯನ್ನೂ ಜೊತೆಗೆ ಹಾಕಿ. ಸರಿಸುಮಾರು 1 ಗಂಟೆಗಳ ಕಾಲವಾದರೂ ಚೆನ್ನಾಗಿ ಬೇಯಲು ಬಿಟ್ಟು, ತುಪ್ಪ ಸವರಿಟ್ಟುಕೊಂಡ ತಟ್ಟೆಗೆ ಈ ಹಿಟ್ಟನ್ನು ಹಾಕಿಕೊಳ್ಳಿ. 2 ಗಂಟೆಗಳ ಕಾಲ ಆರಲು ಬಿಟ್ಟು, ಚೌಕಾಕಾರದಲ್ಲಿ ಭಾಗಗಳಾಗಿ ಮಾಡಿಕೊಂಡು ಕೂವೆ ಮಣ್ಣಿ ಅಥವಾ ಕೂವೆ ಹಾಲುಬಾಯಿಯನ್ನು ಸವಿಯಬಹುದು.

5) ಕ್ಯಾರೆಟ್‌ ಹಾಲುಬಾಯಿ ರುಚಿರುಚಿಯಾಗಿರುತ್ತೆ

ಕ್ಯಾರೆಟ್ ಹಾಲುಬಾಯಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು: ಅರ್ಧ ಕಪ್‌ ಹೆಚ್ಚಿರುವ ಕ್ಯಾರೆಟ್‌, ಅರ್ಧ ಕಪ್‌ ತೆಂಗಿನತುರಿ, ಅರ್ಧ ಕಪ್‌ ಅಕ್ಕಿ ಹುಡಿ, ಅಗತ್ಯವಿರುವಷ್ಟು ನೀರು, ಚಿಟಿಕೆ ಉಪ್ಪು, ಚಿಟಿಕೆ ಏಲಕ್ಕಿ ಪುಡಿ, 6 ಚಮಚ ತುಪ್ಪ

ತಯಾರಿಸುವ ವಿಧಾನ: ಪ್ರಾರಂಭದಲ್ಲಿ ಒಂದು ಕ್ಯಾರೆಟ್‌ನ ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಕೊಂಡು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಇದಕ್ಕೆ ಅರ್ಧ ಕಪ್‌ ತೆಂಗಿನತುರಿ ಹಾಗೂ ಅರ್ಧ ಕಪ್‌ ನೀರು ಹಾಕಿ ನುಣ್ಣಗೆ ಬೆಣ್ಣೆಯಂತೆ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಅರ್ಧ ಕಪ್‌ ಅಕ್ಕಿ ಹುಡಿ ಹಾಕಿ ಮತ್ತೆ ಅರ್ಧ ಲೋಟ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟನ್ನು ಬಾಣಲೆಗೆ ಹಾಕಿ ಒಂದೂವರೆ ಕಪ್ ನೀರು ಸೇರಿಸಿಕೊಳ್ಳಿ. ಹಾಗೂ ಮುಕ್ಕಾಲು ಕಪ್‌ ಬೆಲ್ಲ ಸೇರಿಸಿಕೊಂಡು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನೀರು ದೋಸೆಯ ಹದಕ್ಕೆ ಮಾಡಿಕೊಂಡು 1 ಚಮಚ ತುಪ್ಪ ಹಾಕಿ, 1 ಚಿಟಿಕೆ ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ ತಳ ಹಿಡಿಯದಂತೆ ಕೈಯಾಡಿಸುತ್ತಲೇ ಇರಿ. 20 ನಿಮಿಷಗಳ ನಂತರ ಮತ್ತೆ 1 ಚಮಚ ತುಪ್ಪ ಸೇರಿಸಿ ಹಿಟ್ಟು ಬೆಂದು ಗಟ್ಟಿಯಾಗುತ್ತಾ ಬಂದಾಗ ಏಲಕ್ಕಿ ಪುಡಿ ಸೇರಿಸಿಕೊಳ್ಳಿ. ಅಂದಾಜು 40 ನಿಮಿಷಗಳ ಕಾಲ ಇದನ್ನು ಬೇಯಿಸಿಕೊಂಡು ತುಪ್ಪ ಸವರಿದ ತಟ್ಟೆಗೆ ಹಾಕಿ ತೆಳುವಾಗಿ ಹರಡಿಕೊಳ್ಳಿ. ತಣ್ಣಗಾದ ನಂತರ ನಿಮಗೆ ಬೇಕಾದ ಆಕಾರದಲ್ಲಿ ಇದನ್ನು ತುಂಡರಿಸಿಕೊಂಡರೆ, ಕ್ಯಾರೆಟ್‌ ಹಾಲುಬಾಯಿ ಸವಿಯಲು ಸಿದ್ಧವಾಗುತ್ತದೆ.

ಬೇಸಿಗೆ ರಜೆಯಲ್ಲಿ ಮನೆಯಲ್ಲಿ ಮಕ್ಕಳ ಮನಸ್ಸು ಗೆಲುವುದಕ್ಕಾಗಿ ಪರದಾಡಬೇಕಿಲ್ಲ. ಜಂಕ್‌ ಫುಡ್‌ ನೀಡಿ ಮಕ್ಕಳ ಆರೋಗ್ಯವನ್ನು ಹದಗೆಡಿಸುವ ಬದಲು, ಆರೋಗ್ಯಕರವಾದ ಹಾಲುಬಾಯಿ ಮಾಡಿಕೊಟ್ಟನೋಡಿ. ನಾಳೆ ಮತ್ತೆ ಹಾಲುಬಾಯಿ ಮಾಡಿಕೊಡಿ ಎಂದು ಮಕ್ಕಳೇ ಕೇಳುವುದು ಖಚಿತ.

(ಬರಹ: ಭಾಗ್ಯಾ ದಿವಾಣ)