ಕನ್ನಡ ಸುದ್ದಿ  /  ಜೀವನಶೈಲಿ  /  Summer Holidays: ಬೇಸಿಗೆ ರಜೆ ಬಂದಾಕ್ಷಣ ಅಜ್ಜಿ ಮನೆಗೆ ಓಡೋಡಿ ಬರುವ ಸಿಟಿ ಮಕ್ಕಳು: ಹಳ್ಳಿ ಲೈಫ್ ಎಷ್ಟು ಚಂದಾ ಅಲ್ವಾ

Summer Holidays: ಬೇಸಿಗೆ ರಜೆ ಬಂದಾಕ್ಷಣ ಅಜ್ಜಿ ಮನೆಗೆ ಓಡೋಡಿ ಬರುವ ಸಿಟಿ ಮಕ್ಕಳು: ಹಳ್ಳಿ ಲೈಫ್ ಎಷ್ಟು ಚಂದಾ ಅಲ್ವಾ

ಬೇಸಿಗೆ ರಜೆ ಬಂತೆಂದರೆ ಮಕ್ಕಳೆಲ್ಲಾ ಅಜ್ಜಿ ಮನೆಯಲ್ಲಿ ಹಾಜರ್‌. ಪಟ್ಟಣದ ಒತ್ತಡದಿಂದ ಬೇಸತ್ತ ಮಕ್ಕಳು ಒಂದಿಷ್ಟು ದಿನ ಆರಾಮಾಗಿ ಕಾಲ ಕಳೆಯಲು ಅಜ್ಜಿ ಮನೆಗೆ ದಾಂಗುಡಿ ಇಡುತ್ತಾರೆ. ಅಜ್ಜಿ ಮನೆ, ಹಳ್ಳಿ ವಾತಾವರಣ, ಹಳ್ಳಿ ತಿನಿಸು, ಮಾವು-ಹಲಸಿನ ನಡುವೆ ಕಳೆದು ಹೋಗುವ ಕ್ಷಣಗಳನ್ನು ಲಹರಿ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ಪ್ರಿಯಾಂಕ ಗೌಡ.

ಬೇಸಿಗೆ ರಜೆ ಬಂದಾಕ್ಷಣ ಅಜ್ಜಿ ಮನೆಗೆ ಓಡೋಡಿ ಬರುವ ಸಿಟಿ ಮಕ್ಕಳು: ಹಳ್ಳಿ ಲೈಫ್ ಎಷ್ಟು ಚಂದಾ ಅಲ್ವಾ
ಬೇಸಿಗೆ ರಜೆ ಬಂದಾಕ್ಷಣ ಅಜ್ಜಿ ಮನೆಗೆ ಓಡೋಡಿ ಬರುವ ಸಿಟಿ ಮಕ್ಕಳು: ಹಳ್ಳಿ ಲೈಫ್ ಎಷ್ಟು ಚಂದಾ ಅಲ್ವಾ

ಬೇಸಿಗೆ ರಜೆ ಆರಂಭವಾಗುತ್ತದೆ ಎಂದಾಕ್ಷಣ ಮಕ್ಕಳು ಬ್ಯಾಗ್‌ ಪ್ಯಾಕ್‌ ಮಾಡಿಕೊಂಡು ಹೊರಡಲು ರೆಡಿ ಆಗ್ತಾರೆ, ಎಲ್ಲಿಗೆ ಅಂತಿರಾ? ಅದೇ ರೀ ಅಜ್ಜಿಯ ಮನೆಗೆ. ನಾವೆಲ್ಲಾ ಚಿಕ್ಕಂದಿನಲ್ಲಿದ್ದಾಗ ಅಜ್ಜಿ, ಅಜ್ಜನ ಮನೆಗೆ ಹೋಗುವುದೆಂದರೆ ಅದೇನು ಸಂಭ್ರಮ, ಅದೇನು ಖುಷಿ. ಆದರೆ ಈಗ ಕಾಲ ಬದಲಾಗಿದೆ. ಸಿಟಿಯಲ್ಲಿರುವ ಮಕ್ಕಳು ಅಜ್ಜ-ಅಜ್ಜಿ ಮನೆ ಬದಲು ಸಮ್ಮರ್‌ ಕ್ಯಾಂಪ್‌ನಲ್ಲಿ ಕಾಲ ಕಳೆಯವಂತಾಗಿದೆ. ಆದರೂ ಅಜ್ಜ/ಅಜ್ಜಿ ಮನೆಗೆ ಹೋಗುವುದೆಂದರೆ ಒಂಥರಾ ಖುಷಿ. ಅದರಲ್ಲೂ ಹಳ್ಳಿಯಲ್ಲಿ ಮನೆ ಇದ್ದರಂತೂ ಅದರ ಮಜಾನೇ ಬೇರೆ. ಬೇರೆ ಬೇರೆ ಊರುಗಳಲ್ಲಿರುವ ಕಸಿನ್ಸ್‌ಗಳು ಅಜ್ಜಿ ಮನೆಯಲ್ಲಿ ಸೇರುತ್ತಾರೆ. ಪಟ್ಟಣದ ಒತ್ತಡ ಬದುಕಿನಲ್ಲಿ ಕಾಲ ಕಳೆದ ಮಕ್ಕಳಿಗೆ ಹಳ್ಳಿ ಸ್ವಚ್ಛಂದ ಪರಿಸರ ಸಖತ್‌ ಖುಷಿ ಕೊಡೋದು ಖಂಡಿತ. ಹಳ್ಳಿಯ ವಾತಾವರಣ, ಆಟ, ಹಳ್ಳಿ ತಿನಿಸುಗಳ ಮಧ್ಯೆ ಕಾಲ ಕಳೆದುಹೋಗಿದ್ದೆ ಅರಿವಾಗುವುದಿಲ್ಲ.

ಟ್ರೆಂಡಿಂಗ್​ ಸುದ್ದಿ

ನಾನು ಹುಟ್ಟಿ ಬೆಳೆದಿದೆಲ್ಲಾ ಹಳ್ಳಿಯಲ್ಲೇ ಆದ್ರೂ, ಬೇಸಿಗೆ ರಜಾ ಹಾಗೂ ಉಳಿದ ದಿನಗಳಿಗೂ ಸಾಕಷ್ಟು ಭಿನ್ನತೆಯಿದೆ. ಶಾಲೆ, ಓದು, ಪರೀಕ್ಷೆ ಅಂತೆಲ್ಲಾ ಬ್ಯುಸಿಯಾಗುವ ನಮಗೆ ಸಿಗುವ ಅತ್ಯಂತ ಆರಾಮದಾಯಕ ಸಮಯವೆಂದರೆ ಬೇಸಿಗೆ ರಜೆ. ಎರಡು ತಿಂಗಳ ಭರ್ಜರಿ ರಜೆ ಮುಗಿಯುವುದೇ ತಿಳಿಯುವುದಿಲ್ಲ. ದೊಡ್ಡಮ್ಮ, ಚಿಕ್ಕಮಂದಿರ ಮಕ್ಕಳು, ಮಾವನ ಮಕ್ಕಳು ಅಂತೆಲ್ಲಾ ಒಟ್ಟಿಗೆ ಅಜ್ಜಿ ಮನೆಯಲ್ಲಿ ಸೇರುತ್ತಿದ್ದೆವು. ನಮ್ಮ ಕೂಗಾಟ ಎಷ್ಟಿರುತ್ತಿತ್ತು ಅಂದ್ರೆ ಮನೆಯ ಹೆಂಚು ಹಾರಿ ಹೋಗುವಷ್ಟು. ಮಾವಿನ ಹಣ್ಣಿನ ಋತುವಾಗಿರುವುದರಿಂದ ನಾವೆಲ್ಲಾ ಮಾವಿನಹಣ್ಣು ಹೆಕ್ಕಲು ಬೆಟ್ಟಕ್ಕೆ ಹೋಗುತ್ತಿದ್ದೆವು. ನಾವು ತಂದ ಕಾಡು ಮಾವಿನಹಣ್ಣಿನಿಂದ ಮಧ್ಯಾಹ್ನದ ಊಟಕ್ಕೆ ರಸಾಯನ ಸಿದ್ಧವಾಗುತ್ತಿತ್ತು. ಬಿಸಿಲಿನ ತಾಪವನ್ನೂ ಲೆಕ್ಕಿಸದೆ ಮರಕೋತಿ ಆಟ, ಲಗೋರಿ ಆಡುತ್ತಿದ್ದೆವು.

ಸಿಟಿ (ನಗರ)ಗಳಲ್ಲಿ ಇರುವ ಮಕ್ಕಳಿಂಗತೂ ಹಳ್ಳಿಯ ಸೊಗಡು ಒಂಥರಾ ವಿಭಿನ್ನ. ಸದಾ ವಾಹನಗಳ ಜಂಜಾಟ ಬದುಕಿನಿಂದ ದೂರವಾಗಿ ಸ್ವಲ್ಪ ಸಮಯ ಹಳ್ಳಿಯಲ್ಲಿ ಕಳೆಯುವುದು ಮೈನವಿರೇಳಿಸುತ್ತದೆ. ನಾಲ್ಕು ಗೋಡೆಯ ಬದುಕಿನಿಂದ ಮುಕ್ತವಾದಂತಾಗಿ ಹಳ್ಳಿಯಲ್ಲಿ ಎಲ್ಲಾ ಮಕ್ಕಳೊಂದಿಗೆ ಬೆರೆತು ಆಟವಾಡುವ ಮಜನೇ ಬೇರೆ. ತೋಟ, ಗದ್ದೆಗಳಲ್ಲಿ ಸುತ್ತಾಡುತ್ತಾ, ಕೆರೆಗಳಲ್ಲಿ ಈಜುತ್ತಾ, ಏಡಿಗಳನ್ನು ಹಿಡಿಯುತ್ತಾ ದಿನಗಳನ್ನು ಕಳೆಯುತ್ತಾರೆ. ಕೋಳಿ ಕೋಗುವುದರೊಂದಿಗೆ ಬೆಳಗ್ಗೆ ಏಳುವುದರೊಂದಿಗೆ ಹಕ್ಕಿಗಳ ಚಿಲಿಪಿಲಿ ನಾದ, ನವಿಲುಗಳ ನಾಟ್ಯ ಕಂಡು ಬೆರಗಾಗುತ್ತಾರೆ. ನನ್ನ ಮಗಳಂತೂ ನಾಯಿ, ಬೆಕ್ಕು, ದನ-ಕರು ಜೊತೆ ಆಟವಾಡುತ್ತಾ ಸಂಭ್ರಮಿಸುತ್ತಾಳೆ. ದೂರದಲ್ಲೆಲ್ಲೋ ನವಿಲು ಕಾಣಿಸಿಕೊಂಡಾಗ ಆಕೆಯ ಸಂಭ್ರಮ ನೋಡುವುದೇ ಆನಂದ.

ನಗರದಲ್ಲಿ ಬೆಳಗೆದ್ದಾಗ ವಾಹನಗಳ ಹಾರ್ನ್ ಶಬ್ದ ಕೇಳುತ್ತಾ ಎದ್ದರೆ, ಹಳ್ಳಿಗಳಲ್ಲಿ ಹಕ್ಕಿಗಳ ಕಲರವ ಕೇಳುತ್ತದೆ. ವಾಹನದ ಜಂಜಾಟವಿಲ್ಲ. ಓಡಾಡಲು, ಆಟವಾಡಲು ವಿಶಾಲ ಸ್ಥಳ. ನಗರದಲ್ಲಿ ಇಂತಹ ಸೌಕರ್ಯವಿದೆಯೇ? ತುಂಬಾ ಪ್ರೀತಿ ಮಾಡುವ ಅಜ್ಜ-ಅಜ್ಜಿಯನ್ನು ನೋಡಲು ಬರುವುದೇ ಆನಂದ. ಮೊಮ್ಮಕ್ಕಳಿಗಾಗಿ ತಿಂಡಿಗಳು ಅವರು ಬರುವ ಮುನ್ನವೇ ಸಿದ್ಧವಾಗಿರುತ್ತದೆ. ರಜೆ ಬಂದ ಕೂಡಲೇ ಅಜ್ಜಿ ಮನೆ ಅಂತಾ ಮಕ್ಕಳು ಓಡೋಡಿ ಬರುತ್ತಾರೆ.

ಹಳ್ಳಿಯಲ್ಲಿ ಈ ಎಲ್ಲಾ ಆಟಗಳನ್ನೂ ಆಡಬಹುದು

ನಗರದಲ್ಲಿ ಆಟವಾಡಲು ಮಕ್ಕಳು ಪಾರ್ಕ್‌ಗಳಿಗೆ ಹೋಗಬೇಕು. ಮನೆ ಹತ್ತಿರ ಆಟವಾಡುವುದಾದರೆ ಕೇವಲ ಇನ್‌ಡೋರ್ ಗೇಮ್‌ಗಳನ್ನಷ್ಟೇ ಆಟವಾಡಬೇಕು. ಆದ್ರೆ, ಹಳ್ಳಿಯಲ್ಲಿ ಆಟವಾಡುವ ಮಜಾನೇ ಬೇರೆ. ಮರ-ಕೋತಿ ಆಟ, ಚಿನ್ನಿದಾಂಡು ಅಥವಾ ಗಿಲ್ಲಿ ದಾಂಡು ಆಟ, ಲಗೋರಿ, ಅಡಿಕೆ ಹಾಳೆಯಲ್ಲಿ ಒಬ್ಬರು ಕೂತರೆ ಇನ್ನೊಬ್ಬರು ಮುಂದೆ ನಿಂತು ಎಳೆದುಕೊಂಡು ಹೋಗುವುದು. ಗೋಲಿ ಆಟ, ಬುಗುರಿ ಆಟ, ಕೆರೆದಂಡೆ ಆಟ, ಕಣ್ಣಾ-ಮುಚ್ಚಾಲೆ, ಆನೆ-ಕುರಿಯಾಟ, ಒಳಾಂಗಣದಲ್ಲಾಡುವ ಚನ್ನೆಮಣೆಯಾಟ, ಚೌಕಾಬಾರ ಇತ್ಯಾದಿ ಆಟಗಳನ್ನು ಆಡಬಹುದು. ಇಂತಹ ಆಟಗಳನ್ನು ನಗರದ ಮಕ್ಕಳು ಆಡುವುದಿಲ್ಲ. ಕಣ್ಣಾಮುಚ್ಚಾಲೆಯಾಟವಾದರೂ ನಗರಗಳಲ್ಲಿ ಮಕ್ಕಳು ಆಡುತ್ತಾರೆ. ಆದರೆ, ಅಡಿಕೆ ಹಾಳೆಯನ್ನು ಎಳೆದುಕೊಂಡು ಹೋಗುವುದು, ಚಿನ್ನಿದಾಂಡು ಆಟವನ್ನು ಆಡುವುದು ಖಂಡಿತ ನೋಡಲು ಸಾಧ್ಯವಿಲ್ಲ. ಮಕ್ಕಳೆಲ್ಲಾ ಬ್ಯಾಟ್ ಹಿಡಿದು ಕೇವಲ ಕ್ರಿಕೆಟ್ ಅಷ್ಟೇ ಆಡುತ್ತಾರೆ. ಆಟ ಅಂದ್ರೆ ಕ್ರಿಕೆಟ್ ಅಷ್ಟೇ ಅನ್ನೋ ಹಾಗಾಗಿದೆ.

ಆದರೂ ಸಿಟಿಯಲ್ಲಿರುವ ಮಕ್ಕಳು ಕೆಲ ಸಮಯ ಹಳ್ಳಿಯ ವಾತಾವರಣ ಇಷ್ಟಪಟ್ಟರೆ, ದಿನಗಳು ಕಳೆದಂತೆ ಅವರಿಗೆ ಬೋರ್ ಹೊಡೆಯಲು ಶುರುವಾಗುತ್ತದೆ. ನಗರದಲ್ಲಾದ್ರೆ ಸಂಜೆಯಾಗುತ್ತಲೇ ಪಾರ್ಕ್, ಮಾಲ್ ಅಂತೆಲ್ಲಾ ಸುತ್ತಾಡಿದ್ರೆ ಹಳ್ಳಿಯಲ್ಲಿ ಮನೆಯಲ್ಲೇ ಇರಬೇಕು. ಇತ್ತೀಚೆಗಂತೂ ಒಂದು, ಎರಡು ಮಕ್ಕಳು ಇರುವುದರಿಂದ ನಾವು ಸಣ್ಣವರಿದ್ದಾಗ ಇದ್ದ ಮಕ್ಕಳ ಸಂಖ್ಯೆಯಷ್ಟು ಈಗಿಲ್ಲ. ಒಬ್ಬರೋ, ಇಬ್ಬರೋ ಇರುವುದರಿಂದ ಸ್ವಲ್ಪ ಸಮಯದ ಬಳಿಕ ಅವರಿಗೆ ಬೋರ್ ಆಗಲು ಶುರುವಾಗುತ್ತದೆ. ನನ್ನ ಮಗಳಿಗೆ ಊರಿಗೆ ಬರುವಾಗ ಇರುವ ಖುಷಿ ಆಮೇಲೆ ಇರುವುದಿಲ್ಲ. ಅವಳು ಒಬ್ಬಳೇ ಮೊಮ್ಮಗಳು. ಸುತ್ತ ತೋಟ ಮಧ್ಯದಲ್ಲಿ ನಮ್ಮ ಮನೆ. ವಿಶಾಲವಾದ ಅಂಗಳವೇನೋ ಇದೆ. ಆದರೆ, ಆಟವಾಡಲು ಮಕ್ಕಳಿಲ್ಲ. ನಾಯಿ, ಬೆಕ್ಕುಗಳ ಜೊತೆಯಷ್ಟೇ ಆಟವಾಡಬೇಕು. ನಗರದಲ್ಲಾದ್ರೆ ಪಾರ್ಕ್, ಪಕ್ಕದ ಮನೆ ಮಕ್ಕಳ ಜೊತೆ ಆಟವಾಡುತ್ತಾ ದಿನ ಕಳೆಯುತ್ತಾಳೆ. ಹೀಗಾಗಿ ಮರಳಿ ಬೆಂಗಳೂರಿಗೆ ಹೋಗೋಣ ಅಂತಾ ಹಠ ಹಿಡಿಯುತ್ತಿರುತ್ತಾಳೆ. ದೂರದಲ್ಲೆಲ್ಲೊ ಒಂದೊಂದು ಮನೆ, ಮಕ್ಕಳ ಸಂಖ್ಯೆಯೂ ಕಡಿಮೆ, ಮೊದಲಿನ ಹಾಗೆ ಹೊಲ, ಗದ್ದೆ ಸುತ್ತುವವರಿಲ್ಲ. ಮರ-ಕೋತಿ ಆಟವಿಲ್ಲ. ಹಿಂದೆಲ್ಲಾ ಬೇಸಿಗೆ ಶಿಬಿರದಂತಿದ್ದ ಅಜ್ಜಿ ಮನೆ ಇಂದು ಮಕ್ಕಳಿಲ್ಲದೆ ಬಿಕೋ ಎಂದೆನಿಸುತ್ತಿದೆ. ಮೊದಲಿದ್ದ ಸಂಭ್ರಮ ಈಗಿಲ್ಲ.