Maruti Upcoming Car: ಟೊಯೊಟಾದ ಜತೆ ಸೇರಿ ಮಾರುತಿ ಸುಜುಕಿ ತರಲಿದೆ ಇನ್ನೋವಾದಂತಹ ಹೊಸ ಕಾರು, ಇದೇ ಜುಲೈ 5ರಂದು ಭಾರತದಲ್ಲಿ ಬಿಗ್ ಲಾಂಚ್
Jan 09, 2024 08:16 PM IST
ಮಾರುತಿ ಸುಜುಕಿ ಎಂಗೇಜ್ ಎಂಪಿವಿ
- Maruti Suzuki Upcoming Cars 2023: ಮಾರುತಿ ಸುಜುಕಿ ಕಂಪನಿಯ ಹೊಸ ಕಾರಿನ ಆಗಮನಕ್ಕಾಗಿ ಕಾಯುತ್ತಿರುವವರಿಗೆ ಸಿಹಿಸುದ್ದಿ. ಕಂಪನಿಯು ಟೊಯೊಟಾ ಇನ್ನೋವಾ ಹೈಕ್ರಾಸ್‌ನಂತಹ ಏಳು ಸೀಟಿನ ಹೊಸ ಮಲ್ಟಿ ಪರ್ಪೊಸ್ ವೆಹಿಕಲ್ (ಎಂಪಿವಿ) ಅನ್ನು ಇದೇ ಜುಲೈ 5ರಂದು ಲಾಂಚ್ ಮಾಡಲು ನಿರ್ಧರಿಸಿದೆ.
ಬೆಂಗಳೂರು: ಭಾರತದ ರಸ್ತೆಯಲ್ಲಿ ಇನ್ನೋವಾ ಜನಪ್ರಿಯ ಕಾರು. ಇದೀಗ ಮಾರುತಿ ಸುಜುಕಿ ಕಂಪನಿಯು ತನ್ನ ದೊಡ್ಡ ಕಾರು, ಏಳು ಸೀಟಿನ ಎಂಪಿವಿ ಬಿಡುಗಡೆ ಮಾಡಲು ಸಜ್ಜಾಗಿದೆ. ಮಾರುತಿ ಸುಜುಕಿ ಕಂಪನಿಯ ಎಂಗೇಜ್ ಎಂಪಿವಿಯು ಟೊಯೊಟಾ ಇನ್ನೋವಾ ಹೈಕ್ರೊಸ್ ಮಾದರಿಯ ಕಾರಾಗಿದ್ದು, ದರ ಸುಮಾರು 25 ಲಕ್ಷ ರೂಪಾಯಿ ಆಸುಪಾಸಿನಲ್ಲಿರಲಿದೆ. ಇದು ಮಾರುತಿ ಸುಜುಕಿ ಕಂಪನಿಯ ಇಲ್ಲಿಯವರೆಗಿನ ಕಾರುಗಳಲ್ಲಿ ಅತ್ಯಂತ ದುಬಾರಿ ಕಾರಾಗಲಿದೆ. ಇದನ್ನು ನೆಕ್ಸಾ ರಿಟೇಲ್ ನೆಟ್‌ವರ್ಕ್‌ಗಳಲ್ಲಿ ಮಾರಾಟ ಮಾಡುವ ನಿರೀಕ್ಷೆಯಿದೆ.
ಮಾರುತಿ ಸುಜುಕಿ ಕಂಪನಿಯು ನೂತನ ಎಂಗೇಜ್ ಎಂಪಿವಿಯ ಟೀಸರ್ ಚಿತ್ರ ಬಿಡುಗಡೆ ಮಾಡಿದೆ. ಈ ಚಿತ್ರದ ಮೂಲಕ ನೂತನ ಕಾರಿನ ಸಂಕ್ಷಿಪ್ತ ವಿವರ ಪಡೆದುಕೊಳ್ಳಬಹುದು. ಈ ಟೀಸರ್ ಅನ್ನು ಪರಿಶೀಲಿಸಿದಾಗ ಇದು ನೋಡಲು ಟೊಯೊಟಾ ಇನ್ನೋವಾ ಹೈಕ್ರಾಸ್‌ನಂತೆ ಕಾಣಿಸುತ್ತದೆ.
ಮಾರುತಿ ಸುಜುಕಿ ಕಂಪನಿಯ ನೂತನ ಏಳು ಸೀಟಿನ ಎಂಪಿವಿಯಲ್ಲಿ ಪ್ರಮುಖ ನಿರೀಕ್ಷೆಗಳು
ನೋಡಿ: ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಎಚ್‌ಟಿ ಆಟೋ ಫಸ್ಟ್ ಡ್ರೈವ್ ವಿಮರ್ಶೆ
ಇದು ಮಾರುತಿ ಸುಜುಕಿಯು ಟೊಯೊಟಾ-ಸುಜುಕಿ ಪಾಲುದಾರಿಕೆಯಲ್ಲಿ ತರುತ್ತಿರುವ ಮೊದಲ ಪ್ರಾಡಕ್ಟ್
ಮುಂಬರುವ ಎಂಗೇಜ್ ಎಂಪಿವಿಯು ಮಾರುತಿ ಸುಜುಕಿಯು ಸುಜುಕಿ ಟೊಯೊಟಾ ಜಾಗತಿಕ ಪಾಲುದಾರಿಕೆಯಲ್ಲಿ ಹೊರತರುತ್ತಿರುವ ಮೊದಲ ಪ್ರಾಡಕ್ಟ್ ಆಗಿದೆ. ಈಗಾಗಲೇ ಈ ಪಾಲುದಾರಿಕೆಯಲ್ಲಿ ಎರಡು ಉತ್ಪನ್ನಗಳು ಬಿಡುಗಡೆಯಾಗಿವೆ. ಇವು ಟೊಯೊಟಾ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿವೆ. ಅಂದರೆ, ಸುಜುಕಿ ಬಲೆನೊ ಆಧರಿತ ಟೊಯೊಟಾ ಗ್ಲಾಂಜಾ ಮತ್ತು ಮಾರುತಿ ಸುಜುಕಿ ಗ್ರಾಂಡ್ ವಿಟಾರ ಆಧರಿತ ಟೊಯೊಟಾ ಅರ್ಬನ್ ಕ್ರೂಷರ್ ಹೈರೈಡರ್.
ಮುಂಬರುವ ಮಾರುತಿ ಎಂಗೇಜ್ ಎಂಪಿವಿಯು ಟೊಯೊಟಾ ಇನ್ನೋವಾ ಹೈಕ್ರಾಸ್ ಆಧರಿತವಾಗಿದೆ. ಇದು ಇನ್ನೋವಾ ಕ್ರಿಸ್ಟಾದ ಪ್ರೀಮಿಯಂ ಆವೃತ್ತಿಯಾಗಿದೆ.
ವಿನ್ಯಾಸದಲ್ಲಿ ಕೊಂಚ ಮಾರ್ಪಾಡು ನಿರೀಕ್ಷೆ
ನೂತನ ಕಾರು ನೋಡಲು ಟೊಯೊಟಾದ ಗ್ಲಾಂಜಾ, ಅರ್ಬನ್ ಕ್ರೂಸರ್ ಹೈರೈಡರ್‌ನಂತೆಯೇ ಇರಲಿದೆ. ಆದರೆ, ವಿನ್ಯಾಸದಲ್ಲಿ ಕೊಂಚ ಮಾರ್ಪಾಡು ಇರುವುದನ್ನು ನಿರೀಕ್ಷಿಸಬಹುದು.
ಪೆಟ್ರೋಲ್ ಮತ್ತು ಹೈಬ್ರಿಡ್ ಎಂಜಿನ್
ಟೊಯೊಟಾ ಇನ್ನೋವಾ ಹೈಕ್ರಾಸ್ ಕಾರು ಪೆಟ್ರೋಲ್ ಮತ್ತು ಪೆಟ್ರೋಲ್ ಹೈಬ್ರಿಡ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ಲಭ್ಯ. ಇದೇ ಎಂಜಿನ್ ಆಯ್ಕೆಗಳಲ್ಲಿ ಮಾರುತಿ ಸುಜುಕಿ ಎಂಗೇಜ್ ಎಂಪಿವಿ ಲಭ್ಯವಿರುವ ನಿರೀಕ್ಷೆಯಿದೆ. ಈ ಎಂಪಿವಿಯಲ್ಲಿ 2.0 ಲೀಟರ್‌ನ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಇರುವ ನಿರೀಕ್ಷೆಯಿದೆ. ಇದರಲ್ಲಿ ಎಂಟು ಹಂತದ ಆಟೋಮ್ಯಾಟಿಕ್ ಗಿಯರ್‌ಬಾಕ್ಸ್ ಇರುವ ಸಾಧ್ಯತೆಯಿದೆ. ಇದು 6600 ಆವರ್ತನಕ್ಕೆ 183.72 ಬಿಎಚ್‌ಪಿ ಪವರ್ ಮತ್ತು 4,398 ಆರ್‌ಪಿಎಂನಿಂದ 5,196 ಆರ್‌ಪಿಎಂವರೆಗೆ 183.72 ಬಿಎಚ್‌ಪಿ ಪೀಕ್ ಟಾರ್ಕ್ ಪವರ್ ನೀಡುವ ನಿರೀಕ್ಷೆಯಿದೆ. ಪೆಟ್ರೋಲ್ ಮಾತ್ರ ಆವೃತ್ತಿಯು ಲೀಟರ್‌ಗೆ 16.13 ಕಿ.ಮೀ. ಇಂಧನ ದಕ್ಷತೆ ಮತ್ತು ಹೈಬ್ರಿಡ್ ಆವೃತ್ತಿಯು ಲೀಟರ್‌ಗೆ 23.24 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ.
ಇದರ ಎಕ್ಸ್ ಶೋರೂಂ ದರ 25 ಲಕ್ಷ ರೂಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಕಿಯಾ ಕಾರೆನ್ಸ್, ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ ಮುಂತಾದ ಕಾರುಗಳೊಂದಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುವ ಸಾಧ್ಯತೆಯಿದೆ.