ರಾಮನವಮಿಯಂದು ಅಯೋಧ್ಯೆ ಬಾಲರಾಮನ ಹಣೆಗೆ ಸೂರ್ಯ ತಿಲಕ; ಯಾವಾಗ, ಎಷ್ಟು ಹೊತ್ತು, ಇಲ್ಲಿದೆ 5 ಅಂಶಗಳ ವಿವರಣೆ
Apr 10, 2024 05:21 PM IST
ರಾಮನವಮಿಯಂದು ಅಯೋಧ್ಯೆ ಬಾಲರಾಮನ ಹಣೆಗೆ ಸೂರ್ಯ ತಿಲಕದ ಅಣಕು ಪ್ರಯೋಗ ಯಶಸ್ವಿಯಾಗಿದೆ. (ಸಾಂಕೇತಿಕ ಚಿತ್ರ)
ರಾಮನವಮಿ ಆಚರಣೆಗೆ ಭಾರತಕ್ಕೆ ಭಾರತವೇ ಸಜ್ಜಾಗುತ್ತಿದೆ. ಅಯೋಧ್ಯೆಯಲ್ಲಿ ಬಾಲರಾಮ ವಿರಾಜಮಾನನಾದ ನಂತರದ ಮೊದಲ ರಾಮನವಮಿ ಇದು. ಈ ಸಲ ರಾಮನವಮಿಯಂದು ಅಯೋಧ್ಯೆ ಬಾಲರಾಮನ ಹಣೆಗೆ ಸೂರ್ಯ ತಿಲಕ ಕಾಣಲಿದೆ. ಯಾವಾಗ, ಎಷ್ಟು ಹೊತ್ತು ಎಂಬಿತ್ಯಾದಿ ಕುರಿತು ಇಲ್ಲಿದೆ 5 ಅಂಶಗಳ ವಿವರಣೆ.
ನವದೆಹಲಿ: ಅಯೋಧ್ಯೆ ಶ್ರೀ ರಾಮಜನ್ಮಭೂಮಿಯ ಶ್ರೀರಾಮ ಮಂದಿರ ರಾಮನವಮಿ ಆಚರಣೆ ಸಜ್ಜಾಗುತ್ತಿದೆ. ಅಯೋಧ್ಯೆಯಲ್ಲಿ ಬಾಲರಾಮ ವಿರಾಜಮಾನನಾದ ನಂತರದ ಮೊದಲ ರಾಮನವಮಿ ಹಬ್ಬದ ಆಚರಣೆ ಇದು. ಬಾಲರಾಮನ ಹಣೆಗೆ ಸೂರ್ಯ ತಿಲಕದ ಅಣಕು ಕಾರ್ಯಾಚರಣೆ ಏಪ್ರಿಲ್ 8ರಂದು ಯಶಸ್ವಿಯಾಗಿದೆ. ಈ ಸಲ ರಾಮನವಮಿಗೆ ಬಾಲರಾಮನ ಹಣೆಗೆ ಸೂರ್ಯ ತಿಲಕ ಹೊಳಪು ನೀಡಲಿದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಹೊಸ ಸಂವತ್ಸರದ ಮೊದಲ ತಿಂಗಳ 9ನೇ ದಿನವೇ ರಾಮನವಮಿ. ಇಂಗ್ಲಿಷ್ ಕ್ಯಾಲೆಂಡರ್ ಲೆಕ್ಕಾಚಾರದ ಪ್ರಕಾರ ಸಾಮಾನ್ಯವಾಗಿ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ರಾಮನವಮಿ ಬರುತ್ತೆ. ಈ ದಿನ ರಾಮನ ಜನ್ಮದಿನ. ಈ ವರ್ಷ ಏಪ್ರಿಲ್ 17ರಂದು ರಾಮನವಮಿ. ಈ ವರ್ಷ ಮೊದಲ ಬಾರಿಗೆ ಬಾಲರಾಮನ ಹಣೆಯಲ್ಲಿ ಸೂರ್ಯತಿಲಕ ಕಂಗೊಳಿಸಲಿದೆ. ಇದಕ್ಕೆ ವಿಶಿಷ್ಟ ವೈಜ್ಞಾನಿಕ ತಂತ್ರವನ್ನು ಅಳವಡಿಸಿಕೊಳ್ಳಲಾಗಿದ್ದು, ಈ ವರ್ಷದ ರಾಮನವಮಿಯಿಂದಾಚೆಗೆ ಪ್ರತಿ ರಾಮನವಮಿಗೆ ಬಾಲರಾಮನ ಹಣೆಗೆ ಸೂರ್ಯ ತಿಲಕದ ರಂಗು ಮೆರುಗು ನೀಡಲಿದೆ.
ಬಾಲರಾಮನ ಹಣೆಗೆ ಸೂರ್ಯತಿಲಕ; ಇದು ಹೇಗೆ ಸಾಧ್ಯ - ಇಲ್ಲಿದೆ 5 ಅಂಶಗಳ ವಿವರಣೆ
1) ಅಯೋಧ್ಯೆ ಬಾಲರಾಮನ ಹಣೆಗೆ ಪ್ರತಿ ರಾಮನವಮಿಯಂದು ಮಧ್ಯಾಹ್ನ 12 ಗಂಟೆಗೆ ಸೂರ್ಯಕಿರಣಗಳು ಸ್ಪರ್ಶಿಸಿ ಅಲ್ಲಿ “ಸೂರ್ಯತಿಲಕ”ವನ್ನು ಉಂಟುಮಾಡಲಿದೆ. ಈ ವಿದ್ಯಮಾನವು 3 ರಿಂದ 4 ನಿಮಿಷ ಇರಲಿದೆ. ಕೆಲವೊಂದು ಸಂದರ್ಭದಲ್ಲಿ 6 ನಿಮಿಷ ತನಕ ಇರಬಹುದು.
2) ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಹಭಾಗಿತ್ವದಲ್ಲಿ ಒಪ್ಟಿಕಾ ಎಂಬ ಕಂಪನಿ ಈ ಯೋಜನೆಯನ್ನು ರೂಪಿಸಿದೆ. ಇದಕ್ಕೆ ನಿಖರ ಮಸೂರ ಮತ್ತು ಕನ್ನಡಿಗಳನ್ನು ಬಳಸಿ ವಿಶಿಷ್ಟ ವಿನ್ಯಾಸವನ್ನು ಒದಗಿಸಿದೆ. ಈ ಅಂಶಗಳು ನೈಸರ್ಗಿಕ ಸೂರ್ಯನ ಬೆಳಕನ್ನು ಬಳಸಿಕೊಂಡು ದೈವಿಕ ಸಂಕೇತವಾಗಿ ಬಾಲರಾಮನ ಹಣೆಯ ಮೇಲೆ ಸೂರ್ಯತಿಲಕವನ್ನು ಉಂಟುಮಾಡುತ್ತವೆ.
3) ಅತ್ಯಾಧುನಿಕ ಸೂಕ್ಷ್ಮವಾದ ಲೂನಾರ್ ಕ್ಯಾಲೆಂಡರ್‌ನ ಯಾಂತ್ರಿಕ ವ್ಯವಸ್ಥೆಯೇ ಈ ಯೋಜನೆಯ ತಿರುಳು ಅಥವಾ ಕೇಂದ್ರ ಬಿಂದು. ಪ್ರತಿವರ್ಷ ರಾಮನವಮಿಗೆ ಹೊಂದುವಂತೆ ಅಭಿವೃದ್ಧಿಪಡಿಸಿರುವ ಈ ಕಾರ್ಯವಿಧಾನವು ಸಾಂಪ್ರದಾಯಿಕ ನಂಬಿಕೆಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಿದೆ.
4) ಆಪ್ಟಿಕಲ್ ಪಥ, ಪೈಪಿಂಗ್ ಮತ್ತು ಟಿಪ್-ಟಿಲ್ಟ್ ಹಂತಗಳನ್ನು ಯಾವುದೇ ಅಡೆತಡೆ ಇಲ್ಲದೆ ಕಾರ್ಯನಿರ್ವಹಿಸುವಂತೆ ಚತುರ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ವಿನ್ಯಾಸವು ದೀರ್ಘಾವಧಿಗೆ ಬಾಳ್ವಿಕೆ ಬರುವಂಥದ್ದು. ಕಿರಿ ಕಿರಿ ಮುಕ್ತ ನಿರ್ವಹಣೆಯನ್ನೂ ಖಾತರಿಗೊಳಿಸುತ್ತದೆ. ಭವಿಷ್ಯದ ಪೀಳಿಗೆಗೆ ನಿರಂತರ ದೈವಿಕ ಪ್ರಕಾಶದ ಭರವಸೆಯನ್ನು ನೀಡುತ್ತದೆ.
5) ಇದರ ತಯಾರಿಕೆಗೆ ಪಂಚ ಧಾತುವನ್ನು ಬಳಸಿದ್ದು, ಅದು 100 ವರ್ಷ ತನಕ ಬಾಳಿಕೆಯನ್ನು ಒದಗಿಸಬಲ್ಲದು. ಇದರ ವಿನ್ಯಾಸವು ಅಗತ್ಯವಿರುವಂತೆ ಸುಲಭ ಆಪ್ಟಿಕ್ ಬದಲಾವಣೆಗಳಿಗೆ ಅವಕಾಶ ನೀಡುತ್ತದೆ. ನಿರಂತರ ಕಾರ್ಯಾಚರಣೆ, ಗಾಂಭೀರ್ಯವನ್ನು ಖಾತ್ರಿಗೊಳಿಸುತ್ತದೆ.
ಸೂರ್ಯತಿಲಕ; ಅಣಕು ಪ್ರಯೋಗ ಯಶಸ್ವಿ
ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (CBRI) ತಜ್ಞರು ಪ್ರಸ್ತುತ ಅಯೋಧ್ಯೆಯಲ್ಲಿ ‘ಸೂರ್ಯತಿಲಕ’ದ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಂಡಿದ್ದಾರೆ. ರಾಮ್ ಲಲ್ಲಾ ಹಣೆ ಮೇಲೆ ‘ಸೂರ್ಯತಿಲಕ’ದ ಪ್ರಯೋಗ ಏಪ್ರಿಲ್ 8ರಂದು ಯಶಸ್ವಿಯಾಗಿದೆ. ಈ ಸಲ ರಾಮನವಮಿಯಂದು ಭಕ್ತರು ಈ ಅಭೂತಪೂರ್ವ ಘಟನೆಯನ್ನು ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್‌ನ ಹಿರಿಯ ನಾಯಕ ಗೋಪಾಲ್ ನಾಗರಕಟ್ಟೆ ಹೇಳಿದ್ದಾರೆ.
ಬಾಲರಾಮನ ಹಣೆಗೆ ಸೂರ್ಯತಿಲಕ; ಯೋಜನೆಯಲ್ಲಿ ಬೆಂಗಳೂರಿನ ಸಂಸ್ಥೆಗಳು
ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸೂರ್ಯನ ಪಥದ ಬಗ್ಗೆ ತಾಂತ್ರಿಕ ಸಹಾಯವನ್ನು ನೀಡಿದರೆ, ಅಪ್ಟಿಕಾ ಕಂಪನಿಯು ಪಾಲುದಾರಿಕೆಯ ಮೂಲಕ ನೆರವಾಯಿತು. ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಬಿಆರ್‌ಐ) ನಿರ್ದೇಶಕರಾದ ಪ್ರದೀಪ್ ಕುಮಾರ್ ರಾಮಂಚರ್ಲಾ ಮತ್ತು ದೇವದತ್ತ್ ಘೋಷ್ ಅವರು ಯೋಜನೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಸಿಬಿಆರ್‌ಐಯ ಮಾರ್ಗದರ್ಶನದಲ್ಲಿ ದೇವಾಲಯದ ಅಡಿಪಾಯವನ್ನು ಹಾಕಲಾಯಿತು. ರಚನಾತ್ಮಕ ಸಮಗ್ರತೆ ಮತ್ತು ದೀರ್ಘಾಯುಷ್ಯವನ್ನು ಖಚಿತಪಡಿಸಿಕೊಳ್ಳಲು ಅವರ ಪರಿಣತಿಯನ್ನು ಬಳಸಿಕೊಳ್ಳಲಾಯಿತು.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.