logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಿ20 ಶೃಂಗಸಭೆಯಲ್ಲಿ ಮೋದಿ ಮಾತನಾಡುವ ಮೇಜಿನ ನಾಮಫಲಕದಲ್ಲಿ 'India' ಬದಲು 'Bharat' ಹೆಸರು

ಜಿ20 ಶೃಂಗಸಭೆಯಲ್ಲಿ ಮೋದಿ ಮಾತನಾಡುವ ಮೇಜಿನ ನಾಮಫಲಕದಲ್ಲಿ 'India' ಬದಲು 'Bharat' ಹೆಸರು

Meghana B HT Kannada

Sep 09, 2023 12:14 PM IST

google News

ಮೋದಿ ಮಾತನಾಡುವ ಮೇಜಿನ ನಾಮಫಲಕದಲ್ಲಿ 'India' ಬದಲು 'Bharat' ಹೆಸರು

    • Bharat vs India: ರಾಷ್ಟ್ರದ ಹೆಸರು ಬದಲಾಯಿಸುವ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಜಿ20 ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಮೇಜಿನ ನಾಮಫಲಕದಲ್ಲಿ ದೇಶದ ಹೆಸರು ಇಂಗ್ಲಿಷ್​ ಅಕ್ಷರಗಳಲ್ಲಿ 'India' ಎಂದು ಇರುವ ಬದಲು 'Bharat' ಎಂದು ಇರುವುದು ಕಂಡು ಬಂದಿದೆ.
ಮೋದಿ ಮಾತನಾಡುವ ಮೇಜಿನ ನಾಮಫಲಕದಲ್ಲಿ 'India' ಬದಲು 'Bharat' ಹೆಸರು
ಮೋದಿ ಮಾತನಾಡುವ ಮೇಜಿನ ನಾಮಫಲಕದಲ್ಲಿ 'India' ಬದಲು 'Bharat' ಹೆಸರು

ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ನಮ್ಮ ರಾಷ್ಟ್ರದ ಹೆಸರು ಬದಲಾಯಿಸುವ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಜಿ20 ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುವ ಮೇಜಿನ ನಾಮಫಲಕದಲ್ಲಿ ದೇಶದ ಹೆಸರು ಇಂಗ್ಲಿಷ್​ ಅಕ್ಷರಗಳಲ್ಲಿ 'India' ಎಂದು ಇರುವ ಬದಲು 'Bharat' ಎಂದು ಇದೆ. ಇದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಭಾರತ್​​ ಮತ್ತು ಇಂಡಿಯಾ ಎಂಬೆರಡು ಪದಗಳು ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿದೆ. ಭಾರತದ ಇನ್ನೊಂದು ಹೆಸರಾದ ಇಂಡಿಯಾದ ಬದಲು ಎಲ್ಲೆಡೆ ಭಾರತ್‌ ಎಂದು ಬಳಕೆ ಮಾಡಲು ಕೇಂದ್ರ ಯೋಜಿಸಿದೆ ಎನ್ನುವುದು ಸುದ್ದಿ. ಭಾರತದ ಹೆಸರನ್ನು ಆಂಗ್ಲ ಭಾಷೆಯಲ್ಲಿ ಇಂಡಿಯಾ ಎಂದು ಹೇಳಲಾಗುತ್ತದೆ. ವಿದೇಶಿಗರಿಗೆ ಭಾರತದ ಹೆಸರು ಇಂಡಿಯಾ ಎಂಬುದಾಗಿ ಮಾತ್ರವೇ ತಿಳಿದಿದೆ. ಆದರೆ, ಆಂಗ್ಲ ಭಾಷೆಯ ಇಂಡಿಯಾ ಬದಲಾಗಿ ದೇಶದ ಹೆಸರು ಭಾರತ್ ಎಂದೇ ಇರಬೇಕೆಂಬ ಚರ್ಚೆ ಸದ್ಯ ನಡೆಯುತ್ತಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಹಾಗೂ ಬಿಜೆಪಿಯನ್ನು ಸೋಲಿಸಲು 28 ಪಕ್ಷಗಳು ಒಗ್ಗೂಡಿದ್ದು, ಇತ್ತೀಚೆಗೆ ಕಾಂಗ್ರೆಸ್‌ ನೇತೃತ್ವದ ಈ ಮಿತ್ರಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ 'ಇಂಡಿಯಾ' (I.N.D.I.A ಅಂದರೆ Indian National Development Inclusive Alliance) ಎಂದು ಹೆಸರಿಟ್ಟಿದ್ದವು. ಇದಕ್ಕಾಗಿಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಹೆಸರನ್ನೇ ಬದಲಿಸಲು ಹೊರಟಿದೆ ಎಂಬ ಚರ್ಚೆಯಿದೆ.

ಇದಕ್ಕೆ ಪುಷ್ಟಿ ನೀಡುವಂತೆ G20 ಶೃಂಗಸಭೆಯಲ್ಲಿ ಭಾಗವಹಿಸುವ ವಿದೇಶಿ ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನೀಡಲಾದ ಭೋಜನದ ಆಹ್ವಾನದಲ್ಲಿ ಕೂಡ ಭಾರತ್​ ಎಂದು ಉಲ್ಲೇಖಿಸಿದ್ದ ಕುರಿತು ಭಾರೀ ಚರ್ಚೆಯಾಗಿತ್ತು.

ಅಲ್ಲದೇ ನವದೆಹಲಿಯು ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸುತ್ತಿದ್ದಂತೆಯೇ ವಿಶ್ವಸಂಸ್ಥೆಯು ತನ್ನ ದಾಖಲೆಗಳಲ್ಲಿ ಇಂಡಿಯಾ ಎಂಬ ಹೆಸರನ್ನು ಭಾರತ್ ಎಂದು ಬದಲಾಯಿಸುವುದಾಗಿ ನಿನ್ನೆಯಷ್ಟೆ (ಸೆ.8, ಶುಕ್ರವಾರ) ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿರುವುದಾಗಿ NDTV ವರದಿ ಮಾಡಿದೆ.

ಮುಂಬರುವ ಸಂಸತ್​ ಅಧಿವೇಶನದಲ್ಲಿ ದೇಶದ ಹೆಸರು ಬದಲಾಯಿಸಬಹುದು ಎಂದು ಹೇಳಲಾಗಿದೆ. ಇನ್ನು ‘ಭಾರತ್’ ವಿಚಾರದಲ್ಲಿ ರಾಜಕೀಯ ಗದ್ದಲ ತಪ್ಪಿಸುವಂತೆ ತಮ್ಮ ಸಚಿವರಿಗೆ ಮೋದಿ ಸೂಚಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ