logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್ 2024 ನಿರೀಕ್ಷೆಗಳು; ಜನಸಾಮಾನ್ಯರು ಬಯಸುವುದೇನು, ಅವರ ಆಶಯಕ್ಕೆ ಪೂರಕವಾಗಿರುವ 6 ಅಂಶಗಳಿವು

ಕೇಂದ್ರ ಬಜೆಟ್ 2024 ನಿರೀಕ್ಷೆಗಳು; ಜನಸಾಮಾನ್ಯರು ಬಯಸುವುದೇನು, ಅವರ ಆಶಯಕ್ಕೆ ಪೂರಕವಾಗಿರುವ 6 ಅಂಶಗಳಿವು

Umesh Kumar S HT Kannada

Jul 18, 2024 04:12 PM IST

google News

ಕೇಂದ್ರ ಬಜೆಟ್ 2024 ನಿರೀಕ್ಷೆಗಳು; ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಜನಸಾಮಾನ್ಯರು ಬಯಸುವುದೇನು, ಅವರ ಆಶಯಕ್ಕೆ ಪೂರಕವಾಗಿರುವ 6 ಅಂಶಗಳಿವು.

  • ಕೇಂದ್ರ ಬಜೆಟ್ 2024 ನಿರೀಕ್ಷೆಗಳು ಗರಿಗೆದರಿವೆ. ಜನಸಾಮಾನ್ಯರು ಬಯಸುವುದೇನು, ಹಲವು ವಲಯಗಳ ಪರಿಣತರು ತಮ್ಮ ಆಶಯಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರ, ವೇತನದಾರರ, ಮಧ್ಯಮ ವರ್ಗದವರ ಆಶಯಕ್ಕೆ ಪೂರಕವಾಗಿರುವ 6 ಅಂಶಗಳ ವಿವರ ಇಲ್ಲಿದೆ.

ಕೇಂದ್ರ ಬಜೆಟ್ 2024 ನಿರೀಕ್ಷೆಗಳು; ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಜನಸಾಮಾನ್ಯರು ಬಯಸುವುದೇನು, ಅವರ ಆಶಯಕ್ಕೆ ಪೂರಕವಾಗಿರುವ 6 ಅಂಶಗಳಿವು.
ಕೇಂದ್ರ ಬಜೆಟ್ 2024 ನಿರೀಕ್ಷೆಗಳು; ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಜನಸಾಮಾನ್ಯರು ಬಯಸುವುದೇನು, ಅವರ ಆಶಯಕ್ಕೆ ಪೂರಕವಾಗಿರುವ 6 ಅಂಶಗಳಿವು.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23 ರಂದು ಲೋಕಸಭೆಯಲ್ಲಿ 2024-25 ರ ಹಣಕಾಸು ವರ್ಷದ ಬಜೆಟ್ ಅನ್ನು ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಬಜೆಟ್‌ ಮೇಲೆ ವಿವಿಧ ವಲಯಗಳ ನಿರೀಕ್ಷೆ ಹೆಚ್ಚಾಗಿದೆ. ಇದೇ ರೀತಿ ಜನಸಾಮಾನ್ಯರು ಕೂಡ ಅನೇಕ ನಿರೀಕ್ಷೆಗಳನ್ನು ಈ ಬಜೆಟ್ ಮೇಲೆ ಇಟ್ಟುಕೊಂಡಿದ್ದಾರೆ. ಅವುಗಳ ಪೈಕಿ ಎಲ್ಲರ ಗಮನ ಸಂಭಾವ್ಯ ತೆರಿಗೆ ಸುಧಾರಣಾ ಕ್ರಮಗಳ ಮೇಲೆ ಇದೆ ಎಂಬುದು ವಾಸ್ತವ. ಸರಳವಾಗಿ ಹೇಳಬೇಕು ಎಂದರೆ ಆದಾಯ ತೆರಿಗೆ ಮಿತಿ ಹೆಚ್ಚಳದ ಕಡೆಗೆ ಗಮನ ನೆಟ್ಟಿದೆ. ಈ ಸಲ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಸರ್ಕಾರ ಇನ್ನಷ್ಟು ಹೆಚ್ಚಿಸಬಹುದು ಎಂಬ ಕುರಿತು ಊಹಾಪೋಹಗಳು ಕೂಡ ಹುಟ್ಟಿಕೊಂಡಿವೆ.

ಖರ್ಚು ಮಾಡಬಹುದಾದ ಆದಾಯವನ್ನು ಹೆಚ್ಚಿಸಲು ಮತ್ತು ಗ್ರಾಹಕರ ಖರ್ಚು ಮಾಡುವ ಸಾಮರ್ಥ್ಯವನ್ನು ಉತ್ತೇಜಿಸಲು ಆದಾಯ ತೆರಿಗೆ ಸ್ಲ್ಯಾಬ್‌ಗಳನ್ನು ಪರಿಷ್ಕರಿಸುವ ಜೊತೆಗೆ ಆದಾಯ ತೆರಿಗೆ ದರಗಳನ್ನು ತರ್ಕಬದ್ಧಗೊಳಿಸುವ ನಿರೀಕ್ಷೆಯಲ್ಲಿದ್ದಾರೆ ಬಹುತೇಕರು. ಆದಾಗ್ಯೂ, ಹಳೆಯ ತೆರಿಗೆ ಪದ್ಧತಿಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುವುದು ಅಸಂಭವ ಎನ್ನಲಾಗುತ್ತಿದೆ. ತೆರಿಗೆ ರಚನೆಯನ್ನು ಸರಳಗೊಳಿಸುವ ಮತ್ತು ಅನುಸರಣೆಯನ್ನು ಹೆಚ್ಚಿಸುವ ಸರ್ಕಾರದ ನಿರೀಕ್ಷಿತ ಗಮನವು ಎಸ್‌ಎಂಇಗಳಿಗೆ ಕಡಿಮೆ ಕಾರ್ಪೊರೇಟ್ ತೆರಿಗೆ ದರಗಳು, ಕೌಶಲ್ಯ ಅಭಿವೃದ್ಧಿಗೆ ಪ್ರೋತ್ಸಾಹ ಮತ್ತು ಡಿಜಿಟಲ್ ಮೂಲಸೌಕರ್ಯ ಹೂಡಿಕೆ ಮುಂತಾದ ಉಪಕ್ರಮಗಳನ್ನು ಒಳಗೊಂಡಿರಬಹುದು ಎಂಬ ನಿರೀಕ್ಷೆ ಇದೆ.

ಕೇಂದ್ರ ಬಜೆಟ್ 2024-25 ನಿರೀಕ್ಷೆಗಳು; ಗಮನಸೆಳೆಯುತ್ತಿರುವ 6 ಅಂಶಗಳು

1) ತೆರಿಗೆ-ಸಂಬಂಧಿತ ಬದಲಾವಣೆ: ಕಳೆದ ವರ್ಷದ ಅಂದರೆ 2023 ರ ಬಜೆಟ್‌ನಲ್ಲಿ ತೆರಿಗೆ ರಚನೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಸರ್ಕಾರ ಮಾಡಿತ್ತು. ಪ್ರಮುಖ ಕೂಲಂಕಷ ಪರೀಕ್ಷೆಗಳು ಸನ್ನಿಹಿತವಾಗದಿದ್ದರೂ, ವ್ಯವಹಾರವನ್ನು ಸುಲಭಗೊಳಿಸಲು, ಸ್ಥಿರತೆಗಾಗಿ ತೆರಿಗೆ ವ್ಯವಸ್ಥೆಯನ್ನು ಕ್ರೋಢೀಕರಿಸುವ ಮತ್ತು ನೇರ ತೆರಿಗೆ ನೀತಿಯ ಅನುಷ್ಠಾನದ ಕಡೆಗೆ ಮುನ್ನಡೆಯುವ ಗುರಿಯನ್ನು ಹೊಂದಿರುವ ಘೋಷಣೆಗಳಾಗಬಹುದು. ಪರೋಕ್ಷ ತೆರಿಗೆಯ ಮೇಲೆ ಜಿಎಸ್‌ಟಿಯ ಪ್ರಭಾವ ಸಮಾನಾಂತರವಾಗಿ ಆಗಬಹುದಾಗಿದ್ದು, ನೇರ ತೆರಿಗೆ ನೀತಿ ರಚನೆಯನ್ನು ಸರಳೀಕರಿಸಲು ಮತ್ತು ತೆರಿಗೆ ಹೊರೆಯನ್ನು ತಗ್ಗಿಸಬಹುದು ಎಂಬ ನಿರೀಕ್ಷೆಯನ್ನು ಟೀಮ್‌ಲೀಸ್ ರೆಗ್ಟೆಕ್‌ನ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ಸಂದೀಪ್ ಅಗರವಾಲ್ ವ್ಯಕ್ತಪಡಿಸಿರುವುದಾಗಿ ಲೈವ್ ಮಿಂಟ್ ಹೇಳಿದೆ.

2) ಹೊಸ ತೆರಿಗೆ ಪದ್ಧತಿಯಲ್ಲಿ ಪ್ರತಿ ಸ್ಲ್ಯಾಬ್‌ಗೆ ಮಿತಿ ಹೆಚ್ಚಳ: ಮಧ್ಯಮ ವರ್ಗದವರಿಗೆ ತೆರಿಗೆ ಬಾಧ್ಯತೆಗಳನ್ನು ನಿವಾರಿಸುವುದಕ್ಕಾಗಿ ಮುಂಬರುವ ಬಜೆಟ್‌ನೊಳಗೆ ಹೊಸ ತೆರಿಗೆ ಪದ್ಧತಿಯಲ್ಲಿ ಸ್ಲ್ಯಾಬ್ ಮಿತಿಗಳನ್ನು ಹೆಚ್ಚಿಸಬಹುದು. 2024 ರ ಬಜೆಟ್‌ನಲ್ಲಿ ರಿಯಾಯಿತಿ ಮಿತಿಯನ್ನು ಹೆಚ್ಚಿಸುವುದನ್ನು ಹೊಸ ಆಡಳಿತಕ್ಕೆ ಪರಿವರ್ತನೆ ಮಾಡಲು ತೆರಿಗೆದಾರರನ್ನು ಉತ್ತೇಜಿಸುವ ಕಾರ್ಯತಂತ್ರದ ಕ್ರಮವಾಗಿರಬಹುದು ಎಂದು ಸಂದೀಪ್ ಅಗರವಾಲ್ ಪ್ರತಿಪಾದಿಸಿದ್ದಾರೆ.

3) ಆದಾಯ ತೆರಿಗೆ ವಿನಾಯಿತಿ: ಚಾಲ್ತಿಯಲ್ಲಿರುವ ಆದಾಯ ತೆರಿಗೆ ದರಗಳಲ್ಲಿ ಕನಿಷ್ಠ ಪರಿಷ್ಕರಣೆಯನ್ನು ನಿರೀಕ್ಷಿಸಲಾಗುತ್ತಿದ್ದು, ಆಸ್ತಿವಹಿವಾಟು, ಷೇರು ವಿತರಣೆ, ಫ್ಯೂಚರ್ಸ್ ಆಂಡ್ ಆಪ್ಶನ್ಸ್‌ ವ್ಯವಹಾರದ ಲಾಭದ ಮೇಲೆ ತೆರಿಗೆ ವಿಧಿಸಬಹುದು. ಚಾಲ್ತಿಯಲ್ಲಿರುವ ಆಹಾರ ಹಣದುಬ್ಬರಕ್ಕೆ ಪ್ರತಿಕ್ರಿಯೆಯಾಗಿ ಮೂಲ ಸ್ಲ್ಯಾಬ್ ದರಗಳು ಅಥವಾ ಪ್ರಮಾಣಿತ ಕಡಿತ ಮಿತಿಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಎಲ್‌ಎಲ್‌ಪಿ ವಿಲೀನ ಮತ್ತು ವಿಭಜನೆಗಳಿಗೆ ತೆರಿಗೆ ತಟಸ್ಥ ನೀತಿ ಬರಬಹುದು ಎಂದು ಜೆಎಸ್‌ಎ ಅಡ್ವೋಕೇಟ್ಸ್ ಆಂಡ್ ಸಾಲಿಸಿಟರ್ಸ್‌ ಪಾಲುದಾರ ಕುಮಾರಮಂಗಲಂ ವಿಜಯ್ ಹೇಳಿದ್ದಾಗಿ ಲೈವ್‌ ಮಿಂಟ್ ಹೇಳಿದೆ.

4) ಏಕೀಕೃತ ತೆರಿಗೆ ಪದ್ಧತಿ: ಪ್ರೈಮಸ್ ಪಾರ್ಟ್‌ನರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರವಣ್ ಶೆಟ್ಟಿ ಅವರ ಪ್ರಕಾರ, ವಿನಾಯಿತಿಗಳಿಲ್ಲದೆ ಏಕೀಕೃತ ತೆರಿಗೆ ಪದ್ಧತಿಯನ್ನು ಪರಿಚಯಿಸುವ ಮೂಲಕ ತೆರಿಗೆಯನ್ನು ಸರಳೀಕರಿಸಬಹುದು. ಗೃಹ ಸಾಲಗಳು ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ಹೂಡಿಕೆಗಳನ್ನು ಉತ್ತೇಜಿಸಲು ಪರ್ಯಾಯ ವಿಧಾನಗಳನ್ನು ಅನ್ವೇಷಿಸಬಹುದು. ಇಎಂಐ ಅಥವಾ ಎನ್‌ಪಿಎಸ್‌ ಪಾವತಿಗಳೊಂದಿಗೆ ತೆರಿಗೆ ಪ್ರಯೋಜನಗಳನ್ನು ಸಂಯೋಜಿಸಲು ಸುವ್ಯವಸ್ಥಿತ ಪ್ರಕ್ರಿಯೆ ಬೇಕು. ತೆರಿಗೆ ರಿಟರ್ನ್ಸ್‌ಗೆ ಸ್ವಯಂಚಾಲಿತ ಲಿಂಕ್ ಅಗತ್ಯವಿದೆ. ಇದಕ್ಕಾಗಿ ಏಕೀಕೃತ ತೆರಿಗೆ ವೇದಿಕೆಯಲ್ಲಿ ಸಂಬಳದ ತೆರಿಗೆದಾರರಿಗೆ ತೆರಿಗೆ ಸಲ್ಲಿಸುವಿಕೆಯನ್ನು ಸರಳಗೊಳಿಸಬೇಕು. ಲೆಕ್ಕಾಚಾರಗಳನ್ನು ಸುಗಮಗೊಳಿಸಬೇಕು. ವಾಡಿಕೆಯ ಬಿಲ್ ಪಾವತಿಗಳಿಗೆ ಸಮಾನವಾದ ಪಾವತಿ ಪ್ರಕ್ರಿಯೆಗಳನ್ನು ಮಾಡಬೇಕಾದ ಅಗತ್ಯವಿದೆ.

5) ಹೋಮ್ ಲೋನ್ ತೆರಿಗೆ ವಿನಾಯಿತಿ: ಕೋವಿಡ್ ಸಂಕಷ್ಟದ ಬಳಿಕ ಬಜೆಟ್ ಮನೆಗಳಿಗೆ ಬೇಡಿಕೆಯನ್ನು ಉತ್ತೇಜಿಸಲು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 ರ ಅಡಿಯಲ್ಲಿ ಗೃಹ ಸಾಲದ ಬಡ್ಡಿಯ ಮೇಲಿನ ತೆರಿಗೆ ರಿಯಾಯಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬೇಕಾದ ಅಗತ್ಯ ಇದೆ ಎಂದು ಬೇಸಿಕ್ ಹೋಮ್ ಲೋನ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಅತುಲ್ ಮೊಂಗಾ ಹೇಳಿರುವುದಾಗಿ ಲೈವ್ ಮಿಂಟ್ ವರದಿ ವಿವರಿಸಿದೆ.

6) ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ತೆರಿಗೆ ರಿಯಾಯಿತಿ: ಹೂಡಿಕೆಯನ್ನು ಹೆಚ್ಚಿಸಲು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (SME) ಕಾರ್ಪೊರೇಟ್ ತೆರಿಗೆ ದರಗಳನ್ನು ಕಡಿಮೆ ಮಾಡಬೇಕಾಗಿದೆ. ಕಡಿಮೆ ತೆರಿಗೆ ಸ್ಲ್ಯಾಬ್‌ಗಳು ಮತ್ತು ಅಗತ್ಯ ಸರಕುಗಳು ಮತ್ತು ಸೇವೆಗಳ ಮೇಲಿನ ಕಡಿಮೆ ದರಗಳೊಂದಿಗೆ ಸರಳೀಕೃತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಚನೆ ಬೇಕಾಗಿದ್ದು, ಇದು ಅನುಸರಣೆಯನ್ನು ಹೆಚ್ಚಿಸುವ ಮತ್ತು ವ್ಯವಹಾರಗಳ ಮೇಲಿನ ಒಟ್ಟಾರೆ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರಬೇಕು ಎಂದು ಜಿಐ ಗ್ರೂಪ್ ಹೋಲ್ಡಿಂಗ್‌ನ ಹಣಕಾಸು ಮತ್ತು ಖಾತೆಗಳ ನಿರ್ದೇಶಕ ಕುಲ್ಜೀತ್ ಸಿಂಗ್ ನಿರೀಕ್ಷಿಸುತ್ತಿರುವುದಾಗಿ ಲೈವ್ ಮಿಂಟ್‌ ಹೇಳಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ