logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಯುಪಿಐ ಲೈಟ್ ಬಳಕೆದಾರರಿಗೊಂದು ಖುಷಿ ಸುದ್ದಿ, ಇನ್ನು ಒಮ್ಮೆಲೇ 500 ಅಲ್ಲ ಒಂದು ಸಾವಿರ ಕಳುಹಿಸಿ, ವ್ಯಾಲೆಟ್‌ನಲ್ಲೂ 5000 ರೂ ಇಟ್ಕೊಳ್ಳಿ

ಯುಪಿಐ ಲೈಟ್ ಬಳಕೆದಾರರಿಗೊಂದು ಖುಷಿ ಸುದ್ದಿ, ಇನ್ನು ಒಮ್ಮೆಲೇ 500 ಅಲ್ಲ ಒಂದು ಸಾವಿರ ಕಳುಹಿಸಿ, ವ್ಯಾಲೆಟ್‌ನಲ್ಲೂ 5000 ರೂ ಇಟ್ಕೊಳ್ಳಿ

Umesh Kumar S HT Kannada

Oct 09, 2024 05:16 PM IST

google News

ಯುಪಿಐ ಲೈಟ್ ಬಳಕೆದಾರರಿಗೊಂದು ಖುಷಿ ಸುದ್ದಿ, ಇನ್ನು ಒಮ್ಮೆಲೇ 500 ಅಲ್ಲ ಒಂದು ಸಾವಿರ ಕಳುಹಿಸಿ, ವ್ಯಾಲೆಟ್‌ನಲ್ಲೂ 5000 ರೂ ಇಟ್ಕೊಳ್ಳಿ. (ಸಾಂಕೇತಿಕ ಚಿತ್ರ)

  • ಯುಪಿಐ ಲೈಟ್ ಮತ್ತು ಯುಪಿಐ 123ಪೇ ಬಳಕೆದಾರರಿಗೆ ಖುಷಿ ಸುದ್ದಿ, ಯುಪಿಐ ಲೈಟ್‌ ಬಳಕೆದಾರರು ಇನ್ನು ಒಮ್ಮೆಲೇ 500 ಅಲ್ಲ ಒಂದು ಸಾವಿರ ಕಳುಹಿಸಬಹುದು. ಅದೇ ರೀತಿ, ಯುಪಿಐ ಲೈಟ್‌ ವ್ಯಾಲೆಟ್‌ನಲ್ಲೂ 5000 ರೂ ಇಟ್ಕೊಳ್ಳಬಹುದು. ಇದರ ವಿವರ ಇಲ್ಲಿದೆ.

ಯುಪಿಐ ಲೈಟ್ ಬಳಕೆದಾರರಿಗೊಂದು ಖುಷಿ ಸುದ್ದಿ, ಇನ್ನು ಒಮ್ಮೆಲೇ 500 ಅಲ್ಲ ಒಂದು ಸಾವಿರ ಕಳುಹಿಸಿ, ವ್ಯಾಲೆಟ್‌ನಲ್ಲೂ 5000 ರೂ ಇಟ್ಕೊಳ್ಳಿ. (ಸಾಂಕೇತಿಕ ಚಿತ್ರ)
ಯುಪಿಐ ಲೈಟ್ ಬಳಕೆದಾರರಿಗೊಂದು ಖುಷಿ ಸುದ್ದಿ, ಇನ್ನು ಒಮ್ಮೆಲೇ 500 ಅಲ್ಲ ಒಂದು ಸಾವಿರ ಕಳುಹಿಸಿ, ವ್ಯಾಲೆಟ್‌ನಲ್ಲೂ 5000 ರೂ ಇಟ್ಕೊಳ್ಳಿ. (ಸಾಂಕೇತಿಕ ಚಿತ್ರ) (NPCI)

ಮುಂಬಯಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ವಿತ್ತೀಯ ನೀತಿರಬ ಸಭೆಯ ನಿರ್ಧಾರಗಳು ಪ್ರಕಟವಾಗಿದ್ದು, ಯುಪಿಐ ಲೈಟ್ ಬಳಕೆದಾರರಿಗೆ ಖುಷಿಯ ವಿಚಾರ ಇದೆ. ಹೌದು, ಯುಪಿಐ ಲೈಟ್ ಬಳಕೆದಾರರು ಇನ್ನು ಒಮ್ಮೆಲೇ 500 ಅಲ್ಲ ಒಂದು ಸಾವಿರ ಕಳುಹಿಸಬಹುದು. ಅದೇ ರೀತಿ ಯುಪಿಐ ಲೈಟ್ ವ್ಯಾಲೆಟ್‌ನಲ್ಲೂ 5000 ರೂ ಇಟ್ಕೊಳ್ಳಬಹುದು. ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರು ಇಂದು (ಅಕ್ಟೋಬರ್ 9) ವಿತ್ತೀಯ ನೀತಿ ಸಭೆಯ ನಿರ್ಧಾರಗಳು ಮತ್ತು ಚರ್ಚಿಸಿದ ವಿಷಯಗಳ ಪ್ರಮುಖ ಅಂಶಗಳನ್ನು ಸುದ್ದಿಗೋಷ್ಠಿ ನಡೆಸಿ ದೇಶವಾಸಿಗಳಿಗೆ ತಿಳಿಸಿದರು. ಇದರಂತೆ, ಯುಪಿಐ ಲೈಟ್‌ನಲ್ಲಿ ಈಗ ಇರುವ ಪ್ರತಿ ವಹಿವಾಟಿನ ಮಿತಿಯನ್ನು 500 ರೂಪಾಯಿಯಿಂದ 1000 ರೂಪಾಯಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ಯುಪಿಐ ಲೈಟ್‌ ವ್ಯಾಲೆಟ್‌ನಲ್ಲಿ ಇರಿಸಿಕೊಳ್ಳಬಹುದಾದ ಹಣದ ಮಿತಿಯನ್ನು ಈಗ ಇರುವ 2000 ರೂಪಾಯಿಯಿಂದ 5,000 ರೂಪಾಯಿಗೆ ಏರಿಸಲಾಗಿದೆ. ಇದೇ ರೀತಿ, ಯುಪಿಐ 123ಪೇ ಮೂಲಕ ನಡೆಯುವ ಪ್ರತಿ ವಹಿವಾಟು ಮಿತಿಯನ್ನು 5000 ರೂಪಾಯಿಯಿಂದ 10,000 ರೂಪಾಯಿಗೆ ಏರಿಸಲಾಗಿದೆ.

ಯುಪಿಐ ಲೈಟ್ ಪಾವತಿ ಮಿತಿ ಹೆಚ್ಚಳದ ಬಗ್ಗೆ ಆರ್‌ಬಿಐ ಗವರ್ನರ್ ಹೇಳಿದ್ದಿಷ್ಟು

ಭಾರತದ ಅರ್ಥ ವ್ಯವಸ್ಥೆಯಲ್ಲಿ ಹಣಕಾಸು ವಹಿವಾಟಿನ ಚಿತ್ರಣವನ್ನೇ ಬದಲಾಯಿಸಿದ್ದು ಯುಪಿಐ. ಡಿಜಿಟಲ್ ಪಾವತಿ ಮೂಲಕ ಎಲ್ಲರನ್ನೂ ಹಣಕಾಸು ವ್ಯವಸ್ಥೆಯೊಳಗೆ ತಂದಿರುವ ಯುಪಿಐ ನಿರಂತರ ನವೋನ್ವೇಷಣೆ ಮತ್ತು ಅದನ್ನು ಜಾರಿಗೊಳಿಸುವ ಮೂಲಕ ಜನರನ್ನು ಅರ್ಥ ವ್ಯವಸ್ಥೆಯಲ್ಲಿ ಮುನ್ನಡೆಸುತ್ತಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ವಿವರಿಸಿದರು.

ಇದರಂತೆ, ಯುಪಿಐ ಬಳಕೆಯನ್ನು ಇನ್ನಷ್ಟು ಹೆಚ್ಚಿಸುವುದಕ್ಕಾಗಿ ಆರ್‌ಬಿಐ, ಯುಪಿಐ 123 ಪೇ ಆಪ್‌ ಮೂಲಕ ಇನ್ನು ಪ್ರತಿ ಸಲ 10,000 ರೂಪಾಯಿ ಗರಿಷ್ಠ ಪಾವತಿ ಮಾಡಬಹುದು. ಅದೇ ರೀತಿ ಯುಪಿಐ ಲೈಟ್‌ನ ವ್ಯಾಲೆಟ್‌ನಲ್ಲಿ ಗರಿಷ್ಠ 5000 ರೂಪಾಯಿ ಇರಿಸಿಕೊಳ್ಳಬಹುದು. ಪ್ರತಿ ವಹಿವಾಟಿನಲ್ಲಿ ಗರಿಷ್ಠ 1000 ರೂ ಪಾವತಿಸಬಹುದು ಎಂದು ಹೇಳಿದರು.

ಯುಪಿಐ ಲೈಟ್ ಮತ್ತು ಯುಪಿಐ123ಪೇ

ಡಿಜಿಟಲ್‌ ಪಾವತಿ ಜಗತ್ತಿನಲ್ಲಿ ಯುಪಿಐ ಬಳಕೆಯನ್ನು ಹೆಚ್ಚಿಸುವ ಸಲುವಾಗಿ, ಯುಪಿಐ ಲೈಟ್ ಮತ್ತು ಯುಪಿಐ 123ಪೇಯನ್ನು ಪರಿಚಯಿಸಲಾಗಿದೆ.

1) ಯುಪಿಐ 123ಪೇ: ಡಿಜಿಟಲ್ ಪಾವತಿ ಜಗತ್ತಿನಲ್ಲಿ ಯುಪಿಐ 123 ಪೇ ಆಪ್‌ ಅನ್ನು 2022ರ ಮಾರ್ಚ್‌ನಲ್ಲಿ ಗ್ರಾಹಕರಿಗೆ ಪರಿಚಯಿಸಲಾಗಿದೆ. ಇದು ಫೀಚರ್‌ ಫೋನ್‌ ಬಳಕೆದಾರರಿಗಾಗಿ ಮಾಡಲಾಗಿದ್ದು, 12 ಭಾಷೆಗಳಲ್ಲಿ ಬಳಕೆದಾರರಿಗೆ ಡಿಜಿಟಲ್ ವಹಿವಾಟಿಗೆ ನೆರವಾಗುತ್ತಿದೆ. ಪ್ರಸ್ತುತ ಇದರ ಪಾವತಿ ಮಿತಿ 5000 ರೂಪಾಯಿ ಇದ್ದು, ಇನ್ನು ಗರಿಷ್ಠ ಮಿತಿ 10,000 ರೂಪಾಯಿಗೆ ಏರಿಕೆಯಾಗಲಿದೆ. ಇದಕ್ಕೆ ಸಂಬಂಧಿಸಿದ ಸೂಚನೆಯನ್ನು ಎನ್‌ಪಿಸಿಐ ಶೀಘ್ರವೆ ರವಾನಿಸಲಿದೆ.

2) ಯುಪಿಐ ಲೈಟ್‌: ನ್ಯಾಷನಲ್‌ ಪೇಮೆಂಟ್ಸ್ ಕಾರ್ಪೊರೇಷನ್‌ ಆಫ್ ಇಂಡಿಯಾ (ಎನ್‌ಪಿಸಿಐ) ಯುಪಿಐ ಲೈಟ್ ಆಪ್‌ ಅನ್ನು 2022ರ ಸೆಪ್ಟೆಂಬರ್‌ನಲ್ಲಿ ಗ್ರಾಹಕರಿಗ ಪರಿಚಯಿಸಿದೆ. ಇದು ಕಡಿಮೆ ಮೌಲ್ಯದ ವಹಿವಾಟನ್ನು ಕ್ಷಿಪ್ರವಾಗಿ ಮತ್ತು ಸರಳವಾಗಿ ನೆರವೇರಿಸಲು ಸಹಕಾರಿ. ಪ್ರಸ್ತುತ ಪ್ರತಿ ವಹಿವಾಟಿನಲ್ಲಿ ಗರಿಷ್ಠ 500 ರೂಪಾಯಿ ಪಾವತಿಸಬಹುದು. ಅದೇ ರೀತಿ ವ್ಯಾಲೆಟ್‌ನಲ್ಲಿ ಗರಿಷ್ಠ 2000 ರೂಪಾಯಿ ಇಟ್ಟುಕೊಳ್ಳಬಹುದು. ಈ ಉತ್ಪನ್ನದ ಬಳಕೆಯನ್ನು ಹೆಚ್ಚಿಸುವ ಸಲುವಾಗಿ ಈಗ ಇದರ ಪ್ರತಿ ವಹಿವಾಟಿನ ಗರಿಷ್ಠ ಮಿತಿಯನ್ನು 1000 ರೂಪಾಯಿಗೆ ಮತ್ತು ವ್ಯಾಲೆಟ್‌ನ ಗರಿಷ್ಠ ಮಿತಿಯನ್ನು 5000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿ ಹೊಸ ಮಾರ್ಗಸೂಚಿಯನ್ನು ಎನ್‌ಪಿಸಿಐ ಪ್ರಕಟಿಸಲಿದ್ದು, ನಂತರ ಅನುಷ್ಠಾನವಾಗಲಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ