ಊಟ ನಿದ್ದೆ ಬಿಟ್ಟು ಮಾಲ್‌ಗಳ ಮುಂದೇಕೆ ಇಷ್ಟೊಂದು ಜನ ಕ್ಯೂ ನಿಂತಿದ್ದಾರೆ!; ಇದು ಐಫೋನ್ ಕ್ರೇಜ್, ಮಾರುಕಟ್ಟೆಗೆ ಬಂತು 16 ಸೀರೀಸ್
Sep 20, 2024 02:06 PM IST
ಐಫೋನ್ ಕ್ರೇಜ್; ಭಾರತದ ಮೊಟ್ಟ ಮೊದಲ ಆಪಲ್ ಸ್ಟೋರಿ ಮುಂಬಯಿಯ ಬಿಕೆಸಿಯಲ್ಲಿದ್ದು, ಅಲ್ಲಿ ಇಂದು ಕಂಡು ಬಂದ ಜನದಟ್ಟಣೆ, (ವಿಡಿಯೋದಿಂದ ತೆಗೆದ ಚಿತ್ರ)
ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇಂದಿನಿಂದ ಐಫೋನ್ 16 ಸೀರೀಸ್ ಫೋನ್‌ಗಳು ಲಭ್ಯ ಇವೆ. ಹೀಗಾಗಿ, ಮಹಾನಗರಗಳಲ್ಲಿ ಐಫೋನ್ ಕ್ರೇಜ್ ಕಂಡುಬಂದಿದೆ. ದೆಹಲಿ, ಮುಂಬಯಿ ಆಪಲ್ ಸ್ಟೋರ್‌ಗಳ ಎದುರು ಐಫೋನ್ 16 ಸೀರೀಸ್‌ಗಾಗಿ ಕ್ಯೂ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.
ನವದೆಹಲಿ: ಭಾರತದಲ್ಲಿ ಐಫೋನ್ ಕ್ರೇಜ್ ಕಡಿಮೆ ಏನಲ್ಲ. ಇಂದು (ಸೆಪ್ಟೆಂಬರ್) ದೆಹಲಿ, ಮುಂಬಯಿ ಮಹಾನಗರಗಳಲ್ಲಿ ಆಪಲ್ ಸ್ಟೋರ್‌ಗಳ ಎದುರು ಐಫೋನ್ 16 ಸೀರೀಸ್‌ಗಾಗಿ ಕ್ಯೂ ನಿಂತ ಪರಿ ನೋಡಿ ಅನೇಕರು ದಂಗಾಗಿ ಹೋಗಿದ್ದಾರೆ. ಕಂಪನಿಯ ಫ್ಲಾಗ್‌ಶಿಪ್ ಸ್ಟೋರ್‌ಗಳ ಹೊರಗೆ ಚಿತ್ರಮಂದಿರಗಳ ಎದುರು ಜನ ಟಿಕೆಟ್‌ಗಾಗಿ ಸರದಿ ನಿಲ್ಲುವಂತೆ, ರೇಷನ್ ಅಂಗಡಿಗಳ ಎದುರು ಜನ ಸರದಿ ನಿಲ್ಲುವಂತೆ ನಿಂತದ್ದು ಕಂಡುಬಂತು. ಭಾರತದಲ್ಲಿ ಐಫೋನ್ 16 ಸೀರೀಸ್ ಫೋನ್‌ಗಳು ಇಂದಿನಿಂದ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಈ ತಿಂಗಳ ಆರಂಭದಲ್ಲಿ ಆಪಲ್ ಈ ಫೋನ್‌ಗಳನ್ನು ಗ್ಲೋ ಟೈಮ್ ಇವೆಂಟ್‌ನಲ್ಲಿ ಮಾರುಕಟ್ಟೆಗೆ ಪರಿಚಯಿಸಿತ್ತು.
ಮುಂಬೈನ ಬಿಕೆಸಿ ಮತ್ತು ದೆಹಲಿಯ ಸಾಕೇತ್‌ನಲ್ಲಿರುವ ಆಪಲ್ ಸ್ಟೋರ್‌ನಲ್ಲಿ ಇಂದು ಬೆಳಿಗ್ಗೆ ಹೆಚ್ಚಿನ ಜನಸಂದಣಿಯನ್ನು ಕಂಡುಬಂತು. ಇದು ಹೊಸ ಆಪಲ್ ಡಿವೈಸ್ ಖರೀದಿ ಬಗ್ಗೆ ಐಫೋನ್ ಪ್ರಿಯರ ಕ್ರೇಜ್‌ಗೆ ಸಾಕ್ಷಿ ಎನ್ನತೊಡಗಿದೆ ಸೋಷಿಯಲ್ ಮೀಡಿಯಾ. ಮಹಾನಗರಗಳಲ್ಲಿ ಹೊಸ ತಲೆಮಾರಿನ ಐಫೋನ್ ಖರೀದಿಸಲು ಜನರು ಸಾಲುಗಟ್ಟಿದ ವಿಡಿಯೋ ವೈರಲ್ ಆಗಿವೆ.
ಐಫೋನ್ 16 ಸೀರೀಸ್ ಖರೀದಿಗೆ ಸರದಿ ನಿಂತ ಜನ; ವೈರಲ್ ವಿಡಿಯೋ
ಐಫೋನ್ 16 ಸೀರೀಸ್ ಖರೀದಿಗೆ ಸರದಿ ನಿಂತ ಜನರ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಸಾಕಷ್ಟು ವಿಡಿಯೋಗಳು ವಿವಿಧ ತಾಣಗಳ ಮೂಲಕ ಶೇರ್ ಆಗುತ್ತಿವೆ. ಎಎನ್‌ಐ ಸುದ್ದಿ ಸಂಸ್ಥೆ ಕೂಡ ಒಂದು ವಿಡಿಯೋ ಶೇರ್ ಮಾಡಿದ್ದು, ಅದರಲ್ಲಿ ಸಾಕೇತ್‌ನ ಸೆಲೆಕ್ಟ್ ಸಿಟಿ ವಾಕ್‌ನಲ್ಲಿ ಗ್ರಾಹಕರು ಸರದಿ ನಿಂತ ದೃಶ್ಯವಿದೆ. ಆಪ್‌ಲ್ ಸ್ಟೋರಿ ಬಾಗಿಲಿನಿಂದ ಇಡೀ ಮಾಲ್‌ನ ಉದ್ದಕ್ಕೂ ಸಾಲು ಮುಂದುವರಿದ ದೃಶ್ಯ ಅದರಲ್ಲಿ. ನೀವೂ ನೋಡಿ-
ಇದೇ ರೀತಿ ಮುಂಬಯಿಯ ಬಿಕೆಸಿಯಲ್ಲಿ ಭಾರತದ ಮೊದಲ ಆಪಲ್ ಸ್ಟೋರ್ ಎದುರು ಕೂಡ ಐಫೋನ್ 16 ಸೀರೀಸ್ ಖರೀದಿಗಾಗಿ ಜನ ಸರದಿ ನಿಂತಿರುವುದು ಕಂಡುಬಂತು.
3.7 ಕೋಟಿಗೂ ಅಧಿಕ ಐಫೋನ್ ಮುಂಗಡ ಬುಕ್ಕಿಂಗ್!
ಸೆಪ್ಟೆಂಬರ್ 20 ರಂದು ಐಫೋನ್ 16 ಸರಣಿಯು ಮಾರಾಟವಾಗುವ ಮೊದಲು 37 ಮಿಲಿಯನ್‌ಗಿಂತಲೂ ಹೆಚ್ಚು ಐಫೋನ್‌ಗಳನ್ನು ಪೂರ್ವ-ಮಾರಾಟದಲ್ಲಿ ಮುಂಗಡ ಬುಕ್ಕಿಂಗ್ ನಡೆದಿತ್ತು.
ಆಪಲ್ ಕಂಪನಿಯು ಇಂದು ಯುಎಸ್, ಚೀನಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾ ಸೇರಿ ಸುಮಾರು 60 ದೇಶಗಳಲ್ಲಿ ಐಫೋನ್ 16 ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಈ ಶ್ರೇಣಿಯಲ್ಲಿ ಸ್ಟ್ಯಾಂಡರ್ಡ್ ಐಫೋನ್ 16, 16 ಪ್ಲಸ್, ಮತ್ತು ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್ ಫೋನ್‌ಗಳಿವೆ. ಕಂಪನಿಯು ಮೊದಲ ಬಾರಿಗೆ ಭಾರತದಲ್ಲಿ ಐಫೋನ್ ಪ್ರೊ ಸರಣಿಯನ್ನು ಜೋಡಿಸಲು ಪ್ರಾರಂಭಿಸಲು ಯೋಜಿಸಿದೆ. ಆದರೆ ಆ ಮಾದರಿಗಳು ಮುಂದಿನ ದಿನಗಳಲ್ಲಿ ಮಾರಾಟ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ಆಮದು ಸುಂಕ ಕಡಿತ ಮಾಡಲಾಗಿತ್ತು. ಹೀಗಾಗಿ ಆಪಲ್ ಕಂಪನಿಯು ಹಿಂದಿನ ಆವೃತ್ತಿಗಿಂತ ಕಡಿಮೆ ಬೆಲೆಗೆ ಐಫೋನ್ ಪ್ರೊ ಸರಣಿಯನ್ನು ಮಾರಾಟ ಮಾಡುತ್ತಿರುವುದು ಇದೇ ಮೊದಲು.
ಐಫೋನ್ 16 ಪ್ರೊ ಆರಂಭಿಕ ಮಾಡೆಲ್ ಮಾರಾಟದರವು 1,19,900 ರೂಪಾಯಿಯಿಂದ, ಐಫೋನ್ 16 ಪ್ರೊ ಮ್ಯಾಕ್ಸ್ ಮಾರಾಟದರ 1,44,900 ರೂಪಾಯಿಯಿಂದ ಶುರುವಾಗಿದೆ. ಇದೇ ರೀತಿ, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಕೂಡ ಕಳೆದ ವರ್ಷ ಬಿಡುಗಡೆಯಾದಾಗ 1,34,900 ರೂ ಮತ್ತು 1,59,900 ರೂಪಾಯಿಗೆ ಮಾರಾಟವಾಗಿತ್ತು.