logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತದಲ್ಲಿ ತರಕಾರಿ ದುಬಾರಿ; ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಗಗನಮುಖಿ, ಒಂದೇ ತಿಂಗಳಲ್ಲಿ ಶೇ 58 ರ ತನಕ ದರ ಏರಿಕೆ, ತುಲನಾತ್ಮಕ ವರದಿ

ಭಾರತದಲ್ಲಿ ತರಕಾರಿ ದುಬಾರಿ; ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಗಗನಮುಖಿ, ಒಂದೇ ತಿಂಗಳಲ್ಲಿ ಶೇ 58 ರ ತನಕ ದರ ಏರಿಕೆ, ತುಲನಾತ್ಮಕ ವರದಿ

Umesh Kumar S HT Kannada

Jul 04, 2024 07:43 AM IST

google News

ಭಾರತದಲ್ಲಿ ತರಕಾರಿ ದುಬಾರಿ; ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಗಗನಮುಖಿ, ಒಂದೇ ತಿಂಗಳಲ್ಲಿ ಶೇ 58 ರ ತನಕ ದರ ಏರಿಕೆ, ತುಲನಾತ್ಮಕ ವರದಿ. (ಸಾಂಕೇತಿಕ ಚಿತ್ರ)

  • ಭಾರತದಲ್ಲಿ ತರಕಾರಿ ದುಬಾರಿ; ಕಳೆದ ಒಂದು ತಿಂಗಳ ಅವಧಿಯಲ್ಲಿ ತರಕಾರಿ ದರ ದುಬಾರಿಯಾಗಿದೆ. ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಗಗನಮುಖಿಯಾಗಿದ್ದು ಒಂದೇ ತಿಂಗಳಲ್ಲಿ ಶೇ 58 ರ ತನಕ ದರ ಏರಿಕೆಯಾಗಿದೆ. ಇದು ಮಳೆಗಾಲದ ತಾತ್ಕಾಲಿಕ ದರ ಏರಿಕೆ ಎಂದು ಹೇಳಲಾಗುತ್ತಿದ್ದು, ಕಳೆದ ತಿಂಗಳ ಮತ್ತು ಕಳೆದ ವರ್ಷದ ದರಗಳ ಹೋಲಿಕೆ ಇಲ್ಲಿದೆ.

ಭಾರತದಲ್ಲಿ ತರಕಾರಿ ದುಬಾರಿ; ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಗಗನಮುಖಿ, ಒಂದೇ ತಿಂಗಳಲ್ಲಿ ಶೇ 58 ರ ತನಕ ದರ ಏರಿಕೆ, ತುಲನಾತ್ಮಕ ವರದಿ. (ಸಾಂಕೇತಿಕ ಚಿತ್ರ)
ಭಾರತದಲ್ಲಿ ತರಕಾರಿ ದುಬಾರಿ; ಟೊಮೆಟೋ, ಈರುಳ್ಳಿ, ಆಲೂಗಡ್ಡೆ ಗಗನಮುಖಿ, ಒಂದೇ ತಿಂಗಳಲ್ಲಿ ಶೇ 58 ರ ತನಕ ದರ ಏರಿಕೆ, ತುಲನಾತ್ಮಕ ವರದಿ. (ಸಾಂಕೇತಿಕ ಚಿತ್ರ) (Canva)

ನವದೆಹಲಿ: ಭಾರತದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ತರಕಾರಿ ಹಣದುಬ್ಬರ ಹೆಚ್ಚಾಗಿದ್ದು, ಒಂದೇ ತಿಂಗಳ ಅವಧಿಯಲ್ಲಿ ಟೊಮ್ಯಾಟೊ, ಈರುಳ್ಳಿ, ಆಲೂಗಡ್ಡೆ ಸೇರಿ ಎಲ್ಲ ತರಕಾರಿಗಳ ಬೆಲೆ ಶೇಕಡ 58 ರ ತನಕ ಏರಿಕೆಯಾಗಿದೆ. ಮಳೆಗಾಲದ ಕಾರಣ ತರಕಾರಿ ಮಾರುಕಟ್ಟೆಗೆ ಸರಿಯಾದ ಪ್ರಮಾಣದಲ್ಲಿ ತರಕಾರಿಗಳು ಪೂರೈಕೆಯಾಗದೇ ಇರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಆದಾಗ್ಯೂ, ಕಳೆದ ತಿಂಗಳು ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಬೀನ್ಸ್‌ ಮುಂತಾದವುಗಳ ಬೆಲೆ ಗಗನಮುಖಿಯಾಗಿದ್ದವು. ಬೀನ್ಸ್ ದರ ಕಿಲೋಗೆ 200 ರೂಪಾಯಿ ಆಸುಪಾಸಿಗೆ ತಲುಪಿತ್ತು. ಅದಾಗಿ, ಜುಲೈ ಶುರುವಾಗುತ್ತಿದ್ದಂತೆ ತರಕಾರಿ ಬೆಲೆ ಇಳಿಕೆಯಾಗತೊಡಗಿದ್ದು ಬೀನ್ಸ್ ದರ ಕಿಲೋಗೆ 150 ರೂಪಾಯಿ ಒಳಗೆ ಬಂದಿದೆ. ಊರಿಂದ ಊರಿಗೆ ದರ ವ್ಯತ್ಯಾಸವಿದೆ. ಈ ದರ ಏರಿಕೆ ತಾತ್ಕಾಲಿಕವಾಗಿದ್ದು, ಶೀಘ್ರದಲ್ಲೇ ಸಹಜ ಸ್ಥಿತಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದಾಗಿ ದಿ ಹಿಂದೂ ವರದಿ ಮಾಡಿದೆ.

ಟೊಮೆಟೋ ದರ ಗಗನಮುಖಿ, ಕಳೆದ ವರ್ಷ ಜುಲೈನಲ್ಲಿ 200 ರೂಪಾಯಿ ಗಡಿ ದಾಟಿತ್ತು

ಮಳೆಗಾಲ ಶುರುವಾಗಿದ್ದು ಸಹಜವಾಗಿಯೇ ತರಕಾರಿ ದರ ಏರಿಕೆಯಾಗಿದೆ ಎಂದು ಭಾವಿಸಿದರೂ, ಈ ಬಾರಿ ಟೊಮೆಟೋ, ಆಲೂಗಡ್ಡೆ, ಈರುಳ್ಳಿ ದರ ಶೇಕಡ 15 ರಿಂದ ಶೇಕಡ 58 ರಷ್ಟು ಏರಿಕೆಯಾಗಿದೆ. ಕಳೆದ 30 ದಿನಗಳ ಅವಧಿಯಲ್ಲಿ ಸಗಟು ಮಾರುಕಟ್ಟೆಯಲ್ಲಿ ಟೊಮೆಟೋ ದರ ಶೇಕಡ 65.70, ಈರುಳ್ಳಿ ದರ ಶೇಕಡ 35.36, ಆಲೂಗಡ್ಡೆ ದರ ಶೇಕಡ 17.57 ಏರಿಕೆ ಕಂಡಿದೆ.

ಭಾರತದ ಸಗಟು ಮಾರುಕಟ್ಟೆಯ ಸರಾಸರಿ ದರ ಲೆಕ್ಕ ಹಾಕಿದರೂ ಜುಲೈ 3 ರಂದು ಟೊಮೆಟೋ ದರ ಅಂದಾಜು 55 ರೂಪಾಯಿ. ಕಳೆದ ತಿಂಗಳು ಇದೇ ದಿನಾಂಕದಲ್ಲಿ ಟೊಮೆಟೋ ದರ 35 ರೂಪಾಯಿ ಇತ್ತು. ಈಗಿನ ದರವು ಕಳೆದ ತಿಂಗಳ ದರಕ್ಕೆ ಹೋಲಿಸಿದರೆ ಶೇಕಡ 58.48 ಹೆಚ್ಚು ಎಂಬುದನ್ನು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ದರ ನಿಗಾ ವಿಭಾಗ ತಿಳಿಸಿದೆ. ಇನ್ನು ಕಳೆದ ವರ್ಷದ ಜುಲೈ 3 ರಂದು ಟೊಮೆಟೋ ದರ ಕಿಲೋಗೆ 68 ರೂಪಾಯಿ ಇತ್ತು. 2023ರ ಜುಲೈ ಕೊನೆಗೆ ಮತ್ತು ಆಗಸ್ಟ್‌ ತಿಂಗಳ ಮೊದಲ ವಾರ ಟೊಮೆಟೋ ದರ ಕಿಲೋಗೆ 250 ರೂಪಾಯಿ ದಾಟಿತ್ತು. ಅಂಗಡಿಗಳಲ್ಲಿ ಟೊಮೆಟೋ ಬುಟ್ಟಿಗೆ, ಟೊಮೆಟೋ ಬೆಳೆಗೆ ಕಾವಲು ಇರಿಸಿದ್ದು, ಟೊಮೆಟೋ ವ್ಯಾನ್ ಕಳ್ಳತನದ ಸುದ್ದಿಗಳು ಗಮನಸೆಳೆದಿದ್ದವು.

ಈರುಳ್ಳಿ, ಬಟಾಟೆ ಬೆಲೆಯೂ ಹೆಚ್ಚಳ

ನಿತ್ಯ ಬಳಕೆಯ ಈರುಳ್ಳಿ ಬೆಲೆಯೂ ಈಗ ಗಗನಮುಖಿ. ಅಖಿಲ ಭಾರತ ಮಟ್ಟದ ಸರಾಸರಿ ದರ ಪರಿಗಣಿಸುವುದಾದರೆ ಬುಧವಾರ ಈರುಳ್ಳಿ ಬೆಲೆ ಕಿಲೋಗೆ 42 ರೂಪಾಯಿ. ಕಳೆದ ತಿಂಗಳು ಇದೇ ದಿನ (ಜೂನ್ 3) ಒಂದು ಕಿಲೋ ಈರುಳ್ಳಿ ಬೆಲೆ 32 ರೂಪಾಯಿ ಇತ್ತು. ಇದಕ್ಕೆ ಹೋಲಿಸಿದರೆ ಶೇಕಡ 31 ಹೆಚ್ಚಳವಾಗಿದೆ. ಕಳೆದ ವರ್ಷ ಜುಲೈ 3ಕ್ಕೆ ಒಂದು ಕಿಲೋ ಈರುಳ್ಳಿ ದರ 25 ರೂಪಾಯಿ ಇತ್ತು. ಇದಕ್ಕೆ ಹೋಲಿಸಿದರೆ ಶೇಕಡ 70 ಹೆಚ್ಚಳವಾಗಿದೆ.

ಇನ್ನು, ಆಲೂಗಡ್ಡೆ ವಿಚಾರಕ್ಕೆ ಬಂದರೆ ಭಾರತದ ವಿವಿಧ ಮಾರುಕಟ್ಟೆಗಳ ಸರಾಸರಿ ದರ ಪ್ರಕಾರ ಬುಧವಾರ (ಜುಲೈ 3) ಕಿಲೋಗೆ 35 ರೂಪಾಯಿ ಇತ್ತು. ಕಳೆದ ತಿಂಗಳು ಇದೇ ದಿನ (ಜೂನ್ 3) ಕಿಲೋಗೆ 30 ರೂಪಾಯಿ ಇತ್ತು. ಇದಕ್ಕೆ ಹೋಲಿಸಿದರೆ ದರ ಶೇಕಡ 16 ಹೆಚ್ಚಳವಾಗಿದೆ. ಇನ್ನು ಕಳೆದ ವರ್ಷ ಜುಲೈ 3ಕ್ಕೆ ಆಲೂಗಡ್ಡೆ ಒಂದು ಕಿಲೋದ ದರ 23 ರೂಪಾಯಿ ಇತ್ತು. ಇದಕ್ಕೆ ಹೋಲಿಸಿದರೆ ಶೇಕಡ 51 ಹೆಚ್ಚಳ ದಾಖಲಾಗಿದೆ.

ಶೀಘ್ರದಲ್ಲೇ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ. ಬೆಲೆ ಏರಿಕೆಯ ಸನ್ನಿವೇಶವು ತಾತ್ಕಾಲಿಕವಾಗಿದೆ. ಟೊಮ್ಯಾಟೊ ಮತ್ತು ಈರುಳ್ಳಿ ಬೆಲೆಗಳು ಶೀಘ್ರದಲ್ಲೇ ಕಡಿಮೆಯಾಗಬಹುದು. ಆದಾಗ್ಯೂ, ಆಲೂಗೆಡ್ಡೆಯ ಬೆಲೆ ಋತುವಿನಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಟೊಮೆಟೋ ಬೆಲೆ ಕಳೆದ ವರ್ಷದಂತೆ ದುಬಾರಿ ಆಗಲಾರದು. ಕರ್ನಾಟಕದಂತಹ ರಾಜ್ಯಗಳಲ್ಲಿ ಟೊಮೆಟೊ ಎರಡನೇ ಕೊಯ್ಲು ಪ್ರಾರಂಭವಾಗಿದೆ. ಇದು ಮಾರುಕಟ್ಟೆಗಳಲ್ಲಿ ಸಾಕಷ್ಟು ಪೂರೈಕೆಯನ್ನು ಖಚಿತಪಡಿಸುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ