Infosys share fall: ಇನ್ಫೋಸಿಸ್ ಷೇರು ಕುಸಿತ, 1 ಗಂಟೆಯಲ್ಲಿ 412 ಕೋಟಿ ರೂಪಾಯಿ ಕಳೆದುಕೊಂಡ ಅಕ್ಷತಾ ಮೂರ್ತಿ, ಮಾರ್ಕೆಟ್‌ನಲ್ಲಿ ಏನಾಗ್ತಿದೆ
Jan 09, 2024 07:47 PM IST
Infosys share fall: ಇನ್ಫೋಸಿಸ್ ಷೇರು ಕುಸಿತ, 1 ಗಂಟೆಯಲ್ಲಿ 412 ಕೋಟಿ ರೂಪಾಯಿ ಕಳೆದುಕೊಂಡ ಅಕ್ಷತಾ ಮೂರ್ತಿ
- Infosys share Price: ಷೇರುಪೇಟೆಯಲ್ಲಿ ಇನ್ಪೋಸಿಸ್ ಷೇರುಗಳು ಇಂದು ಇಳಿಕೆ ಕಂಡಿವೆ. ಶುಕ್ರವಾರದ ವಹಿವಾಟಿನಲ್ಲಿ ಬೆಳಗ್ಗೆ 10:15 ಗಂಟೆಗೆ ಇನ್ಫೋಸಿಸ್‌ನ ಪ್ರತಿಷೇರಿನ ದರ 1,343.70 ರೂಗೆ ತಲುಪಿತ್ತು. ಈ ಸಂದರ್ಭದಲ್ಲಿ ಅಕ್ಷತಾ ಮೂರ್ತಿ ಅವರಲ್ಲಿದ್ದ ಇನ್ಫೋಸಿಸ್ ಷೇರುಗಳ ಮೌಲ್ಯವೂ ಕಡಿಮೆಯಾಗಿದೆ.
Akshata Murty's net worth: ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ 2023ರ ಮೊದಲ ತ್ರೈಮಾಸಿಕದ ಫಲಿತಾಂಶ ಪ್ರಕಟಿಸಿದೆ. ಇದಾದ ಬಳಿಕ ಇನ್ಫೋಸಿಸ್ ಷೇರುಗಳ ದರ ಕುಸಿಯಲು ಆರಂಭವಾಗಿದೆ. ಇನ್ಫೋಸಿಸ್ ಸಂಸ್ಥೆಯು ದುರ್ಬಲ ಗಳಿಕೆಯ ಫಲಿತಾಂಶ ಪ್ರಕಟಿಸಿದ ಬಳಿಕ ಗುರುವಾರ ನ್ಯೂಯಾರ್ಕ್ ಷೇರು ಪೇಟೆಯಲ್ಲಿ ಇನ್ಫೋಸಿಸ್ ಎಡಿಆರ್ ಬೆಲೆಗಳು ಶೇಕಡ 13.5ರಷ್ಟು ಕುಸಿದವು. ಅದು 52 ವಾರಗಳ ಕನಿಷ್ಠ ಮಟ್ಟದಿಂದ ಸುಮಾರು ಶೇಕಡ 4ರಷ್ಟು ದೂರದಲ್ಲಿ ಪ್ರತಿ ಷೇರಿಗೆ 15.33ರ ಇಂಟ್ರಾ ಡೇ ಕನಿಷ್ಠ ಮೊತ್ತ ತಲುಪಿತ್ತು. ಬಳಿಕ ಇನ್ಫೋಸಿಸ್ ಷೇರುಗಳು ಕನಿಷ್ಠ ಚೇತರಿಕೆ ಕಂಡಿತು. ಪ್ರತಿಷೇರಿನ ದರ 16.22 ಡಾಲರ್‌ಗೆ ತಲುಪಿತು.
ಇಂದು ಕೂಡ ದಲಾಲ್ ಸ್ಟ್ರೀಟ್‌ನಲ್ಲಿ ಭಾರತದ ಇನ್ಫೋಸಿಸ್‌ನ ಷಷೇರುಗಳು ಕೆಳಮಟ್ಟದಲ್ಲಿಯೇ ವಹಿವಾಟು ಆರಂಭಿಸಿತ್ತು. ಮುಂಬೈ ಷೇರು ಪೇಟೆಯಲ್ಲಿ ಇಂಟ್ರಾ ಡೇಯಲ್ಲಿ ಒಂದು ಷೇರಿನ ದರ ಅತ್ಯಂತ ಕಡಿಮೆ ಎಂದರೆ 1,305 ರೂಪಾಯಿಗೆ ತಲುಪಿತು. ಆದರೆ, ಅದಾದ ಬಳಿಕ 10:15 ಗಂಟೆಗೆ ಭಾರತದ ಐಟಿ ಕಂಪನಿಯ ಷೇರುಗಳು ತುಸು ರಿಕವರಿ ಕಂಡಿತು. ಅಂದರೆ 1,343.70 ರೂಪಾಯಿಗೆ ತಲುಪಿತ್ತು. ಭಾರತದ ಷೇರು ಪೇಟೆ ವಹಿವಾಟು ಆರಂಭಿಸಿದ ಒಂದು ಗಂಟೆಯಲ್ಲಿ ಇನ್ಫೋಸಿಸ್‌ನ ಪ್ರತಿಷೇರು ದರ 105.80 ರೂಪಾಯಿಯಷ್ಟು ಇಳಿಕೆ ಕಂಡಿದೆ.
ಅಕ್ಷಯ ಮೂರ್ತಿ ನಿವ್ವಳ ಸಂಪತ್ತಿನ ಮೇಲೆ ಪರಿಣಾಮ
ಇನ್ಫೋಸಿಸ್‌ನ ಷೇರು ದರ ಕುಸಿತವಾಗುವುದರಿಂದ ಈ ಷೇರುಗಳನ್ನು ಹೊಂದಿರುವ ಷೇರುದಾರರ ಸಂಪತ್ತು ಕಡಿಮೆಯಾಗಿದೆ. ಹೆಚ್ಚು ಷೇರು ಹೊಂದಿರುವವರು ಹೆಚ್ಚು ನಷ್ಟ ಅನುಭವಿಸುತ್ತಾರೆ. ಇಂಗ್ಲೆಂಡ್ ಪ್ರಧಾನ ಮಂತ್ರಿ ರಿಷಿ ಸುನಕ್ ಅವರ ಪತ್ನಿ ಮತ್ತು ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರ ಸಂಪತ್ತೂ ಕಡಿಮೆಯಾಗಿದೆ. ಅಕ್ಷತಾ ಮೂರ್ತಿ ಅವರು ಇನ್ಫೋಸಿಸ್ ಕಂಪನಿಯ ಪ್ರವರ್ತಕರು. ಈ ವರ್ಷದ ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಲಭ್ಯವಿರುವ ಮಾಹಿತಿ ಪ್ರಕಾರ ಅಕ್ಷತಾ ಮೂರ್ತಿ ಅವರು ಇನ್ಫೋಸಿಸ್‌ನ 3,89,57,096 ಷೇರುಗಳನ್ನು ಹೊಂದಿದ್ದಾರೆ. ಅಂದರೆ, ಕಂಪನಿಯ ಒಟ್ಟು ಬಂಡವಾಳದಲ್ಲಿ ಶೇಕಡ 1.07 ಷೇರುಗಳನ್ನು ಅವರು ಹೊಂದಿದ್ದಾರೆ.
ಹೀಗೆ, ಪ್ರತಿಷೇರಿಗೆ ಇಂದು ಒಂದು ಗಂಟೆಯಲ್ಲಿ 105.80 ರೂಪಾಯಿ ಇಳಿಕೆಯಾಗಿರುವುದರಿಂದ ಅಕ್ಷತಾ ಮೂರ್ತಿಯವರು ಹೊಂದಿರುವ 3,89,57,096 ಷೇರುಗಳ ಆಧಾರದಲ್ಲಿ ಲೆಕ್ಕ ಹಾಕಿದರೆ ಅವರು ಇಂದು ಒಂದು ಗಂಟೆಯಲ್ಲಿ ಸುಮಾರು 412 ಕೋಟಿ ರೂಪಾಯಿ (3,89,57,096 x ₹105.80) ಕಳೆದುಕೊಂಡಿದ್ದಾರೆ.
ಇನ್ಪೋಸಿಸ್ ಮೂರನೇ ತ್ರೈಮಾಸಿಕದ ಫಲಿತಾಂಶ
ಗುರುವಾರ ಇನ್ಫೋಸಿಸ್ ಪ್ರಕಟಿಸಿದ ವರದಿ ಪ್ರಕಾರ ಕಂಪನಿಯ ನಿವ್ವಳ ಲಾಭವು ಶೇಕಡ 11ರಷ್ಟು ಹೆಚ್ಚಳವಾಗಿದೆ. ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭ 5,945 ಕೋಟಿ ರೂ.ನಷ್ಟು ಹೆಚ್ಚಾಗಿದೆ. ಆದರೆ, ಇದು 6,150 ಕೋಟಿ ರೂ. ಆಗುವ ಅಂದಾಜಿತ್ತು. ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 10 ಏರಿಕೆಯಾಗಿದು, 37,933 ಕೋಟಿ ರೂ.ಗೆ ತಲುಪಿದೆ. ಆದಾಯದ ಬೆಳವಣಿಗೆ ಶೇಕಡ 1-3.5 ಆಗಿದೆ. ಇದಕ್ಕೂ ಹಿಂದೆ ಬೆಳವಣಿಗೆ ದರ ಶೇಕಡ 4-7 ರಷ್ಟು ಏರಿಕೆ ಕಂಡಿತ್ತು.