ಬಂಗಾರದ ಬೆಲೆ ಇನ್ನೆಷ್ಟು ಎತ್ತರಕ್ಕೆ; 2025 ಶುರುವಾದಂತೆ ದಾಖಲೆ ಮೇಲೆ ದಾಖಲೆ ಬರೆಯಲಿದೆಯಂತೆ ಚಿನ್ನ, ಅದಕ್ಕೆ 3 ಕಾರಣ
Oct 17, 2024 10:26 AM IST
ಬಂಗಾರದ ಬೆಲೆ ಇನ್ನೆಷ್ಟು ಎತ್ತರಕ್ಕೆ ಏರಲಿದ್ದು, 2025 ಬರುವುದರೊಳಗೆ ದಾಖಲೆ ಮೇಲೆ ದಾಖಲೆ ಬರೆಯಲಿದೆ. ಅದಕ್ಕೆ 3 ಕಾರಣ ಎನ್ನುತ್ತಿದೆ ಒಂದು ವರದಿ. (ಸಾಂಕೇತಿಕ ಚಿತ್ರ)
ಷೇರುಪೇಟೆ ಏರಿಳಿತ ನೋಡಿದವರು ಸದ್ಯ ಸುರಕ್ಷಿತ ಹೂಡಿಕೆ ಕಡೆಗೆ ಗಮನಹರಿಸಿದ್ದಾರೆ. ಬಹುತೇಕರ ಗಮನ ಈಗ ಬಂಗಾರದ ಕಡೆಗೆ ಹೊರಳಿದೆ. ಬಂಗಾರದ ಬೆಲೆ ಇನ್ನೆಷ್ಟು ಎತ್ತರಕ್ಕೆ ಏರಬಹುದು ಎಂಬುದು ಕುತೂಹಲ. 2025 ಶುರುವಾದಂತೆ ದಾಖಲೆ ಮೇಲೆ ದಾಖಲೆ ಬರೆಯಲಿದೆ ಚಿನ್ನ, ಅದಕ್ಕೆ 3 ಕಾರಣ ಎಂದು ದುಬೈ ಮೂಲದ ಕಂಪನಿ ಡಿವೆರೆ ಗ್ರೂಪ್ ಸಿಇಒ ನಿಗೆಲ್ ಗ್ರೀನ್ ಪ್ರತಿಪಾದಿಸಿದ್ಧಾರೆ.
ನವದೆಹಲಿ: ಷೇರುಪೇಟೆಯಲ್ಲಿ ಏರಿಳಿತ ಮುಂದುವರಿದಿರುವಂತೆಯೇ ಎಲ್ಲರ ಗಮನ ಬಂಗಾರದ ಮೇಲಿದೆ. ಚಿನ್ನಾಭರಣ ಖರೀದಿ ಒಂದೆಡೆಯಾದರೆ, ಚಿನ್ನದ ಗಟ್ಟಿ ಖರೀದಿ ಮಾಡಿಟ್ಟುಕೊಳ್ಳವವರು ಇನ್ನೊಂದಿಷ್ಟು ಜನ. ಈ ನಡುವೆ ಬಂಗಾರದ ಬೆಲೆ ಕೂಡ ಗಗನಮುಖಿಯಾಗಿದ್ದು, ಇದು 2025 ಶುರುವಾಗುತ್ತಿರುವಂತೆಯೇ ದಾಖಲೆ ಮೇಲೆ ದಾಖಲೆ ಬರೆದು ಸಾರ್ವಕಾಲಿಕ ಗರಿಷ್ಠ ಮಟ್ಟದ ದಾಖಲೆ ಬೆಲೆಗೇರಲಿದೆ ಎಂದು ಸ್ವತಂತ್ರ ಹಣಕಾಸು ಸಲಹೆ ಮತ್ತು ಹಣಕಾಸು ನಿರ್ವಹಣಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯೊಬ್ಬರು ಮುನ್ನಂದಾಜಿ ಹೇಳಿರುವುದು ಗಮನಸೆಳೆದಿದೆ. ದುಬೈ ಮೂಲದ ಕಂಪನಿ ಡಿವೆರೆ ಗ್ರೂಪ್ (deVere Group) ಇದು. ನಿಗೆಲ್ ಗ್ರೀನ್ ಈ ಕಂಪನಿಯ ಸಿಇಒ. “ಕೇಂದ್ರ ಬ್ಯಾಂಕ್‌ಗಳು ಆಕ್ರಮಣಕಾರಿ ಖರೀದಿಯನ್ನು ಮುಂದುವರಿಸಿರುವುದರಿಂದ, ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಕಡಿತಗೊಳಿಸುತ್ತದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮುಂದುವರಿದಂತೆ, ಬಂಗಾರದ ಬೆಲೆಯ ಹಿಂದಿನ ದಾಖಲೆಗಳನ್ನು ಪುಡಿಗಟ್ಟಬಹುದಾದ ಬೆಲೆ ಏರಿಕೆಗೆ ಮೊದಲ ಕಾರಣ” ಎಂದು ಡಿವೆರೆ ಗ್ರೂಪ್‌ನ ನಿಗೆಲ್ ಗ್ರೀನ್ ಹೇಳುತ್ತಾರೆ.
ಸದ್ಯ ಬಂಗಾರದ ಬೆಲೆಯನ್ನು ಗಗನಕ್ಕೇರಿಸುವ ಮೂರು ಅಂಶಗಳಿವು
ಡಿವೆರೆ ಗ್ರೂಪ್‌ನ ಸಿಇಒ ನಿಗೆಲ್ ಗ್ರೀನ್ ಅವರ ಪ್ರಕಾರ, ಇದು ಆಶಾವಾದದ ಬೆಳವಣಿಗೆ. ಬಂಗಾರದ ಬೆಲೆಯನ್ನು ಗಗನಮುಖಯಾಗಿಸಿ ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿರುವ ಮೂರು ಅಂಶಗಳಿವು-
1) ಕೇಂದ್ರೀಯ ಬ್ಯಾಂಕುಗಳಿಂದ ಚಿನ್ನ ಖರೀದಿ ಹೆಚ್ಚಳ: ಜಗತ್ತಿನ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕುಗಳು ಹಿಂದೆಂದೂ ಕಾಣದ ರೀತಿಯಲ್ಲಿ ಹೆಚ್ಚಿನ ದರದಲ್ಲಿ ಚಿನ್ನದ ಖರೀದಿಯನ್ನು ಹೆಚ್ಚಿಸುತ್ತಿವೆ. ರಷ್ಯಾ - ಉಕ್ರೇನ್ ಸಂಘರ್ಷದ ನಂತರ ಶುರುವಾದ ಈ ಪ್ರವೃತ್ತಿ, ಅಮೆರಿಕನ್ ಡಾಲರ್ ನಿರ್ದೇಶಿತ ಆಸ್ತಿಗಳಿಂದ ದೂರ ಸರಿಯುವಂತೆ ವಿಸ್ತರಣೆಯಾಗಿದೆ. 2022ಕ್ಕೆ ಹೋಲಿಸಿದರೆ ಈಗ ಅದು ಮೂರು ಪಟ್ಟು ಹೆಚ್ಚಾಗಿದೆ. ಈ ಬೇಡಿಕೆ 2025ರಲ್ಲೂ ಮುಂದುವರಿಯಲಿದೆ ಎಂದು ನಿಗೆಲ್ ಗ್ರೀನ್ ವಿವರಿಸಿದ್ದಾರೆ.
2) ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ಕಡಿತ: ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ಹೆಚ್ಚಳದಿಂದ ಸಂಭಾವ್ಯ ಕಡಿತದ ಪರಿವರ್ತನೆಯು ಚಿನ್ನದ ಬೆಲೆಗಳನ್ನು ಹೆಚ್ಚಿಸುವ ಮತ್ತೊಂದು ನಿರ್ಣಾಯಕ ಅಂಶವಾಗಿದೆ. “ಬಡ್ಡಿದರ ಹೆಚ್ಚಾದರೆ ಚಿನ್ನದ ಮೇಲಿನ ಆಕರ್ಷಣೆ ಕಡಿಮೆಯಾಗುತ್ತದೆ. ಆಗ ಅದರಲ್ಲಿ ಲಾಭವಿಲ್ಲ. ಬಡ್ಡಿದರ ಕುಸಿಯುವ ಹಂತದಲ್ಲಿರುವ ಕಾರಣ ಬಂಗಾರದ ಬೆಲೆ ಏರತೊಡಗಿದೆ. ಹೀಗಾಗಿಯೇ ಚಿಲ್ಲರೆ ಹೂಡಿಕೆದಾರರು ಮತ್ತು ಸಾಂಸ್ಥಿಕ ಹೂಡಿಕೆದಾರರು ಚಿನ್ನ ಖರೀದಿಗೆ ಗಮನಹರಿಸಿದ್ದಾರೆ ಎಂಬುದು ಗ್ರೀನ್ ಕೊಡುವ ವಿವರಣೆ.
3) ಭೌಗೋಳಿಕ ರಾಜಕೀಯ ಬಿಕ್ಕಟ್ಟು: ಪ್ರಸ್ತುತ ಚಾಲ್ತಿಯಲ್ಲಿರುವ ಭೌಗೋಳಿಕ ರಾಜಕೀಯ ಬಿಕ್ಕಟ್ಟು ಕೂಡ ಬಂಗಾರದ ಬೆಲೆ ಏರಿಕೆಗೆ ಕೊಡುಗೆ ನೀಡಿದೆ. ವಿಶೇಷವಾಗಿ ವಾಣಿಜ್ಯ ಸಮರ, ನಿರ್ಬಂಧ, ಜಾಗತಿಕ ಬಿಕ್ಕಟ್ಟು ಎಲ್ಲವೂ ಸೇರಿದೆ. ವಿಶೇಷವಾಗಿ ಫೆಡ್ ಇಂಡಿಪೆಂಡೆನ್ಸ್, ಸುಸ್ಥಿರ ಜಾಗತಿಕ ಸಾಲ, ಹಣಕಾಸು ನಿರ್ಬಂಧ ಮುಂತಾದ ಸಮಸ್ಯೆಗಳ ಸುತ್ತ ಕಾಳಜಿಗಳೂ ಇರುವ ಕಾರಣ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ಆರ್ಥಿಕ ಸುರಕ್ಷೆ ಒದಗಿಸುವುದು ಚಿನ್ನ. ಅದಕ್ಕೆ ಸಾಟಿ ಇನ್ನೊಂದಿಲ್ಲ. 2021ರಿಂದ ಇಂತಹ ಸನ್ನಿವೇಶ ಇದ್ದು, ಹಣಕಾಸಿನ ನಿರ್ಬಂಧ ಹೆಚ್ಚಳವಾಗತೊಡಗಿದೆ. ಇದು ಬಂಗಾರದ ಬೆಲೆಯನ್ನು ಗಗನಮುಖಿಯನ್ನಾಗಿಸಿದೆ ಎಂದು ಗ್ರೀನ್ ವಿವರಿಸಿದ್ದಾರೆ.
ಈ ವರ್ಷ 290 ಟನ್ ಚಿನ್ನ ಖರೀದಿಸಿದೆ ಚೀನಾ
ಅಮೆರಿಕದಿಂದ ಹಣಕಾಸು ನಿರ್ಬಂಧ ಎದುರಿಸುತ್ತಿರುವ ದೇಶಗಳು ರಾಜಕೀಯ ಮತ್ತು ಆರ್ಥಿಕ ಒತ್ತಡವನ್ನು ತಡೆದುಕೊಳ್ಳಲು ಚಿನ್ನ ಖರೀದಿಸುತ್ತಿವೆ. ಉದಾಹರಣೆಗೆ ಚೀನಾದ ಸೆಂಟ್ರಲ್ ಬ್ಯಾಂಕ್ 2023ರಲ್ಲಿ 10 ತಿಂಗಳ ಕಾಲ ನಿರಂತರವಾಗಿ ಚಿನ್ನದ ದಾಸ್ತಾನನ್ನು ಹೆಚ್ಚಿಸಿದೆ. ಡಾಲರ್ ಮೇಲಿನ ಅವಲಂಬನೆ ಮತ್ತು ಪಶ್ಚಿಮದಲ್ಲಿನ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನಿಂದ ದೂರ ಉಳಿಯಲು ಈ ತಂತ್ರದ ಮೊರೆ ಹೋಗಿತ್ತು. 2024ರಲ್ಲೂ ಈ ಪ್ರವೃತ್ತಿ ಮುಂದುವರಿಸಿದ ಚೀನಾ 2024ರ ಮೊದಲ ತ್ರೈಮಾಸಿಕದಲ್ಲಿ 290 ಟನ್ ಚಿನ್ನ ಖರೀದಿಸಿದೆ. ಟರ್ಕಿ, ಸಿಂಗಾಪುರ, ಬ್ರೆಜಿಲ್, ಭಾರತ ಕೂಡ ಚಿನ್ನ ಖರೀದಿ ಹೆಚ್ಚಿಸಿವೆ. ಆಯಾ ದೇಶಗಳ ಕರೆನ್ಸಿ ಮೌಲ್ಯದ ಏರಿಳಿತ ತಪ್ಪಿಸುವ ಸಲುವಾಗಿ ಚಿನ್ನ ಖರೀದಿ ಮುಂದುವರಿಸಿವೆ.