logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  China Covid Surge: ಜನವರಿಯಲ್ಲಿ ಚೀನಾದಲ್ಲಿ ಉತ್ತುಂಗಕ್ಕೆ ಏರಲಿದೆ ಕೋವಿಡ್: ದಿನಕ್ಕೆ 25,000 ಮಂದಿ ಸಾಯುವ ಸಾಧ್ಯತೆ

China Covid Surge: ಜನವರಿಯಲ್ಲಿ ಚೀನಾದಲ್ಲಿ ಉತ್ತುಂಗಕ್ಕೆ ಏರಲಿದೆ ಕೋವಿಡ್: ದಿನಕ್ಕೆ 25,000 ಮಂದಿ ಸಾಯುವ ಸಾಧ್ಯತೆ

HT Kannada Desk HT Kannada

Dec 30, 2022 06:59 PM IST

google News

ಚೀನಾದಲ್ಲಿ ಕೋವಿಡ್​ ಉಲ್ಬಣ

    • ಮಹಾಮಾರಿ ಕೊರೊನಾಗೆ ಚೀನಾ ಮತ್ತೊಮ್ಮೆ ತತ್ತರಿಸಿದೆ. ಕೊರೊನಾ ರೂಪಾಂತರ ಒಮಿಕ್ರಾನ್​​ನ ಬಿಎಫ್.7 ಉಪತಳಿ ವ್ಯಾಪಕವಾಗಿ ಹರಡುತ್ತಿದೆ. ಜನವರಿಯಲ್ಲಿ ಚೀನಾದಲ್ಲಿ ಕೋವಿಡ್​ ಉತ್ತುಂಗಕ್ಕೆ ಏರಲಿದ್ದು, ಪ್ರತಿದಿನ 25,000 ಮಂದಿ ಮೃತಪಡುವ ಸಾಧ್ಯತೆಯಿದೆ ಎಂದು ಯುಕೆ ಮೂಲದ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಚೀನಾದಲ್ಲಿ ಕೋವಿಡ್​ ಉಲ್ಬಣ
ಚೀನಾದಲ್ಲಿ ಕೋವಿಡ್​ ಉಲ್ಬಣ

ಮಹಾಮಾರಿ ಕೊರೊನಾಗೆ ಚೀನಾ ಮತ್ತೊಮ್ಮೆ ತತ್ತರಿಸಿದೆ. ಕೊರೊನಾ ರೂಪಾಂತರ ಒಮಿಕ್ರಾನ್​​ನ ಬಿಎಫ್.7 ಉಪತಳಿ ವ್ಯಾಪಕವಾಗಿ ಹರಡುತ್ತಿದೆ. ಜನವರಿಯಲ್ಲಿ ಚೀನಾದಲ್ಲಿ ಕೋವಿಡ್​ ಉತ್ತುಂಗಕ್ಕೆ ಏರಲಿದ್ದು, ಪ್ರತಿದಿನ 25,000 ಮಂದಿ ಮೃತಪಡುವ ಸಾಧ್ಯತೆಯಿದೆ ಎಂದು ಯುಕೆ ಮೂಲದ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಪ್ರಸ್ತುತ ಚೀನಾದಲ್ಲಿ ಪ್ರತಿದಿನ 9,000 ಮಂದಿ ಕೋವಿಡ್​ಗೆ ಬಲಿಯಾಗುತ್ತಿದ್ದು, ಇದು ಕಳೆದ ವಾರಕ್ಕಿಂತ ದುಪ್ಪಟ್ಟಾಗಿದೆ ಹಾಗೂ ಪ್ರತಿದಿನ ಮಿಲಿಯನ್​​ಗಟ್ಟಲೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಚೀನಾ ಮಾತ್ರ ಇದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಡಿಸೆಂಬರ್ 7 ರಿಂದ ರಾಜಧಾನಿ ಬೀಜಿಂಗ್​ನಲ್ಲಿ ಕೇವಲ 10 ಸಾವುಗಳು ವರದಿಯಾಗಿದೆ ಎಂದು ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಸಾಂಕ್ರಾಮಿಕದ ಬಗ್ಗೆ ಪಾರದರ್ಶಕವಾಗಿ ಮಾಹಿತಿ ಹಂಚಿಕೊಳ್ಳಲು ಕೇಳಿದೆ.

ಡಿಸೆಂಬರ್ 1 ರಿಂದ ಇಲ್ಲಿಯವರೆಗೆ ಚೀನಾದಲ್ಲಿ ಸುಮಾರು 1 ಲಕ್ಷ ಮಂದಿ ಮೃತಪಟ್ಟಿದ್ದು, 18.6 ಮಿಲಿಯನ್ ಮಂದಿಗೆ ಸೋಂಕು ತಗುಲಿದೆ ಎಂದು ಯುಕೆ ಮೂಲದ ಆರೋಗ್ಯ ಡೇಟಾ ಸಂಸ್ಥೆ ಏರ್‌ಫಿನಿಟಿ ಹೇಳಿಕೆಯಲ್ಲಿ ತಿಳಿಸಿದೆ. ಜನವರಿ 13 ರ ವೇಳೆಗೆ ಚೀನಾದಲ್ಲಿ ಕೋವಿಡ್ ಉತ್ತುಂಗವನ್ನು ತಲುಪಲಿದೆ. ಒಂದು ದಿನದಲ್ಲಿ 3.7 ಮಿಲಿಯನ್ ಪ್ರಕರಣಗಳು ದಾಖಲಾಗುತ್ತವೆ. ದೈನಂದಿನ ಸಾವಿನ ಸಂಖ್ಯೆ ಜನವರಿ 23 ರ ವೇಳೆಗೆ 25,000 ಕ್ಕೆ ಏರುತ್ತದೆ. ಸಾವಿನ ಸಂಖ್ಯೆ 5, 84,000 ತಲುಪಬಹುದು ಎಂದು ಆರೋಗ್ಯ ಸಂಸ್ಥೆ ಅಂದಾಜಿಸಿದೆ.

"ಚೀನಾದಿಂದ ಸಮಗ್ರ ಮಾಹಿತಿಯ ಅನುಪಸ್ಥಿತಿ ನೋಡಿದರೆ ಪ್ರಪಂಚದಾದ್ಯಂತದ ದೇಶಗಳು ತಮ್ಮ ಜನಸಂಖ್ಯೆಯನ್ನು ರಕ್ಷಿಸಬಹುದು ಎಂದು ಅವರು ನಂಬುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆಎಂಬುದು ಅರ್ಥವಾಗುವಂತಹದ್ದಾಗಿದೆ" ಎಂದು ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದರು.

"ಚೀನಾ ಯಾವಾಗಲೂ ಕೋವಿಡ್ -19 ಸಾವುಗಳು ಮತ್ತು ಪ್ರಕರಣಗಳ ಮಾಹಿತಿಯನ್ನು ಮುಕ್ತತೆ ಮತ್ತು ಪಾರದರ್ಶಕತೆಯ ಉತ್ಸಾಹದಲ್ಲಿ ಪ್ರಕಟಿಸುತ್ತಿದೆ" ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗದ (ಎನ್‌ಎಚ್‌ಸಿ) ಜಿಯಾವೊ ಯಾಹುಯಿ ಹೇಳಿದ್ದಾರೆ.

"ಕೋವಿಡ್ -19 ಸಾವುಗಳನ್ನು ಮೊದಲಿನಿಂದ ಕೊನೆಯವರೆಗೆ ನಿರ್ಣಯಿಸುವ ವೈಜ್ಞಾನಿಕ ಮಾನದಂಡಗಳಿಗೆ ಚೀನಾ ಯಾವಾಗಲೂ ಬದ್ಧವಾಗಿದೆ, ಇದು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರುತ್ತದೆ" ಎಂದು ಜಿಯಾವೊ ಯಾಹುಯಿ ಹೇಳಿದ್ದಾರೆ.

ಕೋವಿಡ್​ ಉಲ್ಬಣದಿಂದಾಗಿ ಹಿಂದೆಂದೂ ಕಾಣದಂತಹ ಭೀಕರತೆಯನ್ನು ಚೀನಾ ಎದುರಿಸುತ್ತಿದೆ. ಆಸ್ಪತ್ರೆಗಳು ಸಂಪೂರ್ಣವಾಗಿ ಭರ್ತಿಯಾಗಿದ್ದು, ಮೃತರ ಅಂತ್ಯಕ್ರಿಯೆ ನೆರವೇರಿಸಲು ಸ್ಮಶಾನದಲ್ಲಿ ಸಹ ಜಾಗ ಇಲ್ಲ ಎಂದು ವರದಿಯಾಗಿದೆ. ಮಾರುಕಟ್ಟೆಯಲ್ಲಿ ಫಿಜರ್ ಇಂಕ್‌ನ ಪ್ಯಾಕ್ಸ್‌ಲೋವಿಡ್‌ನಂತಹ ಆ್ಯಂಟಿವೈರಲ್ ಔಷಧಿಗಳ ಕೊರತೆಯಿದ್ದು, ಇದರಿಂದಾಗಿ ಜನರು ಔಷಧಿಗಳನ್ನು ಕಾಳ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುತ್ತಿದ್ದಾರೆ. ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದ ತುಂಬಿ ತುಳುಕುತ್ತಿದ್ದು, ಬೆಡ್​ಗಳು ಸಿಗದೆ ಅಲ್ಲಿನ ಜನರು ಪರದಾಡುತ್ತಿದ್ದಾರೆ.

ಸುಮಾರು ಮೂರು ವರ್ಷಗಳ ಲಾಕ್‌ಡೌನ್‌, ಕ್ವಾರಂಟೈನ್‌ ಹಾಗೂ ಸಾಮೂಹಿಕ ಕೋವಿಡ್‌ ಟೆಸ್ಟಿಂಗ್‌ ನಿಯಮವನ್ನು ತೆಗೆದುಹಾಕಿದ್ದೇ ಚೀನಾಗೆ ಮುಳುವಾಗಿದೆ. ಕಳೆದ ತಿಂಗಳು ಚೀನಾ ಸರ್ಕಾರವು ನಿಯಮ ಸಡಿಲಿಸುವ ನಿರ್ಧಾರ ತೆಗೆದುಕೊಂಡ ಬಳಿಕ, ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರಿ ಏರಿ‌ಕೆ ಕಂಡುಬಂದಿದೆ.

ಆದರೆ ನಿರಂತರ ಲಾಕ್‌ಡೌನ್‌ನಿಂದಾಗಿ ಕಂಗೆಟ್ಟಿರುವ ಜನ, ಸರ್ಕಾರ ಹಾಗೂ ಲಾಕ್‌ಡೌನ್‌ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ದೀರ್ಘ ಕ್ವಾರಂಟೈನ್‌, ಲಾಕ್‌ಡೌನ್‌ಗಳು ಮತ್ತು ಕೋವಿಡ್‌ ತಪಾಸಣೆಯಿಂದ ರೋಸಿ ಹೋಗಿರುವ ಜನರು, ‘ನಮಗ್ಯಾವುದೂ ಬೇಡ’ ಎಂದು ಆಂದೋಲನ ನಡೆಸುತ್ತಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರದಿಂದ ಕೆಳಗಿಳಿಯಬೇಕು ಎಂಬ ಕೂಗು ಕೂಡ ಕೇಳಿಬರುತ್ತಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ