logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Up Municipal Election Result: ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಕಮಾಲ್; ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

UP Municipal Election Result: ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಕಮಾಲ್; ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

HT Kannada Desk HT Kannada

May 13, 2023 06:07 PM IST

google News

ಉತ್ತರ ಪ್ರದೇಶ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

  • ಉತ್ತರ ಪ್ರದೇಶ ನಗರ ಪಾಲಿಕೆ ಚುನಾವಣೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಕಮಾಲ್ ಮಾಡಿದ್ದು, ಎಲ್ಲಾ ನಗರ ಪಾಲಿಕೆಗಳಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ.

ಉತ್ತರ ಪ್ರದೇಶ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.
ಉತ್ತರ ಪ್ರದೇಶ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಲಖನೌ: ಉತ್ತರ ಪ್ರದೇಶದಲ್ಲಿ (Uttar Pradesh) ತಮ್ಮ ಶಕ್ತಿ ಏನೆಂಬುದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (CM Yogi Adityanath) ಮತ್ತೊಮ್ಮೆ ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದು, ನಗರ ಪಾಲಿಕೆ ಚುನಾವಣೆಯಲ್ಲಿ (Uttar Pradesh urban local body) ಭಾರತೀಯ ಜನತಾ ಪಾರ್ಟಿ (Bharatiya Janata Party) ಕ್ಲೀನ್ ಸ್ವೀಪ್ ಮಾಡಿದೆ.

ಉತ್ತರ ಪ್ರದೇಶ ನಗರ ಸ್ಥಳೀಯ ಸಂಸ್ಥೆ ಚುನಾವಣೆಯ (Uttar Pradesh urban local body election) ಮತ ಎಣಿಕೆ ಪ್ರಗತಿಯಲ್ಲಿದ್ದು, ಪ್ರಸ್ತುತ ಟ್ರೆಂಡ್ ಪ್ರಕಾರ ಆಡಳಿತಾರೂಢ ಬಿಜೆಪಿ ಮೇಲುಗೈ ಸಾಧಿಸಿದೆ ಎಂದು ತಿಳಿದು ಬಂದಿದೆ. 17 ನಗರ ಪಾಲಿಕೆಗಳಲ್ಲಿ ಕೇಸರಿ ಪಕ್ಷ ಗೆದ್ದು ಬೀಗಿದೆ ಎಂದು ವರದಿಯಾಗಿದೆ. ಈ ಪಾಲಿಕೆ ಚುನಾವಣೆಯಲ್ಲಿ ವಿರೋಧ ಪಕ್ಷವಾಗಿರುವ ಸಮಾಜವಾದಿ ಪಕ್ಷ ಪ್ರಬಲ ಪ್ರತಿಸ್ಪರ್ಧೆಯನ್ನು ನೀಡಿದೆ.

ಉತ್ತರ ಪ್ರದೇಶದ ನಗರ ಪಾಲಿಕೆ, ನಿಗಮ ಹಾಗೂ ನಗರ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ಒಟ್ಟಾರೆಯಾಗಿ 17 ಮೇಯರ್‌ಗಳು ಹಾಗೂ 1,401 ಕಾರ್ಪೊರೇಟರ್‌ಗಳ ಆಯ್ಕೆಗಾಗಿ ಮತದಾನ ನಡೆದಿತ್ತು.

ಈ ಪೈಕಿ 19 ಕಾರ್ಪೊರೇಟರ್‌ಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರ ಪಾಲಿಕೆ ಪರಿಷತ್ತಿನ 198 ಅಧ್ಯಕ್ಷರು, 5,260 ಸದಸ್ಯರನ್ನು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯ್ಕೆ ಮಾಡಲಾಗುತ್ತದೆ.

ನಗರ ಪಂಚಾಯಿತಿಗಳಿಗೆ 542 ಅಧ್ಯಕ್ಷರು ಹಾಗೂ 7,104 ಸದಸ್ಯರ ಭವಿಷ್ಯ ಇಂದೇ ನಿರ್ಧಾರ ಆಗುತ್ತಿದೆ. ಒಟ್ಟು 14,522 ಸ್ಥಾನಗಳಿಗೆ 83,378 ಅಭ್ಯರ್ಥಿಗಳ ಕಣದಲ್ಲಿದ್ದಾರೆ.

ಪ್ರಸ್ತುತ ಲಭ್ಯವಿರುವ ಟ್ರೆಂಡ್ ಪ್ರಕಾರ, ಝಾನ್ಸಿ, ಸಹರಾನ್‌ಪುರ, ಮಥುರಾ, ಅಯೋಧ್ಯೆ, ಮೊರಾದಾಬಾದ್ ಹಾಗೂ ಬರೇಲಿಯ ಮೇಯರ್ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದ್ದು, ಮೀರತ್, ಕಾನ್ಪುರ್, ವಾರಣಾಶಿ, ಘಾಜಿಯಾಬಾದ್ ಹಾಗೂ ಶಹಜಹಾನ್‌ಪುರದಲ್ಲಿ ಮುನ್ನಡೆಯಲ್ಲಿತ್ತು. ಬಳಿಕ ಈ ಪಾಲಿಕೆಗಳಲ್ಲಿ ಜಯದ ನಗೆ ಬೀರಿದೆ ಎಂದು ವರದಿಯಾಗಿದೆ.

ನಗರ ಸ್ಥಳೀಯರ ಸಂಸ್ಥೆಗಳ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ಭರ್ಜರಿ ಜಯಗಳಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯುಪಿ ಡಿಸಿಎಂ ಬ್ರಜೇಶ್ ಪಾಠಕ್, ಮತದಾರರಿಗೆ ಧನ್ಯವಾದ ಹೇಳಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆಗೆ ಮಾತನಾಡಿರುವ ಅವರು, ಬಿಜೆಪಿ ಎಲ್ಲಾ 17 ಸ್ಥಳೀಯ ಸಂಸ್ಥೆಗಳಲ್ಲಿ ಗೆಲುವು ಸಾಧಿಸಿದೆ. ನಮ್ಮ ಪಕ್ಷವು ನಗರ ಪಾಲಿಕೆ, ನಗರ ಪಂಚಾಯಿತಿ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ನಮ್ಮ ಮೇಲೆ ವಿಶ್ವಾಸವಿಟ್ಟು ಮತದಾನ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ನಾಯಕತ್ವದಲ್ಲಿ ಬಿಜೆಪಿ ತನ್ನ ಜನ ಕಲ್ಯಾಣ ನೀತಿಗಳನ್ನು ಕೊನೆಯ ವ್ಯಕ್ತಿಗೆ ಕೊಂಡೊಯ್ಯುವುದನ್ನು ಮುಂದುವರೆಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ