XI Jinping: ಜಿನ್‌ಪಿಂಗ್‌ಗೆ ʼಮಹಾ ನಾಯಕʼನ ಪಟ್ಟ ಕಟ್ಟಲು ಮುಂದಾದ ಚೀನಿ ಕಮ್ಯೂನಿಸ್ಟ್ ಪಕ್ಷ!
Aug 30, 2022 09:41 PM IST
ಕ್ಸಿ ಜಿನ್‌ಪಿಂಗ್ (ಸಂಗ್ರಹ ಚಿತ್ರ)
- ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷವು ಅಕ್ಟೋಬರ್ 16 ರಂದು ತನ್ನ 20ನೇ ಕಾಂಗ್ರೆಸ್ ಸಮಾವೇಶ ಹಮ್ಮಿಕೊಂಡಿದೆ. ಈ ಸಭೆಯಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ʼಮಹಾ ನಾಯಕʼನ ಪಟ್ಟ ಕಟ್ಟಲು ಚೀನ ಕಮ್ಯೂನಿಸ್ಟ್ ಪಕ್ಷ ಸಜ್ಜಾಗಿದೆ. ಕ್ಸಿ ಜಿನ್‌ಪಿಂಗ್ ಅವರು ಮೂರನೇ ಅವಧಿಗೆ ಚೀನಾದ ಅಧ್ಯಕ್ಷರಾಗಿ ಮುಂದುವರೆಯಲಿದ್ದು, ಪಕ್ಷ ಮತ್ತು ಸರ್ಕಾರದ ಮೇಲಿನ ಅವರ ಹಿಡಿತ ದಿನೇ ದಿನೇ ಬಲಗೊಳ್ಳುತ್ತಿದೆ.
ಬೀಜಿಂಗ್: ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷವು ಅಕ್ಟೋಬರ್ 16 ರಂದು ತನ್ನ 20ನೇ ಕಾಂಗ್ರೆಸ್ ಸಮಾವೇಶ ಹಮ್ಮಿಕೊಂಡಿದೆ. ಈ ಸಭೆಯಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ʼಮಹಾ ನಾಯಕʼನ ಪಟ್ಟ ಕಟ್ಟಲು ಚೀನ ಕಮ್ಯೂನಿಸ್ಟ್ ಪಕ್ಷ ಸಜ್ಜಾಗಿದೆ.
ಕ್ಸಿ ಜಿನ್‌ಪಿಂಗ್ ಅವರು ಚೀನಾದ ಅತ್ಯಂತ ಪ್ರಭಾವಶಾಲಿ ನಾಯಕರಾಗಿದ್ದು, ಅವರ ಆಡಳಿತಾವಧಿಯಲ್ಲಿ ಚೀನಾ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಹೀಗಾಗಿ ಅವರಿಗೆ ʼಮಹಾ ನಾಯಕʼನ ಪಟ್ಟ ಕಟ್ಟುವುದು ತನ್ನ ಉದ್ದೇಶ ಎಂದು ಚೀನಾದ ಕಮ್ಯೂನಿಸ್ಟ್ ಪಕ್ಷ ಹೇಳಿದೆ.
ಕ್ಸಿ ಜಿನ್‌ಪಿಂಗ್ ಅವರು ಮೂರನೇ ಅವಧಿಗೆ ಚೀನಾದ ಅಧ್ಯಕ್ಷರಾಗಿ ಮುಂದುವರೆಯಲಿದ್ದು, ಪಕ್ಷ ಮತ್ತು ಸರ್ಕಾರದ ಮೇಲಿನ ಅವರ ಹಿಡಿತ ದಿನೇ ದಿನೇ ಬಲಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ಚೀನಾದ ಕಮ್ಯೂನಿಸ್ಟ್ ಪಕ್ಷ ಕೂಡ ಅವರಿಗೆ ಮತ್ತಷ್ಟು ಹೆಚ್ಚಿನ ಅಧಿಕಾರ ನೀಡಲು ಮುಂದಾಗಿದೆ.
ಮಾವೋ ಝೆಡಾಂಗ್ ನಂತರ ಚೀನಾದ ಅತ್ಯಂತ ಶಕ್ತಿಶಾಲಿ ನಾಯಕ ಎಂದು ಕ್ಸಿ ಜಿನ್‌ಪಿಂಗ್ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ಪಕ್ಷ ಮತ್ತು ಸರ್ಕಾರದ ಮೇಲಿನ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿದ್ದಾರೆ. ಕ್ಸಿ ಜಿನ್‌ಪಿಂಗ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಚೀನಿ ಕಮ್ಯೂನಿಸ್ಟ್ ಪಕ್ಷ, ಕ್ಸಿ ಅವರ ಆಶೋತ್ತರಗಳಿಗೆ ನೀರೆರೆದು ಪೋಷಿಸುತ್ತಿದೆ.
ಚೀನಾ ಕಮ್ಯೂನಿಸ್ಟ್ ಪಕ್ಷದ 25 ಸದಸ್ಯರ ಪಾಲಿಟ್‌ಬ್ಯೂರೊ ಸಮಿತಿ, 20ನೇ ಕಾಂಗ್ರೆಸ್ ಸಮಾವೇಶದ ಸಿದ್ಧತೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಈ ಸಭೆ ಯಶಸ್ವಿಯಾಗಲಿದೆ ಎಂದು ಹೇಳಿದೆ. ದೇಶಾದ್ಯಂತ ಇರುವ ಸುಮಾರು 2,300 ಕಮ್ಯೂನಿಸ್ಟ್ ಪಕ್ಷದ ಪ್ರತಿನಿಧಿಗಳು, 200 ಸದಸ್ಯರ ಪಕ್ಷದ ಕೇಂದ್ರ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಿದೆ.
ಪ್ರಸ್ತುತ ಕೇಂದ್ರ ಸಮಿತಿಯ ಅಂತಿಮ ಸಭೆಯು ಬೀಜಿಂಗ್‌ನಲ್ಲಿ ಅಕ್ಟೋಬರ್ 9 ರಿಂದ ನಡೆಯಲಿದೆ. ಮತದಾನವು ಬಹುಪಾಲು ಔಪಚಾರಿಕವಾಗಿರಲಿದ್ದು, ಪಾಲಿಟ್‌ಬ್ಯುರೊ ಮತ್ತು ಅದರ ಸ್ಥಾಯಿ ಸಮಿತಿಯ ನಿರ್ಧಾರಕ್ಕೆ ಅನುಗುಣವಾಗಿಯೇ ಮತದಾನ ನಡೆಯಲಿದೆ ಎಂಬುದು ಖಚಿತ.
ಚೀನಾದ ಹದಗೆಡುತ್ತಿರುವ ಆರ್ಥಿಕತೆ, ಅಮೆರಿಕದೊಂದಿಗಿನ ಹಳಸಿರುವ ಸಂಬಂಧ ಮತ್ತು ಕೋವಿಡ್ ವೇಳೆ ಕೈಗೊಂಡ ಬಿಗಿ ಕ್ರಮಗಳಿಂದ, ಚೀನಾದಲ್ಲಿ ಕ್ಸಿ ಜಿನ್‌ಪಿಂಗ್ ಜನಪ್ರಿಯತೆ ಕುಗ್ಗುತ್ತಿದೆ. ಆದರೆ ಈ ಸತ್ಯಕ್ಕೆ ವ್ಯತಿರಿಕ್ತವಾದ ನಿಲುವು ತೆಗೆದುಕೊಂಡಿರುವ ಚೀನಾದ ಕಮ್ಯೂನಿಸ್ಟ್ ಪಕ್ಷ, ಅವರಿಗೆ ಮತ್ತಷ್ಟು ಹೆಚ್ಚಿನ ಅಧಿಕಾರ ನೀಡಲು ಮುಂದಾಗಿದೆ. ಚೀನಾದ ಕಮ್ಯೂನಿಸ್ಟ್ ಪಕ್ಷ ದೇಶ್ ವಸ್ತುಸ್ಥಿತಿಯನ್ನು ಮುಚ್ಚಿಡುವ ಪ್ರಯತ್ನ ನಡೆಸಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಏನಂತಾರೆ ರಾಜಕೀಯ ವಿಶ್ಲೇಷಕರು?
ಇನ್ನು ಕ್ಸಿ ಜಿನ್‌ಪಿಂಗ್ ಅವರನ್ನು ಮೂರನೇ ಅವಧಿಗೆ ಅಧ್ಯಕ್ಷರನ್ನಾಗಿ ಚುನಾಯಿಸಲು ಸಜ್ಜಾಗಿರುವ ಚೀನಾದ ಕಮ್ಯೂನಿಸ್ಟ್ ಪಕ್ಷದ ನಿರ್ಣಯದ ಕುರಿತು, ಹಲವು ಅಂತಾರಾಷ್ಟ್ರೀಯ ರಾಜಕೀಯ ತಜ್ಞರು ತಮ್ಮದೇ ಆದ ವಿಶ್ಲೇಷಣೆಯನ್ನು ಮಾಡಿದ್ದಾರೆ. ಈ ಕುರಿತು ಮಾತನಾಡಿರುವ ಚೀನಾದ ರಾಜಕೀಯ ತಜ್ಞ ಮತ್ತು ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯ ಸಹ ಪ್ರಾಧ್ಯಾಪಕ ಆಲ್ಫ್ರೆಡ್ ವು ಮುಲುವಾನ್, ಈ ನಿರ್ಧಾರ ತಮಗೆ ಆಶ್ವರ್ಯ ತಂದಿಲ್ಲ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಸರ್ವಾಧಿಕಾರದ ಪರೀಧಿಯನ್ನು ಹೆಚ್ಚಿಸಿಕೊಳ್ಳಲಿದ್ದು, ಅವರ ಮೂರನೇ ಅವಧಿ ಏಷ್ಯಾದ ಮತ್ತು ಜಾಗತಿಕ ರಾಜಕೀಯದ ಮೇಲೆ ಯಾವ ತೆರನಾದ ಪ್ರಭಾವ ಬೀರಲಿದೆ ಎಂಬದನ್ನು ಕಾದು ನೋಡಬೇಕಿದೆ. ಇದಕ್ಕೆ ಸಮಾನಾಂತರವಾಗಿ ಕ್ಸಿ ಜಿನ್‌ಪಿಂಗ್ ವಿರೋಧಿ ಜಾಗತಿಕ ಒಕ್ಕೂಟ ಯಾವ ರೀತಿಯ ರಣತಂತ್ರವನ್ನು ಹೆಣೆಯಲಿದೆ ಎಂಬುದೂ ಕುತೂಹಲ ಕೆರಳಿಸಿದೆ.
ವಿಭಾಗ