Indu Malhotra video: ಆದಾಯಕ್ಕಾಗಿ ಹಿಂದೂ ದೇಗುಲಗಳ ಮೇಲೆ ಕಮ್ಯುನಿಸ್ಟ್‌ಗಳ ನಿಯಂತ್ರಣ, ಸುಪ್ರೀಂ ಕೋರ್ಟ್ ಮಾಜಿ ಜಡ್ಜ್ ಹೇಳಿದ್ದೇನು?
Aug 30, 2022 05:59 AM IST
Indu Malhotra video: ಆದಾಯಕ್ಕಾಗಿ ಹಿಂದೂ ದೇಗುಲಗಳ ಮೇಲೆ ಕಮ್ಯುನಿಸ್ಟ್‌ಗಳ ನಿಯಂತ್ರಣ, ಸುಪ್ರೀಂ ಕೋರ್ಟ್ ಮಾಜಿ ಜಡ್ಜ್ ಹೇಳಿದ್ದೇನು?
- Indu Malhotra temple video: ಎಲ್ಲಾ ಕಡೆ ಇರುವ ಹಿಂದೂ ದೇಗುಲಗಳ ಮೇಲೆ ಕಮ್ಯುನಿಸ್ಟ್ ಸರಕಾರ ನಿಯಂತ್ರಣ ಹೊಂದುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರು ಹೇಳಿಕೆ ನೀಡಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. "ಕಮ್ಯುನಿಸ್ಟ್ ಸರಕಾರಗಳು ಹಿಂದೂ ದೇಗುಲಗಳಿಂದ ಬರುವ ಆದಾಯಕ್ಕಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿವೆʼʼ ಎಂದು ಅವರು ಹೇಳಿದ್ದಾರೆ.
ತಿರುವನಂತಪುರ: ಎಲ್ಲಾ ಕಡೆ ಇರುವ ಹಿಂದೂ ದೇಗುಲಗಳ ಮೇಲೆ ಕಮ್ಯುನಿಸ್ಟ್ ಸರಕಾರ ನಿಯಂತ್ರಣ ಹೊಂದುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರು ಹೇಳಿಕೆ ನೀಡಿರುವ ವಿಡಿಯೋ (Indu Malhotra temple video) ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. "ಕಮ್ಯುನಿಸ್ಟ್ ಸರಕಾರಗಳು ಹಿಂದೂ ದೇಗುಲಗಳಿಂದ ಬರುವ ಆದಾಯಕ್ಕಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿವೆʼʼ ಎಂದು ಅವರು ಹೇಳಿದ್ದಾರೆ.
"... ಈ ಕಮ್ಯುನಿಸ್ಟ್ ಸರಕಾರ ಏನು ಮಾಡುತ್ತಿದೆ ನೋಡಿ, ಅವರು ದೇಗುಲದ ಆದಾಯಕ್ಕಾಗಿ ದೇಗುಲಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಆದಾಯವೇ ಅವರ ಸಮಸ್ಯೆ. ಎಲ್ಲಾ ಕಡೆ ಅವರು ದೇಗುಲಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಅದು ಹಿಂದೂ ದೇಗುಲಗಳನ್ನು ಮಾತ್ರ..!ʼ ಎಂದು ಅವರು ಹೇಳಿರುವ ವಿಡಿಯೋ ವೈರಲ್ ಆಗಿದೆ.
ಕೇರಳದ ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇಗುಲದ ಹೊರಭಾಗದಲ್ಲಿ ಈ ವಿಡಿಯೋ ಶೂಟ್ ಮಾಡಲಾಗಿದೆ. ಕೇರಳದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಮಲ್ಹೋತ್ರಾ ಆಗಮಿಸಿದ್ದಾರೆ. "ದೇಗುಲಗಳ ಮೇಲೆ ಕಮ್ಯುನಿಸ್ಟ್ ಸರಕಾರಗಳು ಹೊಂದಿರುವ ನಿಯಂತ್ರಣಗಳನ್ನು ನಾನು ಮತ್ತು ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ನಿಲ್ಲಿಸಿರುವುದಾಗಿಯೂʼ ಅವರು ಹೇಳಿದ್ದಾರೆ.
ಅವರು 2020ರ ತೀರ್ಪನ್ನು ನೆನಪಿಸಿಕೊಂಡಿದ್ದಾರೆ. ಆಗ ಸುಪ್ರೀಂ ಕೋರ್ಟ್ ಟ್ರಾವಂಕೋರ್ ರಾಜಮನೆತನಕ್ಕೆ ಶ್ರೀ ಪದ್ಮನಾಭ ದೇಗುಲದ ಮೇಲೆ ಇರುವ ಹಕ್ಕುಗಳನ್ನು ಎತ್ತಿ ಹಿಡಿದಿತ್ತು ಎಂದು ಅವರು ಹೇಳಿದ್ದಾರೆ. ಈಗ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿಯಾಗಿರುವ ಯುಯು ಲಲಿತ್ ಅವರಿದ್ದ ಪೀಠ ಈ ಹಿಂದೆ ಈ ಕುರಿತು ತೀರ್ಪು ನೀಡಿತ್ತು. "ಕೇರಳದ ಟ್ರಾವಂಕೂರ್‌ನ ಕೊನೆಯ ರಾಜನ ಸಾವಿನ ನಂತರ ರಾಜಕುಟುಂಬಕ್ಕೆ ದೇಗುಲದ ಮೇಲೆ ಹಕ್ಕಿಲ್ಲ ಎಂದು ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು.
ವಿಸ್ತಾರವಾಗಿದ್ದ ಶ್ರೀ ಪದ್ಮನಾಭ ಸ್ವಾಮಿ ದೇಗುಲವನ್ನು 18ನೇ ಶತಮಾನದಲ್ಲಿ, ರಾಜ್ಯವು 1947ರಲ್ಲಿ ಭಾರತೀಯ ಒಕ್ಕೂಟದೊಂದಿಗೆ ಸೇರುವ ಮೊದಲು ದಕ್ಷಿಣ ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳನ್ನು ಆಳಿದ್ದ ತಿರುವಾಂಕೂರು ರಾಜಮನೆತನವು ಪುನರ್‌ನಿರ್ಮಿಸಿತ್ತು.
"ಮಾಜಿ ನ್ಯಾಯಮೂರ್ತಿಗಳ ಹೇಳಿಕೆಯು ಕಮ್ಯುನಿಸ್ಟ್‌ರ ಕುರಿತು ಆಳವಾದ ಪೂರ್ವಾಗ್ರಹ ಹೊಂದಿರುವ ಹೇಳಿಕೆಯಾಗಿದೆʼʼ ಎಂದು ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ನಾಯಕ ಮತ್ತು ಕೇರಳದ ಮಾಜಿ ಹಣಕಾಸು ಸಚಿವರಾದ ಥಾಮಸ್ ಐಸಾಕ್ ಹೇಳಿದ್ದಾರೆ.
"ನ್ಯಾಯಮೂರ್ತಿಯವರಿಗೆ ಕೇರಳ ಸರಕಾರದ ಸಾರ್ವಜನಿಕ ಹಣಕಾಸಿನ ಕುರಿತು ಅರಿವಿಲ್ಲ. ದೇಗುಲದ ಆದಾಯದ ಒಂದು ಪೈಸೆಯೂ ಬಜೆಟ್‌ಗೆ ಸೇರುತ್ತಿಲ್ಲ. ಭಕ್ತರ ಸೌಲಭ್ಯಕ್ಕಾಗಿ ಮತ್ತು ದೇವಾಲಯದ ಆಡಳಿತಕ್ಕೆ ನೂರಾರು ಕೋಟಿ ರೂಪಾಯಿಗಳನ್ನು ಸರಕಾರು ಖರ್ಚು ಮಾಡುತ್ತಿದೆʼʼ ಎಂದು ಅವರು ಟ್ವೀಟ್ ಮಾಡಿದ್ದಾರೆ.