logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Adani Row: 'ಅದಾನಿ ಜೊತೆಗಿನ ಸಂಬಂಧದ ಬಗ್ಗೆ ರಾಹುಲ್ ಗಾಂಧಿ ಮತ್ತೊಮ್ಮೆ ಮೋದಿಯನ್ನು ಕೇಳಬಹುದು ಎಂಬ ಭಯ ಬಿಜೆಪಿಗೆ' - ಕಾಂಗ್ರೆಸ್​ ವಾಗ್ದಾಳಿ

Adani Row: 'ಅದಾನಿ ಜೊತೆಗಿನ ಸಂಬಂಧದ ಬಗ್ಗೆ ರಾಹುಲ್ ಗಾಂಧಿ ಮತ್ತೊಮ್ಮೆ ಮೋದಿಯನ್ನು ಕೇಳಬಹುದು ಎಂಬ ಭಯ ಬಿಜೆಪಿಗೆ' - ಕಾಂಗ್ರೆಸ್​ ವಾಗ್ದಾಳಿ

HT Kannada Desk HT Kannada

Mar 21, 2023 02:19 PM IST

google News

ಪ್ರಧಾನಿ ಮೋದಿ - ರಾಹುಲ್​ ಗಾಂಧಿ

  • ಲಂಡನ್‌ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹೇಳಿಕೆಯ ಕುರಿತು ಸಂಸತ್ತಿನಲ್ಲಿ ಬಿಜೆಪಿ ಗದ್ದಲ ಎಬ್ಬಿಸುತ್ತಿರುವುದನ್ನು ಕಾಂಗ್ರೆಸ್ ಪಕ್ಷವು "ನಾಟಕ" ಎಂದು ಹೇಳಿದೆ. ಸದನದಲ್ಲಿ ರಾಹುಲ್​ ಗಾಂಧಿಗೆ ಮಾತನಾಡಲು ಅವಕಾಶ ನೀಡದೇ ಇರುವುದರ ವಿರುದ್ಧ ಕಿಡಿಕಾರಿದೆ.

ಪ್ರಧಾನಿ ಮೋದಿ - ರಾಹುಲ್​ ಗಾಂಧಿ
ಪ್ರಧಾನಿ ಮೋದಿ - ರಾಹುಲ್​ ಗಾಂಧಿ

ನವದೆಹಲಿ: ಲಂಡನ್‌ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಹೇಳಿಕೆಯ ಕುರಿತು ಸಂಸತ್ತಿನಲ್ಲಿ ಬಿಜೆಪಿ ಗದ್ದಲ ಎಬ್ಬಿಸುತ್ತಿರುವುದನ್ನು ಕಾಂಗ್ರೆಸ್ ಪಕ್ಷವು "ನಾಟಕ" ಎಂದು ಹೇಳಿದೆ. ಸದನದಲ್ಲಿ ರಾಹುಲ್​ ಗಾಂಧಿಗೆ ಮಾತನಾಡಲು ಅವಕಾಶ ನೀಡದೇ ಇರುವುದರ ವಿರುದ್ಧ ಕಿಡಿಕಾರಿದೆ.

ರಾಹುಲ್ ಗಾಂಧಿಯವರ ಲಂಡನ್​​ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಉಸ್ತುವಾರಿ ಪವನ್ ಖೇರಾ, "ಸರ್ಕಾರವನ್ನು ಟೀಕಿಸುವುದು ರಾಷ್ಟ್ರವನ್ನು ಟೀಕಿಸುವುದಕ್ಕೆ ಸಮವಲ್ಲ. ಚರ್ಚೆಯು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದಿಲ್ಲ, ಬದಲಿಗೆ ಅದನ್ನು ಬಲಪಡಿಸುತ್ತದೆ. ಅವರು ಪ್ರತಿಪಕ್ಷಗಳ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾರಣ ಸರ್ಕಾರವು ಈ ನಾಟಕವನ್ನು ಮಾಡುತ್ತಿದೆ" ಎಂದು ಹೇಳಿದ್ದಾರೆ.

"ಅದಾನಿ ಗ್ರೂಪ್ ಕುರಿತ ಹಿಂಡೆನ್‌ಬರ್ಗ್ ವರದಿ ಬಗ್ಗೆ ಉದ್ಭವಿಸುವ ಪ್ರಶ್ನೆಗಳನ್ನು ತಪ್ಪಿಸಲು ಲಂಡನ್‌ನಲ್ಲಿ ರಾಹುಲ್ ಗಾಂಧಿಯವರ ಭಾಷಣವನ್ನಿಟ್ಟುಕೊಂಡು ಬಿಜೆಪಿ ಗದ್ದಲವನ್ನು ಉಂಟುಮಾಡುತ್ತಿದೆ. ಅದಾನಿ ಜೊತೆಗಿನ ಸಂಬಂಧದ ಬಗ್ಗೆ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ಮೋದಿಯನ್ನು ಕೇಳಬಹುದು ಎಂದು ಬಿಜೆಪಿಯವರು ಚಿಂತಿತರಾಗಿದ್ದಾರೆ. ಅಲ್ಲದೇ ಅದಾನಿ ವಿವಾದ ಕುರಿತ ಜೆಪಿಸಿ ತನಿಖೆಗೆ ಕೂಡ ಒಪ್ಪಿಗೆ ನೀಡಿಲ್ಲ. ಇವೆಲ್ಲದರಿಂದ ತಪ್ಪಿಸಿಕೊಳ್ಳಲು ಈ ನಾಟಕ" ಎಂದು ವಾಗ್ದಾಳಿ ನಡೆಸಿದ್ದಾರೆ.

ಭಾರತದಲ್ಲಿ ನವಾಬ್ ಆಗಲು ವಿದೇಶಿ ಶಕ್ತಿಗಳ ಸಹಾಯ ಕೋರಿ ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ್ದರು. ಅವರು ಇಂದಿನ ಭಾರತೀಯ ರಾಜಕೀಯದ ಮೀರ್ ಜಾಫರ್" ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪವನ್ ಖೇರಾ, " ಸಂಬಿತ್ ಪಾತ್ರ ಶೀಘ್ರದಲ್ಲೇ ಬಲವಾದ ಉತ್ತರವನ್ನು ಪಡೆಯುತ್ತಾರೆ. ಉತ್ತರ ನೀಡುವುದು ಹೇಗೆ ಎಂಬುದನ್ನು ಬಿಜೆಪಿಯಿಂದಲೂ ಕಲಿಯುತ್ತಿದ್ದೇವೆ. ಅವರ ಹೇಳಿಕೆಯ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.

ಬಿಜೆಪಿಯವರು ಲಂಡನ್​​ ಹೇಳಿಕೆಗೆ ರಾಹುಲ್​ ಗಾಂಧಿ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದರೆ, ಕಾಂಗ್ರೆಸ್​ನವರು ಅದಾನಿ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪದ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವಂತೆ ಆಗ್ರಹಿಸುತ್ತಿದೆ. ಇದರಿಂದ ಗದ್ದಲ ಉಂಟಾಗಿ ಕಲಾಪಗಳು ಮುಂದೂಡಿಕೆಯಾಗುತ್ತಲೇ ಇದೆ.

ಲಂಡನ್​​​ನಿಂದ ಭಾರತಕ್ಕೆ ಮರಳಿದ ಬಳಿಕ ರಾಹುಲ್​ ಗಾಂಧಿ ಲೋಕಸಭಾ ಕಲಾಪಕ್ಕೆ ಹಾಜರಾಗುತ್ತಿದ್ದಾರೆ. ಆದರೆ ಸತತ ಮೂರು ದಿನಗಳಿಂದ ರಾಹುಲ್​​ ಗಾಂಧಿ ಅವರಿಗೆ ಸದನದಲ್ಲಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಪ್ರತಿದಿನವೂ ಸದನದಲ್ಲಿ ಗದ್ದಲ ಉಂಟಾಗುತ್ತಿದ್ದು, ಕಲಾಪಗಳು ಮುಂದೂಡಿಕೆಯಾಗುತ್ತಿದೆ. ಹೀಗಾಗಿ ರಾಹುಲ್​ ಗಾಂಧಿ ಸ್ಪೀಕರ್​ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

ಲೋಕಸಭೆಯಲ್ಲಿ ಆಗಿನ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ರವಿಶಂಕರ್ ಪ್ರಸಾದ್ ವಿರುದ್ಧ ಆರೋಪವೊಂದನ್ನು ಹೊರಿಸಲಾದ ಘಟನೆಯನ್ನು ರಾಹುಲ್​ ಗಾಂಧಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರವಿಶಂಕರ್ ಪ್ರಸಾದ್ ಅವರು ಸದನದಲ್ಲಿ ಹಾಜರಾಗದ ಕಾರಣ, ಅಂದಿನ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮರುದಿನ ಆರೋಪಕ್ಕೆ ಪ್ರತಿಕ್ರಿಯಿಸಲು ಸಚಿವರಿಗೆ ಅವಕಾಶ ನೀಡಿದ್ದರು. ಆದರೆ ನನಗೇಕೆ ಸದನದಲ್ಲಿ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ ಎಂದು ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ