Bharat Jodo Yatra: ಭಾರತ್ ಜೋಡೋ ಯಾತ್ರೆ ಕಣಿವೆ ಪ್ರವೇಶಿಸುತ್ತಿದ್ದಂತೇ ವಿಶೇಷ ಸ್ಥಾನಮಾನ ವಿಷಯ ಕೆದಕಿದ ಕಾಂಗ್ರೆಸ್
Jan 21, 2023 08:30 AM IST
ಜೈರಾಮ್ ರಮೇಶ್ ಪತ್ರಕಾಗೋಷ್ಠಿ
- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ, ಅಧಿಕೃತವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿದೆ. ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರಕ್ಕೆ ಈ ಹಿಂದೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರ ತಪ್ಪು ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ, ಅಧಿಕೃತವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿದೆ. ಯಾತ್ರೆಯು ಕಣಿವೆಯನ್ನು ಪ್ರವೇಶಿಸುತ್ತಿದ್ದಂತೇ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ಗೆ ವಿಶೇಷ ಸ್ಥಾನಮಾನ ವಿಷಯ ನೆನಪಾಗಿರುವುದು ವಿಶೇಷ.
ಜಮ್ಮು ಮತ್ತು ಕಾಶ್ಮೀರಕ್ಕೆ ಈ ಹಿಂದೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ತಪ್ಪು ಎಂದು ಕಾಂಗ್ರೆಸ್ ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕಿಡಿಕಾರಿದ್ದಾರೆ. ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮೂಲಕ, ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ ಜನತೆಗೆ "ಘೋರ ಅವಮಾನ" ಮಾಡಿದೆ ಎಂದು ಜೈರಾಮ್ ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಕರೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, ಇದು ಕಣಿವೆಯ ಜನರಿಗೆ ಕೇಂದ್ರ ಸರ್ಕಾರವು ಮಾಡಬಹುದಾದ ಅತ್ಯಂತ ಕನಿಷ್ಠ ಸಹಾಯವಾಗಿರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2019ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯಲಾಯಿತು. ಅಲ್ಲದೇ ರಾಜ್ಯ ಸ್ಥಾನಮಾನವನ್ನೂ ಕಸಿದುಕೊಳ್ಳಲಾಯಿತು. ಕೇಂದ್ರದ ಈ ನಿರ್ಧಾರ ದಶಕಗಳಿಂದ ಭಾರತದೊಂದಿಗೆ ಇರುವ ಜಮ್ಮು ಮತ್ತು ಕಾಶ್ಮೀರದ ಜನರಿಗೆ ಮಾಡಿದ ಘೋರ ಅವಮಾನವಾಗಿದೆ ಎಂದು ಜೈರಾಮ್ ರಮೇಶ್ ಅಸಮಾಧಾನ ಹೊರಹಾಕಿದ್ದಾರೆ.
ಸಂವಿಧಾನದ 371ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿರುವ ಹಲವಾರು ರಾಜ್ಯಗಳು ಭಾರತದಲ್ಲಿ ಇವೆ. ಹೀಗಾಗಿ ವಿಶೇಷ ಸ್ಥಾನಮಾನವು ಕೇವಲ ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ಸಾಗುವ ಕುರಿತು ಮಾಹಿತಿ ನೀಡಿದ ಜೈರಾಮ್ ರಮೇಶ್, ಭದ್ರತೆಯ ಕಾರಣದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾತ್ರೆಯ ಮಹತ್ವದ ಭಾಗವನ್ನು ಬಸ್ ಮೂಲಕ ಪೂರ್ಣಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಕಾಶ್ಮೀರದ ಅನಂತನಾಗ್‌ನಿಂದ ಶ್ರೀನಗರದವರೆಗೆ, ಕನಿಷ್ಠ ಮೂರು ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ. ಜ.೩೦ರಂದು ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಜೈರಾಮ್ ರಮೇಶ್ ಇದೇ ವೇಳೆ ಮಾಹಿತಿ ನೀಡಿದರು.
ಸಮಾರೋಪ ಸಮಾಋಂಭದಲ್ಲಿ ಸುಮಾರು ಎರಡು ಡಜನ್‌ಗೂ ಅಧಿಕ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ದೇಶದ ಜಾತ್ಯಾತೀತ ಸಿದ್ಧಾಂತವನ್ನು ಒಪ್ಪುವ ಎಲ್ಲಾ ಸಮಾನ ಮನಸ್ಕ ರಾಜಕೀಯ ಪಕ್ಷಗಳಿಗೆ ನಾವು ಆಹ್ವಾನ ನೀಡಿದ್ದೇವೆ. ಈ ಪಕ್ಷಗಳ ನಾಯಕರು ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಇನ್ನು ಜನವರಿ 26 ರಿಂದ ಮಾರ್ಚ್ 26ರವರೆಗೆ 'ಹಾಥ್ ಸೇ ಹಾಥ್ ಜೋಡೋ' ಅಭಿಯಾನ ನಡೆಯಲಿದೆ. ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ಮಾಡಲಿದ್ದಾರೆ. ದೇಶದ ಸುಮಾರು 6 ಲಕ್ಷ ಗ್ರಾಮಗಳು ಮತ್ತು 2.5 ಲಕ್ಷ ಗ್ರಾಮ ಪಂಚಾಯಿತಿಗಳ 10 ಲಕ್ಷ ಮತಗಟ್ಟೆಗಳಲ್ಲಿ, ಪ್ರತಿ ಮನೆಯನ್ನು ಈ ಅಭಿಯಾನದ ಮೂಲಕ ತಲುಪಲಾಗುವುದು ಎಂದು ಜೈರಾಮ್ ರಮೇಶ್ ಇದೇ ವೇಳೆ ತಿಳಿಸಿದರು.
ಒಟ್ಟಿನಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯು ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸುತ್ತಿದ್ದಂತೇ, ಕಾಂಗ್ರೆಸ್ ವಿಶೇಷ ಸ್ಥಾನಮಾನ ಮತ್ತು ರಾಜ್ಯ ಸ್ಥಾನಮಾನದ ವಿಷಯ ಕೆದಕಿರುವುದು ದೇಶದ ಗಮನ ಸೆಳೆದಿದೆ.