logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Santokh Singh Chaudhary: ಕಾಂಗ್ರೆಸ್‌ ಸಂಸದ ಹಠಾತ್‌ ನಿಧನ: ದಿನದ ಮಟ್ಟಿಗೆ ಭಾರತ್‌ ಜೋಡೋ ಯಾತ್ರೆ ಸ್ಥಗಿತ!

Santokh Singh Chaudhary: ಕಾಂಗ್ರೆಸ್‌ ಸಂಸದ ಹಠಾತ್‌ ನಿಧನ: ದಿನದ ಮಟ್ಟಿಗೆ ಭಾರತ್‌ ಜೋಡೋ ಯಾತ್ರೆ ಸ್ಥಗಿತ!

HT Kannada Desk HT Kannada

Jan 14, 2023 01:01 PM IST

google News

ರಾಹುಲ್‌ ಜೊತೆ ಯಾತ್ರೆಯಲ್ಲಿ ಭಾಗವಹಿಸಿದ್ದ ಚೌಧರಿ

    • ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರು, ಇಂದು(ಜ.14-ಶನಿವಾರ) ಬೆಳಗ್ಗೆ ಪಂಜಾಬ್‌ನಲ್ಲಿ ಸಂಚರಿಸುತ್ತಿರುವ ಭಾರತ್ ಜೋಡೋ ಯಾತ್ರೆಯ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚೌಧರಿ ಅವರ ಹಠಾತ್‌ ನಿಧನದ ಕಾರಣಕ್ಕೆ, ಪಂಜಾಬ್‌ನಲ್ಲಿ ಸಂಚರಿಸುತ್ತಿದ್ದ ಭಾರತ್‌ ಜೋಡೋ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.
ರಾಹುಲ್‌ ಜೊತೆ ಯಾತ್ರೆಯಲ್ಲಿ ಭಾಗವಹಿಸಿದ್ದ ಚೌಧರಿ
ರಾಹುಲ್‌ ಜೊತೆ ಯಾತ್ರೆಯಲ್ಲಿ ಭಾಗವಹಿಸಿದ್ದ ಚೌಧರಿ (Verified Twitter)

ಲುಧಿಯಾನಾ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಅವರು, ಇಂದು(ಜ.14-ಶನಿವಾರ) ಬೆಳಗ್ಗೆ ಪಂಜಾಬ್‌ನಲ್ಲಿ ಸಂಚರಿಸುತ್ತಿರುವ ಭಾರತ್ ಜೋಡೋ ಯಾತ್ರೆಯ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಯಾತ್ರೆ ವೇಳೆ ಹಠಾತ್ತನೆ ಕುಸಿದು ಬಿದ್ದ 76 ವರ್ಷದ ಸಂತೋಖ್‌ ಸಿಂಗ್‌ ಚೌಧರಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಅಸುನೀಗಿದರು ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಪಂಜಾಬ್‌ನ ಫಿಲ್ಲೌರ್‌ನಲ್ಲಿ ನಡೆದ ಪಾದಯಾತ್ರೆಯ ವೇಳೆ, ಜಲಂಧರ್‌ನ ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ಚೌಧರಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆ್ಯಂಬುಲೆನ್ಸ್‌ನಲ್ಲಿ, ಫಗ್ವಾರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚೌಧರಿ ಕೊನೆಯುಸಿರೆಳೆದರು ಎಂದು ಮೂಲಗಳು ತಿಳಿಸಿವೆ.

ಭಾರತ್‌ ಜೋಡೋ ಯಾತ್ರೆಯ ನೇತೃತ್ವ ವಹಿಸಿದ್ದ ರಾಹುಲ್ ಗಾಂಧಿ ಅವರು, ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಚೌಧರಿ ಅವರನ್ನು ಕರೆದುಕೊಂಡು ಹೋಗಿದ್ದ ಆಸ್ಪತ್ರೆಗೆ ದೌಡಾಯಿಸಿದರು. ಅವರು ಇಂದು ಜಲಂಧರ್‌ನಲ್ಲಿರುವ ಚೌಧರಿ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ಇನ್ನು ಸಂತೋಖ್‌ ಸಿಂಗ್‌ ಚೌಧರಿ ಅವರ ಹಠಾತ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿರುವ ರಾಹುಲ್‌ ಗಾಂಧಿ, ತಮ್ಮೊಂದಿಗೆ ಚೌಧರಿ ಅವರು ಯಾತ್ರೆಯಲ್ಲಿ ಭಾಗವಹಿಸಿದ್ದ ಫೋಟೋಗಳನ್ನು ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚೌಧರಿ ಓರ್ವ ನಿಷ್ಠಾವಂತ ಕಾಂಗ್ರೆಸ್‌ ನಾಯಕ ಮಾತ್ರವಲ್ಲದೇ, ಜನರಿಗೆ ಅತ್ಯಂತ ಹತ್ತಿರವಾಗಿದ್ದ ಜನನಾಯಕ ಎಂದು ರಾಹುಲ್‌ ಗಾಂಧಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಯಾತ್ರೆ ಸ್ಥಗಿತ:

ಇನ್ನು ಸಂತೋಖ್‌ ಸಿಂಗ್‌ ಚೌಧರಿ ಅವರ ಹಠಾತ್‌ ನಿಧನದ ಕಾರಣಕ್ಕೆ, ಪಂಜಾಬ್‌ನಲ್ಲಿ ಸಂಚರಿಸುತ್ತಿದ್ದ ಭಾರತ್‌ ಜೋಡೋ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಇಂದು ಸಂಜೆ ನಡೆಯಬೇಕಿದ್ದ ರಾಹುಲ್‌ ಗಾಂಧಿ ಅವರ ಪತ್ರಿಕಾಗೋಷ್ಠಿಯನ್ನೂ ಮುಂದೂಡಲಾಗಿದೆ.

ಈ ಕುರಿತು ಮಾತನಾಡಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ನಾಳೆ(ಜ.15-ಭಾನುವಾರ) ಬೆಳಗ್ಗೆ ಸಂತೋಖ್‌ ಸಿಂಗ್‌ ಚೌಧರಿ ಅವರ ಅಂತ್ಯಕ್ರಿಯೆ ನೆರವೇರಲಿದ್ದು, ರಾಹುಲ್‌ ಗಾಂಧಿ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಖರ್ಗೆ ಸಂತಾಪ:

ಇನ್ನು ಸಂಸದ ಸಂತೋಖ್‌ ಸಿಂಗ್‌ ಚೌಧರಿ ಅವರ ಹಠಾತ್‌ ನಿಧನಕ್ಕೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಚೌಧರಿ ಅವರ ಅಕಾಲಿಕ ನಿಧನವು ಪಕ್ಷ ಮತ್ತು ಸಂಘಟನೆಗೆ ದೊಡ್ಡ ಹೊಡೆತ ನೀಡಿದೆ ಎಂದು ಕಂಬನಿ ಮಿಡಿದಿದ್ದಾರೆ. ಈ ದು:ಖದ ಸಮಯದಲ್ಲಿ ಪಕ್ಷವು ಚೌಧರಿ ಅವರ ಕುಟುಂಬದೊಂದಿಗೆ ನಿಲ್ಲಲಿದೆ ಎಂದೂ ಖರ್ಗೆ ಟ್ವೀಟ್‌ ಮಾಡಿದ್ದಾರೆ.

ಅದೇ ರೀತಿ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಟ್ವೀಟ್ ಮಾಡಿ, "ಜಲಂಧರ್‌ನ ಕಾಂಗ್ರೆಸ್ ಸಂಸದ 76 ವರ್ಷ ವಯಸ್ಸಿನ ಸಂತೋಖ್ ಸಿಂಗ್ ಚೌಧರಿ ಅವರು ಇಂದು ಬೆಳಗ್ಗೆ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಹಠಾತ್ ಹೃದಯ ಸ್ತಂಭನದಿಂದ ನಿಧನರಾದರು. ಅವರ ಕುಟುಂಬಕ್ಕೆ ನಾವು ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಭಾರತ್‌ ಜೋಡೋ ಯಾತ್ರೆಯ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳಿವೆ. ಶೀಘ್ರದಲ್ಲೇ ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗುವುದು.." ಎಂದು ತಿಳಿಸಿದ್ದಾರೆ.

ಸಂತೋಖ್‌ ಸಿಂಗ್‌ ಚೌಧರಿ ಅವರು 2014 ಮತ್ತು 2019ರಲ್ಲಿ ಒಟ್ಟು ಎರಡು ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಜಯಗಳಿಸಿದ್ದರು. ಚೌಧರಿ ಅವರ ಪುತ್ರ ವಿಕ್ರಮಜಿತ್ ಸಿಂಗ್ ಚೌಧರಿ ಅವರು, ಪಂಜಾಬ್‌ನ ಫಿಲ್ಲೌರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ