ಮಕ್ಕಳ ಅಶ್ಲೀಲ ವೀಡಿಯೋ ವೀಕ್ಷಣೆ, ಸಂಗ್ರಹ ಶಿಕ್ಷಾರ್ಹ ಅಪರಾಧ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
Sep 23, 2024 12:56 PM IST
ಮಕ್ಕಳ ಅಶ್ಲೀಲ ವೀಡಿಯೋ ವೀಕ್ಷಣೆ ಸಂಬಂಧ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
- ಮಕ್ಕಳ ಅಶ್ಲೀಲ ವೀಡಿಯೋ ಸಂಗ್ರಹ, ವೀಕ್ಷಣೆ ಶಿಕ್ಷಾರ್ಹ ಅಪರಾಧ ಎಂದಿರುವ ಸುಪ್ರೀಂಕೋರ್ಟ್ ಈಗಲೂ ಇಂತಹ ವೀಡಿಯೋ ಇಟ್ಟುಕೊಂಡಿರುವವರ ವಿರುದ್ದ ಪೋಸ್ಕೋ ಅಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ.
ದೆಹಲಿ: ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವೀಡಿಯೋಗಳನ್ನು ತೆಗೆದು ಹಾಕದೇ ಸಂಗ್ರಹಿಸಿಟ್ಟುಕೊಳ್ಳುವುದು, ಅದನ್ನು ವೀಕ್ಷಣೆ ಮಾಡುವುದು ತಪ್ಪು. ಇದು ಕಾನೂನಿಡಿ ಶಿಕ್ಷೆಗೆ ಅರ್ಹ. ಹೀಗೆ ಯಾವುದೇ ಉಪಕರಣಗಳಲ್ಲಿ ಅಶ್ಲೀಲ ವೀಡಿಯೋ ಸಂಗ್ರಹಿಸಿಟ್ಟುಕೊಳ್ಳುವುದು ಹಾಗೂ ವೀಕ್ಷಣೆ ಮಾಡುವವರ ವಿರುದ್ದ ಪೋಸ್ಕೋ ಕಾಯಿದೆಯಡಿ ಪ್ರಕರಣ ದಾಖಲಿಸಿ ಶಿಕ್ಷೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಸ್ಪಷ್ಟ ನಿರ್ದೇಶನ ನೀಡಿದೆ. ಇದೊಂದು ಮಹತ್ವ ತೀರ್ಪು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಈ ಕುರಿತು ಕೇಂದ್ರ ಸರ್ಕಾರವೂ ಕೂಡಲೇ "ಮಕ್ಕಳ ಅಶ್ಲೀಲತೆ" ಎಂಬ ಪದವನ್ನು "ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆ ವಸ್ತು ಎಂದು ಬದಲಾಯಿಸಿ ಸೂಕ್ತ ನಿರ್ದೇಶನಗಳನ್ನು ಆಯಾ ರಾಜ್ಯ ಸರ್ಕಾರಗಳಿಗೆ ಗೃಹ ಸಚಿವಾಲಯದ ಮೂಲಕ ನೀಡಬೇಕು ಎಂದು ಕೂಡ ಸೂಚನೆ ನೀಡಲಾಗಿದೆ.
ಭಾರತದ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಮಕ್ಕಳ ಅಶ್ಲೀಲತೆ" ಎಂಬ ಪದವನ್ನು ಮಕ್ಕಳ ಲೈಂಗಿಕ ಶೋಷಣೆ ಮತ್ತು ನಿಂದನೆ ವಸ್ತು" ಎಂದು ಬದಲಿಸಲು ಸೂಕ್ತ ತಿದ್ದುಪಡಿಯನ್ನು ತರುವಂತೆಯೂ ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿದೆ. ಅಂತಹ ಸ್ಪಷ್ಟ ವಸ್ತುಗಳನ್ನು ಇಟ್ಟುಕೊಂಡು ಅದನ್ನು ವೀಕ್ಷಿಸುವುದು ಕಾನೂನಿನಡಿಯಲ್ಲಿ ಅಪರಾಧವಾಗುತ್ತದೆ ಎಂದು ನ್ಯಾಯಾಲಯ ವಿವರಿಸಿದೆ. ಪೀಠವು ಪೋಸ್ಕೋ ಕಾಯಿದೆಯ ಎಲ್ಲಾ ಸಂಬಂಧಿತ ನಿಬಂಧನೆಗಳನ್ನು ತಪ್ಪಿತಸ್ಥರ ಮೇಲೆ ಹೇರುವ ಜತೆಗೆ ಕೆಲವು ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಇದು ಸಕಾಲ ಎಂದೂ ನ್ಯಾಯಾಲಯ ಹೇಳಿತು.
ಕೇವಲ ಒಬ್ಬರ ಎಲೆಕ್ಟ್ರಾನಿಕ್ ಸಾಧನದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಮತ್ತು/ಅಥವಾ ವೀಕ್ಷಿಸುವುದು ಪೋಸ್ಕೋ ಮತ್ತು ಐಟಿ ಕಾಯಿದೆಯಡಿ ಅಪರಾಧವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ನ ತೀರ್ಪನ್ನು ನ್ಯಾಯಾಲಯ ತಳ್ಳಿಹಾಕಿತು.
ಮಕ್ಕಳನ್ನು ಒಳಗೊಂಡ ಕೆಲವು ಅಶ್ಲೀಲ ವಿಷಯವನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿ ಮತ್ತು ವೀಕ್ಷಿಸಿದ್ದಕ್ಕಾಗಿ ಪ್ರಾಸಿಕ್ಯೂಷನ್ ಆರೋಪಿಸಿದ 28 ವರ್ಷದ ಎಸ್ ಹರೀಶ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಮದ್ರಾಸ್ ಹೈಕೋರ್ಟ್ ಜನವರಿ 11, 2024 ರಂದು ರದ್ದುಗೊಳಿಸಿತ್ತು.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ, 2012 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ಅಡಿಯಲ್ಲಿ ಹೈಕೋರ್ಟ್ ಹರೀಶ್ ಅವರನ್ನು ಬಿಡುಗಡೆಗೊಳಿಸಿತ್ತು. ಸೆಕ್ಷನ್ 67-ಬಿ ಅಡಿಯಲ್ಲಿ ಅಪರಾಧವನ್ನು ರೂಪಿಸಲು ಹರೀಶ್‌ಗೆ ಹೈಕೋರ್ಟ್ ರಿಲೀಫ್ ನೀಡಿತ್ತು.
ಮಾಹಿತಿ ತಂತ್ರಜ್ಞಾನ ಕಾಯಿದೆ, 2000, ಆರೋಪಿತ ವ್ಯಕ್ತಿ (ಹರೀಶ್) ಲೈಂಗಿಕವಾಗಿ ಅಶ್ಲೀಲ ಕೃತ್ಯ ಅಥವಾ ನಡವಳಿಕೆಯಲ್ಲಿ ಮಕ್ಕಳನ್ನು ಚಿತ್ರಿಸುವ ವಿಷಯವನ್ನು ಪ್ರಕಟಿಸಬೇಕು, ರವಾನಿಸಬೇಕು, ರಚಿಸಿರಬೇಕು. ಈ ನಿಬಂಧನೆಯನ್ನು ಎಚ್ಚರಿಕೆಯಿಂದ ಓದುವುದರಿಂದ ಮಕ್ಕಳ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು ಅಪರಾಧವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿತ್ತು.
ಎನ್‌ಜಿಒ, ಜಸ್ಟ್ ರೈಟ್ ಫಾರ್ ಚಿಲ್ಡ್ರನ್ ಅಲೈಯನ್ಸ್ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಧ್ಯಪ್ರವೇಶದ ಮೇಲ್ಮನವಿಯ ಮೇಲೆ ಸುಪ್ರೀಂ ಕೋರ್ಟ್ ಮದ್ರಾಸ್ ಹೈಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಿತು. ಹಿರಿಯ ವಕೀಲರಾದ ಎಚ್ ಎಸ್ ಫೂಲ್ಕಾ ಮತ್ತು ಸ್ವರೂಪ್ಮಾ ಚತುರ್ವೇದಿ ಕ್ರಮವಾಗಿ ಎನ್‌ಜಿಒ ಮತ್ತು ಎನ್‌ಸಿಪಿಸಿಆರ್ ಪರವಾಗಿ ವಾದ ಮಂಡಿಸಿದರು.
ವಿಭಾಗ