Covid Top 10: ಕೋವಿಡ್ ನಿರ್ಬಂಧಗಳಿಲ್ಲದ ಕ್ರಿಸ್ಮಸ್; ಭಾರತ ಹಾಗೂ ಜಾಗತಿಕ ಕೊರೊನಾದ 10 ಅಂಶಗಳು ಇಲ್ಲಿವೆ
Dec 25, 2022 10:11 AM IST
ಕೋಲ್ಕತ್ತಾದ ಬೀದಿಯಲ್ಲಿ ಕ್ರಿಸ್ಮಸ್ ಅಲಂಕಾರ
ಈ ವಾರದ ಆರಂಭದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆಯಲ್ಲಿ ಕೋವಿಡ್ ಇನ್ನೂ ಮುಗಿದಿಲ್ಲ ಎಂದು ನೆನಪಿಸಿದರು. ಅವರು ಇಂದು ನಡೆಯಲಿರುವ ತಮ್ಮ ಮಾಸಿಕ "ಮನ್ ಕಿ ಬಾತ್" ರೇಡಿಯೋ ಭಾಷಣದಲ್ಲಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ.
ಈ ವರ್ಷ ಕ್ರಿಸ್‌ಮಸ್ ಹಬ್ಬವನ್ನು ಭಾರತದಲ್ಲಿ ಯಾವುದೇ ನಿರ್ಬಂಧಗಳಿಲ್ಲದೆ ಆಚರಿಸಲಾಗುತ್ತಿದೆ. ಆದರೂ, ದೇಶದಲ್ಲಿ ಕೋವಿಡ್ ಆತಂಕ ಇದ್ದೇ ಇದೆ. ಹಲವು ದಿನಗಳಿಂದ ದೇಶದಲ್ಲಿ ಹಬ್ಬಕ್ಕೆ ಭರದ ಸಿದ್ಧತೆ ನಡೆಯುತ್ತಿತ್ತು. ಈ ನಡುವೆ ಚೀನಾದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆ ಕಂಡು, ಭಾರತದಲ್ಲಿ ಎಚ್ಚರ ವಹಿಸಲಾಗಿದೆ. ಕೋವಿಡ್ ರೂಪಾಂತರ ವೈರಸ್ ಒಮಿಕ್ರಾನ್ BF.7 ಉಲ್ಬಣದ ಭೀತಿಯೂ ಆವರಿಸಿದೆ. ನೆರೆಯ ದೇಶದಲ್ಲಿ ಲಕ್ಷಾಂತರ ಜನರು ಸೋಂಕಿನಿಂದ ಬಾಧಿತರಾಗಿದ್ದರೂ, ಅಧಿಕಾರಿಗಳು ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದಾರೆ. ಯಾವುದೇ ನಿರ್ಬಂಧಗಳು ಜಾರಿಯಲ್ಲಿಲ್ಲ. ಆದರೆ ಮಾಸ್ಕ್ ಧರಿಸುವುದು ಮತ್ತು ಕೋವಿಡ್ ನಿಬಂಧನೆಗಳನ್ನು ಪಾಲಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ.
ಹತ್ತು ಬೆಳವಣಿಗೆಗಳು ಇಲ್ಲಿವೆ
1. ಚೀನಾ, ಥೈಲ್ಯಾಂಡ್, ಜಪಾನ್, ಸಿಂಗಾಪುರ ಮತ್ತು ದಕ್ಷಿಣ ಕೊರಿಯಾದಿಂದ ಬರುವ ಪ್ರಯಾಣಿಕರಿಗೆ ಭಾರತವು ಶನಿವಾರದಂದು ಆರ್‌ಟಿ ಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಿದೆ. ಒಂದು ವೇಳೆ ಈ ದೇಶಗಳಿಂದ ಬಂದ ಪ್ರಯಾಣಿಕರಲ್ಲಿ ಕೋವಿಡ್ ರೋಗಲಕ್ಷಣಗಳು ಕಂಡುಬಂದರೆ, ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
2. ಆಸ್ಪತ್ರೆಗಳಲ್ಲಿ ಎಲ್ಲಾ ಸಮಯದಲ್ಲೂ ಆಕ್ಸಿಜನ್ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರದಿಂದ ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ. ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಕಳೆದ ಬಾರಿ ಆಸ್ಪತ್ರೆಗಳಲ್ಲಿ ಭಾರಿ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಈ ವಿಚಾರವಾಗಿ ಮುಂಜಾಗ್ರತೆ ವಹಿಸಲು ಸರ್ಕಾರ ಸೂಚಿಸಿದೆ.
3. ಈ ಸಮಯದಲ್ಲಿ ಭಾರತದಲ್ಲಿ ಕಠಿಣ ನಿರ್ಬಂಧಗಳ ಅಗತ್ಯವಿಲ್ಲ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
4. ಶುಕ್ರವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಮಾತನಾಡಿ, ಹಬ್ಬದ ಆಚರಣೆಗಳ ನಡುವೆ ಜನಸಂದಣಿ ಇರುವ ಸ್ಥಳಗಳಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳಿಗೆ ತಿಳಿಸಿದ್ದಾರೆ.
5. ಮುಂದೆ ಹಬ್ಬಗಳು ಮತ್ತು ಹೊಸ ವರ್ಷದ ಆಚರಣೆಗಳನ್ನು ಪರಿಗಣಿಸಿ, ರೋಗದ ಹರಡುವಿಕೆಯ ಅಪಾಯವನ್ನು ಕಡಿಮೆ ಮಾಡಲು ಅಗತ್ಯ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಅನುಸರಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಮಾಸ್ಕ್ ಬಳಕೆ, ಕೈ ಮತ್ತು ಉಸಿರಾಟದ ನೈರ್ಮಲ್ಯ, ದೈಹಿಕ ಅಂತರ ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿದೆ.
6. ಸನ್ನದ್ಧತೆಯನ್ನು ಪರಿಶೀಲಿಸಲು, ಅಣಕು ಪ್ರದರ್ಶನಗಳನ್ನು ನಡೆಸಲು ರಾಜ್ಯಗಳಿಗೆ ತಿಳಿಸಲಾಗಿದೆ. ಇದೇ ಹಿನ್ನೆಲೆಯಲ್ಲಿ ಮುಂದಿನ ಮಂಗಳವಾರ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಅಣಕು ಪ್ರದರ್ಶನ ಯೋಜಿಸಲಾಗಿದೆ.
7. ಈ ವಾರದ ಆರಂಭದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಭೆಯಲ್ಲಿ ಕೋವಿಡ್ ಇನ್ನೂ ಮುಗಿದಿಲ್ಲ ಎಂದು ನೆನಪಿಸಿದರು. ಅವರು ಇಂದು ನಡೆಯಲಿರುವ ತಮ್ಮ ಮಾಸಿಕ "ಮನ್ ಕಿ ಬಾತ್" ರೇಡಿಯೋ ಭಾಷಣದಲ್ಲಿ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡುವ ನಿರೀಕ್ಷೆಯಿದೆ.
8. ಈ ನಡುವೆ ಚೀನಾದಲ್ಲಿಯಾವುದೇ ಹೊಸ ಸಾವಿನ ಪ್ರಕರಣ ದಾಖಲಾಗಿಲ್ಲ ಎಂದು, ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಒತ್ತಡ ನಿಭಾಯಿಸಲು ಸಾಧ್ಯವಾಗದ ಆಸ್ಪತ್ರೆಗಳಲ್ಲಿನ ಭಯಾನಕ ಪರಿಸ್ಥಿತಿಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ವಿಡಿಯೋಗಳು ವೈರಲ್ ಆಗಿತ್ತು.
9. ಸ್ಮಶಾನಗಳು ಮತ್ತು ಐಸಿಯುಗಳು ತುಂಬಿಕೊಂಡಿವೆ ಎಂದು ವರದಿಗಳು ಹೇಳಿವೆ. 2019 ರಲ್ಲಿ ವಿಶ್ವದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣಗಳನ್ನು ಕಂಡ ದೇಶವು, ಮತ್ತೊಮ್ಮೆ ವೈರಸ್ ಹರಡುವಿಕೆಯನ್ನು ನಿಭಾಯಿಸಲು ಹೆಣಗಾಡುತ್ತಿದೆ.
10. 2023ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಇದೆ. ಈ ನಡುವೆ ಚೀನಾದಲ್ಲಿ ಪ್ರಕರಣಗಳ ಉಲ್ಬಣವು ವಿಶ್ವಾದ್ಯಂತ ನಿರ್ಬಂಧಗಳಿಗೆ ಕಾರಣವಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ.