Donald Trump: 'ನೀಲಿತಾರೆ'ಗೆ ಹಣ ಪಾವತಿ ಆರೋಪ: ಟ್ರಂಪ್ ಈಗ ಕ್ರಿಮಿನಲ್ ಮೊಕದ್ದಮೆ ಎದುರಿಸುವ ಮೊದಲ ಯುಎಸ್ ಮಾಜಿ ಅಧ್ಯಕ್ಷ!
Mar 31, 2023 07:31 AM IST
ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)
2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀಲಿಚಿತ್ರ ತಾರೆಯೋರ್ವಳಿಗೆ ಹಣ ಪಾವತಿಸಿದ ಆರೋಪ ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯಾಯಾಲಯದಿಂದ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಈ ಕುರಿತು ವಿಸ್ತೃತ ಮಾಹಿತಿ ಇಲ್ಲಿದೆ..
ವಾಷಿಂಗ್ಟನ್: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀಲಿಚಿತ್ರ ತಾರೆಯೋರ್ವಳಿಗೆ ಹಣ ಪಾವತಿಸಿದ ಆರೋಪ ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯಾಯಾಲಯದಿಂದ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ.
ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ಸಲ್ಲಿಸಿದ್ದು, ಇದರಿಂದ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಬಯಸಿರುವ ಡೊನಾಲ್ಡ್ ಟ್ರಂಪ್ ತೀವ್ರ ಮುಜುಗರ ಅನುಭವಿಸುವಂತಾಗಿದೆ.
76 ವರ್ಷದ ಡೊನಾಲ್ಡ್ ಟ್ರಂಪ್ ವಿರುದ್ಧ, 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀಲಿಚಿತ್ರ ತಾರೆಯೋರ್ವಳಿಗೆ ಹಣ ಪಾವತಿಸಿದ ಗಂಭೀರ ಆರೋಪ ಕೇಳಿಬಂದಿದೆ. ಟ್ರಂಪ್ ಈ ಆರೋಪಗಳನ್ನು ನಿರಾಕರಿಸಿದ್ದಾರಾದರೂ, ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿ ಇದೀಗ ಅವರ ವಿರುದ್ಧ ದೋಷಾರೋಪಣೆ ಸಲ್ಲಿಸಿದೆ.
ಡೊನಾಲ್ಡ್ ಟ್ರಂಪ್ ಈ ಹಿಂದೆ ಎರಡು ಬಾರಿ ದೋಷಾರೋಪಣೆಯಿಂದ ತಪ್ಪಿಸಿಕೊಂಡಿದ್ದರು. ಯುಎಸ್ ಕ್ಯಾಪಿಟಲ್ ಮೇಲೆ ನಡೆದ ದಾಳಿ ಮತ್ತು ವರ್ಗೀಕೃತ ಫೈಲ್‌ಗಳು ಕಾಣೆಯಾದ ಪ್ರಕರಣಗಳಲ್ಲಿ, ಟ್ರಂಪ್ ವಿರುದ್ಧ ದೋಷಾರೋಪಣೆ ಸಲ್ಲಿಸುವ ಪ್ರಯತ್ನ ನಡೆದಿತ್ತು. ಆದರೆ ಈ ಬಾರಿ ಅಶ್ಲೀಲ ಚಿತ್ರನಟಿ 44 ವರ್ಷದ ಸ್ಟಾರ್ಮಿ ಡೇನಿಯಲ್ಸ್ ಲೈಂಗಿಕ ಹಗರಣದಲ್ಲಿ, ಡೊನಾಲ್ಡ್ ಟ್ರಂಪ್ ನ್ಯಾಯಾಲಯದ ಮೆಟ್ಟಿಲೇರುವಂತಾಗಿದೆ.
ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಅವರ ಕಚೇರಿಯು, ನ್ಯೂಯಾರ್ಕ್‌ನಲ್ಲಿ ವಿಚಾರಣೆಗಾಗಿ ಡೊನಾಲ್ಡ್ ಟ್ರಂಪ್ ಅವರ ಹಾಜರಾತಿಯನ್ನು ಬಯಸಿದ್ದಾರೆ. ಈಗಾಗಲೇ ಟ್ರಂಪ್ ಪರ ವಕೀಲರಿಗೆ ಈ ಕುರಿತು ಸೂಚನೆ ರವಾನಿಸಿರುವ ಆಲ್ವಿನ್ ಬ್ರಾಗ್, ಟ್ರಂಪ್ ಆದಷ್ಟು ಶೀಘ್ರವಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಆದೇಶ ನೀಡಿದ್ದಾರೆ.
ಟ್ರಂಪ್ ಈ ದೋಷಾರೋಪಣೆಯನ್ನು "ರಾಜಕೀಯ ಕಿರುಕುಳ ಮತ್ತು ಚುನಾವಣಾ ಹಸ್ತಕ್ಷೇಪ" ಎಂದು ಟೀಕಿಸಿದ್ದು, ಪ್ರಾಸಿಕ್ಯೂಟರ್‌ಗಳು ಮತ್ತು ಡೆಮಾಕ್ರಟಿಕ್ ಪಕ್ಷದ ವಿರುದ್ಧ ಗುಡುಗಿದ್ದಾರೆ. ಅಲ್ಲದೇ ಈ ತೀರ್ಮಾನವು 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಸ್ತುತ ಅಧ್ಯಕ್ಷ ಜೋ ಬೈಡನ್ ಅವರನ್ನು ಭಾರೀ ಬೆಲೆ ತೆರಬೇಕಾದ ಅನಿವಾರ್ಯತೆ ದೂಡಲಿದೆ ಎಂದೂ ಟ್ರಂಪ್ ಎಚ್ಚರಿಸಿದ್ದಾರೆ.
ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿಯ ತೀರ್ಪು, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷದ ಪ್ರಚಾರದ ಹಳಿ ತಪ್ಪಿಸುವ ದುರುದ್ದೇಶ ಹೊಂದಿದೆ ಎಂದು ರಿಪಬ್ಲಿಕನ್ ಪಕ್ಷ ಕೂಡ ಆರೋಪ ಮಾಡಿದೆ. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಅವರು ದೋಷಾರೋಪಣೆಯನ್ನು ಅಮೆರಿಕ ವಿರೋಧಿ ಎಂದು ಕರೆದಿದ್ದರೆ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಕೆವಿನ್ ಮೆಕಾರ್ಥಿ ಇದು ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಹಾನಿಗೊಳಿಸುವ ತೀರ್ಪು ಎಂದು ಟೀಕಿಸಿದ್ದಾರೆ.
ಆದರೆ 2019ರಲ್ಲಿ ಟ್ರಂಪ್ ವಿರುದ್ಧ ಮೊದಲ ದೋಷಾರೋಪಣೆ ಸಲ್ಲಿಸಿದ್ದ ಪ್ರಾಸಿಕ್ಯೂಟರ್ ಹಾಗೂ ಡೆಮಾಕ್ರಟಿಕ್ ಪಕ್ಷದ ನಾಯಕ ಆಡಮ್ ಸ್ಕಿಫ್, ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿಯ ತೀರ್ಪನ್ನು "ಸಮಾಧಾನಕರ ಮತ್ತು ಅಭೂತಪೂರ್ವ ಬೆಳವಣಿಗೆ" ಎಂದು ಕರೆದಿದ್ದಾರೆ. ಅದೇ ರೀತಿ ರ್ಮಿ ಡೇನಿಯಲ್ಸ್ ಪರ ವಕೀಲರು ಕೂಡ "ಯಾರೂ ಕಾನೂನಿಗಿಂತ ಮೇಲಲ್ಲ" ಎಂಬುದಕ್ಕೆ ಈ ತೀರ್ಪು ಪುರಾವೆಯಾಗಿದೆ ಎಂದು ಸ್ವಾಗತಿಸಿದ್ದಾರೆ.
ಟ್ರಂಪ್‌ಗೆ ಹಿನ್ನೆಡೆ?
ಇನ್ನು ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿಯ ದೋಷಾರೋಪಣೆಯಿಂದ, 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ ಡೊನಾಲ್ಡ್ ಟ್ರಂಪ್ ಅವರಿಗೆ ಭೃಈ ಹಿನ್ನೆಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಿಪಬ್ಲಿಕನ್ ಪಕ್ಷದಲ್ಲಿ ಈಗಾಗಲೇ ಹಲವು ನಾಯಕರು ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಲು ಬಯಸಿದ್ದು, ಟ್ರಂಪ್ ಅವರ ಉಮೇದುವಾರಿಕೆ ಪರಿಗಣಿಸುವ ಸಾಧ್ಯತೆ ಕ್ಷೀಣಿಸಲಿದೆ ಎಂದು ಹೇಳಲಾಗುತ್ತಿದೆ.
ಆದರೆ ಇದು ಕೇವಲ ದೋಷಾರೋಪಣೆಯಾಗಿದ್ದು, ವಿಚಾರಣೆ ನಡೆದು ತೀರ್ಪು ಬರಲು ಸಮಯ ಹಿಡಿಯುತ್ತದೆ. ಹೀಗಾಗಿ ಟ್ರಂಪ್ ಅವರ ಅಧ್ಯಕ್ಷೀಯ ಉಮೇದುವಾರಿಕೆ ಮೇಲೆ ಈ ತೀರ್ಮಾನ ಯಾವುದೇ ಪರಿಣಾಮ ಬೀರದು ಎಂದೂ ವಿಶ್ಲೇಷಿಸಲಾಗುತ್ತಿದೆ.
ವಿಭಾಗ