US Election Result 2024: ಅಪಾಯದ ಅಂಚಿಗೆ ತಳ್ಳಲ್ಪಟ್ಟ ಇನ್ನೊಂದು ಪ್ರಜಾಪ್ರಭುತ್ವ! ರಾಜೀವ ಹೆಗಡೆ ಬರಹ
Nov 06, 2024 09:36 PM IST
ಅಮೆರಿಕಾ ಚುನಾವಣಾ ಫಲಿತಾಂಶದ ಬಗ್ಗೆ ರಾಜೀವ್ ಹೆಗಡೆ ಬರಹ
- Us Election 2024: ಪ್ರಜಾಪ್ರಭುತ್ವ, ವಿಶ್ವ ಶಾಂತಿ ಹಾಗೂ ಸರ್ವಧರ್ಮ ಸಮನ್ವತೆಯನ್ನು ವಿಶ್ವಕ್ಕೆ ಸಾರಿಸಿ, ಗುಡಿಸಿ ಹೇಳುತ್ತಿದ್ದ ಡೆಮಾಕ್ರಟಿಕ್ ಪಕ್ಷವು ಅಮೆರಿಕದಲ್ಲಿ ಹೀನಾಯವಾಗಿ ಸೋಲುವ ಮೂಲಕ ಜಗತ್ತನ್ನು ಅಪಾಯಕ್ಕೆ ಸಿಲುಕಿಸಿದೆ- ರಾಜೀವ್ ಹೆಗಡೆ ಬರಹ.
Donald Trump: ಡೊನಾಲ್ಡ್ ಟ್ರಂಪ್ ಗೆಲುವಿನ ಮೂಲಕ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಪ್ರಜಾಪ್ರಭುತ್ವ ಕೂಡ ಇವತ್ತಿಗೆ ಅಪಾಯದ ಅಂಚಿಗೆ ಬಂದು ತಲುಪಿದೆ. ಇಲ್ಲಿಗೆ ಜಗತ್ತು ವಿನಾಶದತ್ತ ಸಾಗುವುದು ನಿಶ್ಚಿತ ಹಾಗೂ ಭಾರತದಂತೆಯೇ ಅಮೆರಿಕ ಕೂಡ ಸರ್ವಾಧಿಕಾರದ ಹಾದಿಯಲ್ಲಿ ಸಾಗುತ್ತಿದೆ!
ಪ್ರಜಾಪ್ರಭುತ್ವ, ವಿಶ್ವ ಶಾಂತಿ ಹಾಗೂ ಸರ್ವಧರ್ಮ ಸಮನ್ವತೆಯನ್ನು ವಿಶ್ವಕ್ಕೆ ಸಾರಿಸಿ, ಗುಡಿಸಿ ಹೇಳುತ್ತಿದ್ದ ಡೆಮಾಕ್ರಟಿಕ್ ಪಕ್ಷವು ಅಮೆರಿಕದಲ್ಲಿ ಹೀನಾಯವಾಗಿ ಸೋಲುವ ಮೂಲಕ ಜಗತ್ತನ್ನು ಅಪಾಯಕ್ಕೆ ಸಿಲುಕಿಸಿದೆ. ಇಂತಹದೊಂದು ಅಪಾಯಕ್ಕೆ ಜಗತ್ತನ್ನು ಒಡ್ಡಬಾರದು ಎನ್ನುವ ಕಾಳಜಿಯಿಂದ ನಮ್ಮ ಕರ್ನಾಟಕ ಪ್ರಜಾಪ್ರಭುತ್ವದ ಚಾಂಪಿಯನ್‌ಗಳು ಕೂಡ ಪ್ರಚಾರ ಮಾಡಿ, ವಿಡಿಯೋ ಹಂಚಿಕೊಂಡಿದ್ದು ಪ್ರಯೋಜನವಾಗಲಿಲ್ಲ. ನಮ್ಮ ನೆರೆಯ ದೇಶದ ಸರ್ವಧರ್ಮ ನೊಬೆಲ್ ಶಾಂತಿಧೂತ ಮೊಹಮದ್ ಯೂನಸ್ ಪ್ರಯತ್ನವೂ ಪ್ರಯೋಜನವಾಗಲಿಲ್ಲ. ವಿಶ್ವದ ಎಲ್ಲ ದೇಶಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸ್ವತಂತ್ರ ಪತ್ರಿಕೋದ್ಯಮದ ಪಾಠ ಮಾಡಿ ಡೆಮಾಕ್ರಟಿಕ್ ಪಕ್ಷದ ಪರ ಪ್ರಚಾರ ಮಾಡುವ ಅಮೆರಿಕದ ಮಾಧ್ಯಮಗಳಿಗೂ ಪ್ರಜಾಪ್ರಭುತ್ವ ಉಳಿಸಲಾಗಲಿಲ್ಲ. ಎಲ್ಲ ಶಾಂತಿಧೂತರು ಹಾಗೂ ಮಾನವೀಯತೆಯ ಹರಿಕಾರರ ಪ್ರಯತ್ನವನ್ನು ಮೂಲಭೂತವಾದಿ ಅಮೆರಿಕನ್ನರು ಕುಲಗೆಡಿಸಿದರು. ಸರ್ವಾಧಿಕಾರಿ ಡೊನಾಲ್ಡ್ ಟ್ರಂಪ್‌ಗೆ ಮಣೆ ಹಾಕಿ, ಅಮೆರಿಕದ ಭವ್ಯ ಪ್ರಜಾಪ್ರಭುತ್ವ ಇತಿಹಾಸಕ್ಕೆ ಇತಿಶ್ರೀ ಹಾಡಿಬಿಟ್ಟರು.
ಇದೇ ರೀತಿ ಭಾರತದಲ್ಲಿಯೂ ೨೦೧೪ರಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಸರ್ವಾಧಿಕಾರದಿಂದ ದೇಶದ ಜಾತ್ಯತೀತ ತತ್ವಕ್ಕೆ ತಿಲಾಂಜಲಿ ಹಾಡಲಾಗಿದೆ. ೨೦೨೪ರ ಆರಂಭದಲ್ಲಿ ಪ್ರಜಾಪ್ರಭುತ್ವಕ್ಕೆ ಸ್ವಲ್ಪ ಉಸಿರು ಬಂದಂತೆ ಅನಿಸಿದರೂ, ಹರಿಯಾಣ ಫಲಿತಾಂಶದ ಬಳಿಕ ಮತ್ತೆ ಉಸಿರುಗಟ್ಟಿದೆ. ಮಹಾರಾಷ್ಟ್ರ ಫಲಿತಾಂಶವೇನಾದರೂ ಪ್ರಜಾಪ್ರಭುತ್ವದ ಚಾಂಪಿಯನ್‌ಗಳ ಪರ ಬರದಿದ್ದರೆ, ಇನ್ನೊಂದು ಸುತ್ತಿನ ಹೊಸ ಕಥೆ ಹುಡುಕಬೇಕಾಗುತ್ತದೆ. ಆದರೆ ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವ ಸಾಯುತ್ತಿರುವುದರಿಂದ ಎಲ್ಲಿ ಹೋಗಿ ಸಮಸ್ಯೆ ಹೇಳಿಕೊಳ್ಳುವುದು? ಅಯ್ಯೋ ಮರೆತಿದ್ದೆ, ಸದ್ಯಕ್ಕೆ ಪ್ರಜಾಪ್ರಭುತ್ವ ರಕ್ಷಣೆಗೆ ಬ್ರಿಟನ್ ನೆರವು ಕೋರಬಹುದು. ಹಾಗೆಯೇ ಅಮೆರಿಕದ ಪಕ್ಕದಲ್ಲಿಯೇ ಕೆಲವು ತಿಂಗಳುಗಳ ಮಟ್ಟಿಗೆ ಜಸ್ಟಿನ್ ಟ್ರುಡೋ ಎನ್ನುವ ಪ್ರಜಾಪ್ರಭುತ್ವ ರಕ್ಷಕನಿದ್ದಾರೆ, ಅವರ ನೆರವನ್ನೂ ಪಡೆಯಬಹುದು. ಭಾರತದಲ್ಲಿ ಶಾಂತಿ ಸ್ಥಾಪನೆ ಮಾಡಲು ಹೊರಟಿರುವ ಹೋರಾಟಗಾರರ ಪರವಾಗಿ ನಿಂತು ಕೆನಡಾದಲ್ಲಿ ಪ್ರಜಾತಂತ್ರ ವ್ಯವಸ್ಥೆ ಪರವಾಗಿ ಹೋರಾಡುವುದು ಸಾಮಾನ್ಯ ಕೆಲಸವಲ್ಲ. ಟ್ರುಡೋ ರೀತಿಯ ಪ್ರಜಾತಂತ್ರದ ಹೋರಾಟಗಾರರಿಂದ ಮಾತ್ರ ಇಂತಹದೊಂದು ಕ್ರಾಂತಿಕಾರಕ ಕೆಲಸ ಸಾಧ್ಯ. ಖಾಲಿಸ್ತಾನಗಳಂತಹ ಶಾಂತಿಪ್ರಿಯರನ್ನು ಆಡಳಿತ ವ್ಯವಸ್ಥೆಯ ಭಾಗವಾನ್ನಾಗಿಸಿಕೊಂಡು ಪ್ರಜಾಪ್ರಭುತ್ವದ ರಕ್ಷಣೆ ಮಾಡುವುದು ಸಣ್ಣ ಪುಟ್ಟ ಕೆಲಸವಲ್ಲ. ಜಾರ್ಜ್ ಸೋರಸ್ ಮೂಲಕ ಟ್ರುಡೋ ಕುಟುಂಬಕ್ಕೆ ಶಾಂತಿ ನೊಬೆಲ್ ಕೊಡಸಲು ಶಿಫಾರಸು ಮಾಡಿಸಲೇಬೇಕು.
ಪ್ರಜಾಪ್ರಭುತ್ವ ಹಾಗೂ ವಿಶ್ವಶಾಂತಿ ಧೂತರೆಂದು ಸುಮ್ಮನೇ ಹೇಳುವುದಿಲ್ಲ. ಪ್ರಜಾಪ್ರಭುತ್ವ ಮುಗಿಸಲು ಹೊರಟಿರುವ ಟ್ರಂಪ್ ಅವಧಿಯಲ್ಲಿ ಯಾವುದೇ ದೊಡ್ಡ ಯುದ್ಧಗಳು ನಡೆಯದೇ, ಹಲವಾರು ದೈತ್ಯ ಉಗ್ರರನ್ನು ಸಂಹರಿಸುವ ಮೂಲಕ ಸರ್ವಾಧಿಕಾರಕ್ಕೆ ಎಡೆ ಮಾಡಿಕೊಟ್ಟರು. ಬೈಡನ್ ಆಡಳಿತಕ್ಕೆ ಬರುತ್ತಿದ್ದಂತೆ, ಯುದ್ಧ ಮಾಡಲು ಬಯಸುವ ಎಲ್ಲರಿಗೂ ಸಮಾನ ಅಧಿಕಾರದ ಅವಕಾಶ ನೀಡಲಾಯಿತು. ರಷ್ಯಾವನ್ನು ಸದಾ ಕಾಲ ಎದುರಿಸುತ್ತಲೇ ಇರಬೇಕು ಹಾಗೂ ಹಳೆಯ ಶಸ್ತ್ರಾಸ್ತ್ರಗಳು ಖಾಲಿಯಾಗಬೇಕು ಎನ್ನುವ ನಿಷ್ಠುರ ಶಾಂತಿ ನಿರ್ಮಾಣದ ನೀತಿಯನ್ನು ಶಾಂತಿಧೂತರು ಮಾತ್ರ ಹೊಂದಲು ಸಾಧ್ಯ. ಪ್ರಜಾತಂತ್ರ ದೇಶವಾದ ಇಸ್ರೇಲ್ ಹಾಗೂ ಶಾಂತಿಧೂತರ ರಾಷ್ಟ್ರ ಪ್ಯಾಲೇಸ್ತೈನ್‌ಗೂ ಅವರ ಹಕ್ಕು ಚಲಾಯಿಸುವ ಸ್ವಾತಂತ್ರ್ಯ ನೀಡಲಾಯಿತು. ನಮ್ಮ ಪಕ್ಕದ ಶಾಂತಿಧೂತ ರಾಷ್ಟ್ರ ಪಾಕಿಸ್ತಾನಕ್ಕೂ ಆರ್ಥಿಕ ನೆರವನ್ನು ಮತ್ತೆ ಕೊಡುವ ಮೂಲಕ, ಶಾಂತಿ ಸ್ಥಾಪನೆಗೆ ಇನ್ನಷ್ಟು ಪ್ರಯತ್ನ ನಡೆಸಲಾಯಿತು.
ಇದಲ್ಲದೇ ನಮ್ಮ ಇನ್ನೊಂದು ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಜನರಿಂದ ಆಯ್ಕೆಯಾಗಿದ್ದ ಪ್ರಜಾಪ್ರಭುತ್ವ ವಿರೋಧಿ ಶೇಖ್ ಹಸೀನಾ ಸರ್ಕಾರವನ್ನು ಕಿತ್ತೆಸೆದು, ಶಾಂತಿಧೂತ ಮೊಹಮದ್ ಯೂನಸ್‌ರನ್ನು ಕೂರಿಸುವ ಮೂಲಕ ಪ್ರಜಾಪ್ರಭುತ್ವದ ಮರು ರಕ್ಷಣೆ ಮಾಡಲಾಯಿತು. ಬಾಂಗ್ಲಾದೇಶದ ಸ್ಥಾಪಕರು, ಅದರ ಇತಿಹಾಸ, ಸ್ವಾತಂತ್ರ್ಯವನ್ನು ʼಪ್ರಜಾತಾಂತ್ರಿಕʼವಾಗಿ ಬದಲಾಯಿಸುವಷ್ಟು ಡೆಮಾಕ್ರಸಿಯ ರಕ್ಷಣೆ ನಡೆಯಿತು. ಬಾಂಗ್ಲಾದೇಶದಲ್ಲಿ ನಡೆದಿದ್ದು ಕೋಮು ಧೋಂಬಿ ಎಂದು ಯಾರಾದರೂ ಹೇಳಿದರೆ, ಪ್ರಜಾತಾಂತ್ರಿಕವಾಗಿ ಅವರನ್ನು ಶಿಕ್ಷಿಸಲಾಗುವುದು. ಅದೊಂದು ಪ್ರಜಾತಂತ್ರ ವ್ಯವಸ್ಥೆಯನ್ನು ರಕ್ಷಿಸುವ ಯುವಕರ ಕ್ರಾಂತಿಯಾಗಿತ್ತು. ಏಕೆಂದರೆ ಈಗ ಸರ್ಕಾರವನ್ನು ನಡೆಸುತ್ತಿರುವುದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ.
ಅಷ್ಟೆಲ್ಲ ದೂರದ ಅಮೆರಿಕ, ಪಕ್ಕದ ಬಾಂಗ್ಲಾದೇಶಕ್ಕೆ ಹೋಗುವುದೇಕೆ. ನಮ್ಮ ರಾಜ್ಯದ ಪ್ರಜಾಪ್ರಭುತ್ವ ಚಾಂಪಿಯನ್‌ಗಳ ಉದಾಹರಣೆಯನ್ನು ಬೇಕಾದರೂ ಗಮನಿಸಿ, ರಾಜ್ಯದ ಗೌರವಾನ್ವಿತ ಉಪಮುಖ್ಯಮಂತ್ರಿಯ ಪ್ರಾಮಾಣಿಕ, ಭ್ರಷ್ಟಾಚಾರ ರಹಿತ, ದೂರದೃಷ್ಟಿಯ ಕಾಮಗಾರಿಗಳನ್ನು ಹೊಗಳುವ ಪ್ರಜಾತಾಂತ್ರಿಕ ಮೌಲ್ಯವನ್ನು ಕೂಡ ಕೆಲ ಶಾಸಕರು ಹೊಂದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ದೊಡ್ಡವರಿಗೆ ತಗ್ಗಿ ಬಗ್ಗಿ ನಡೆಯಬೇಕು ಎನ್ನುವ ಕಾಮನ್ ಸೆನ್ಸ್ ಹೊಂದದವರೆಲ್ಲ ನಮ್ಮ ಶಾಸಕರಾಗಿದ್ದಾರೆ. ಇವರೆಲ್ಲ ಪ್ರಜಾತಂತ್ರಕ್ಕೆ ಅಪಾಯಕಾರಿ.
ಕೊನೆಯದಾಗಿ: ನಮ್ಮ ಬೆಂಗಳೂರಿನಿಂದ ದೂರದ ವಾಷಿಂಗ್ಟನ್‌ವರೆಗೆ ಹೇಗೆಲ್ಲ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಹಾಗೂ ಚಾಂಪಿಯನ್‌ಗಳು ಹೇಗೆ ರಕ್ಷಿಸುತ್ತಿದ್ದಾರೆಯಲ್ಲವೇ? ಈ ಪ್ರಜಾಪ್ರಭುತ್ವ ರಕ್ಷಕರು ವಿಶ್ವದ ಯಾವುದೇ ರಾಷ್ಟ್ರಕ್ಕೆ ಹೋದರೂ ಒಂದೇ ರೀತಿ ಇರುತ್ತಾರಲ್ಲಾ ಏಕೆ? ಇವರನ್ನೆಲ್ಲ ಅಧಿಕಾರದಿಂದ ದೂರವಿಟ್ಟು ಪ್ರಜಾಪ್ರಭುತ್ವವನ್ನು ಸಾಯಲು ಬಿಡುವುದು ಎಷ್ಟರ ಮಟ್ಟಿಗೆ ಸರಿ? ಅಮೆರಿಕದಂತಹ ಪ್ರಜ್ಞಾವಂತ ನಾಗರಿಕರು ಕೂಡ ಈ ರೀತಿ ಪ್ರಜಾಪ್ರಭುತ್ವ ವಿರೋಧಿ ನಿಲುವು ತಾಳಿದರೆ, ಜಗತ್ತಿಗೆ ಇನ್ನು ಬುದ್ಧಿ ಹೇಳುವರು ಯಾರು? ವಾಷಿಂಗ್ಟನ್ ಪೋಸ್ಟ್, ನ್ಯೂಯಾರ್ಕ್ ಟೈಮ್ಸ್ ಸಮೀಕ್ಷೆಯನ್ನೇ ಸುಳ್ಳಾದರೆ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ ಆಗುವುದು ಹೇಗೆ? ಒಟ್ಟಿನಲ್ಲಿ ಜಗತ್ತು ವಿನಾಶದತ್ತ ಸಾಗುತ್ತಿದೆ. ಈ ಜಗತ್ತನ್ನು ರಕ್ಷಿಸುವ ಒಬ್ಬ ಸಮರ್ಥ ನಾಯಕನಿಲ್ಲವೇ?
ವಿಶೇಷ ಸೂಚನೆ: ಈ ಲೇಖನವನ್ನು ಸರಿಯಾಗಿ ಆರ್ಥ ಮಾಡಿಕೊಳ್ಳದವರು ಪ್ರಜಾಪ್ರಭುತ್ವ ವಿರೋಧಿಗಳೆಂದು ಹಣೆಪಟ್ಟಿ ಕಟ್ಟಲಾಗುವುದು. #USAElection2024 #DonaldTrump #Democracy