Naturalists; ಪರಿಸರ ಪ್ರವಾಸೋದ್ಯಮಕ್ಕೆ ನಿಸರ್ಗವಾದಿಗಳ ಮೊದಲ ತಂಡ, ಬನ್ನೇರುಘಟ್ಟದಲ್ಲಿತ್ತು ಸ್ಕಿಲ್ ಇಂಡಿಯಾ ತರಬೇತಿ, ಏನಿದು ಕೋರ್ಸ್
Sep 02, 2024 11:45 AM IST
ಸರ್ಟಿಫೈಡ್ ನೇಚುರಲಿಸ್ಟ್ ಕೋರ್ಸ್; ಪರಿಸರ ಪ್ರವಾಸೋದ್ಯಮಕ್ಕೆ ನಿಸರ್ಗವಾದಿಗಳ ಮೊದಲ ತಂಡ, ಬನ್ನೇರುಘಟ್ಟದಲ್ಲಿತ್ತು ಸ್ಕಿಲ್ ಇಂಡಿಯಾ ತರಬೇತಿ. ದ ನೇಚುರಲಿಸ್ಟ್ ಸ್ಕೂಲ್ ಇದನ್ನು ಆಯೋಜಿಸಿತ್ತು.
ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಹೇಳುವುದಾದರೆ ಪರಿಸರ ಪ್ರವಾಸೋದ್ಯಮ ಸದ್ಯ ಪ್ರವರ್ಧಮಾನದಲ್ಲಿರುವ ವಿಭಾಗ. ಸಾಂಪ್ರದಾಯಿಕ ಜ್ಞಾನ ಇರುವಂಥವರು ಇದನ್ನು ಮುನ್ನಡೆಸುತ್ತಿದ್ದಾರೆ. ಈಗ ಪರಿಸರ ಪ್ರವಾಸೋದ್ಯಮಕ್ಕೆ ನಿಸರ್ಗವಾದಿಗಳ ಮೊದಲ ತಂಡ ಪ್ರವೇಶ ಪಡೆದಿದೆ. ಬನ್ನೇರುಘಟ್ಟದಲ್ಲಿ ದ ನೇಚುರಲಿಸ್ಟ್ ಸ್ಕೂಲ್‌ನ ತರಬೇತಿ ನಡೆಯಿತು. ಏನಿದು ಕೋರ್ಸ್ ಇಲ್ಲಿದೆ ವಿವರ.
ಬೆಂಗಳೂರು: ಪ್ರಮಾಣಿತ ನಿಸರ್ಗವಾದಿ (Certified Naturalist)ಗಳ ಮೊದಲ ತಂಡ ಬನ್ನೇರುಘಟ್ಟ ನೇಚರ್ ಕ್ಯಾಂಪ್‌ನಲ್ಲಿ 750 ಗಂಟೆಗಳ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪರಿಸರ ಪ್ರವಾಸೋದ್ಯಮ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದೆ. ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಸಹಯೋಗದೊಂದಿಗೆ ದಿ ನ್ಯಾಚುರಲಿಸ್ಟ್ ಸ್ಕೂಲ್ ಅಭಿವೃದ್ಧಿಪಡಿಸಿದ ಈ ಹೊಸ ತರಬೇತಿ ಕಾರ್ಯಕ್ರಮ ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಭಾರತದಲ್ಲಿ ಮೊದಲನೇಯದು. ಅಷ್ಟೇ ಅಲ್ಲ, ಈ ವಿಷಯಕ್ಕೆ ಸಂಬಂಧಿಸಿ ಮೊದಲ ಸರ್ಟಿಫೈಡ್ ಕೋರ್ಸ್ ಕೂಡ ಹೌದು.
ಮೇ ತಿಂಗಳಿಂಧ ಆಗಸ್ಟ್‌ವರೆಗೆ ನಡೆದ ಈ ಕೋರ್ಸ್‌ನಲ್ಲಿ ಸಸ್ಯ ಮತ್ತು ಪ್ರಾಣಿಗಳ ಗುರುತಿಸುವಿಕೆ, ಪರಿಸರ ಸ್ನೇಹಿ ಅಭ್ಯಾಸಗಳು ಮತ್ತು ಮಾರ್ಗದರ್ಶಿ ತಂತ್ರಗಳಲ್ಲಿ ಆಳವಾದ ತರಬೇತಿಯನ್ನು ಅಭ್ಯರ್ಥಿಗಳಿಗೆ ನೀಡಲಾಗಿತ್ತು. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪ್ರಾಯೋಗಿಕ, ಪ್ರಾಯೋಗಿಕ ಅನುಭವದಿಂದ ಪ್ರಯೋಜನ ಪಡೆದ ಅವರು, ನೇರ ಸಮಾಲೋಚನೆ, ಕ್ಷೇತ್ರಕಾರ್ಯ ಮತ್ತು ಆನ್‌ಲೈನ್ ಮೂಲಕವೂ ಈ ವಿಷಯಕ್ಕೆ ಸಂಬಂಧಿಸಿದ ತಿಳಿವಳಿಕೆ ಪಡೆದರು.
"ಈ ಪದವೀಧರರು ಈಗ ಪರಿಸರ ಪ್ರವಾಸೋದ್ಯಮ, ಪರಿಸರ ಶಿಕ್ಷಣ ಮತ್ತು ಸಂರಕ್ಷಣಾ ಪ್ರಯತ್ನಗಳಿಗೆ ಗಮನಾರ್ಹ ಕೊಡುಗೆಗಳನ್ನು ನೀಡಲು ಸಿದ್ಧರಾಗಿದ್ದಾರೆ" ಎಂದು ದಿ ನ್ಯಾಚುರಲಿಸ್ಟ್ ಶಾಲೆಯ ಸಂಸ್ಥಾಪಕ-ನಿರ್ದೇಶಕಿ ಪ್ರಿಯಾ ವೆಂಕಟೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಏನಿದು ಸರ್ಟಿಫೈಡ್ ನೇಚುರಲಿಸ್ಟ್ ಕೋರ್ಸ್
ಸರ್ಟಿಫೈಡ್ ನೇಚುರಲಿಸ್ಟ್ ಕೋರ್ಸ್ ಎಂಬುದು ಅಧಿಕೃತ, ಪರಿಸರ ಜವಾಬ್ದಾರಿ ಮತ್ತು ವೃತ್ತಿಪರ ಅತಿಥಿ ಅನುಭವವನ್ನು ನೀಡುವ ನಿಸರ್ಗವಾದಿ (ನೇಚುರಲಿಸ್ಟ್)ಗಳನ್ನು ತಯಾರುಮಾಡುವ ಉದ್ದೇಶದಿಂದ ರಚಿಸಲಾದ ಕೋರ್ಸ್.
ಇದು ಪರಿಸರ ಪ್ರವಾಸೋದ್ಯಮ ಕ್ಷೇತ್ರದ ಉದ್ಯಮದ ಜ್ಞಾನ ಸೇರಿದಂತೆ ಸಾಮಾನ್ಯ ಮಾರ್ಗದರ್ಶಿ ಕೌಶಲವನ್ನು ಒದಗಿಸುತ್ತದೆ. ಅಲ್ಲದೆ, ಮಾರ್ಗದರ್ಶಿಯ ಪಾತ್ರ, ಹೊಣೆಗಾರಿಕೆ, ವ್ಯಾಖ್ಯಾನ ಕೌಶಲ, ಸುರಕ್ಷತೆ ಮತ್ತು ಅಪಾಯ ನಿರ್ವಹಣೆ, ಗುಂಪು ನಿರ್ವಹಣೆ, ಪರಿಸರ ಪ್ರವಾಸ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಆಯೋಜಿಸುವುದು, ನೈಸರ್ಗಿಕ ಇತಿಹಾಸ, ಗುರುತು ಮತ್ತು ಚಿಹ್ನೆಗಳು, ಭೂವಿಜ್ಞಾನ, ವ್ಯಾಖ್ಯಾನ ಇತ್ಯಾದಿಗಳ ಆಳವಾದ ವಿಷಯ ಜ್ಞಾನ ಒದಗಿಸುತ್ತದೆ.
ಯಾರಿಗೆ ಈ ಕೋರ್ಸ್ ಸೂಕ್ತ, ವಿದ್ಯಾರ್ಹತೆ ಮತ್ತು ಖರ್ಚುವೆಚ್ಚ, ಉದ್ಯೋಗಾವಕಾಶ
ಯಾವುದೇ ಪರಿಸರದ ಸ್ಥಳೀಯ ಅಥವಾ ಸ್ವತಂತ್ರ ನಿಸರ್ಗವಾದಿ, ವನ್ಯಜೀವಿ ವಿವರಣೆಕಾರ, ಪ್ರಕೃತಿ ಶಿಕ್ಷಣ ನೀಡುವವರು, ಸಹಜ ಇತಿಹಾಸ ಸಂವಹನಕಾರ, ಸಫಾರಿ ಮಾರ್ಗದರ್ಶಿ, ಪ್ರಕೃತಿ ಪ್ರವಾಸ ಮಾರ್ಗದರ್ಶಿಯಾಗಲು ಬಯಸುವವರಿಗೆ ಈ ಕೋರ್ಸ್ ಸೂಕ್ತ. ಇದು ಪ್ರಮಾಣಿತ ಅಂದರೆ ಸರ್ಕಾರದ ಮಾನ್ಯತೆ ಇರುವ ಸರ್ಟಿಫೈಡ್ ಕೋರ್ಸ್ ಆಗಿರುವ ಕಾರಣ ಇದುವರೆಗೆ ಅಸಾಂಪ್ರದಾಯಿಕವಾಗಿ ಇದ್ದ ಕೌಶಲ ಕಲಿಕೆ ಒಂದು ಚೌಕಟ್ಟಿಗೆ ಬಂದಿದೆ ಎಂದು ದ ನೇಚುರಲಿಸ್ಟ್ ಸ್ಕೂಲ್‌ನ ಪ್ರೋಗ್ರಾಮ್ಸ್ ಮ್ಯಾನೇಜರ್ ಮಂಜುಳಾ ನಾಯ್ಡು ತಿಳಿಸಿದರು.
ಸರ್ಕಾರಿ ಮಾನದಂಡ ಪ್ರಕಾರ ಕನಿಷ್ಠ 10ನೇ ತರಗತಿ ಆಗಬೇಕು. ಆದರೆ ಈ ಕೋರ್ಸ್ ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಕಾರಣ 12ನೇ ತರಗತಿ ವಿಜ್ಞಾನ ವಿಶೇಷವಾಗಿ ಸಸ್ಯಶಾಸ್ತ್ರ ಮತ್ತು ಪ್ರಾಣಿ ಶಾಸ್ತ್ರ ಕಲಿತವರಿಗೆ ಸೂಕ್ತ. ಇದಲ್ಲದೆ, ಬುಡಕಟ್ಟು ಜನರು, ಕೃಷಿಕರು ಮುಂತಾದವಿಗೆ ಈ ವಿಚಾರವಾಗಿ ಸಹಜ ತಿಳಿವಳಿಕೆ ಇರುವ ಕಾರಣ ಅಂಥವೂ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಈ ತರಬೇತಿಯಲ್ಲಿ ಭಾಗವಹಿಸಬಹುದು.
ಇದು 16 ವಾರಗಳ ಅಂದರೆ ಕೋರ್ಸ್. ಗಂಟೆ ಲೆಕ್ಕದಲ್ಲಿ ಹೇಳುವುದಾದರೆ 750 ಗಂಟೆಗಳ ತರಬೇತಿ. ಮೊದಲ ಬ್ಯಾಚ್ ಆಗಸ್ಟ್ 31ಕ್ಕೆ ತರಬೇತಿ ಮುಗಿಸಿ ಹೊರಬಂದಿದೆ. ಎರಡನೇ ಬ್ಯಾಚ್‌ನಲ್ಲಿ ಈಶಾನ್ಯ ರಾಜ್ಯಗಳ ಅಭ್ಯರ್ಥಿಗಳಿದ್ದಾರೆ. ಇದರ ಖರ್ಚುವೆಚ್ಚ ಭರಿಸುವುದಕ್ಕಾಗಿ 1,25,000 ರೂಪಾಯಿ ಪಡೆಯಲಾಗುತ್ತದೆ. ಈ ವೆಚ್ಚ ಭರಿಸಲಾಗದೇ ಇರುವ ಅಭ್ಯರ್ಥಿಗಳಿದ್ದರೆ ವೈಯಕ್ತಿಕ ಪ್ರಕರಣ ನೋಡಿಕೊಂಡು ಸ್ಕಾಲರ್‌ಶಿಪ್ ವ್ಯವಸ್ಥೆ ಒದಗಿಸುವ ಪ್ರಯತ್ನವನ್ನೂ ದ ನೇಚುರಲಿಸ್ಟ್ ಸ್ಕೂಲ್ ಮಾಡುತ್ತಿದೆ ಎಂದು ಅವರು ತಿಳಿಸಿದೆ.
ಪರಿಸರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇಂತಹ ಪರಿಣತರಿಗೆ ಈಗ ಬೇಡಿಕೆ ಹೆಚ್ಚು. ಇಕೋಗೈಡ್, ನೇಚರ್ ಗೈಡ್ ನೇಚುರಲಿಸ್ಟ್, ಲೀಡ್ ನೇಚುರಲಿಸ್ಟ್ ಹುದ್ದೆಗಳಿದ್ದು, ಪ್ರಮಾಣಿತ ನಿಸರ್ಗವಾದಿ (ಸರ್ಟಿಫೈಡ್ ನೇಚುರಲಿಸ್ಟ್)ಯಾದರೆ ಅವರವರ ತಿಳಿವಳಿಕೆಗೆ ತಕ್ಕಂತೆ ಉದ್ಯೋಗ, ವೇತನವೂ ಸಿಗಲಿದೆ. ಆರಂಭಿಕ ವೇತನ ವಾರ್ಷಿಕ 2.5 ಲಕ್ಷ ರೂಪಾಯಿಯಿಂದ ಶುರುವಾಗಬಹುದು. ಇದು ಆಯಾ ಉದ್ಯೋಗದಾತರು ನಿರ್ಧರಿಸುವ ವಿಚಾರ ಎಂದು ಅವರು ವಿವರಿಸಿದರು.
ಹೆಚ್ಚಿನ ಮಾಹಿತಿ ದ ನೇಚುರಲಿಸ್ಟ್ ಸ್ಕೂಲ್ ವೆಬ್‌ಸೈಟ್ (https://naturalist.school/) ಗಮನಿಸಬಹುದು.