logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ

Umesh Kumar S HT Kannada

Nov 26, 2024 12:27 PM IST

google News

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ ಎಂಬುದು ಸದ್ಯದ ಕುತೂಹ;ಲ. ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬಂದ ಬಳಿಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪರಸ್ಪರ ಸಿಹಿ ತಿನ್ನಿಸಿದ ಸಂದರ್ಭ. ಮತ್ತೊಬ್ಬ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಅಲ್ಲಿದ್ದರು. (ಕಡತ ಚಿತ್ರ)

  • Maharashtra CM: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬಂದು ಎರಡು ದಿನ ಮುಗಿದೇ ಹೋಯಿತು. ಇಂದು ಮಹಾರಾಷ್ಟ್ರ ವಿಧಾನಸಭೆ ಅವಧಿ ಕೂಡ ಮುಗಿಯಿತು. ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ ಕೊಟ್ಟರು. ಮುಂದೇನು, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ? ವರದಿ ಹೇಳುವುದೇನು- ಇಲ್ಲಿದೆ ವಿವರ.

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ ಎಂಬುದು ಸದ್ಯದ ಕುತೂಹ;ಲ. ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬಂದ ಬಳಿಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪರಸ್ಪರ ಸಿಹಿ ತಿನ್ನಿಸಿದ ಸಂದರ್ಭ. ಮತ್ತೊಬ್ಬ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಅಲ್ಲಿದ್ದರು. (ಕಡತ ಚಿತ್ರ)
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ, ಮಗನನ್ನು ಉಪ ಮುಖ್ಯಮಂತ್ರಿ ಮಾಡಿ, ಕೇಂದ್ರ ಸಂಪುಟ ಸೇರ್ತಾರಾ ಎಂಬುದು ಸದ್ಯದ ಕುತೂಹ;ಲ. ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬಂದ ಬಳಿಕ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪರಸ್ಪರ ಸಿಹಿ ತಿನ್ನಿಸಿದ ಸಂದರ್ಭ. ಮತ್ತೊಬ್ಬ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಅಲ್ಲಿದ್ದರು. (ಕಡತ ಚಿತ್ರ) (Photo by Raju Shinde/HT Photo)

Maharashtra CM: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಂಗಳವಾರ (ನವೆಂಬರ್ 26) ಬೆಳಗ್ಗೆ ರಾಜ್ಯಪಾಲ ಸಿ ಪಿ ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವಂತೆ ಶಿಂಧೆ ಅವರಿಗೆ ರಾಜ್ಯಪಾಲರು ಸೂಚಿಸಿದರು. ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರೊಂದಿಗೆ ಶಿಂಧೆ ರಾಜಭವನಕ್ಕೆ ಭೇಟಿ ನೀಡಿದರು. ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26 ರಂದು ಅಂದರೆ ಇಂದೇ ಕೊನೆಗೊಂಡಿದೆ. ಮಹಾಯುತಿ ಮೈತ್ರಿಯಲ್ಲಿ ಏಕನಾಥ್ ಶಿಂಧೆ ಅವರ ಶಿವಸೇನಾ (57), ಅಜಿತ್ ಪವಾರ್ ಅವರ ಎನ್‌ಸಿಪಿ (41) ಹೊರತಾಗಿ ಬಿಜೆಪಿ ಒಂದೇ 132 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳ ಪೈಕಿ ಮಹಾಯುತಿ ಒಟ್ಟಾಗಿ 230 ಸ್ಥಾನಗಳನ್ನು ಹೊಂದಿದೆ. ಹೀಗಾಗಿ 2019ರ ಪರಿಸ್ಥಿತಿ ಮತ್ತೆ ಮರುಕಳಿಸಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಮೂರು ಪಕ್ಷದ ನಾಯಕರಿಗೆ ಇನ್ನೂ ಸಾಧ್ಯವಾಗಿಲ್ಲ.

ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು? ಫಡ್ನವೀಸ್ ಪರ ಬಿಜೆಪಿ ಒಲವು

ಮಹಾರಾಷ್ಟ್ರದಲ್ಲಿ ಮಹಾಯುತಿಯ ಭರ್ಜರಿ ವಿಜಯದ ನಂತರ, ಈಗ ಬಿಜೆಪಿ ನಾಯಕತ್ವವು ತನ್ನ ಮಿತ್ರಪಕ್ಷಗಳೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಯಾರು ಎಂಬ ಬಗ್ಗೆೆ ನಿರ್ಧಾರ ತೆಗೆದುಕೊಳ್ಳಲು ತೀವ್ರ ಹರಸಾಹಸ ಮಾಡುತ್ತಿದೆ. ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಉಳಿಸಿಕೊಳ್ಳುವಂತೆ ಶಿವಸೇನೆ ಒತ್ತಡ ಹೇರಲು ಆರಂಭಿಸಿದೆ. ಅದೇ ಸಮಯದಲ್ಲಿ, ಎನ್‌ಸಿಪಿ ಈ ಹುದ್ದೆಗೆ ಬಿಜೆಪಿ ನಾಯಕ ಮತ್ತು ನಿರ್ಗಮಿತ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಪರೋಕ್ಷ ಬೆಂಬಲವನ್ನು ನೀಡಿದೆ. ಇನ್ನೆರಡು ದಿನದಲ್ಲಿ ಬಿಜೆಪಿ ನಾಯಕತ್ವ ಎಲ್ಲ ಪಕ್ಷಗಳ ಮುಖಂಡರ ಜತೆ ಚರ್ಚಿಸಿ ಮುಖ್ಯಮಂತ್ರಿ ಸ್ಥಾನದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಮಹಾಯುತಿ ಮೈತ್ರಿಕೂಟದಲ್ಲಿ ಹೆಚ್ಚು ಸದಸ್ಯ ಬಲದೊಂದಿಗೆ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅದರ ಶಾಸಕರ ಸಂಖ್ಯೆ ಎರಡೂ ಮಿತ್ರಪಕ್ಷಗಳ ಒಟ್ಟು ಶಾಸಕರಿಗಿಂತ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನದ ಮೇಲೆ ಸ್ವಾಭಾವಿಕ ಹಕ್ಕು ಇದೆ. ಆದರೆ, ಶಿವಸೇನಾ ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು ಎಂದು ಹೇಳತೊಡಗಿದೆ. ಈ ಸನ್ನಿವೇಶದಲ್ಲಿ ಎಲ್ಲ ಮುಖಂಡರ ಮನ ಒಲಿಸಿದ ಬಳಿಕವೇ ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಘೋ‍ಷಿಸುವ ಬಾಧ್ಯತೆ ಬಿಜೆಪಿ ನಾಯಕರ ಮೇಲೆರಗಿದೆ. ಬಿಜೆಪಿ ಈ ವಿಚಾರವಾಗಿ ನಿರ್ಧಾರ ಕೈಗೊಳ್ಳುವಾಗ ಭವಿಷ್ಯದ ಸಾಮಾಜಿಕ ಮತ್ತು ರಾಜಕೀಯ ಸಮೀಕರಣಗಳನ್ನು ಪರಿಗಣಿಸಬೇಕಾಗಿದೆ.

2019ರಲ್ಲಿ ಉದ್ಧವ್‌ ಠಾಕ್ರೆ ಸಿಎಂ ಆಗಬೇಕು ಎಂದಿದ್ದರು

ಮಹಾರಾಷ್ಟ್ರದಲ್ಲಿ ಕಳೆದ ವಿಧಾನಸಭೆಯ ಚುನಾವಣೆಯ ಬಳಿಕ ಬಿಜೆಪಿ 105 ಸ್ಥಾನ ಗೆದ್ದು ಶಿವಸೇನಾ 50ಕ್ಕೂ ಹೆಚ್ಚು ಸ್ಥಾನಗೆದ್ದುಕೊಂಡಿತ್ತು. ಆಗ ತಾನು ಮುಖ್ಯಮಂತ್ರಿಯಾಗಬೇಕು ಎಂದು ಉದ್ಧವ್ ಠಾಕ್ರೆ ಹಟ ಹಿಡಿದ ಕಾರಣ ಸರ್ಕಾರ ರಚನೆ ವಿಳಂಬವಾಯಿತು. ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡ ಅವರು ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆ ಸೇರಿ ಮಹಾ ವಿಕಾಸ್ ಅಘಾಡಿ ಸರ್ಕಾರ ರಚಿಸಿದರು. ಎರಡು ವರ್ಷವಾಗುತ್ತಲೇ ಶಿವಸೇನಾ ಮತ್ತು ಎನ್‌ಸಿಪಿ ಎರಡು ಹೋಳಾದವು. ಶಿವಸೇನಾದಿಂದ ಏಕನಾಥ ಶಿಂಧೆ ಮತ್ತು ಎನ್‌ಸಿಪಿಯಿಂದ ಅಜಿತ್ ಪವಾರ್ ಹೊರಬಂದರು. ಶಿಂಧೆ ಮುಖ್ಯಮಂತ್ರಿಯಾದರೆ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾದರು. ಈಗ ಮತ್ತದೇ 2019ರ ಸನ್ನಿವೇಶ ಬಿಜೆಪಿಗೆ ಎದುರಾಗಿದೆ. ತಕರಾರು ಎದುರಾಗಿರುವಂಥದ್ದು ಶಿವಸೇನಾದಿಂದಲೇ ಎಂಬುದು ಗಮನಿಸಬೇಕಾದ ವಿಚಾರ.

ಏಕನಾಥ್ ಶಿಂಧೆ ಅವರ ಮರಾಠ ಕಾರ್ಡ್‌; ಕೇಂದ್ರ ಸಂಪುಟ ಸೇರ್ಪಡೆ ಸಾಧ್ಯತೆ

ಮರಾಠಾ ಎಂಬ ಕಾರಣಕ್ಕೆ ಶಿಂಧೆ ಅವರ ಹಕ್ಕನ್ನು ಬಿಜೆಪಿ ನಾಯಕರಿಗೆ ನಿರಾಕರಿಸುವುದು ಸಾಧ್ಯವಾಗುತ್ತಿಲ್ಲ. ಶಿಂಧೆ ಅವರು ಮರಾಠ ಸಮುದಾಯದವರು. ದೇವೇಂದ್ರ ಫಡ್ನವೀಸ್ ಬ್ರಾಹ್ಮಣ ಸಮುದಾಯದವರು. ಪಕ್ಷದ ರಾಜ್ಯ ಅಧ್ಯಕ್ಷರಾಗಿ ಒಬಿಸಿ ಸಮುದಾಯದ ಚಂದ್ರಶೇಖರ ಬವಾಂಕುಲೆ ಇದ್ದಾರೆ. ಸದ್ಯದಲ್ಲೇ ಬೃಹನ್ಮುಂಬೈ ಪಾಲಿಕೆ ಚುನಾವಣೆ ಇದೆ. ಹೀಗೆ ಭವಿಷ್ಯದ ರಾಜಕೀಯ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ನಾಯಕತ್ವ ಈಗ ಮುಂದುವರಿಯಬೇಕಾಗಿದ್ದು, ತರಾತುರಿಯಲ್ಲಿ ಯಾವುದೇ ನಿರ್ಧಾರವನ್ನು ಅದು ಪ್ರಕಟಿಸಿಲ್ಲ.

ದೆಹಲಿಯಲ್ಲಿ ಸೋಮವಾರ (ನವೆಂಬರ್ 25) ರಾತ್ರಿ ನಡೆದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ವಿವಾಹದಲ್ಲಿ ಮಹಾರಾಷ್ಟ್ರದ ಪ್ರಮುಖ ನಾಯಕರು ಭಾಗವಹಿಸಿದ್ದರು. ಬಿಜೆಪಿಯ ಕೇಂದ್ರ ನಾಯಕತ್ವದೊಂದಿಗೆ ಅಲ್ಲೇ ಸಭೆ ನಡೆಸಿದರು. ನೂತನ ಮುಖ್ಯಮಂತ್ರಿ ಆಯ್ಕೆ ಕುರಿತು ಚರ್ಚೆ ನಡೆದಿದೆ. ಶಿಂಧೆ ಅವರನ್ನು ಕೇಂದ್ರಕ್ಕೆ ಕರೆತಂದು ಅವರ ಮಗನನ್ನು ಉಪಮುಖ್ಯಮಂತ್ರಿ ಮಾಡಬೇಕು ಮತ್ತು ಪಕ್ಷದಲ್ಲೇ ಮುಖ್ಯಮಂತ್ರಿ ಮಾಡಬೇಕು ಎಂಬುದು ಬಿಜೆಪಿಯಲ್ಲಿ ಚರ್ಚೆಯಾಗುತ್ತಿರುವ ಸೂತ್ರಗಳಲ್ಲೊಂದು. ಶಿಂಧೆ ಅವರನ್ನು ಸದ್ಯಕ್ಕೆ ತೆಗೆದು ಹಾಕುವುದು ಬೇಡ, ನಂತರ ಬದಲಾವಣೆ ಮಾಡಬೇಕು ಎಂಬ ಚರ್ಚೆಯೂ ನಡೆಯುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಲೈವ್‌ ಹಿಂದೂಸ್ತಾನ್ ವರದಿ ಮಾಡಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ