logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ev Battery Size: ಇವಿ ಬ್ಯಾಟರಿ ಗಾತ್ರದ ಮಾನದಂಡ; ಸರ್ಕಾರದಿಂದ ಮರುಚಿಂತನೆ

EV battery size: ಇವಿ ಬ್ಯಾಟರಿ ಗಾತ್ರದ ಮಾನದಂಡ; ಸರ್ಕಾರದಿಂದ ಮರುಚಿಂತನೆ

HT Kannada Desk HT Kannada

Jan 11, 2023 11:17 AM IST

google News

ಇವಿ ಬ್ಯಾಟರಿ ಗಾತ್ರದ ಮಾನದಂಡ; ಸರ್ಕಾರದಿಂದ ಮರುಚಿಂತನೆ

  • EV battery size: ವಿದ್ಯುತ್‌ಚಾಲಿತ ವಾಹನಗಳ ಬೆಂಕಿ ಅವಘಡಗಳು ಹೆಚ್ಚುತ್ತಿರುವ ಕಾರಣ ಸರ್ಕಾರ ಇದನ್ನು ತಡೆಯಲು ಸುರಕ್ಷಾ ನಿಯಮ ಮತ್ತು ಮಾನದಂಡಗಳನ್ನು ಜಾರಿಗೆ ತರುವ ಪ್ರಯತ್ನ ನಡೆಸಿದೆ. ಇದೇ ಅವಧಿಯಲ್ಲಿ ಇವಿಗಳ ಬ್ಯಾಟರಿ ಪ್ಯಾಕ್‌ಗಳ ಸ್ಟಾಂಡರ್ಡ್‌ ಡೈಮೆನ್ಶನ್‌ ಪ್ರಸ್ತಾವನೆ ವಿಚಾರ ಗಮನಸೆಳೆದಿದೆ.

ಇವಿ ಬ್ಯಾಟರಿ ಗಾತ್ರದ ಮಾನದಂಡ; ಸರ್ಕಾರದಿಂದ ಮರುಚಿಂತನೆ
ಇವಿ ಬ್ಯಾಟರಿ ಗಾತ್ರದ ಮಾನದಂಡ; ಸರ್ಕಾರದಿಂದ ಮರುಚಿಂತನೆ (Bloomberg)

ವಿದ್ಯುತ್‌ಚಾಲಿತ ವಾಹನ (ಇವಿ)ಗಳ ಬ್ಯಾಟರಿ ಗಾತ್ರ ಮತ್ತು ಇತರೆ ಮಾನದಂಡಗಳನ್ನು ನಿಗದಿ ಮಾಡುವ ವಿಚಾರದಲ್ಲಿ ಮರುಚಿಂತನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಬ್ಯಾಟರಿ ಸ್ವಾಪಿಂಗ್‌ ನೀತಿ ಬರಲಿದ್ದು, ಅದರಲ್ಲಿ ಈ ಮಾನದಂಡಗಳ ವಿಚಾರ ಇದೆ ಎಂದು ಈ ವಿದ್ಯಮಾನಗಳ ಅರಿವು ಇರುವಂಥ ಅಧಿಕಾರಿಗಳಿಬ್ಬರು ಹೇಳಿದ್ದಾರೆ.

ಈ ವಿಚಾರವಾಗಿ ಸರ್ಕಾರ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಇವಿಗಳ ಬ್ಯಾಟರಿ ಗಾತ್ರದ ವಿಚಾರವಾಗಿ ಒಂದು ನಿರ್ದಿಷ್ಟ ಮಾನದಂಡವನ್ನು ನಿಶ್ಚಯಿಸುವಲ್ಲಿ ಬಿಕ್ಕಟ್ಟು ಏರ್ಪಟ್ಟಿದೆ ಎಂದು ಆ ಅಧಿಕಾರಿಗಳು ಹೇಳಿದ್ದಾಗಿ ಲೈವ್‌ ಮಿಂಟ್‌ ವರದಿ ಮಾಡಿದೆ.

ನೀತಿ ಆಯೋಗ ಈ ವಿಚಾರವಾಗಿ ಕಂಪನಿಗಳ ಜತೆಗೆ ಜನವರಿ 3ರಂದು ಸಭೆ ನಡೆಸಿತ್ತು. ಅಲ್ಲಿ ಏಕರೂಪದ ಬ್ಯಾಟರಿ ಪ್ಯಾಕ್‌ ಸ್ಟಾಂಡರ್ಡ್‌ ರೂಪಿಸುವ ವಿಚಾರದಲ್ಲಿ ಕಾಳಜಿ ವ್ಯಕ್ತವಾಗಿತ್ತು. ವಿದ್ಯುತ್‌ಚಾಲಿತ ವಾಹನಗಳ ಅಡಾಪ್ಶನ್‌ ಮತ್ತು ಬ್ಯಾಟರಿ ಸ್ವಾಪಿಂಗ್‌ಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶ. ಒಂದೊಮ್ಮೆ ನವೋನ್ವೇಷಣೆಗೆ ಮತ್ತು ಸೆಕ್ಟರ್‌ನ ಬೆಳವಣಿಗೆಗೆ ಅಡ್ಡಿ ಉಂಟುಮಾಡುವ ಯಾವುದೇ ಕ್ರಮ ಅಥವಾ ನಡೆಯನ್ನು ಸರ್ಕಾರ ಬೆಂಬಲಿಸದು ಎಂದು ಅವರು ಹೇಳಿದ್ದಾಗಿ ವರದಿ ತಿಳಿಸಿದೆ.

ಬ್ಯಾಟರಿಗಳ ಸುರಕ್ಷತೆ ಮತ್ತು ಕಾರ್ಯಕ್ಷಮತೆಯ ಮಾನದಂಡಗಳನ್ನು ಬ್ಯೂರೋ ಆಫ್‌ ಇಂಡಿಯನ್‌ ಸ್ಟಾಂಡರ್ಡ್ಸ್‌ ನಿರ್ಧರಿಸಲಿದೆ. ಬ್ಯಾಟರಿ ಸ್ವಾಪಿಂಗ್‌ ಕುರಿತ ಕರಡು ನಿಯಮದಲ್ಲಿ ಬ್ಯಾಟರಿ ಪ್ಯಾಕ್‌ಗಳ ಮಾನದಂಡ ಮತ್ತು ನಿಶ್ಚಿತ ಫೀಚರ್‌ಗಳ ವಿಚಾರ ಪ್ರಸ್ತುತ ಪಡಿಸುವ ಮೊದಲು ಸಂಬಂಧಪಟ್ಟ ಪಾಲುದಾರರ ಜತೆಗೆ ಸರ್ಕಾರ ಸಮಾಲೋಚನೆ ನಡೆಸಲಿದೆ. ಹಂತ ಹಂತವಾದ ಬದಲಾವಣೆಯನ್ನು ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಮಾನದಂಡಗಳನ್ನು ಅನುಸರಿಸುವುದಕ್ಕಾಗಿ ಬ್ಯಾಟರಿ ಸ್ವಾಪಿಂಗ್‌ ಮೂಲಸೌಕರ್ಯ ಮತ್ತು ಉತ್ಪಾದನಾ ಸೌಲಭ್ಯಗಳನ್ನು ಬದಲಾಯಿಸಲು ಕಂಪನಿಗಳಿಗೆ ಒಂದೂವರೆ ವರ್ಷದ ಕಾಲಾವಕಾಶ ನೀಡುವ ವಿಚಾರ ಆರಂಭದಲ್ಲಿ ಪ್ರಸ್ತಾಪಿಸಲ್ಪಟ್ಟಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸದಸ್ಯರು ಮತ್ತು ಆಟೋಮೋಟಿವ್‌ ರಿಸರ್ಚ್‌ ಅಸೋಸಿಯೇಶನ್‌ ಆಫ್‌ ಇಂಡಿಯಾದ ಸದಸ್ಯರನ್ನು ಒಳಗೊಂಡ ಸಮಿತಿ ಬ್ಯಾಟರಿ ಪ್ಯಾಕ್‌ಗಳ ಸ್ಟಾಂಡರ್ಡ್‌ ಡೈಮೆನ್ಶನ್‌ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ವಿದ್ಯುತ್‌ಚಾಲಿತ ವಾಹನಗಳ ಬೆಂಕಿ ಅವಘಡಗಳು (ಬಹುತೇಕ ದ್ವಿಚಕ್ರ ವಾಹನಗಳ ಅವಘಡಗಳು) ಹೆಚ್ಚುತ್ತಿರುವ ಕಾರಣ ಸರ್ಕಾರ ಇದನ್ನು ತಡೆಯಲು ಸುರಕ್ಷಾ ನಿಯಮ ಮತ್ತು ಮಾನದಂಡಗಳನ್ನು ಜಾರಿಗೆ ತರುವ ಪ್ರಯತ್ನ ನಡೆಸಿದೆ. ಇದೇ ಅವಧಿಯಲ್ಲಿ ಇವಿಗಳ ಬ್ಯಾಟರಿ ಪ್ಯಾಕ್‌ಗಳ ಸ್ಟಾಂಡರ್ಡ್‌ ಡೈಮೆನ್ಶನ್‌ ಪ್ರಸ್ತಾವನೆ ವಿಚಾರ ಗಮನಸೆಳೆದಿದೆ.

ವಿದ್ಯುತ್‌ಚಾಲಿತ ವಾಹನಗಳ ಬೆಂಕಿ ಅವಘಡಗಳ ತಡೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಕೆಲವೊಂದು ಹೆಚ್ಚುವರಿ ಮುಂಜಾಗ್ರತಾ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಪರಿಣಾಮ, ಹೊಸ AIS-038 ( ನಾಲ್ಕು ಚಕ್ರದ ವಾಹನಗಳಿಗೆ) ಮತ್ತು AIS-156 ( ದ್ವಿಚಕ್ರ ವಾಹನಗಳಿಗೆ) ಮಾನದಂಡದ ಬ್ಯಾಟರಿಗಳನ್ನು ಪರಿಚಯಿಸಲಾಗಿದೆ. ಈ ಬದಲಾವಣೆಯನ್ನು ಈಗಿರುವ ಕೇಂದ್ರೀಯ ಮೋಟಾರು ವಾಹನ ನಿಯಮ ಪ್ರಕಾರವೇ ನಡೆದಿದೆ.

ಇದೇ ವೇಳೆ, ಭಾರಿ ಕೈಗಾರಿಕಾ ಸಚಿವಾಲಯವು ಮನುಷ್ಯ ಸುರಕ್ಷತೆಗಾಗಿ ಪ್ರತ್ಯೇಕ ನಿಯಮಗಳನ್ನು ಘೋಷಿಸಿದ್ದು, ಇದು ಈ ವರ್ಷ ಏಪ್ರಿಲ್‌ 1ರಿಂದ ಚಾಲ್ತಿಗೆ ಬರಲಿದೆ.

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಅವರು ಕಳೆದ ಬಜೆಟ್‌ನಲ್ಲಿ ಬ್ಯಾಟರಿ ಸ್ವಾಪಿಂಗ್‌ ನೀತಿ ವಿಚಾರ ಪ್ರಸ್ತಾಪಿಸಿದ್ದರು. ಇದಾದ ಬಳಿಕ ನೀತಿ ಆಯೋಗವು ಬ್ಯಾಟರಿ ಸ್ವಾಪಿಂಗ್‌ ನೀತಿಯ ಕರಡು ಪ್ರಸ್ತಾವನೆಯನ್ನು ಕಳೆದ ವರ್ಷ ಏಪ್ರಿಲ್‌ನಲ್ಲಿ ಪ್ರಕಟಿಸಿತ್ತು. ಇದರ ಅಂತಿಮ ಪ್ರಸ್ತಾವನೆ ಈ ತಿಂಗಳ ಕೊನೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ