logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇದ್ರೆ ಇಂಥಾ ಬಾಸ್ ಇರ್ಬೇಕು; ರಾಜೀನಾಮೆ ನೀಡಿದಾಗ ಮ್ಯಾನೇಜರ್ ಪ್ರತಿಕ್ರಿಯೆಗೆ ಯುವತಿ ಭಾವುಕ; ವಿಡಿಯೋ ಇಲ್ಲಿದೆ

ಇದ್ರೆ ಇಂಥಾ ಬಾಸ್ ಇರ್ಬೇಕು; ರಾಜೀನಾಮೆ ನೀಡಿದಾಗ ಮ್ಯಾನೇಜರ್ ಪ್ರತಿಕ್ರಿಯೆಗೆ ಯುವತಿ ಭಾವುಕ; ವಿಡಿಯೋ ಇಲ್ಲಿದೆ

Jayaraj HT Kannada

Nov 23, 2024 01:28 PM IST

google News

ರಾಜೀನಾಮೆ ನೀಡಿದಾಗ ಮ್ಯಾನೇಜರ್ ನೀಡದ ಪ್ರತಿಕ್ರಿಯೆಗೆ ಭಾವುಕರಾದ ಸಿಮಿ

    • ಮಹಿಳಾ ಉದ್ಯೋಗಿಯೊಬ್ಬರ ರಾಜೀನಾಮೆ ಕ್ಷಣದ ವೀಡಿಯೋ ವೈರಲ್ ಆಗಿದೆ. ರಿಸೈನ್‌ ವಿಷಯ ಪ್ರಸ್ತಾಪಿಸುವಾಗ ಬಾಸ್‌ ಹೇಳಿದ ಪ್ರೋತ್ಸಾಹದಾಯಕ ಪ್ರತಿಕ್ರಿಯೆಗೆ ಈ ಯುವತಿ ಭಾವುಕರಾಗಿದ್ದಾರೆ. ಇಂಥಾ ಮ್ಯಾನೇಜರ್‌ ಸಿಗುವುದು ಅಪರೂಪ ಎಂದು ಯುವತಿ ಹೇಳಿಕೊಂಡಿದ್ದಾರೆ.
ರಾಜೀನಾಮೆ ನೀಡಿದಾಗ ಮ್ಯಾನೇಜರ್ ನೀಡದ ಪ್ರತಿಕ್ರಿಯೆಗೆ ಭಾವುಕರಾದ ಸಿಮಿ
ರಾಜೀನಾಮೆ ನೀಡಿದಾಗ ಮ್ಯಾನೇಜರ್ ನೀಡದ ಪ್ರತಿಕ್ರಿಯೆಗೆ ಭಾವುಕರಾದ ಸಿಮಿ (Instagram/hiimsimran_)

ಒಂದು ಕೆಲಸಕ್ಕೆ ರಾಜೀನಾಮೆ ನೀಡುವುದೆಂದರೆ, ಆ ಉದ್ಯೋಗಿಗೆ ಅದೊಂದು ಕಠಿಣ ಸಂದರ್ಭ. ರಾಜೀನಾಮೆ ನೀಡುವ ಸಂದರ್ಭವು ಸಾಮಾನ್ಯವಾಗಿ ಒಂದಷ್ಟು ನಿರಾಶೆ, ಆತಂಕ ಅಥವಾ ಉದ್ವಿಗ್ನತೆ ಎದುರಿಸುವವರು ಹೆಚ್ಚು. ಏಕೆಂದರೆ ಬಾಸ್‌ ಪ್ರತಿಕ್ರಿಯೆ ಹೇಗಿರುತ್ತೋ ಎಂಬ ಆತಂಕ ಇರುತ್ತದೆ. ಒಂದು ವೇಳೆ ಉತ್ತಮ ಉದ್ಯೋಗಾವಕಾಶ ಸಿಕ್ಕರೆ, ಸಂತೋಷದಿಂದ ವಿದಾಯ ಹೇಳಬಹುದು. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ರಾಜೀನಾಮೆ ಸಲ್ಲಿಸುವಾಗ ಬಾಸ್‌ ಅಸಮಾಧಾನದ ಮಾತುಗಳಾಡುವುದು ಸಾಮಾನ್ಯ. ಆದರೆ, ಇಲೊಬ್ಬರು ಉದ್ಯೋಗಿಯು ತಮ್ಮ ಮ್ಯಾನೇಜರ್‌ ಬಳಿ ವಿದಾಯ ಕುರಿತು ಮಾತನಾಡುವಾಗ, ಆ ಬಾಸ್‌ ನೀಡಿದ ಬೆಂಬಲದ ಪರಿಯು ನೆಟ್ಟಿಗರ ಮೆಚ್ಚುಗೆ ಗಳಿಸಿದೆ.

ವೃತ್ತಿಜೀವನದಲ್ಲಿ ಮತ್ತಷ್ಟು ಉತ್ತಮ ಅವಕಾಶಗಳನ್ನು ಹುಡುಕುತ್ತಾ ಇತ್ತೀಚೆಗೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಸಿಮಿ ಎಂಬ ಉದ್ಯೋಗಿಯೊಬ್ಬರು, ಇನ್‌ಸ್ಟಾಗ್ರಾಮ್‌ನಲ್ಲಿ ಹೃದಯಸ್ಪರ್ಶಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ರಾಜೀನಾಮೆ ಕುರಿತು ಅವರು ತಮ್ಮ ವ್ಯವಸ್ಥಾಪಕರೊಂದಿಗೆ ಆನ್‌ಲೈನ್‌ ಮೂಲಕ ನಡೆಸಿದ ಹೃದಯಸ್ಪರ್ಶಿ ಸಂಭಾಷಣೆಯ ವಿಡಿಯೋ ಇದಾಗಿದೆ.

ಸಿಮಿ ತಮ್ಮ ಬಾಸ್‌ನೊಂದಿಗೆ ನಡೆದ ಭಾವನಾತ್ಮಕ ಮಾತುಕತೆಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. “ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಪೋಸ್ಟ್‌ ಮಾಡಲು ನನಗೆ ತುಂಬಾ ಕಷ್ಟವಾಗುತ್ತಿದೆ. ಏಕೆಂದರೆ ನಾನು ಭಾವುಕವಾಗಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ನಿಜಕ್ಕೂ ಇಷ್ಟಪಡುವುದಿಲ್ಲ. ಆದರೆ ಇದೇ ವೇಳೆ, ಈ ಮಹಿಳೆ (ಬಾಸ್) ಎಷ್ಟು ಅದ್ಭುತ‌ ವ್ಯಕ್ತಿ ಎಂಬುದನ್ನು ನಿಮಗೆ ಹೇಳಬೇಕಿತ್ತು. ಉತ್ತಮ ಮ್ಯಾನೇಜರ್‌ ಆಗುವವರು ಹೇಗಿರಬೇಕು ಎಂಬುದನ್ನು ಹಂಚಿಕೊಳ್ಳಲು ಬಯಸುತ್ತೇನೆ” ಎಂದು ಸಿಮಿ ಕ್ಯಾಪ್ಷನ್‌ ಕೊಟ್ಟಿದ್ದಾರೆ.

ತಮ್ಮ ಮ್ಯಾನೇಜರ್ ಕುರಿತು ಮೆಚ್ಚುಗೆಯನ್ನು ಹಂಚಿಕೊಂಡ ಸಿಮಿ, “ನಾನು ಅವರಂಥ ವ್ಯಕ್ತಿಗಳನ್ನು ಇದುವರೆಗೂ ಭೇಟಿಯಾಗಿಲ್ಲ. ಇಂಥಾ ಉತ್ತಮ ವ್ಯವಸ್ಥಾಪಕರನ್ನು ಪಡೆಯುವುದು ಎಷ್ಟು ಮುಖ್ಯ ಎಂದು ನಾನು ನಿಜಕ್ಕೂ ಕಲಿತಿದ್ದೇನೆ. ನನ್ನ ಮ್ಯಾನೇಜರ್ ಎಷ್ಟು ಒಳ್ಳೆಯವರು ಎಂಬ ಬಗ್ಗೆ ಎಂದು ನಾನು ಆಗಾಗ ಹೇಳುತ್ತಿರುತ್ತೇನೆ. ನನ್ನನ್ನು ಹತ್ತಿರದಿಂದ ಬಲ್ಲವರಿಗೆ ಈ ವಿಷಯ ಗೊತ್ತಿದೆ” ಎಂದು ಪೋಸ್ಟ್‌ ಮಾಡಿದ್ದಾರೆ.

ಇಲ್ಲಿದೆ ವಿಡಿಯೋ

ವಿಡಿಯೋದಲ್ಲಿ, ಸಿಮಿ ತಮ್ಮ ಮ್ಯಾನೇಜರ್‌ಗೆ ತಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳುತ್ತಾಳೆ. ಅಷ್ಟರಲ್ಲೇ ಮಹಿಳಾ ಬಾಸ್‌ ಪ್ರತಿಕ್ರಿಯೆ ನಿರೀಕ್ಷೆಗಿಂತ ಭಿನ್ನವಾಗಿತ್ತು. ಸಾಮಾನ್ಯವಾಗಿ ರಾಜೀನಾಮೆ ವಿಷಯಕ್ಕೆ ಬಾಸ್‌ ನಿರಾಶೆಯ ಪ್ರತಿಕ್ರಿಯೆ ನೀಡುತ್ತಾರೆ. ಈ ಮ್ಯಾನೇಜರ್‌ ಮಾತ್ರ ತಕ್ಷಣವೇ “ಅಭಿನಂದನೆಗಳು!” ಎಂದು ಹೇಳಿದರು. ಸಿಮಿ ಅವರ ಹೊಸ ವೃತ್ತಿಜೀವನದ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದ ಅವರು, “ನಿನ್ನ ಬಗ್ಗೆ ನನಗೆ ನಿಜಕ್ಕೂ ಖುಷಿಯಾಗುತ್ತಿದೆ. ನಿನ್ನೊಂದಿಗೆ ಕೆಲಸ ಮಾಡುವುದು ನನಗೆ ನಿಜಕ್ಕೂ ಅದ್ಭುತ ಅನುಭವ” ಎಂದು ಹೇಳಿದ್ದಾರೆ. ಇದು ಸಿಮಿ ಅವರನ್ನು ಕೂಡಾ ಭಾವುಕವಾಗಿಸಿದೆ.

ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೊ, ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಈಗಾಗಲೇ 5.2 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಗಳಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ

ವಿಡಿಯೋ ನೋಡಿದ ನೆಟ್ಟಿಗರು, ಮ್ಯಾನೇಜರ್‌ ಬಗ್ಗೆ ಶ್ಲಾಘಿಸಿದ್ದಾರೆ. "ನಾಯಕ ಎನಿಸಿಕೊಂಡವರು ಈ ರೀತಿ ಇರಬೇಕು. ತಮ್ಮ ಉದ್ಯೋಗಿಗಳನ್ನು ಅರ್ಥಮಾಡಿಕೊಂಡು ಬೆಂಬಲಿಸಬೇಕು. ಕೆಲಸದ ಸ್ಥಳದಲ್ಲಿ ಇಂತಹ ಸಕಾರಾತ್ಮಕತೆ ವಾತಾವರಣ ಇರುವುದು ತುಂಬಾ ಅಪರೂಪ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಇನ್ನಷ್ಟು ವೈರಲ್‌ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ