logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Himachal Pradesh Polls: ಹಿಮಾಚಲ ಪ್ರದೇಶ ಚುನಾವಣೆಗೆ ನಾಳೆ ಮತದಾನ ಪ್ರಕ್ರಿಯೆ; ಇಲ್ಲಿವೆ ಪ್ರಮುಖ 10 ಅಂಶಗಳು

Himachal Pradesh polls: ಹಿಮಾಚಲ ಪ್ರದೇಶ ಚುನಾವಣೆಗೆ ನಾಳೆ ಮತದಾನ ಪ್ರಕ್ರಿಯೆ; ಇಲ್ಲಿವೆ ಪ್ರಮುಖ 10 ಅಂಶಗಳು

Jayaraj HT Kannada

Nov 11, 2022 10:01 PM IST

google News

ಮತಗಟ್ಟೆ ಅಧಿಕಾರಿಗಳು ಇವಿಎಂಗಳನ್ನು ಒಯ್ಯುತ್ತಿರುವ ದೃಶ್ಯ

    • ರಾಜ್ಯದಲ್ಲಿ 1,136 ಶತಾಯುಷಿಗಳು ಸೇರಿದಂತೆ ಒಟ್ಟು 1,21,409 ಮತದಾರರು 80 ವರ್ಷಕ್ಕಿಂತ ಮೇಲ್ಪಟ್ಟವರು. ರಾಜ್ಯದಲ್ಲಿ ಒಟ್ಟು ಮತದಾರರಲ್ಲಿ 28,54,945 ಪುರುಷ ಮತ್ತು 27,37,845 ಮಹಿಳಾ ಮತದಾರರು.
ಮತಗಟ್ಟೆ ಅಧಿಕಾರಿಗಳು ಇವಿಎಂಗಳನ್ನು ಒಯ್ಯುತ್ತಿರುವ ದೃಶ್ಯ
ಮತಗಟ್ಟೆ ಅಧಿಕಾರಿಗಳು ಇವಿಎಂಗಳನ್ನು ಒಯ್ಯುತ್ತಿರುವ ದೃಶ್ಯ

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ನಾಳೆ ಮತದಾನ ಪ್ರಕ್ರಿಯೆ ನಡೆಯಲಿದೆ. ಆಡಳಿತಾರೂಢ ಬಿಜೆಪಿಯು ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ತನ್ನ ಅಭಿವೃದ್ಧಿ ಅಜೆಂಡಾವನ್ನೇ ಎತ್ತಿ ಹಿಡಿದಿದೆ. ಮತ್ತೊಂದೆಡೆ ಪ್ರತಿಪಕ್ಷ ಕಾಂಗ್ರೆಸ್‌, ಮತದಾರರು ಮತ ಚಲಾಯಿಸುವಾಗ ನಾಲ್ಕು ದಶಕಗಳ ಹಿಂದಿನ ಸಂಪ್ರದಾಯವನ್ನು ಅನುಸರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದೆ.

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಮುಖ ಅಂಶಗಳು

1. ಹಿಮಾಚಲ ಪ್ರದೇಶದ 55 ಲಕ್ಷಕ್ಕೂ ಹೆಚ್ಚು ಮತದಾರರು 68 ಕ್ಷೇತ್ರಗಳ ಒಟ್ಟು 412 ಅಭ್ಯರ್ಥಿಗಳ ಭವಿಷ್ಯವನ್ನು ನಾಳೆ ನಿರ್ಧರಿಸಲಿದ್ದಾರೆ. ಮುಖ್ಯಮಂತ್ರಿ ಜೈರಾಮ್ ಠಾಕೂರ್, ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಮತ್ತು ಬಿಜೆಪಿಯ ಮಾಜಿ ಮುಖ್ಯಸ್ಥ ಸತ್ಪಾಲ್ ಸಿಂಗ್ ಸತ್ತಿ ಚುನಾವಣಾ ಕಣದಲ್ಲಿದ್ದಾರೆ.

2. ಬಿಜೆಪಿಯು ಸುಲಭವಾಗಿ ಚುನಾವಣೆ ಗೆಲ್ಲುವ ವಿಶ್ವಾಸದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಮತದಾರರಿಗೆ ವೈಯಕ್ತಿಕ ಮನವಿ ಮಾಡುವ ಮೂಲಕ ತಮ್ಮ ಪ್ರಚಾರವನ್ನು ಮುನ್ನಡೆಸಿದ್ದಾರೆ. ಅಲ್ಲಿ ಅವರು ಬಿಜೆಪಿ ಚಿಹ್ನೆ ಕಮಲಕ್ಕೆ ಹಾಕುವ ಪ್ರತಿಯೊಂದು ಮತವೂ ತನ್ನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

3. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸ್ಮೃತಿ ಇರಾನಿ ಮತ್ತು ಅನುರಾಗ್ ಠಾಕೂರ್ ಅವರು ಸಾರ್ವಜನಿಕ ಸಂಪರ್ಕದ ಹೊರತಾಗಿ, ಸರಣಿ ಚುನಾವಣಾ ಸಭೆಗಳನ್ನು ನಡೆಸಿದ್ದಾರೆ.

4. ಇತ್ತ ಪ್ರತಿಪಕ್ಷ ಕಾಂಗ್ರೆಸ್, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮೇಲೆ ಕೇಂದ್ರೀಕೃತವಾಗಿದೆ. ಕಳೆದ ಎರಡು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರುವ ಕಾಂಗ್ರೆಸ್‌ಗೆ ಹಿಮಾಚಲ ಪ್ರದೇಶವನ್ನು ಬಿಜೆಪಿಯಿಂದ ಕಸಿದುಕೊಳ್ಳುವುದು ಅಸ್ತಿತ್ವದ ಪ್ರಶ್ನೆಯಾಗಿದೆ.

5. 2021ರಲ್ಲಿ ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿ ಮತ್ತು ಈ ವರ್ಷ ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರ ಸೇರಿದಂತೆ ಎರಡು ವರ್ಷಗಳಲ್ಲಿ ಒಂಬತ್ತು ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿದೆ.

6. ಹಿಮಾಚಲ ಪ್ರದೇಶದಲ್ಲಿ ಹೊಸದಾಗಿ ಪ್ರವೇಶಿಸಿದ ಆಮ್ ಆದ್ಮಿ ಪಕ್ಷವು, ಸೈಲೆಂಟಾಗಿ ಪ್ರಚಾರ ನಡೆಸಿದೆ. ದೆಹಲಿ, ಪಂಜಾಬ್‌ ಬಳಿಕ ಹಿಮಾಚಲಕ್ಕೂ ನುಗ್ಗಿ ಕಸ ಗುಡಿಸಲು ಸಜ್ಜಾಗಿದೆ.

7. ಮುಖ್ಯಮಂತ್ರಿ ಠಾಕೂರ್ ಅವರು ಮಂಡಿಯ ಸೆರಾಜ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಬಿಜೆಪಿಯ ಮಾಜಿ ಮುಖ್ಯಸ್ಥ ಸತ್ತಿ ಅವರು ಉನಾದಿಂದ ತಮ್ಮ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. ನಾದೌನ್‌ನಿಂದ ಮಾಜಿ HPCC ಮುಖ್ಯಸ್ಥ ಮತ್ತು ಪ್ರಚಾರ ಸಮಿತಿ ಮುಖ್ಯಸ್ಥ ಸುಖ್ವಿಂದರ್ ಸಿಂಗ್ ಸುಖು ಮತ್ತು ಸೋಲನ್‌ನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಮುಖ್ಯಸ್ಥ ಧನಿ ರಾಮ್ ಶಾಂಡಿಲ್ ಕಣಕ್ಕಿಳಿಯುತ್ತಿದ್ದಾರೆ.

8. ಇಲ್ಲಿ 1,136 ಶತಾಯುಷಿಗಳು ಸೇರಿದಂತೆ ಒಟ್ಟು 1,21,409 ಮತದಾರರು 80 ವರ್ಷಕ್ಕಿಂತ ಮೇಲ್ಪಟ್ಟವರು. ರಾಜ್ಯದಲ್ಲಿ ಒಟ್ಟು ಮತದಾರರಲ್ಲಿ 28,54,945 ಪುರುಷ ಮತ್ತು 27,37,845 ಮಹಿಳಾ ಮತದಾರರಿದ್ದು, 2017ರ ವಿಧಾನಸಭಾ ಚುನಾವಣೆಯಲ್ಲಿ ಶೇ.75.57ರಷ್ಟು ಮತದಾನವಾಗಿದೆ. 2012ರ ವಿಧಾನಸಭಾ ಚುನಾವಣೆಯಲ್ಲಿ ಶೇ.73.5ರಷ್ಟು ಮತದಾನವಾಗಿತ್ತು.

9. 2012ರ ವಿಧಾನಸಭಾ ಚುನಾವಣೆಯಲ್ಲಿ 34 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. 2017ರಲ್ಲಿ ಆ ಸಂಖ್ಯೆ 19ಕ್ಕಿಳಿಯಿತು. ಈಗ ಈ ಬಾರಿ 24 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

10. ನಾಳೆ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಭಾರತದ ಚುನಾವಣಾ ಆಯೋಗವು ದೂರದ ಪ್ರದೇಶಗಳಲ್ಲಿ ಮೂರು ಸಹಾಯಕ ಮತಗಟ್ಟೆಗಳನ್ನು ಒಳಗೊಂಡಂತೆ, ಒಟ್ಟು 7,884 ಮತಗಟ್ಟೆಗಳನ್ನು ಸ್ಥಾಪಿಸಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ