logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Year In Review 2022: ಹೇಗಿತ್ತು ಕೇಸರಿ ಪಾಳೆಯಕ್ಕೆ ಈ ವರ್ಷ?: ಮೋದಿ ಪಡೆಗೆ ದು:ಖಕ್ಕಿಂತ ಹೆಚ್ಚು ಹರ್ಷ

Year in Review 2022: ಹೇಗಿತ್ತು ಕೇಸರಿ ಪಾಳೆಯಕ್ಕೆ ಈ ವರ್ಷ?: ಮೋದಿ ಪಡೆಗೆ ದು:ಖಕ್ಕಿಂತ ಹೆಚ್ಚು ಹರ್ಷ

Nikhil Kulkarni HT Kannada

Dec 10, 2022 09:34 AM IST

google News

ಸಾಂದರ್ಭಿಕ ಚಿತ್ರ

    • ನಿಮ್ಮ ನೆಚ್ಚಿನ 'ಹಿಂದುಸ್ತಾನ್‌ ಟೈಮ್ಸ್‌ ಕನ್ನಡ' ಡಿಜಿಟಲ್‌ ಪತ್ರಿಕೆಯು, 2022ರಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಸಾಗಿಬಂದ ದಾರಿಯನ್ನು 'Year in Review 2022 ' ಸರಣಿಯಲ್ಲಿ ಅವಲೋಕಿಸುತ್ತಿದೆ. ಈ ಸರಣಿ ಲೇಖನಗಳು ರಾಜಕೀಯ ಪಕ್ಷಗಳು ವರ್ಷಪೂರ್ತಿ ನಡೆಸಿದ ಚಟುವಟಿಕೆಗಳತ್ತ ಬೆಳಕು ಚೆಲ್ಲಲಿದೆ. ಇದರ ಮೊದಲ ಸರಣಿಯಲ್ಲಿ 2022ರಲ್ಲಿ ಬಿಜೆಪಿ ಸಾಗಿಬಂದ ಪಥ ಹೇಗಿತ್ತು ಎಂಬುದನ್ನು ಅವಲೋಕಿಸೋಣ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: 2022 ಸರಿದು 2023 ಬರತ್ತಿದೆ. ಈ ಮೂಲಕ ಭೂಮಿಯ ಇತಿಹಾಸದ ಪುಟಕ್ಕೆ ಮತ್ತೊಂದು ವರ್ಷ ಸೇರಿಕೊಂಡಿದೆ. ಹೊಸ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಆದರೆ ನೀ ಸಾಗುವ ದಾರಿಯನ್ನೊಮ್ಮೆ ಹಿಂತಿರುಗಿ ನೋಡು ಎಂಬಂತೆ, ಹೊಸ ವರ್ಷವನ್ನು ಸ್ವಾಗತಿಸುವ ಮೊದಲು ನಾವೆಲ್ಲರೂ 2022ರಲ್ಲಿ ದೇಶ ಸಾಗಿ ಬಂದ ದಾರಿಯ ಮೇಲೆ ಕಣ್ಣಾಡಿಸುವುದು ಅವಶ್ಯ.

ಅದರಲ್ಲೂ ದೇಶದ ರಾಜಕೀಯ ಕ್ಷೇತ್ರದಲ್ಲಿ 2022 ನಿಜಕ್ಕೂ ರೋಚಕ ಕ್ಷಣಗಳನ್ನು ಹೊತ್ತು ತಂದ ವರ್ಷ ಎಂದರೆ ತಪ್ಪಾಗಲಾರದು. ವರ್ಷಪೂರ್ತಿ ನಡೆದ ರಾಜಕೀಯ ಬೆಳವಣಿಗೆಗಳು, ರಾಜಕೀಯ ಪಕ್ಷಗಳು, ವಿವಿಧ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಕೈಗೊಂಡ ಮಹತ್ವದ ನಿರ್ಧಾರಗಳು, ರಾಜಕೀಯ ನಿರ್ಣಯಗಳಿಂದ ದೇಶದ ಮೇಲಾದ ಪ್ರಭಾವ ಹೀಗೆ ಎಲ್ಲವನ್ನೂ ಅವಲೋಕಿಸುವುದು ಅವಶ್ಯ.

ಈ ಹಿನ್ನೆಲೆಯಲ್ಲಿ ನಿಮ್ಮ ನೆಚ್ಚಿನ 'ಹಿಂದುಸ್ತಾನ್‌ ಟೈಮ್ಸ್‌ ಕನ್ನಡ' ಡಿಜಿಟಲ್‌ ಪತ್ರಿಕೆಯು, 2022ರಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಸಾಗಿಬಂದ ದಾರಿಯನ್ನು 'Year in Review 2022 ' ಸರಣಿಯಲ್ಲಿ ಅವಲೋಕಿಸುತ್ತಿದೆ. ಈ ಸರಣಿ ಲೇಖನಗಳು ರಾಜಕೀಯ ಪಕ್ಷಗಳು ವರ್ಷಪೂರ್ತಿ ನಡೆಸಿದ ಚಟುವಟಿಕೆಗಳತ್ತ ಬೆಳಕು ಚೆಲ್ಲಲಿದೆ.

ಅದರಂತೆ ಸದ್ಯ ದೇಶದ ರಾಜಕಾರಣದಲ್ಲಿ ಬೆಳ್ಳಿಚುಕ್ಕಿಯಂತೆ ಮಿನುಗುತ್ತಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ), 2022ರಲ್ಲಿ ಸಾಗಿಬಂದ ಪಥ ಹೇಗಿತ್ತು ಎಂಬುದನ್ನು ನಾವು ಮೊದಲ ಸರಣಿಯಲ್ಲಿ ಅವಲೋಕಿಸೋಣ.

ಭಾರತೀಯ ಜನತಾ ಪಕ್ಷ(ಬಿಜೆಪಿ):

ಎರಡು ಮೂರು ದಶಕಗಳ ಹಿಂದೆ ಬಿಜೆಪಿ ಎಂದರೆ ಮೂಗು ಮುರಿಯುತ್ತಿದ್ದ ಜನರೇ ಹೆಚ್ಚು. ಆದರೆ 2014ರ ಬಳಿಕ ನಡೆದ ರಾಜಕೀಯ ಬದಲಾವಣೆಯ ಪರಿಣಾಮ, ದೇಶದ ರಾಜಕೀಯ ಕ್ಷೇತ್ರದಲ್ಲಿ ಬಿಜೆಪಿ ಬೆಳ್ಳಿಚುಕ್ಕಿಯಂತೆ ಮಿಂಚುತ್ತಿದೆ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ, ದೇಶದ ರಾಜಕೀಯ ವಲಯದಲ್ಲಿ ಬಿಜೆಪಿಯ ಸ್ಥಾನಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಹಾಗೆಂದ ಮಾತ್ರಕ್ಕೆ ಬಿಜೆಪಿ ವಿರೋಧಿ ರಾಜಕೀಯ ಶಕ್ತಿಗಳು ಮತ್ತು ಬಿಜೆಪಿಯನ್ನು ವಿರೋಧಿಸುವ ಜನ ಇಲ್ಲ ಎಂದಲ್ಲ. ಸೈದ್ಧಾಂತಿಕವಾಗಿ ಬಿಜೆಪಿಯನ್ನು ವಿರೋಧಿಸುವ ಜನ ಇದ್ದೇ ಇದ್ದಾರೆ. ಆದರೆ ಈ ಎಲ್ಲಾ ವಿರೋಧಗಳ ಹೊರತಾಗಿಯೂ, ಬಿಜೆಪಿ ದೇಶದ ರಾಜಕೀಯ ಕ್ಷೇತ್ರದಲ್ಲಿ ಗಾಢ ಪ್ರಭಾವ ಬೀರುವಲ್ಲಿ ಮತ್ತು ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಶಕ್ತವಾಗಿದೆ.

ಬಿಜೆಪಿ ಪಾಲಿಗೆ 2022 ಹೇಗಿತ್ತು?

ಹಾಗೆ ನೋಡಿದರೆ ಬಿಜೆಪಿಯ ಲಜಕ್‌ ಫ್ಯಾಕ್ಟರ್‌ 2014ರಿಂದಲೇ ತೆರೆದುಕೊಂಡಿದ್ದು, ಈ ಎಂಟು ವರ್ಷಗಳಲ್ಲಿ ಕೇಸರಿ ಪಕ್ಷ ಮತ್ತುಷ್ಟು ಶಕ್ತಿಶಾಲಿಯಾಗಿ ಬೆಳೆದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಚಾಣಾಕ್ಷ ಚುನಾವಣಾ ತಂತ್ರಗಳ ಪರಿಣಾಮವಾಗಿ, ಬಿಜೆಪಿ ಒಂದು ಪ್ರಬಲ ಕೆಡೆರ್‌ ಬೇಸ್‌ ಪಕ್ಷವಾಗಿ ಹೊರಹೊಮ್ಮಿದೆ.

ಆದರೆ 2022 ಬಿಜೆಪಿ ಪಾಲಿಗೆ ಕೆಲವು ಕಹಿ ಮತ್ತು ಕೆಲವು ಸಿಹಿ ಅನುಭವಗಳನ್ನು ಹೊತ್ತು ತಂದಿತ್ತು. ಈ ಪೈಕಿ ಪಕ್ಷ ಸಿಹಿ ಅನುಭವಗಳನ್ನೇ ಹೆಚ್ಚು ಉಂಡಿದೆ ಎಂದರೆ ಅದು ತಪ್ಪಲ್ಲ. ಕೇವಲ ಚುನಾವಣಾ ದಿಗ್ವಿಜಯಗಳು ಮಾತ್ರವಲ್ಲದೇ, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಮತ್ತು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳಿಗೆ ದೊರೆಯುತ್ತಿರುವ ಜಾಗತಿಕ ಮನ್ನಣೆ, ಬಿಜೆಪಿಯ ವರ್ಚಸ್ಸನ್ನು ವೃದ್ಧಿಸುವಲ್ಲಿ ನೆರವಾಗಿವೆ.

ಗೋವಾ ವಿಧಾನಸಭೆ ಚುನಾವಣೆ:

2022ರಲ್ಲಿ ಬಿಜೆಪಿಗೆ ಮೊದಲ ಸಿಹಿ ಅನುಭವವಾಗಿದ್ದು ಗೋವಾದಲ್ಲಿ, 14 ಫೆಬ್ರವರಿ 2022ರಂದು ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ, ಅಧಿಕಾರದ ಗದ್ದುಗೆಗೆ ಏರಿತು. ಪ್ರಮೋದ್‌ ಸಾವಂತ್‌ ಗೋವಾದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿತ್ತು.

ಉತ್ತರಾಖಂಡ್‌ ವಿಧಾನಸಭೆ ಚುನಾವಣೆ:

ಅದರಂತೆ 14 ಫೆಬ್ರವರಿ 2022ರಂದು ಉತ್ತರಾಖಂಡ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿತು. ಪುಷ್ಕರ್‌ ಸಿಂಗ್‌ ಧಾಮಿ ಉತ್ತರಾಖಂಡ್‌ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮೊದಲು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿತ್ತು.

ಪಂಜಾಬ್‌ ವಿಧಾನಸಭೆ ಚುನಾವಣೆ:

ಆದರೆ 2022ರಲ್ಲಿ ಬಿಜೆಪಿಗೆ ಆದ ಮೊದಲ ಕಹಿ ಅನುಭವ ಎಂದರೆ, 20 ಫೆಬ್ರವರಿ 2022ರಂಉ ಘೋಷಣೆಯಾದ ಪಂಜಾಬ್‌ ವಿಧಾನಸಭಾ ಚುನಾವಣೆ ಫಲಿತಾಂಶ. ಪಂಜಾಬ್‌ನಲ್ಲಿ ಐತಿಹಾಸಿಕ ವಿಜಯ ಸಾಧಿಸಿದ ಆಮ್‌ ಆದ್ಮಿ ಪಕ್ಷ(ಆಪ್), ಪಂಜಾಬ್‌ನ್ನು ವಶಕ್ಕೆ ಪಡೆಯುವ ಬಿಜೆಪಿಯ ಆಸೆಗೆ ತಣ್ಣೀರು ಎರಚಿತು. ಭಗವಂತ್‌ ಮಾನ್‌ ಪಂಜಾಬ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಇದಕ್ಕೂ ಮೊದಲು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.

ಮಣಿಪುರ ವಿಧಾನಸಭೆ ಚುನಾವಣೆ:

ಬಳಿಕ ಮಾರ್ಚ್‌ನಲ್ಲಿ ನಡೆದ ಮಣಿಪುರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಭರ್ಜರಿ ದಿಗ್ವಿಜಯ ಸಾಧಿಸಿತು. ಎನ್.‌ ಬಿರೆನ್‌ ಸಿಂಗ್‌ ಮಣಿಪುರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ:

ಬಳಿಕ ಮಾರ್ಚ್‌ನಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಜಯದೊಂದಿಗೆ ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿತು. ಯೋಗಿ ಆದಿತ್ಯನಾಥ್‌ ಕೂಡ ಸತತ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಉತ್ತರ ಪ್ರದೇಶ ಬಿಜೆಪಿ ಪ್ರಾಬಲ್ಯವಿರುವ ರಾಜ್ಯಗಳ ಪೈಕಿ ಅತ್ಯಂತ ಪ್ರಮುಖ ರಾಜ್ಯವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಿಜೆಪಿ ಕಾರ್ಯಸೂಚಿ ಶೀಘ್ರದಲ್ಲೇ ವಾಸ್ತವವಾಗಿ ಗೋಚರವಾಗಲಿದೆ.

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ:

ಆದರೆ ತೀರ ಇತ್ತೀಚಿಗೆ ಅಂದರೆ ಡಿ.08ರಂದು ಘೋಷಣೆಯಾದ ಹಿಮಾಚಲ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕಹಿ ಅನುಭವ ಉಂಡಿತು. ಈ ಹಿಂದೆ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯುವಲ್ಲಿ ಸಫಲವಾದ ಕಾಂಗ್ರೆಸ್‌, ಹಿಮಾಚಲ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಕಾಂಗ್ರೆಸ್‌ ತನ್ನ ಮುಖ್ಯಮಂತ್ರಿಯನ್ನು ಇನ್ನಷ್ಟೇ ಘೋಷಿಸಬೇಕಿದೆ.

ಗುಜರಾತ್‌ ವಿಧಾನಸಭಾ ಚುನಾವಣೆ:

ಆದರೆ ತೀರ ಇತ್ತೀಚಿಗೆ ಅಂದರೆ ಡಿ.08ರಂದು ಘೋಷಣೆಯಾದ ಗುಜರಾತ್‌ ವಿಧಾನಸಭೆ ಚುನಾವಣೆ, ಬಿಜೆಪಿ ಪಾಲಿಗೆ ಐತಿಹಾಸಿಕವಾಗಿ ಮಾರ್ಪಟ್ಟಿದೆ. ರಾಜ್ಯದ 182 ವಿಧಾನಸಭಾ ಕ್ಷೇತ್ರಗಳ ಪೈಕಿ 156 ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸುವ ಮೂಲಕ, ಬಿಜೆಪ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. 2023ರಲ್ಲಿ ನಡೆಯಲಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆವರೆಗೆ ಗುಜರಾತ್‌ ಗೆಲುವಿನ ಪ್ರಭಾವ ಖಂಡಿತ ಇರಲಿದೆ.

ಇನ್ನು ಕಳೆದ ಆಗಸ್ಟ್‌ನಲ್ಲಿ ಬಿಹಾರದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡ ಜೆಡಿಯು ನಾಯಕ ನಿತೀಶ್‌ ಕುಮಾರ್‌, ಮತ್ತೆ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್‌ ಮೈತ್ರಿಕೂಟ ಸೇರಿಕೊಂಡು ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿದ್ದಾರೆ. ನಿತೀಶ್‌ ಬಣ ಬದಲಾವಣೆಯಿಂದಾಗಿ ಬಿಜೆಪಿ ಬಿಹಾರವನ್ನು ಕಳೆದುಕೊಳ್ಳಬೇಕಾಯಿತು.

ಆದರೆ ಮಹಾರಾಷ್ಟ್ರದಲ್ಲಿ ಶಿವಸೇನೆಯ ಆಂತರಿಕ ಸಂಘರ್ಷದ ಪರಿಣಾಮವಾಗಿ, ಏಕನಾಥ್‌ ಶಿಂಧೆ ನೇತೃತ್ವದ ಬಣ ಬಿಜೆಪಿಯೊಂದಿಗೆ ಸರ್ಕಾರ ರಚಿಸಿದೆ. ಉದ್ಧವ್‌ ಠಾಕ್ರೆ ನೇತೃತ್ವದ ಮಹಾವಿಕಾಸ್‌ ಅಘಾಢಿ ಮೈತ್ರಿಕೂಟ ಸರ್ಕಾರ ಬಿದ್ದು, ಶಿವಸೇನೆ(ಏಕನಾಥ್‌ ಶಿಂಧೆ ಬಣ)-ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆಯಾಗಿದೆ. ಇದು ಬಿಜೆಪಿಗೆ ಸುಲಭವಾಗಿ ದೊರೆತ ಜಯವಾಗಿತ್ತು.

ಇದಿಷ್ಟೇ ಅಲ್ಲದೇ 2022ರಲ್ಲಿ ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಉಪಚುನಾವಣೆ ಮತ್ತು ಲೋಕಸಭೆ ಉಪಚುನಾವಣೆಗಳು ನಡೆದಿದ್ದು, ಅಲ್ಲಿಯೂ ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ. ಆದರೆ ಈ ಉಪ ಚುನಾವಣೆಗಳಲ್ಲಿ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಪ್ರಬಲ ಸ್ಪರ್ಧೆಯೊಡ್ಡಿದ್ದು ಸುಳ್ಳಲ್ಲ.

ಇನ್ನು 2023ರಲ್ಲಿ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಒಟ್ಟು ಎಂಟು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, ಇದಕ್ಕಾಗಿ ಕಮಲ ಪಾಳೆಯ ಭರ್ಜರಿ ಸಿದ್ಧತೆ ನಡೆಸುತ್ತಿದೆ. 2024ರ ಲೋಕಸಭೆ ಚುನಾವಣೆಗೂ ಬಿಜೆಪಿ ಈಗನಿಂದಲೇ ತಯಾರಿ ನಡೆಸಿದೆ. ಅದೆನೆ ಇದ್ದರೂ, ದೇಶದ ರಾಜಕೀಯ ಕ್ಷೇತ್ರದಲ್ಲಿ ಬಿಜೆಪಿ ವಿಜೃಂಭಿಸುತ್ತಿರುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದಾಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ